ಜಗವೆಲ್ಲ ಅಳುತಿರುವ ಈ ವಿಷಮ ಪರಿಸ್ಥಿತಿ ಯಲ್ಲಿ ಇಂತಹ ಬರಹ ಸುಲಭ ಸಾಧ್ಯವಲ್ಲ ದಿದ್ದರೂ ಎರಡು ಕ್ಷಣಗಳ ಲವಲವಿಕೆ ಸಿಕ್ಕರೂ ಇದರ ಪೈಸಾ ವಸೂಲ್ ಅಂತ ನಂಬಿದ್ದೇನೆ. ಎಲ್ಲರೂ ಆರೋಗ್ಯವಂತರಾಗಿರಲಿ, ಸ್ವಲ್ಪ ಏರುಪೇರಿದ್ದವರು ಬೇಗ ಚೇತರಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಇದು ನನ್ನ ಎರಡನೇ ಯ ಪ್ರವಾಸ ಪ್ರವರ.

ಪ್ಯಾರಿಸ್ ಪಜೀತಿ

ನನ್ನ ಬಕೆಟ್ ಲಿಸ್ಟಿನ ಮೊದಲ ಹೆಸರೇ ಪ್ಯಾರಿಸ್.. ನಾನು ನೋಡಿದ ಮೊದಲ ದೇಶವೂ ಅದೇ.. ಮೊದಲ ವಿದೇಶಯಾನ ಕಲಿಸುವ ಪಾಠಗಳು, ಅನುಭವಿಸುವ ಪಜೀತಿಗಳು ಅನನ್ಯ.

ಈಗ ತಿರುಗಿ ನೋಡಿದಾಗ ಮನ ನವಿರಾಗಿ ಆದರೆ ಹಿತವಾಗಿ ನಾಚುತ್ತದೆ. ಹಾಗೆ ನೋಡಿ ದರೆ ಜಗತ್ತು ನಿಮ್ಮೆದುರಿಗೆ ತೆರೆದುಕೊಳ್ಳುತ್ತಿ ದ್ದಂತೆ ಅದರವಿಸ್ಮಯ,ವೈಚಿತ್ರ್ಯ,ಅಗಾಧತೆಯ ಮುಂದೆ ನಿಮ್ಮ ಸಣ್ಣತನ, ಅಹಂಕಾರ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ, ಒಂದು ಹೊಸ ಆತ್ಮವಿಶ್ವಾಸ ಚಿಗುರೊಡೆಯುತ್ತದೆ.

ಅದು 2012, ಸ್ಮಾರ್ಟಫೋನು, ಗೂಗಲ್ಲು ನಮ್ಮನ್ನು ಇನ್ನೂ ಗಟ್ಟಿಯಾಗಿಹಿಡಿದಿರಲಿಲ್ಲ. ವಿದೇಶ ಪ್ರಯಾಣ ಎನ್ನುವದು ಪಕ್ಕದ ಮನೆಗೆ ಹೋದಂತೆ ಸಲೀಸಾಗಿರಲಿಲ್ಲ. ನನ್ನ ಕಾಲೇಜು ದಿನಗಳಲ್ಲಿ ಆಂಗ್ಲ ಸಾಹಿತ್ಯದ ಜೊತೆ ಫ್ರೆಂಚ್ ಸಾಹಿತ್ಯವನ್ನೂ ಇಂಗ್ಲಿಷ್ ನಲ್ಲೇ ಅಷ್ಟಿಷ್ಟು ಓದಿದ್ದೆ.ಹದಿನೆಂಟನೇಶತಮಾನದ ಐತಿಹಾಸಿಕ ಫ್ರೆಂಚ್ ಕ್ರಾಂತಿಯ ಬಗ್ಗೆ‌ಓದಿ ಬೆರಗುಗೊಂಡಿದ್ದೆ ಫ್ರೆಂಚರ ಭಾಷಾಪ್ರೇಮ,ಸಂಸ್ಕೃತಿಯ ಗರಿಮೆ, ಪಾಕನೈಪುಣ್ಯ, ಕಲಾಪ್ರೇಮ ಮತ್ತು ಅತ್ಯುನ್ನತ ಫ್ಯಾಶನ್ ಸೆನ್ಸ್ ಇವುಗಳೆಲ್ಲದರ ಬಗ್ಗೆ ಅದಮ್ಯ ಆಸಕ್ತಿ ಮತ್ತು ಕುತೂಹಲ. ಎಲ್ಲಕ್ಕಿಂತ ಮಿಗಿ- ಲಾಗಿ ಪ್ಯಾರಿಸ್… ಆ ಹೆಸರೇ ಸಾಕು ಪ್ರತಿ ಪ್ರವಾಸಿಗರ ನಿದ್ದೆ ಕೆಡಿಸಲು..

City of love and city of light..

ಶತಮಾನಗಳಿಂದ ಯುರೋಪಿನ ರಾಣಿಯಾಗಿ ಮೆರೆದ ನಗರ. ನನ್ನ ಸೀಮಿತ ಜ್ಞಾನವನ್ನು ಅತಿ ಆತ್ಮವಿಶ್ವಾಸದ ಬೇಗಡೆಯಲ್ಲಿ ಸುತ್ತಿ ತಯಾ ರಾದೆ.ಅಲ್ಲಿನ ಚಳಿಗೆ,ಮಳೆಗೆ..ಓವರ್ ಕೋಟು ಕ್ಯಾಪು, ಕೊಡೆ..ಸಹಿತ.. Paris here I come.. ಅತಿ ಮುಖ್ಯವಾದದ್ದು ಮರೆತಿದ್ದೆ..
ಚಾರ್ಲ್ಸ ಡಿ ಗಾಲ್ ವಿಮಾನ ನಿಲ್ದಾಣದಲ್ಲಿ ಕಾಲಿಟ್ಟಾಗ ಸುತ್ತಲೂ ಕವಿದಮಂಜು,ಕಣ್ಣಿನಲಿ ಸೇರಿ,ಖುಶಿಯಾಗಿ ಆವಿಯಾಗಿತ್ತು. ಬಿಟ್ಟಗಣ್ಣಿ ನಿಂದ  ಇಡೀ ಪ್ಯಾರಿಸ್  ಅನ್ನೇ ಆಪೋಷಣೆ ತೆಗೆದುಕೊಳ್ಳುವಂತೆನೋಡಿದ್ದೆ.ಸುಂದರವಾದ ವಾಸ್ತುಶಿಲ್ಪ, ಚೆಂದದ ಬೀದಿಗಳು, ಟ್ರೆಂಡೀ ಕೆಫೆಗಳು, ಮಧ್ಯೆ ಹರಿಯುವ ಸೀಯೆನ್ ನದಿ, ಮ್ಯೂಸಿಯಮ್ ಗಳು, ಆರ್ಟ್ ಗ್ಯಾಲರಿಗಳು, ಚರ್ಚುಗಳು ..ಒಂದೇ ಎರಡೇ..ಇಡೀ ಪ್ಯಾರಿಸ್ ಒಂದು ಜೀವಂತ ಮ್ಯೂಸಿಯಂ ಆಗಿ, ಅಲ್ಲಿನ ಪ್ರತಿಯೊಂದು ಇಟ್ಟಿಗೆಯೂ ಒಂದು ಕಲಾಕೃತಿ ಯಾಗಿ ಕಣ್ಣ ಮುಂದೆ ನಿಲ್ಲುತ್ತದೆ.

Trust me, ಇನ್ನೊಂದು ಮರೆಯಲಾಗದ ವಿಷಯ ಫ್ರೆಂಚ್ ಹುಡುಗಿಯರ ಅಪೂರ್ವ ಬೆಡಗು.ನಾನು ನೋಡಿದ ಹಾಗೆ ಎಲ್ಲಾ ದೇಶದ ನಾರಿಯರು ಚೆಲುವೆಯರೇ.. ಆದರೆ ತಮ್ಮ ಅಪ್ರತಿಮ ಸೌಂದರ್ಯ ಪ್ರಜ್ಞೆಯಿಂದ Parisian chic, (ಪ್ಯಾರಿಶಿಯನ್ ಶೀಕ್) ಎಂಬ ಜಗತ್ಪ್ರಸಿದ್ಧ ಫ್ಯಾಶನ್ ಶೈಲಿಯನ್ನೇ ಹುಟ್ಟು ಹಾಕಿರುವ ಫ್ರೆಂಚ್ ಹುಡುಗಿಯರು ಲೂಯಿ ವಿಟೊನ್, ಶೆನೆಲ್, ಎರ್ಮೆಸ್ ಮೊದಲಾದ ವಿಶ್ವ ವಿಖ್ಯಾತ ಬ್ರಾಂಡುಗಳ ಸ್ಕಾರ್ಫ್, ಡ್ರೆಸ್, ಹ್ಯಾಂಡ್ ಬ್ಯಾಗ್ ಮತ್ತು ಹೈಹೀಲ್ಡ ಶೂಗಳನ್ನು perfect ಹೊಂದಿಣಿಕೆ ಯಲ್ಲಿ ಧರಿಸಿ ಟಕ್..ಟಕ್..ಎಂದು ಎದುರಿಗೆ ಬರುತ್ತಿದ್ದರೆ I bet, ಹುಡುಗರು ಬಿಡಿ.. ನಮ್ಮಗಳ ಮನದಲ್ಲೇ ಹಂಸಲೇಖ ಅವರು ಪ್ರೇಮಲೋಕದ ಆಹಾಡು ಶುರುಮಾಡುವದು ಗ್ಯಾರಂಟಿ! ಮತ್ತೆ ಪ್ಯಾರಿಸ್ ನಲ್ಲಿ ನಾನು ಕಳೆದು ಹೋಗುವ ಮುನ್ನನಮ್ಮ ಪ್ಯಾರಿಸ್ ಪಜೀತಿಯ ಪ್ರಸಂಗಕ್ಕೆ ಬರುತ್ತೇನೆ.

ಅದು ಪ್ಯಾರಿಸ್ ನಲ್ಲಿ ನಮ್ಮ ಮೊದಲ ದಿನ. ಅತಿ ಇಕ್ಕಟ್ಟಿನ ಗಲ್ಲಿಯ, ಒಂದು ಉದ್ದನೆಯ ಓದಲಾಗದ, ಹೇಳಲಾಗದ ಫ್ರೆಂಚ ಹೆಸರಿನ, ಕಣ್ಣಳತೆಯಲ್ಲೇ ಐಫೆಲ್ ಟವರ್ ಕಾಣುವ ಹೋಟೆಲ್ ನಲ್ಲಿ ಚೆಕ್ ಇನ್ ಆಗಿ ಫ್ರೆಶ್ ಆಗುತ್ತಲೇ ಹೊಟ್ಟೆ ತಾಳಹಾಕಲಾರಂಭಿಸಿತು. ಸರಿ, ಏನಾದರೂ ತಿನ್ನೋಣ ಅಂದರೆ ಇದ್ದ ಹೋಟೆಲ್ ನಲ್ಲಿ ರೆಸ್ಟೋರೆಂಟ ಇಲ್ಲ. ಹೊರ ಗಡೆ ಹತ್ತಿರದಲ್ಲೇ ಒಂದು ಇಂಡಿಯನ್ ಕೆಫೆ ಇದೆ ಎಂಬ ಮಾಹಿತಿ ಮೊದಲೇ ಇತ್ತು. ನಾನು, ನನ್ನವರು ಮತ್ತು ಮಗಳು ರೆಡಿಯಾಗಿ ಹೊರ ಟೆವು. ಆ ಹೋಟೆಲ್ ಗುರುತಿಗೆ ಏನಾದ್ರೂ ಲ್ಯಾಂಡ್ ಮಾರ್ಕ ನೆನಪಿಟ್ಟು ಕೊಳ್ಳುವದು ಜಾಣತನ ಎಂದುಆ ಗಲ್ಲಿಯಿಂದ ಹೊರಬೀಳು ತ್ತಲೇ ಇದ್ದ ಒಂದು ದೊಡ್ಡ ಬೋರ್ಡು, ಅದರ ಮೇಲೆ ‘ಮೆಟ್ರೋಪಾಲಿಟನ್’ ಬರೆದಿತ್ತು. ಅದನ್ನೇ ನೆನಪಾಗಿಟ್ಟು ಒಂದೇ ತರಹ ಕಾಣುವ ಗಲ್ಲಿಗಳಲ್ಲಿ ಆ ಇಂಡಿಯನ್ ಕೆಫೆ ಹುಡುಕುತ್ತ ಗೊತ್ತಾಗದಂತೆ ಎಷ್ಟೋ ದೂರಬಂದಾಗಿತ್ತು. ಸರಿ.. ಬೇರೆ ದಾರಿ ಕಾಣದೇ ಯಾವುದೋ ಕೆಫೆಯಲ್ಲಿ ಮ್ಯಾಕರೂನ್ ಗಳೆಂಬ ಅದ್ಭುತ ಪೇಸ್ಟ್ರಿಯನ್ನು ಸವಿದು ಹೊರಗೆ ಬಂದರೆ ಕಣ್ಣೆದುರಿಗೇ ಮೆಟ್ರೋಪಾಲಿಟನ್ ಬೋರ್ಡು!

ಅದರ ಮುಂದಿನ ಬೀದಿಯಲ್ಲೇ ನಮ್ಮ ಹೋಟೆಲ್ ಎಂದು ನುಗ್ಗಿದರೆ ಎದುರಿಗೆ ಕಾಣುವ ಐಫೆಲ್ ಟವರೂ ಅಲ್ಲೇ ಇದೆ. ಆದರೆ ನಮ್ಮ ಹೋಟೆಲ್ ಮಾತ್ರ ಅದಲ್ಲ. ಅಕ್ಕಪಕ್ಕದ ಎಲ್ಲಾ ಗಲ್ಲಿಗಳನ್ನು ಹುಡುಕಿದರೂ ನಮ್ಮ ಹೋಟೆಲ್ ನಾಪತ್ತೆ. ಆದರೆ ಹೆಚ್ಚು ಕಡಿಮೆ ಎಲ್ಲಾ ಗಲ್ಲಿಗಳ ಕೊನೆಯಲ್ಲಿ ಐಫೆಲ್ ಟವರ ಮಾತ್ರ ಕಂಡೇ ಕಾಣುತ್ತದೆ. ಯಾರನ್ನಾದರೂ ಕೇಳೋಣವೆಂದರೆ ಈ ಫ್ರೆಂಚರಿಗೆ ತಮ್ಮಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡುವವರು ಮನುಷ್ಯರಂತೆ ಕಾಣುವದೇ ಇಲ್ಲ. ನಮ್ಮ ಹೋಟೆಲ್ ಕಾಣದಂತೆ ಮಾಯವಾಗಿತ್ತು. ವಾಪಸ್ ಹೋಗುವದಾದರೂಎಲ್ಲಿಗೆ?..ಹೇಗೆ?

ಅಲ್ಲಿಯವರೆಗೆ ಅರ್ಧ ಫ್ರೆಂಚ್ ತರ ಆಡುತ್ತಿದ್ದ ನಾನು ಅಪ್ಪ-ಮಗಳ ಮುಖ ನೋಡುವದನ್ನೇ ನಿಲ್ಲಿಸಿಬಿಟ್ಟೆ. ಅಂತು ಸಾಕಷ್ಟು ಜನರನ್ನು ಕೇಳಿದ ಮೇಲೆ ಓರ್ವ ದಯಾಳು ತನ್ನ ಹರಕು ಮುರುಕು ಇಂಗ್ಲಿಷ್ ನಲ್ಲಿ ನಮ್ಮಮಾಯವಾದ ಹೋಟೆಲ್ ಕತೆ ಕೇಳಿ, ನಮ್ಮ ಗುರುತಾದ ಮೆಟ್ರೊಪಾಲಿಟನ್ ಬೋರ್ಡನೋಡಿಕಷ್ಟದಲ್ಲಿ ನಗು ತಡೆದು ಹೇಳಿದ.. ‘ ಮೆಟ್ರೊಪಾಲಿಟನ್ ಅಂದರೆ ಇದು ಮೆಟ್ರೋ ರೈಲಿನ ಸ್ಟೇಷನ್ನು.. ಎಲ್ಲಾ ಮೆಟ್ರೊ ಸ್ಟೇಷನ್ನುಗಳಿಗೂ ಇದೇ ಬೋರ್ಡ್ಇರುತ್ತೆ…ನಿಮ್ಮಹೋಟೆಲ್ ಹಿಂದಿನ ಸ್ಟೇಷನ್ ಹತ್ತಿರ ಬರಬಹುದು ಎಂದು ದಾರಿ ಹೇಳಿದ..ಹೇಗೆ ಗೊತ್ತಾ..ಗೋ ಸ್ತ್ರೇತ್..ಟಕ್ ಟಕ್..ರೈಟ್ ಅಗೇನ್ ಟಕ್ ಟಕ್ ಟಕ್ ದೆನ್ ಲೆಫ್ಟ.. ಎರಡು ಟಕ್ ಟಕ್..ಸ್ವಲ್ಪ ದೂರ ಮತ್ತು ಮೂರು ಟಕ್ ಟಕ್ ಟಕ್ ಅಂದರೆ ಜಾಸ್ತಿ ದೂರ. ಅಂತೂ ಹೋಟೆಲ್ ಗೆ ಬಂದು ತಲುಪುವಷ್ಟರಲ್ಲಿ ನನ್ನ ಆತ್ಮವಿಶ್ವಾಸದ ಬಲೂನು ಫ್ರೆಂಚ್ ಬ್ರಾಂಡಿನ ಸೂಜಿಯಲ್ಲ, ದಬ್ಬಣದಲ್ಲೇ ಡಬ್ ಎಂದಿತ್ತು!

ಹೀಗೆ ಶುರುವಾದ ನಮ್ಮ ಪ್ರವಾಸಮುಂದಿನ ದಿನಗಳಲ್ಲಿ ಪ್ಯಾರಿಸ್ ನ ಪ್ರೇಕ್ಷಣೀಯ ಸ್ಥಳಗಳ ನ್ನೆಲ್ಲ ಒಂದೊಂದಾಗಿ ನೋಡುತ್ತ,ಮೂರನೆಯ ದಿನ ವಿಶ್ವ ವಿಖ್ಯಾತ ಶಾಪಿಂಗ್ ಸ್ಟ್ರೀಟ್ Champs elysees ಗೆ ಟ್ಯಾಕ್ಸಿಯಲ್ಲಿ ಹೋಗಲು ನಿರ್ಧರಿಸಿದೆವು.ಟ್ಯಾಕ್ಸಿಪೆರಿಶಿಯನ್ ಎಂದು ಬರೆದಿರುವ ಒಂದು ವಾಹನ ನಿಲ್ಲಿಸಿ ಬೆಂಗಳೂರು ಆಟೋಗಳನ್ನು ಕೇಳಿ ಅಭ್ಯಾಸ ವಾಗಿದ್ದ ನಾವು ಅದೇ ಗತ್ತಿನಲ್ಲಿ ‘ಹಲೋ.. ಚಾಮ್ಪ್ಸ ಎಲಿಸೀಸ್ ಗೆ ಬರ್ತೀರಾ?’, ಎಂದು ಕೇಳ್ದಾಗ ಡ್ರೈವರ್ ಫ್ರೆಂಚ್ ಅಲ್ಲೇ ಏನೋ ಗುರ್ರೆಂದು ಮುಂದೆ ಹೋದ. ಇವನಲ್ಲ ಎಂದರೆ ಮತ್ತೊಬ್ಬ ಎಂದು ಕೇಳುತ್ತಾ ಹೋದರೂ ಒಬ್ಬರೂ ಬರಲ್ಲ.ಕೊನೆಗೊಬ್ಬ ನೀವ್ ಹೇಳೋ ಚಾಂಪ್ಸ ಎಲಿಸೀಸ್ ಪ್ಯಾರಿಸ್ ನಲ್ಲೆಲ್ಲೂ ಇಲ್ಲ ಅಂದೇ ಬಿಟ್ಟ. ಯಾಕೋ ಡೌಟು ಬಂದು ನಮ್ಮವರು ಒಂದು ಪೇಪರ್ ಮೇಲೆ Champs elysees ಎಂದು ಬರೆದು ತೋರಿಸಿದಾಗ ನಮ್ಮ ಪುಣ್ಯಕ್ಕೆ ಅದನ್ನು ಓದಿದ ಅವನು ಓ.. ಇದು ‘ಶೊನ್ ತ್ಸ ಲೀತ್ಸೆ’ ಎಂದು ನಕ್ಕು ನಮ್ಮನ್ನು ಕರೆದುಕೊಂಡು ಹೋಗಿಬಿಟ್ಟ. ನಾವು ಮತ್ತೊಮ್ಮೆ ಪ್ಯಾರಿಸ್ ಇಂಗು ತಿಂದ ಮಂಗ! ಈ ಫ್ರೆಂಚ ಭಾಷೆಯ ಬರಹ ಮತ್ತು ಉಚ್ಛಾರ ‘ಎತ್ತಣ ಮಾಮರ, ಎತ್ತಣ ಕೋಗಿಲೆ’. ಇವರು ಬರೆಯುವದೇ ಒಂದು ; ಹೇಳುವದೇ ಇನ್ನೊಂದು! Chanel ಎನ್ನುವದು ಶೆನೆಲ್ ಎಂದು, Bordeaux ಎನ್ನುವ ಊರನ್ನು ಕರೆಯುವದು ಬೋರ್ದು ಎಂದು! ಹೆಚ್ಚಿನ ಶಬ್ದಗಳ ಕೊನೆಯ ಹಲವು ಅಕ್ಷರಗಳು ಸುಮ್ಮನೆ ಅಲಂಕಾರಕ್ಕೆ,ಉಚ್ಛರಿ ಸುವದಕ್ಕಲ್ಲ. ಫ್ರೆಂಚರ ಅಲಂಕಾರಪ್ರಿಯತೆ ಅವರ ಭಾಷೆಯನ್ನೂ ಬಿಟ್ಟಿಲ್ಲ.ಇದಾದ ಮೇಲೆ ಇನ್ನೆರಡುಸಲ ಫ್ರಾನ್ಸ್ ಗೆ ಹೋದರೂ ಹೀಗೇ ‘ನೋಡಿ ಕಲಿ ಮಾಡಿ ತಿಳಿ’ ಎಂದುಕೊಂಡೇ ಇದ್ದೆ. ಒಮ್ಮೆಉಂಗುರದ ಕತೆ ಹೇಳಿ ದುಡ್ಡು ಕೇಳುವ ಹುಡುಗಿಯರು, ಇನ್ನೊಮ್ಮೆ ದೇಣಿಗೆ ಪಟ್ಟಿ ಸಹಿ ಮಾಡಿಸಿ ಹಣ ಕೇಳುವವರು, ಪಿಕ್ ಪಾಕೆಟ್ ಅಂತೂ ತುಂಬಾ ಸಾಮಾನ್ಯ. ಏನೇ ಆದರೂ ನನ್ನ ಪ್ಯಾರಿಸ್ ಮೋಹ ಧೃತರಾಷ್ಟ್ರ ನಂತೆ… ಕಿಂಚಿತ್ತೂ ಕಡಿಮೆಯಾಗಿಲ್ಲ.

ಈ ಪಜೀತಿಗಳೆಲ್ಲ ಏನೇ ಇರಲಿ, ಲೂವ್ರ ಮ್ಯೂಸಿಯಂ, ರಾತ್ರಿಯ ಸೀಯೆನ್ ನದಿಯ ಕ್ರೂಸ್,ಐಫೆಲ್ ಟವರನ ಝಗಮಗ, ನೋಟ್ರ ಡಾಮ್, ವಸಾಯ್ ಅರಮನೆ (Versailles) ಆರ್ಕ್ ಡಿ ಟ್ರೈಯಂಫ, ಲವ್ ಲಾಕ್ ಬ್ರಿಡ್ಜ, ಪ್ಯಾರಿಸ್ ನಸೂರ್ಯೋದಯ,ಪ್ರೆಂಚ್ ಬಗೆಟ್ ಎನ್ನುವ ಬ್ರೆಡ್,ವೈನ್… ಒಂದೇ ಎರಡೇ.. ಹೇಳುತ್ತಾ ಹೋದರೆ ನಾನು ಮುಂದಿನ ಸಲವೂ ಪ್ಯಾರಿಸ್ ಬಿಟ್ಟು ಕದಲುವಹಾಗಿಲ್ಲ.

ಒಂದಂತೂ ನಿಜ. ಅವರ ಜೀವನ ಪ್ರೀತಿ, ಕಲೆ ಮತ್ತು ಸಂಸ್ಕೃತಿಯ ಬಗೆಗಿನ ಅದಮ್ಯಕಾಳಜಿ ತಮ್ಮ ನೆಲ,ಭಾಷೆ,ಇತಿಹಾಸ ಮತ್ತು ಪರಂಪರೆ ಯ ಕುರಿತಾದ ಅತೀವ ಅಭಿಮಾನ ಮತ್ತು ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಕೊಡುವ ಅತಿಯಾದ ಮಹತ್ವ ಇವೆಲ್ಲವುಗ ಳಿಂದ ನಾವು ಕಲಿಯುವಂತದ್ದು ಬೇಕಾದಷ್ಟಿದೆ. ಮತ್ತಷ್ಟು ಫ್ರೆಂಚ್ ಸರಕು ಹೊತ್ತು ಬರುತ್ತೇನೆ. ಅಲ್ಲಿಯವರೆಗೆ.. au revoir.. ಅಂದ್ರೆ oh-ruh-vwah (bye)

🔆🔆🔆

✍️ಸುಚಿತ್ರಾ ಹೆಗಡೆ,ಮೈಸೂರು