ಮಕ್ಕಳೆ.. ಇವತ್ತು ನಾವು ಕಾಡಿನ ಶಾಲೆಗೆ ಹೋಗೋಣ.
      ಈ ವಾರದ ಕಥೆ “ಕಾಡಿನ ಶಾಲೆ”


ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಒಂದು ಚೆಂದದ ಶಾಲೆಯಿತ್ತು. ಎಲ್ಲಾ ಪ್ರಾಣಿಗಳ ಮರಿಗಳು ಆ ಶಾಲೆಗೆ ಬರುತ್ತಿದ್ದವು. ಒಮ್ಮೆ ಕಾಡಿನ ಶಾಲೆಯಲ್ಲಿ ಮಕ್ಕಳೆಲ್ಲರ ಅಚ್ಚು ಮೆಚ್ಚಿನ ‘ಡಿಯರಿ ಜಿಂಕೆ’ ಮಿಸ್ ಮಕ್ಕಳಿಗೆ ಒಂದೊಂದು ಹಾಳೆ ನೀಡಿ ‘ಈ ಹಾಳೆಯಲ್ಲಿ ನಿಮ್ಮ ಯೋಚನೆಗಳನ್ನು ಬರೆಯಿರಿ’ ಎಂದರು. ಆ ಕ್ಲಾಸ್ ನ ಚುರುಕು ವಿಧ್ಯಾರ್ಥಿಗಳಾದ ‘ರೊಬೊ ಮೊಲ’  ಮತ್ತು  ‘ಫೊಕ್ಸಿ ನರಿ’ ಇಬ್ಬರೂ ಹಾಳೆಯನ್ನು ತೆಗೆದುಕೊಂಡು ಬರೆಯಲಾರಂಭಿಸಿದರು. ನಿಗದಿತ ಸಮಯ ಕ್ಕೆ ಇಬ್ಬರೂ ಬರೆದು ಹಾಳೆ ವಾಪಾಸು ನೀಡಿ ದರು.ಡಿಯರಿ ಜಿಂಕೆ ಮಿಸ್  ಇಬ್ಬರ ಹಾಳೆ ಗಳ‌ನ್ನು ಓದಿದರು.

ಫೊಕ್ಸಿ ಹಾಳೆಯಲ್ಲಿ ಮೊದಲು ಪೆಂಟಿ ಆನೆ ಬಗ್ಗೆ .. “ಎಷ್ಟು ದಪ್ಪ .. ದೊಡ್ಡ ಪ್ರಾಣಿ‌‌ .. ಆದ್ರೆ ತಲೆಲಿಬುದ್ಧಿ ಇಲ್ಲ,ಬರೀ ಸೋಮಾರಿ” ಎಂದು ಬರೆದಿತ್ತು.ನಂತರ ಲೈನಿಸಿಂಹದ ಬಗ್ಗೆ “ಕಾಡಿನರಾಜ  ಅಂತ  ಮೆರೆಯೊದೊಂದೆ  ಸಣ್ಣ  ಬೇಟೆ  ಆಡೋದಾದ್ರೂ ನಾನೇ ಸುಳಿವು ಕೊಡ್ಬೇಕು..” ಮುಂದೆ ಹೆಬ್ಬಾವಿನ ಬಗ್ಗೆ  “ಹಸಿವೆ ಆಗೋ ತನಕ ಬಿದ್ದಲ್ಲಿಂದ  ಏಳೋಲ್ಲ. ಯಾರಿಗೂ ಉಪ‌ಕಾರ ಮಾಡದ ಪ್ರಾಣಿ” ಎಂದು ಬರೆಯಿತು. ನಂತರ ಕೋತಿ ಬಗ್ಗೆ ..”ಕಾಡಲ್ಲೂ ಇರತ್ತೆ ಊರಲ್ಲೂ ಇರತ್ತೆ. ಒಂದೇ ಕಡೆ ನಿಯತ್ತಿಲ್ಲದ ಪ್ರಾಣಿ..” ಎಂದು ಬರೆಯಿತು. ಹೀಗೆ  ಹಾಳೆಯ  ತುಂಬೆಲ್ಲ ಒಂದೊಂದು ಪ್ರಾಣಿಗಳ ಕುರಿತು ನಿಂದಿಸಿ ಬರೆದಿತ್ತು.ರೊಬೊ ಮೊಲ ಹಾಳೆಯಲ್ಲಿ ” ಮುಂದೆ ನಾನು ದೊಡ್ಡದಾದ ಕ್ಯಾರೆಟ್  ಹೊಲ  ಬೆಳೆ   ಯುತ್ತೇನೆ.ಸಿಹಿಯಾದ ಕ್ಯಾರೆಟ್ ಎಲ್ಲರಿಗೂ ಹಂಚಿ  ತಿನ್ನುತ್ತೇನೆ..  ಪಕ್ಕದ  ಕಾಡಿನಲ್ಲಿ ಸುಂದರವಾದ ರುಚಿಯಾದ ಹುಲ್ಲುಗಳಿಂದ ಕೂಡಿದ ಬಯಲಿದೆಯಂತೆ. ಮುಂದೊಂದು ದಿನ ಅಲ್ಲಿಗೆ ನಾನು ನನ್ನ ಗೆಳೆಯರ ಜೊತೆ ಹೋಗುವೆ.” ಎಂದು ತನ್ನ  ಮುಂದಾಲೋ ಚನೆ,ಕನಸುಗಳನ್ನು ಬರೆದಿತ್ತು.ಕೊನೆಯಲ್ಲಿ “ನಾನು ಪುಟ್ಟ ಪ್ರಾಣಿ ಯಾದರೂ ನನಗೆ ತೊಂದರೆ  ಕೊಡದೆ   ಸಂತೋಷದಿಂದ ಬದುಕಲು ಅವಕಾಶ ನೀಡಿದ ಕಾಡಿನ ಎಲ್ಲ ಪ್ರಾಣಿಗಳಿಗೆ ನನ್ನ ಧನ್ಯವಾದಗಳು..”ಎಂದು ಬರೆದಿತ್ತು.ಡಿಯರಿಮಿಸ್ ಗೆ ರೊಬೊ ಮೊಲ ದ ಬರಹ ಇಷ್ಟವಾಯಿತು. ಫೊಕ್ಸಿ  ಬರಹ  ಓದಿದ    ಡಿಯರಿ ಜಿಂಕೆ..   “ಫೊಕ್ಸಿ  ನಿನ್ನ ಕುರಿತಾಗಿ ನೀನು ಏನನ್ನು ಕುರಿತಾಗಿ ಬರೆ ಯಲೇ ಇಲ್ಲ .. ಬೇಗ ಬರೆದು ಕೊಡು..” ಎಂದಿತು.  ಆದರೆ  ಫೋಕ್ಸಿಗೆ  ಬರೆಯಲು ಹಾಳೆಯಲ್ಲಿ ಜಾಗವೇ ಇರಲಿಲ್ಲ.ಸಣ್ಣಮುಖ ಮಾಡಿ ಕುಳಿತಿತು. ಆಗ  ಡಿಯರಿ  ಜಿಂಕೆ ಫೊಕ್ಸಿಗೆ ಇನ್ನೊಂದು ಹಾಳೆ ನೀಡಿ…. ಎಲ್ಲ ಮಕ್ಕಳತ್ತ ತಿರುಗಿ  “ನೋಡಿ..  ಮಕ್ಕಳೇ   ಜೀವನ   ಈ ಹಾಳೆ ಇದ್ದಹಾಗೆ   ಇದನ್ನು ಒಳ್ಳೆಯ ಅಂಶ ಗಳಿಂದ ತುಂಬಿಸ ಬೇಕೆ ವಿನಃ ಬೇಡದ ವಿಚಾರಗಳನ್ನು ತುಂಬಿಸಿಡು ವುದಲ್ಲ… ಎಂದು ಹೇಳಿದರು. ಫೊಕ್ಸಿಗೆ ಅರ್ಥವಾಗಿ ಬರೆಯಲು ಶುರು ಮಾಡಿತು.
ಮಕ್ಕಳೇ…‌
ಅವರಿರವರ ತಪ್ಪುಗಳನ್ನು ಎಣಿಸುತ್ತ ಗುಣಿ ಸುತ್ತ ಪಟ್ಟಿ ಮಾಡುತ್ತಾ ಸಾಗಿದರೆ ನಮ್ಮ ಒಪ್ಪುಗಳನ್ನು  ದಾಖಲಾಗಿಸಲು ಜಾಗವೇ ಇರದು ಅಲ್ಲವೇ? ಬದುಕಿನ‌ ಪ್ರತಿ ಪುಟವೂ ಅಮೂಲ್ಯ ಎಂಬುದನ್ನು ಅರಿಯೋಣ..‌

                  🔆🔆🔆
✍️ರೇಖಾ ಭಟ್,ಹೊನ್ನಗದ್ದೆ