ಇಷ್ಟೊಂದು ಅಗ್ಗವಾದೆಯಾ ಸಾವೇ
ಔಷಧಿಗಳಂತಾದರೂ ಅಪರೂಪವಾಗಬಾರದಿತ್ತೇ ?
ಯಾರ ಒಡಲನ್ನಪ್ಪಿಕೊಳ್ಳುವೆಯೋ ತಮ್ಮದೆಂದುಕೊಂಡಿರುವ ಆ ಕ್ಷಣ
ಯಾರೆದುರು ನಿಲ್ಲುವೆಯೋ ನಿನ್ನದೆಂದು ಬಯಸಿದ ಮರುಕ್ಷಣ
ನಿಗೂಢವಾಯಿತು ರಹಸ್ಯ
ಬಿಡಿಸಬೇಕೆಂದರೂ ಕಗ್ಗಂಟು‌ ನಿನ್ನ ವಿಕಟ ವಿಲಾಸದ ಲಾಸ್ಯ

ಬದುಕೆಂದರೆ ಹಂಬಲಿಸುವವರೇ ನಿನಗೇಕೆ ಗುರಿ
ಮುಖವಿಟ್ಟು ನೋಡದೇ ಹೊತ್ತೊಯ್ಯುವೆ ನೀನೊಂದು ಗುಳ್ಳೆ ನರಿ
ಎತ್ತ ಶೋಧಿಸುವುದು ಭರವಸೆಯ ಬೆಳಕಿನ ಕಾಣದ ದಾರಿ
ನೋಡಿದರೆತ್ತತ್ತ ಭೀಕರ ಕಿಂಕರ ಝೇಂಕಾರದ ಜಯಭೇರಿ
ಪ್ರತಿಭಟಿಸಬೇಕೆಂದರೂ ನಿನ್ನೆದುರು ಶಸ್ತ್ರಸಜ್ಜಿತ ಯೋಧರಂತೆ ಹೋರಿ
ಬೀಸಿದ ಬಲೆಯೊಳಗೆ ಬೆದರಿ ಬೀಳುವವರೇ ಅಮಾಯಕರು ಜಾರಿ

ಅಳಿಯ ಮಾವ ಅಕ್ಕ ತಂಗಿ ಅಜ್ಜ ಅತ್ತೆ ತಂದೆ ತಾಯಿ
ಸಂಬಂಧಗಳ ಗೊಡವೆಯೇ ಇಲ್ಲ ಲೋಕದೊಳಗೆ ನೀನೆಂತಹ ಮಹಾಮಾಯಿ!!
ಬಿಡದೇ ಅಟ್ಟಿಸಿಕೊಂಡು ಜಿಗಿದು ಬೇಟೆಯಾಡಿ ಹರಿದು ತಿನ್ನುವ ಓ ಕ್ರೂರ ನಾಯಿ
ಬದುಕೀಗ ನಮಗೆ ಬೇಡವಾದ ಹಳದಿ ಬೇವಿನ ಕಾಯಿ
ಸಾಲುತಿಲ್ಲ ನಿನಗೆ ಪಾಪ ಕಳೆವ ತುಂಗೆ ಗಂಗೆ ಮಹದಾಯಿ

ಹೇಳು ಎಲ್ಲಿರುವುದು ನೀನಿರುವ ಪವಿತ್ರ ನಿರ್ಮಲ ಪಾಪದ ತಾಣ
ವೆಂಟಿಲೇಟರಿನ ಕೊಳವೆಯೊಳಗೆ ಅಡಗಿ ಕೂತು ಕತ್ತು ಹಿಸುಕುವ ಬಾಣ
ಆಮ್ಲಜನಕದ ಸಿಲಿಂಡರಿನೊಳಗಿದೆಯೇ ಧ ತೀರಿಸಲಾಗದ ಭೂಮಿಯ ಋಣ
ಕೊಳ್ಳಬೇಕೆಂದು
ಸುರಿದರೂ ಸಾಲದಾಯಿತಲ್ಲ ಕಾಲಿಗೆ ಬಿದ್ದವರ ತುಳಿಯುವ ಕಾಂಚಾಣ

ಒಡಲಿನೊಂದಿಗೆ ಒಂದಾಗುವ ನಿನ್ನದೆಂತಹ ಹೆಬ್ಬಯಕೆ?
ಮುಖವಾಡಗಳ ಬಚ್ಚಿಟ್ಟು ಹಾಕುವೆಯೇಕೆ ರಣಕೇಕೆ ?
ಸಾವಿಲ್ಲದ ಸಾವಾಗು ರುದ್ರಭಯಂಕರ ಉದ್ಧಟತನ ಬೇಕೆ ?
ಬಯಲಾಗದ ಅದಾವ ಮುಖವಿಟ್ಟುಕೊಂಡು ಬರುವೆ ಬಲು ಜೋಕೆ
ಗೀಚಿದವರಾರೋ ಹುಂಬತನದ ನಿನ್ನ ಹಣೆಬರಹದ ರೇಖೆ ?

                      🔆🔆🔆
✍️ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಗುಳೇದಗುಡ್ಡ