ವಿಶ್ವ ಕುಟುಂಬ ದಿನದ ಆಚರಣೆಯ ಪ್ರಯುಕ್ತ ವಿಶೇಷ ಲೇಖನ

ಭಾರತೀಯ ಸಾಮಾಜಿಕ ಪದ್ಧತಿಯ ಬೇರು ಕುಟುಂಬ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ವಿಶಾಲ ಮನೋಭಾವನೆಯ ಅರಿವು ನಮ್ಮದು. ಅದರಲ್ಲಿ ಕುಟುಂಬ ಅತ್ಯಂತ ಮೂಲಭೂತ ಸ್ತರದ ವ್ಯವಸ್ಥೆ. ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳ ಬಗ್ಗೆ ತಿಳಿದಿದ್ದೇವೆ. ಈಗಂತೂ ನ್ಯೂಕ್ಲಿಯರ್ ಕುಟುಂಬಗಳೇ ಹೆಚ್ಚು.ಹಿಂದಿನ ಕಾಲದಲ್ಲಿ ವ್ಯವಸಾಯ ವ್ಯವಹಾರಗಳ ಮೇಲೆ ಎಲ್ಲರೂ ಅವಲಂಬಿತರಾಗಿದ್ದಾಗ ಒಂದೇ ಕಡೆ ವಾಸಿಸುವ ಅವಶ್ಯಕತೆ ಇದ್ದಾಗ ಕೂಡು ಕುಟುಂಬಗಳು ಅನಿವಾರ್ಯವೂ ಅವಶ್ಯ ಕವೂ ಆಗಿದ್ದವು.
ಬದಲಾಗುತ್ತಿರುವ ಈಗಿನ ಸಾಮಾಜಿಕ ಹಾಗೂ ಆರ್ಥಿಕ ಕಾಲಘಟ್ಟ ದಲ್ಲಿ ಅದು ಸಾಧ್ಯವಿಲ್ಲ.ಹಾಗಾಗಿ ಕುಟುಂಬ ಗಳು ಬೇರೆಡೆಗಳಲ್ಲಿ ಹಂಚಿಹೋಗಿರುವುದು ಸಾಮಾನ್ಯ ಸಹಜ. ಆದರೆ ಮೂಲ ತಾಯಿ ಬೇರೇ ಕುಟುಂಬ ವ್ಯವಸ್ಥೆಯಾದ್ದರಿಂದ ಇಡೀ ಸಂಸಾರದ ವೃಕ್ಷಕ್ಕೆ ಸಾರ ಮೂಲಮನೆಯ ಪೋಷಕರೇ. ಹಾಗಾಗಿ, “ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ” ಎಂಬ ಕವಿ ವಾಕ್ಯಕ್ಕೆ ವಿರುದ್ಧವಾಗಿ ದೂರವಿದ್ದರೂ ಆಂತರಿಕ ಆರ್ದ್ರತೆಯನ್ನು ಕಾಪಾಡಿಕೊಳ್ಳುತ್ತಾ ವಿಭಜಿತ ಹಾಗೂ ಅವಿಭಾಜ್ಯ ಕುಟುಂಬಗಳೆಡರ ಅನುಕೂಲತೆ ಯನ್ನು ಉಪಭೋಗಿಸುತ್ತಿರುವ ದೃಶ್ಯವನ್ನು ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಕಾಣುತ್ತಿದ್ದೇವೆ. ಆದರೆ ಒಟ್ಟುಕುಟುಂಬದ ಸಹಬಾಳ್ವೆಯ ಸೊಗಸನ್ನು ಕಂಡಿರುವ ನಾವು ಅದನ್ನು ನಮ್ಮ ಮಕ್ಕಳಿಗೆ ಅಂದರೆ ಈ ಜನಾಂಗಕ್ಕೆ ತಲುಪಿಸಬೇಕಲ್ಲವೇ? ನಗರದ ವ್ಯವಸ್ಥೆಯಲ್ಲಿ ಗಂಡ ಹೆಂಡತಿ ಹಾಗೂಮಕ್ಕಳು ಹೀಗೆ ಎಲ್ಲರ ಮೇಲೂ ಒತ್ತಡದ ಕರಿನೆರಳು ಆವರಿಸಿರುವಾಗ ಸಂಬಂಧಗಳ ಸುಳುವಿನ ಒಳ ಹೊಳಹು ಗಳು ಮಕ್ಕಳ ಮನದಲ್ಲಿ ಮೂಡಿಸಲು ಯಶಸ್ವಿಯಾಗಿದ್ದೇವೆಯೇ? ಉತ್ತರ ಕಂಡು ಕೊಳ್ಳಬೇಕಾಗಿದೆ.

ಈಗ ಐವತ್ತರ ವಯೋಮಾನದ ನಾನು ಐದು ತಲೆಮಾರುಗಳ ಒಡನಾಟ ಕಂಡಿರುವೆ. ಮಧ್ಯದ ಮೂರನೆಯ ಬೆಸುಗೆಯಾದ್ದರಿಂದ ಒಂದನೆಯ ತಲೆ ನನ್ನ ಅಜ್ಜಿಯ ಅನುಭವದ ನೆಲೆಗಟ್ಟನ್ನು ಬಲ್ಲವಳಾಗಿ ಐದನೆಯ ಅಂದರೆ ಇಂದಿಗೆ ಹತ್ತು ವರ್ಷದ ವಯೋಮಾನದ ಒಳಗಿರುವ ಮೊಮ್ಮಕ್ಕಳ ವಯಸ್ಸಿನವರನ್ನು ಕಂಡಿದ್ದರಿಂದ ಹೀಗೆ ಬದಲಾಗುತ್ತಿರುವ ಕುಟುಂಬದ ಪರಿಕಲ್ಪನೆಯ ಚಿತ್ರ ಹೆಚ್ಚು ಸ್ಪಷ್ಟವಾಗಿದೆ. ಅಜ್ಜಿ ಬೆಳೆದಂತಹ ಅರವತ್ತು ಎಪ್ಪತ್ತು ಜನಗಳ ಕುಟುಂಬ ವ್ಯವಸ್ಥೆಯಿಂದ ಹಿಡಿದು ಈಗಿನ ಮೂರು ಅಥವಾ ನಾಲ್ಕು ಜನರ ಪುಟ್ಟ ಸಂಸಾರದ ತನಕದ ಪರಿಷ್ಕರಣೆಯಲ್ಲಿ ಸಿಂಹಪಾಲು ಆರ್ಥಿಕ ವ್ಯವಸ್ಥೆಯೇ ಆದ್ದರಿಂದ ಸಾಮಾಜಿಕ ವ್ಯವ ಸ್ಥೆಯೂ ಸ್ಥಿತ್ಯಂತರ ಹೊಂದುತ್ತಾ ಸಾಗುತ್ತಿದೆ ಎನ್ನಬಹುದು.
ಮೊದಲೇ ಹೇಳಿದಂತೆ ಬದಲಾವಣೆಗೆ ಹೊಂದಿ ನಡೆಯಬೇಕಿರುವುದು ಸಹಜ. ಕುಟುಂಬದ ಸದಸ್ಯರ ಮಧ್ಯದ ಸಂಬಂಧ ಸಾಮರಸ್ಯಒಂದು ಹಂತದವರೆಗಾದರೂ ಉಳಿಸಿಕೊಳ್ಳಬೇಕಾಗಿರುವುದು ಕರ್ತವ್ಯ. ಇಲ್ಲಿಯೂ ಸಾಂಪ್ರದಾಯಿಕ ಆಚರಣೆಗಳು ಮುಖ್ಯಪಾತ್ರವಹಿಸುತ್ತವೆ.ಸಂತೋಷದಲ್ಲಿ ಆಗಲಿ ಸಾವಿಗೆ ಸಂಬಂಧಿಸಿದ ಆಚರಣೆ ಗಳಲ್ಲಿ ಎಲ್ಲ ಸದಸ್ಯರ ಉಪಸ್ಥಿತಿ ಬೇಡು ವುದು ಇದಕ್ಕೆ ಹಿಡಿದ ಕನ್ನಡಿ. ವಿದೇಶವಾಸ ಉದ್ಯೋಗದ ಅನಿವಾರ್ಯತೆಗಳು ಈಗ ಅಂತಹ ಸಂದರ್ಭಗಳನ್ನು ಕಡಿಮೆ ಮಾಡಿ ಬಿಡುತ್ತಿವೆ.ನಾಗರಿಕತೆ ಆಧುನಿಕತೆ ಬೆಳೆದಷ್ಟು ಮನುಷ್ಯ ತನ್ನದೇ ಚಿಪ್ಪಿನಲ್ಲಿ ಹುದುಗುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ.ಇದು ದೀರ್ಘ ಕಾಲದಲ್ಲಿ ಖಿನ್ನತೆ ಮೊದಲಾದ ಮಾನಸಿಕ ಸಮಸ್ಯೆಗಳಿಗೂ ಎಡೆಮಾಡಿಕೊಡುತ್ತದೆ.
ಮುಂಚೆ ಹತ್ತಿರದ ಹಿರಿಯ ಬುದ್ಧಿವಂತ ಕುಟುಂಬ ಸದಸ್ಯರು ಮಾಡುತ್ತಿದ್ದ ಕೆಲಸಕ್ಕೆ ಈಗ ಹಣ ಕೊಟ್ಟು ಆಪ್ತ ಸಲಹೆಗಾರರ (councellors) ಮೊರೆ ಹೋಗಬೇಕಾಗಿದೆ. ಇದು ಇಂದಿನ ಯುಗದ ಅಭಿಶಾಪ ಎಂದರೆ ತಪ್ಪಾಗಲಾರದು. ಶುಭ ಅಶುಭ ಸಂದರ್ಭ ಗಳಲ್ಲಿ, ಬೇಸಿಗೆ ದಸರಾ ರಜೆಗಳಲ್ಲಿ ಅಜ್ಜಿ ಮನೆಯಲ್ಲಿ ಎಲ್ಲಾ ಕಸಿನ್ಗಳು ಸೇರುತ್ತ ಇದ್ದಾಗಿನ ಅನುಭವಗಳನ್ನು ಇಂದಿನ ಬೇಸಿಗೆ ಶಿಬಿರಗಳು ನೀಡಲು ಸಾಧ್ಯವೇ? ಸಹಕಾರ ಸಮರಸ ಹಂಚಿಕೊಳ್ಳುವ ಗುಣಗಳನ್ನು ಬೆಳೆಸುತ್ತಿದ್ದ ಸ್ವಲ್ಪ ಮಟ್ಟಿಗೆ ಸಂಕುಚಿತ ಭಾವಗಳನ್ನು ಬಿಡಿಸುತ್ತಿದ್ದ ಅಂದಿನ ಅಭ್ಯಾಸಗಳು ಇಂದು ಕಾಣಲು ಸಾಧ್ಯವೇ? ತಮ್ಮದೇ ಕೋಣೆ ಬಿಟ್ಟು ಬಂದವರನ್ನು ಮಾತನಾಡಿಸಲು ಹೊರ ಬರದ ಯುವ ಜನಾಂಗವನ್ನು ಕಂಡಿದ್ದೇನೆ. ಇತ್ತೀಚಿನ ಇಪ್ಪತ್ತುಮೂವತ್ತು ವರ್ಷಗಳಿಂದ ಓದು ಒಳ್ಳೆಯ ಉದ್ಯೋಗದ ಓಟದ ಸ್ಪರ್ಧೆ ಯ ರೇಸ್ ಕುದುರೆಯನ್ನಾಗಿ ಮಾಡಿದ ಪರಿಣಾಮವೇ ಇದು ಎಂದು ಪ್ರಶ್ನಿಸಿಕೊಳ್ಳ ಬೇಕಾಗಿದೆ.ಓದಿಗೆ ನೀಡುವ ಅತೀಯಾದ ಪ್ರಾಮುಖ್ಯತೆಯಿಂದಾಗಿ ಮಕ್ಕಳನ್ನುಸೀಮಿತ ಪ್ರಪಂಚದಲ್ಲಿ ಉಳಿಯುವಂತೆ ಮಾಡಿ ಕುಟುಂಬದ ಬಗ್ಗೆ ಪ್ರೀತಿ ವಾತ್ಸಲ್ಯವನ್ನು ವ್ಯಾಪಾರೀಕರಣ ಮಾಡಿ ವಿಮುಖರಾಗು ವಂತೆ ಮಾಡಿದ್ದು ನಮ್ಮ ತಪ್ಪೇ ಅಲ್ಲವೇ? ಅವರು ಗಳಿಸಿದ ಅಂಕಗಳ ಮೇಲೆ, ತೆಗೆದು ಕೊಳ್ಳುವ ಸಂಬಳದ ಮೇಲೆ ಹಿರಿಮೆ ತೋರಿ ಸಿದಾಗ ಅದಕ್ಕೆ ಕಷ್ಟಪಟ್ಟ ಪೋಷಕರ ಬಗ್ಗೆ ಅಭಿಮಾನವೂ ಬೆಳೆಯ ಬೇಕಿತ್ತು. ಅಪ್ಪ ಅಮ್ಮ ಸಂಬಂಧಗಳಿಗೆ ಬೆಲೆಕೊಡುತ್ತಾರೆ ಎಂಬುದನ್ನು ನಡುವಳಿಕೆ ನೋಡಿಯೇ ಬೆಳೆದ ಮುಂದಿನ ಪೀಳಿಗೆಯಲ್ಲಿ ಈಗ ನಾವು ನಮ್ಮದೇ ಪ್ರತಿಬಿಂಬ ನೋಡಬೇಕಾ ಗಿರುವುದು ನಮ್ಮ ಪೀಳಿಗೆಯ ದುರದೃಷ್ಟ.

ಸಮಬಾಳ್ವೆ ಸಹಚರ್ಯ ಇಲ್ಲದಿದ್ದರೂ ಹತ್ತಿರದ ಸಂಬಂಧಿಕರಲ್ಲಿಆರೋಗ್ಯಪೂರ್ಣ ಅನುಬಂಧ ಉಳಿಸಿಕೊಳ್ಳಬೇಕು. ಪರಸ್ಪರ ಸುಖ ದುಃಖಗಳಲ್ಲಿ ಭಾಗಿಯಾಗಿ ಸಹಾಯ ಹಸ್ತ ನೀಡಬೇಕು. ಆದರೆ ಅದಕ್ಕೆ ಪ್ರತಿಫಲ ನಿರೀಕ್ಷೆ ಇದ್ದರೆ ಮತ್ತೆ ವ್ಯವಹಾರವಾಗಿ ಬಿಡು ತ್ತದೆ.ಮಾಡಿದ ಒಳ್ಳೆ ಕಾರ್ಯಗಳಿಗೆ ಕರ್ಮ ಸಿದ್ಧಾಂತದ ಅನುಗುಣವಾಗಿ ಬೇರೆ ರೀತಿ ಯಲ್ಲಿ ಬೇರೆಯವರಿಂದ ಸಹಾಯ ಬರ ಬಹುದು. ಮೊದಲನೆಯ ಹೆಜ್ಜೆನಾವಿಟ್ಟು ಕೈ ನೀಡಿದರೆ ಮುಂದೆ ನಮ್ಮ ಮುಂದೆ ಚಾಚಿದ ಹಸ್ತ ಬಂದೇ ಬರುತ್ತದೆ.ನಮ್ಮ ಈ ಆಚರಣೆ ಗಳನ್ನು ಮಕ್ಕಳಿಗೂ ಕಲಿಸುತ್ತಾ ಕೌಟುಂಬಕ ಪ್ರೀತಿವಿಶ್ವಾಸಗಳಿಗೆ ಒತ್ತು ಕೊಟ್ಟು ಪ್ರಥಮ ಪ್ರಾಶಸ್ತ್ಯ ಕೊಡಬೇಕೆಂದು ಕಲಿಸುತ್ತಾ ಹೋದರೆ ಮುಂದಾದರೂ ಆರೋಗ್ಯ- ಪೂರ್ಣ ಸ್ವಸ್ಥ ಸುಂದರ ಸಮಾಜ ಮತ್ತೆ ಹುಟ್ಟಬಹುದಲ್ಲವೇ? ಶಾಂತಿ ಸೌಹಾರ್ದತೆ ಗಳು ಬಾಳ ಉಸಿರಾಗಬಹುದಲ್ಲವೇ? ಮನೆಗೆದ್ದು ಮಾರುಗೆಲ್ಲುವ ಈ ಕಾರ್ಯ ದಿಂದ ನಾವು ಪೋಷಕರು ಹೊಸ ದಿಗಂತ ದೆಡೆಗೆ ಪಯಣ ಆರಂಭಿಸೋಣವೇ?
✍️ಸುಜಾತಾ ರವೀಶ್,ಮೈಸೂರು
ಕೂಡಿ ಬಾಳಿದರೆ ಸ್ವರ್ಗ ಸುಖ…. ಅತ್ಯುತ್ತಮ ಬರಹ 🌹
LikeLiked by 1 person
ಧನ್ಯವಾದಗಳು 🙏🙏
ಸುಜಾತಾ ರವೀಶ್
LikeLiked by 1 person
ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು
ಸುಜಾತಾ
LikeLike
Welcome madam
LikeLike