ನಂದಾದೀಪ ನಿನ್ನ ನೆನಪು
ಈ ಜೀವ ಜೀವನದಿಗೆ
ಕಣ್ಣೀರ ತರ್ಪಣ ಒಂದೇ…ಅವ್ವ.

ಅವ್ವ ಹೊತ್ತು ಹೊತ್ತಿಗೆ
ನಿನ್ನೊಳಡಗಿಸಿದೆ ನೂರುನೋವ
ಹೊರ ತರಲಿಲ್ಲ ಆ ಭಾವ

ನೀನು ಬೇಗೆಯಲಿ ಬೆಂದು
ಬೇಯಿಸಿದೆ ಬುತ್ತಿಯ
ನನ್ನ ಮುಂಬಾಳಿಗೆ ಅವ್ವ

ಎದೆಯಲಿ ಅಕ್ಕರ ತೀಡಿ
ಅರಿವಿನಕ್ಕರೆ ತೋರಿ
ಸಕ್ಕರೆ ಸಿಹಿಯ ನೀಡಿದವ್ವ

ನನ್ನ ಮೈಯಲ್ಲ ಕೆಸರು
ಬಾಯಲ್ಲಿ ಒಸರು
ಸಹಿಸಿ ಮುತ್ತಿಕ್ಕಿದವ್ವ

ಹತ್ತಿದಾ ಕೊಳೆಯ ತೊಳೆದು
ಹೊಸ ಉಡುಗೆ ತೊಡಿಸಿದೆ
ಸ್ವಚ್ಛಂದ ಬದುಕಿಗವ್ವ

ಎನ್ನಯ ತಪ್ಪು ಹೆಜ್ಜೆಗೆ
ಮುಗುಳು ನಗೆಯ
ಮಲ್ಲಿಗೆ ಚೆಲ್ಲಿದೆಯವ್ವ

ಬೆರಳ ಆಸರೆ ನೀಡಿ
ಹೆಜ್ಜೆ ಗುರುತುಗಳ
ಗುರತರವಾಗಿಸಿದೆಯವ್ವ

ತೊದಲ ನುಡಿಗಳಿಗೆ
ನಿನ್ನ ಸ್ವರ ಸೇರಿಸಿ
ಜಗದ ಧ್ವನಿಯಾಗಿಸಿದೆಯವ್ವ

ನಿನ್ನ ನೆನಪಿನ ತೇರು
ಬೆಳೆಸಿದೆ ಮುಂದಿನ ಪೈರು
ನೀನಿಲ್ಲ ನೀರುಣಿಸಲು ಅವ್ವ

ಕೆತ್ತಿದೆ ಸಾಧನೆ ಗರಿ
ಹಾರೈಕೆ ನಿನ್ನದು,ನಿನ್ನ
ನಿಸ್ವಾರ್ಥ ಬದುಕಿನದು ಅವ್ವ

                
                         🔆🔆🔆
✍️ವಿ.ಎಚ್.ಕೆ.ಹಿರೇಮಠ.ಗದಗ