ಒಂದು ಹಳ್ಳಿಯಲ್ಲಿ ಅಣ್ಣ ತಮ್ಮಂದಿರಿಬ್ಬರು ವಾಸವಾಗಿದ್ದರು. ಅಣ್ಣ ಚುರುಕು ಬುದ್ದಿಯವ, ಸದ್ಗುಣಿಶಾಲಿಯೂ ವಿವೇಕವಂತನೂ ಆಗಿದ್ದರೆ ತಮ್ಮ ಸೋಮಾರಿಯಾಗಿದ್ದ. ತಮ್ಮನು ಅಣ್ಣನ ಯಾವುದೇ ಕೆಲಸದಲ್ಲಿ ಸಹಾಯ ಮಾಡಲು ಮುಂದೆ ಬರುತ್ತಿರಲಿಲ್ಲ.


ಹೀಗಿರುವಾಗ ಒಂದು ದಿನ ಅತೀ ವೃಷ್ಟಿಯಿಂದ ಭೂಕುಸಿತವಾಗಿ ಅವರ ಮನೆಯ ಅಂಗಳದ ಮೇಲೆ ಮನೆ ಎದುರಿನ ಪುಟ್ಟ ಗುಡ್ಡ ಕುಸಿದು ಬಿತ್ತು. ಆಗ ಅಂಗಳದಲ್ಲಿ ಬಿದ್ದ ಮಣ್ಣನ್ನು ಬೇರೆಡೆ ಸಾಗಿಸಲು ಅಣ್ಣ ತಮ್ಮ ನ ಸಹಾಯ ಕೇಳಿದ. ತಮ್ಮ ಒಪ್ಪಲಿಲ್ಲ. ಆಗ ಅಣ್ಣ ಒಂದು ಉಪಾಯ ಮಾಡಿದ. ‘ನಮ್ಮ ಅಪ್ಪ ಸಾಯುವಾಗ ನನಗೆ ‘ಮನೆ ಎದುರಿನ ಗುಡ್ಡದಲ್ಲಿ ಮೂರು ಕುಡಿಕೆ ಹುಗಿದಿಟ್ಟಿದ್ದೇನೆ.’ ಎಂದು ಹೇಳಿದ್ದರು.ಈಗ ಈ ಮಣ್ಣನ್ನು ನಾವೇ ಸ್ವತಃ ಪರೀಕ್ಷಿಸಿ ಎತ್ತಿ ಹಾಕದಿದ್ದರೆ ಸಂಪತ್ತು ಆಳು ಗಳ ಪಾಲಾಗುತ್ತದೆ..” ಎಂದನು.

ಆಗ ತಮ್ಮ “ಅಣ್ಣಾ ಹಾಗಿದ್ದರೆ ನಾನು ಸಹಾಯ ಮಾಡುತ್ತೇನೆ.ಮೂರರಲ್ಲಿ ಎರಡು ಕುಡಿಕೆ ಗಳನ್ನು ನನಗೆ ಕೊಡಬೇಕು” ಎಂದು ಷರತ್ತು ಹಾಕಿದ. ಅಣ್ಣ ಒಪ್ಪಿಕೊಂಡ. ಇಬ್ಬರು ಭರದಿಂದ ಕೆಲಸ ಮಾಡಿ ಮಣ್ಣನ್ನೆಲ್ಲ ತೋಟದ ಗಿಡದ ಬುಡದಲ್ಲಿ ಹೋಯ್ದರು. ಅಂಗಳದಲ್ಲಿ ಬಿದ್ದ ಮಣ್ಣು ಪೂರ್ತಿ ಖಾಲಿ ಆದರೂ ಅವರಿಗೆ ಯಾವ ಕುಡಿಕೆಯೂ ಸಿಗದಿದ್ದಾಗ ತಮ್ಮನು ಕೋಪಗೊಂಡು ‘ಎಲ್ಲಿವೆ…!? ಅಪ್ಪ ಹೂತಿಟ್ಟ ಕುಡಿಕೆಗಳು..?’ ಎಂದು ಪ್ರಶ್ನಿಸಿದ.

ಅಣ್ಣ ತಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು “ಆ ಮೂರು ಕುಡಿಕೆಗಳು ನಮಗೆ ಸಿಕ್ಕಿವೆ ಸಹೋದರ ಎಂದನು. ಎಲ್ಲಿವೆ? ಅದರಲ್ಲೇನಿದೆ ಕೊಡು ನನಗೆ..” ಎಂದನು ತಮ್ಮ. ಅಣ್ಣ ಸಮಾಧಾ ನವಾಗಿ “ಮೊದಲ ಕುಡಿಕೆಯಲ್ಲಿ ಒಗ್ಗಟ್ಟು ಇತ್ತು. ನೀನು ನನ್ನ ಜೊತೆಗೆ ಕೆಲಸ ಮಾಡಲು ಒಪ್ಪಿದಾಗಲೇ ನಮಗದು ದೊರೆಯಿತು. ಎರಡನೇ ಕುಡಿಕೆಯಲ್ಲಿ ಸಹನೆಯಿತ್ತು. ನಾವಿಬ್ಬರೂ ಶ್ರಮವಾದರೂ ಹಿಡಿದ ಕೆಲಸವನ್ನು ಮಾಡಿ ಮುಗಿಸಿದಾಗ ಸಹನೆ ನಮ್ಮದಾಯಿತು.ಇನ್ನೂ ಮೂರನೇ ಕುಡಿಕೆ ತೆರೆದು ನೋಡಲು ಸ್ವಲ್ಪ ಸಮಯ ಬೇಕು ಎಂದ. ತಮ್ಮ ಅಸಮಾಧಾನದಿಂದ ಎಲ್ಲಿದೆ ಅದು ನಾನು ನೋಡುತ್ತೇನೆ ಎಂದ. ಆಗ ಅಣ್ಣ ಅವನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಆ ಫಲವತ್ತಾದ ಮಣ್ಣನ್ನು ನಾವಿಬ್ಬರೂ ಒಗ್ಗಟ್ಟಿನಿಂದ ಶ್ರಮಪಟ್ಟು ತಂದು ತೋಟದ ಗಿಡಗಳಿಗೆ ಹಾಕಿದ್ದೇವೆ. ಕೆಲವು ದಿನಗಳಲ್ಲಿ ಗಿಡವು ಉತ್ತಮ ಇಳುವರಿ ಕೊಡುವುದು ನಿಶ್ಚಿತವಾಗಿದೆ. ಆದ್ದರಿಂದ ಮೂರನೇ ಕುಡಿಕೆಯಲ್ಲಿ ಹೊನ್ನಿನ ಫಲ ತುಂಬಿದೆ ಎಂದು ನಾನು ನಂಬಿದ್ದೇನೆ‌..” ಎಂದನು‌. ಅವನ ಮಾತಿಂದ ತಮ್ಮನಿಗೆ ತನ್ನ ತಪ್ಪಿನ ಅರಿವಾಯಿತು.

ಯಶಸ್ಸು ಅಥವಾ ಸಿರಿತನ ಒಮ್ಮೆಲೇ ದೊರೆಯದು. ಒಳ್ಳೆಯ ಮನಸ್ಸಿನ ಸತತ ಪ್ರಯತ್ನ ನಮ್ಮದಾದರೆ ನಾವು ಬಯಸಿದ ನಿಧಿ ನಮ್ಮದಾಗುವುದು .. ಎಂದು ಅರಿತ
ಆತ ಅಣ್ಣನ ಜೊತೆ ಎಲ್ಲಾ ಕೆಲಸದಲ್ಲಿ ತೊಡಗಿಕೊಂಡ. ಇಬ್ಬರೂ ಸತತ ದುಡಿಮೆ ಯಿಂದ ಉತ್ತಮ ಇಳುವರಿ ಪಡೆದು ನೆಮ್ಮದಿಯ ಜೀವನ ನಡೆಸಿದರು.

  ✍️ರೇಖಾ ಭಟ್. ಹೊನ್ನಗದ್ದೆ