1985 ರ ನಂತರ ಭಾರತದಲ್ಲಿ ಸ್ವಾಮಿವಿವೇಕಾನಂದರ ಹುಟ್ಟುಹಬ್ಬ ವನ್ನು“ರಾಷ್ಟ್ರೀಯ ಯುವ ದಿನ” ಎಂದು ಘೋಷಿಸಲಾಗಿದೆ.
ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ,ಅಪೂರ್ವವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆಯ ಮೂಲಕ ನಮ್ಮ ರಾಷ್ಟ್ರಚೇತನವನ್ನು ಜಾಗೃತಗೊಳಿಸಿ,ಯುವಕರಲ್ಲಿ ನವೋತ್ಸಾಹ ವನ್ನು ಕೆರಳಿಸಿ, ಅವರಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ನವಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದರು.
ನಾನು ಇತ್ತೀಚೆಗೆ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಒಂದು ಕಾರ್ಯಕ್ರಮದ ನಿಮಿತ್ತ ಅಲ್ಲಿಗೆ ಭೇಟಿ ಕೊಟ್ಟಿದ್ದ ಸುಸಂದರ್ಭದಲ್ಲಿ, ಅಲ್ಲಿನ ಅಧ್ಯಕ್ಷರಾದ ಪರಮಪೂಜ್ಯ ಡಾ.ಶ್ರೀಶ್ರೀವೀರೇಶಾನಂದ ಸರಸ್ವತೀ ಸ್ವಾಮೀಜಿಯವರು ಮಾತನಾಡುತ್ತಾ, ಈಗಿನ ಶಕ್ತಿಹೀನ ಶಿಕ್ಷಣ ಪದ್ಧತಿಯ ಬಗ್ಗೆ ಸರ್ಕಾರ ಹಾಗೂ ಸಮಾನ್ಯ ಜನತೆಯೂ ಕೂಡ ಯೋಚಿಸುವಂತೆ ಮಾಡುವ ದಿವ್ಯ ಬೀಜವನ್ನು ಬಿತ್ತಿದರು. ಅದೇನೆಂದರೆ –
“ಭಾರತದ ಅಷ್ಟೂ ಶಿಕ್ಷಣ ಸಂಸ್ಥೆಗಳನ್ನು, ನಮ್ಮ ರಾಮಕೃಷ್ಣ ಮಠದ ಸುಪರ್ದಿಗೆ ಕೊಡಿ, ಇನ್ನು ಎರಡು ವರ್ಷದಲ್ಲಿ ಅಲ್ಲಿ ಅತ್ಯುನ್ನತವಾದ ಬದಲಾವಣೆಯನ್ನು ನಾವು ಸೃಷ್ಟಿಮಾಡುತ್ತೇವೆ”
ಎಂದು. ಇದರರ್ಥ ನಮ್ಮ ಭಾರತದ ತಳಹದಿಯಂತಿರುವ,ಈ ನಾಡಿನ ನಿರ್ಮಾತೃ ಗಳಾಗಬೇಕಿರುವ ನಮ್ಮ ಯುವ ಪೀಳಿಗೆ ಯಲ್ಲಿ ಇರಬೇಕಾದ ಬುದ್ದಿವಂತಿಕೆ, ಸಮಯಪ್ರಜ್ಞೆ, ಸಚ್ಚಾರಿತ್ರ್ಯ, ಕ್ರಿಯಾಶೀಲತೆ, ಬದುಕುವ ಕಲೆ, ಸಂಸ್ಕಾರಗಳಂತಹ ಮೌಲ್ಯಗಳನ್ನು ಶ್ರೀರಾಮಕೃಷ್ಣರು ಹಾಗೂ ವಿವೇಕಾನಂದರ ತತ್ವ ಸಿದ್ಧಾಂತಗಳಲ್ಲಿ ಅಂದರೆ ವಿವೇಕಾನಂದರ ಬೋಧನೆಯ ಬೆಳಕಿನಲ್ಲಿ ಇಂದಿನ ಶಿಕ್ಷಣ ಮತ್ತು ಯುವ ಜನತೆಯನ್ನು ಮೇಲೆತ್ತಬೇಕಾದರೆ ಅದು ವಿವೇಕಾನಂದರ ಕಲ್ಪನೆಯ ಶಿಕ್ಷಣ ಪ್ರಯೋಗಗಳಿಂದ ಮಾತ್ರ ಸಾಧ್ಯ. ಇದೇ ಕಾರಣಕ್ಕೆ ಶ್ರೀವೀರೇಶಾನಂದ ಸರಸ್ವತೀ ಸ್ವಾಮೀಜಿಯವರಲ್ಲಿ ಅಚಲವಾದ ನಂಬಿಕೆ ಮತ್ತು ಅದರ ತಾಕತ್ತಿನ ಬಗ್ಗೆ ಅವರ ದೃಢ ವಾದ ನಂಬಿಕೆ, ಅಷ್ಟುಮಾತ್ರವಲ್ಲ ಅದನ್ನು ಯುವಪೀಳಿಗೆಗೆ ತಲುಪಿಸಿ ನವಭಾರತದ ನಿರ್ಮಾಣ ಮಾಡುವ ಹಂಬಲ ಮತ್ತು ಮಾತೃಹೃದಯ ಅಲ್ಲಿ ನನಗೆ ಸ್ಪಷ್ಟವಾಗಿ ಗೋಚರಿಸಿತು.ಸ್ವಾಮೀಜಿಯವರಸಮಾಜದ ಬಗೆಗಿನ ಅರಿವು,ಕಾಳಜಿ, ಅವರ ಅಪಾರ ವಾದ ಜ್ಞಾನ ಭಂಡಾರ ಮತ್ತು ಅವರ ಸತ್ ಚಿಂತನೆಗಳ ಜೊತೆ ಜೊತೆಯಾಗಿ ನಾವೂ ಕೈ ಜೋಡಿಸಲೇಬೇಕೆಂಬ ತವಕ ನಮ್ಮೊಳಗೆ ಜಾಗೃತಗೊಳ್ಳುವಂತೆ ಮಾಡಿತು.
ಒಂದು ದೇಶದ ನಿಜವಾದ ಶಕ್ತಿ ಎಂದರೆ ಅಲ್ಲಿನ ಯುವ ಶಕ್ತಿಮಾತ್ರವೇ. ಯುವ ಜನತೆಯಿಂದ ಮಾತ್ರ ರಾಷ್ಟ್ರದ ರಕ್ಷಣೆ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ವಿವೇಕಾನಂದರು ಅಚಲ ನಂಬಿಕೆಯನ್ನಿಟ್ಟಿ ದ್ದರು.ಈಕಾರಣದಿಂದಾಗಿಯೇ ವಿವೇಕಾನಂದರು ಕರೆ ನೀಡಿದ್ದು, “ಬಲಿಷ್ಟರೂ,ಉಕ್ಕಿನ ನರಗಳು,ಕಬ್ಬಿಣ ದಂತಹ ಮಾಂಸಖಂಡಗಳು, ಮಿಂಚಿ ನಂತಹ ಇಚ್ಛಾಶಕ್ತಿಯುಳ್ಳವರು, ಶ್ರದ್ಧಾ ನಿರತರು ಆದ ಕೇವಲ ನೂರು ಜನ ಯುವಕರನ್ನು ನನಗೆಕೊಡಿ ಇಡೀ ಜಗತ್ತನ್ನೇ ಕ್ರಾಂತಿಗೊಳಿಸುತ್ತೇನೆ” ಎಂದು. ಇಂತಹ, ನೂರು ಮಂದಿ ಯುವಕರಿಗೆ ಗುಣ, ಶೀಲ, ಚಾರಿತ್ರ್ಯ, ಸಂಯಮ, ಶಿಸ್ತುಗಳನ್ನು ರೂಪಿಸಿದಾಗ ಅವರು ಭವ್ಯ ಭಾರತವನ್ನು ಕಟ್ಟಬಲ್ಲರು. ಏಕೆಂದರೆ, ಯುವಕರೇ ನವಭಾರತದ ನಿರ್ಮಾಣ ಶಿಲ್ಪಿಗಳು, ಅಮೃತ ಪುತ್ರರು.
ಶಿಕ್ಷಣದ ಉದ್ದೇಶ ಏನು ಎಂಬ ಪ್ರಶ್ನೆಗೆ ಉತ್ತರದ ಶೋಧನೆ ಇಂದೂ ನಡೆಯುತ್ತಲೇ ಇದೆ. ಬೇರೆ ಬೇರೆ ಕಾಲಘಟ್ಟದ ದಾರ್ಶನಿ ಕರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಭಾರತೀಯ ವೇದ, ಉಪನಿಷತ್‍ಗಳಿಂದ ತೊಡಗಿ ಇಂದಿನ ಶಿಕ್ಷಣ ಆಯೋಗಗಳ ವರೆಗೂ ಶಿಕ್ಷಣದ ಉದ್ದೇಶದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರು ಬಂದು ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವವರೆಗೆ ಭಾರತೀಯರು ಅಜ್ಞಾನಿಗಳಾಗಿಯೇಇದ್ದರು ಎನ್ನುವ ಪಶ್ಚಿಮದ ನಿರೂಪಣೆ ಬಹುಕಾಲ ಚಾಲ್ತಿಯಲ್ಲಿತ್ತು. ಬ್ರಿಟಿಷರು ಭಾರತಕ್ಕೆ ಬರುವ ಪೂರ್ವದಲ್ಲೂ ಭಾರತದಲ್ಲಿ ಸುಂದರವಾದ ಮತ್ತು ಅರ್ಥಪೂರ್ಣವಾದ ಶಿಕ್ಷಣ ಕ್ರಮವೊಂದಿತ್ತು ಎನ್ನುವುದನ್ನು ದಾಖಲೆಗಳ ಸಹಿತ ದಶಕಗಳ ಹಿಂದೆಯೇ ಧರ್ಮಪಾಲ್ ಅವರು ಅದನ್ನು ಶೋಧಿಸಿ ‘ದಿ ಬ್ಯೂಟಿ ಫುಲ್ ಟ್ರೀ’ಎಂಬ ಕೃತಿಯನ್ನು ಪ್ರಕಟಿಸಿದ್ದರು.ಭಾರತೀಯ ಶಿಕ್ಷಣ ಪದ್ಧತಿ, ಭಾರತೀಯರ ಶಿಕ್ಷಣದ ಕುರಿತ ಆಲೋಚನೆ ಗಳ ಸಾಫಲ್ಯವನ್ನು ಈ ಶೋಧನೆ ನಿರೂಪಿ ಸಿತು.
ಆಧುನಿಕ ಕಾಲಘಟ್ಟದ ಭಾರತದಲ್ಲಿ ಶಿಕ್ಷಣದ ಕುರಿತು ಬಹಳ ಗಂಭೀರವಾಗಿ ಚಿಂತನೆ ನಡೆಸಿ ಅದನ್ನು ನಿರೂಪಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರು. ವಿವೇಕಾನಂದರು ಶಿಕ್ಷಣದ ಉದ್ದೇಶ, ಅದರ ಪ್ರಕ್ರಿಯೆ, ಅದು ಉಂಟುಮಾಡಬೇಕಾದ ಪರಿಣಾಮದ ಬಗ್ಗೆ ನಡೆಸಿದ ಚಿಂತನೆಗಳು ಆ ಕಾಲಕ್ಕೆ ಮಾತ್ರವಲ್ಲ. ಇಂದಿಗೂ ನಮ್ಮ ನಡುವಿನ ಬಹುಮುಖ್ಯ ಶಿಕ್ಷಣ ತಜ್ಞರು ನಡೆಸುವ ಚಿಂತನೆಗಳಿಗೆ ಬೀಜರೂಪ ದಂತಿದೆ. “ವಿದ್ಯಾಭ್ಯಾಸವೆಂದರೆ ತಲೆಯಲ್ಲಿ ತುಂಬಿಕೊಂಡ ವಿಷಯಗಳ ಮೊತ್ತವಲ್ಲ. ಅದು ಅಲ್ಲಿಒಂದಿನಿತೂ ಜೀರ್ಣವಾಗದೆ ದಿಕ್ಕುಗೆಟ್ಟು ಓಡುತ್ತಿರುವುದು. ಜೀವನ ವನ್ನು ಕಟ್ಟುವಂತಹ,ಪುರುಷ ಸಿಂಹರನ್ನು ಸೃಷ್ಟಿಸುವಂತಹ, ಶೀಲ ಸಂಪತ್ತನ್ನು ನಿರ್ಮಾಣ ಮಾಡುವಂತಹ ವಿಚಾರ ಗಳನ್ನು ಗ್ರಹಿಸುವಂತಹ ವಿದ್ಯಾಭ್ಯಾಸ ನಮಗೆ ಬೇಕು”ಎನ್ನುತ್ತಾರೆ.ಆದರೆ ಕೇವಲ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಮೆದುಳಿಗೆ ತುಂಬುವುದು ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಿದೆ. ಹೀಗೆ ತುಂಬಿಕೊಂಡ ಮಾಹಿತಿಗಳು ಜೀರ್ಣವಾ- ಗದೆ ಹೋಗುವುದರಿಂದ ವ್ಯಕ್ತಿಯಲ್ಲಿ ಕಲಿಕೆಯ ಪ್ರಕ್ರಿಯೆ ಉತ್ಸಾಹದಾಯಕವಾದ ಸಂಗತಿಯಾಗಿಲ್ಲ.
“ಯಾವ ಶಿಕ್ಷಣವನ್ನು ಪಡೆಯುವುದ ರಿಂದ ವ್ಯಕ್ತಿ ತನ್ನ ಜೀವನವನ್ನು ತಾನೇ ಕಟ್ಟಿಕೊಳ್ಳಬಹುದೋ,ಸಾಧನೆಯ ಪಥ ದಲ್ಲಿ ಸಿಂಹ ಸಾಹಸಿಕರನ್ನಾಗಿಸಬಹುದೊ ವ್ಯಕ್ತಿಯನ್ನು ಶೀಲಸಂಪನ್ನರನ್ನಾಗಿಯೂ, ಚಾರಿತ್ರ್ಯವಂತರನ್ನಾಗಿಯೂ ಮಾಡ- ಬಹುದೊ ಅದು ನಿಜವಾದ ಶಿಕ್ಷಣ” ಎಂಬ ವಿವೇಕಾನಂದರ ಉಕ್ತಿ ನಮ್ಮ ಮುಂದಿದ್ದರೂ ನಾವು ಮಾತ್ರ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಕೇವಲ ಪ್ರಮಾಣ ಪತ್ರಗಳನ್ನು ಮಾತ್ರ ಹೊಂದಿರುವ ನಿರುಪ ಯುಕ್ತ ಪದವೀಧರರನ್ನು ತಯಾರಿಸುತ್ತಲೇ ಇದ್ದೇವೆ. (ಇತ್ತೀಚೆಗೆ ನೀತಿ ಆಯೋಗ ನಮ್ಮ ದೇಶದ ಪದವೀಧರ ರಲ್ಲಿ 50 ಶೇಕಡಾಕ್ಕಿಂತ ಹೆಚ್ಚು ಜನ ಯಾವುವೇ ವೃತ್ತಿ ನಿರ್ವಹಣೆಗೂ ಯೋಗ್ಯರಾಗಿಲ್ಲ ಎಂದು ವರದಿ ನೀಡಿದೆ).
ಈ ಕುರಿತು ಚಿಂತನೆ ನಡೆಸಿದಾಗ ಕಾಣುವ ಸತ್ಯವೇನೆಂದರೆ, ವಿವೇಕಾನಂದರ ಶೈಕ್ಷಣಿಕ ಚಿಂತನೆಗಳನ್ನು ಅನುಷ್ಠಾನಕ್ಕೆ ತಾರದೆ ಹೋದ ಸಂಗತಿ ಅರಿವಾಗುತ್ತದೆ. “ವಿದ್ಯಾಭ್ಯಾಸವೆಂದರೆ ಮಾನವನಲ್ಲಿ ಈಗಾಗಲೇ ಸುಪ್ತವಾಗಿರುವ ಪರಿಪೂರ್ಣ ತೆಯನ್ನು ಪ್ರಕಾಶಪಡಿಸುವುದು” ಎಂಬ ಮಾತನ್ನೇ ಗಮನಿಸುವ. ಪರಿಪೂರ್ಣತೆಯ ಸ್ವರೂಪದ ಜ್ಞಾನವು ವ್ಯಕ್ತಿಯಲ್ಲಿ ಅನುಭವ ವಾಗಿ ಪ್ರಕಟಗೊಳ್ಳುವಂತೆ ಮಾಡಬೇಕಾ ದದ್ದು ಶಿಕ್ಷಣ. ಕಲಿಕೆ ನಡೆಯುವುದು ಸುಪ್ತ ವಾಗಿರುವ ಸಾಮರ್ಥ್ಯದ ಅಭಿವ್ಯಕ್ತಿಗಾಗಿ. ನಿಜವಾಗಿ ಕಲಿಯುವುದು ಎಂದರೆ ತನ್ನನ್ನು ತಾನು ಕಂಡುಕೊಳ್ಳುವುದು.ಇಲ್ಲಿ ನಡೆಯುವ ಕಲಿಕೆಯ ಪ್ರಕ್ರಿಯೆ ಎಂದರೆ ಆತ್ಮ ಎನ್ನುವ ಅನಂತವಾದ ಜ್ಞಾನದ ಗಣಿಗೆ ಕವಿದಿರುವ ಮುಸುಕನ್ನು ತೆರೆಯುವುದು. ಹೀಗೆ ಪ್ರಕಟಗೊಳ್ಳುವ ಜ್ಞಾನಕ್ಕೆ ಯಾವುದೂ ತಡೆಯಲ್ಲ.ಅದು ಎಲ್ಲವನ್ನೂ ಮೀರಿ ಪ್ರಕಟ ಗೊಳ್ಳುತ್ತದೆ ಎನ್ನುವ ಆಶಯ ಇಲ್ಲಿದೆ.
ಆದರೆ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ಆದರ್ಶ ಜ್ಞಾನ ಪ್ರಕಾಶನಕ್ಕೆ ಪೂರಕವಾಗಿ ದೆಯೇ? ಶಿಕ್ಷಣದ ಗುಣಮಟ್ಟ ಎಂದರೆ ಹವಾನಿಯಂತ್ರಿತ ಕ್ಲಾಸ್‍ರೂಮ್, ಸ್ಮಾರ್ಟ್ ಬೋರ್ಡ್, ಪ್ರತಿವರ್ಷ ಉನ್ನತ ರ್ಯಾಂಕ್, ನೂರು ಶೇಕಡಾ ಫಲಿತಾಂಶ, ಇಷ್ಟಿದ್ದರೆ ಅದೇ ಗುಣಮಟ್ಟದ ಮಾಪನದ ತುತ್ತತುದಿ ಎಂದು ಭಾವಿಸುತ್ತಿದ್ದೇವೆ. ಇದರ ನಡುವೆ ವರ್ಷವೆಲ್ಲಾ ಕಲಿತ ವಿಷಯ ಜ್ಞಾನವನ್ನು ಪರೀಕ್ಷಿಸಲು ಮೂರು ಗಂಟೆಯ ಲಿಖಿತ ಪರೀಕ್ಷೆಯ ಮಾದರಿಯ ಮೌಲ್ಯಮಾಪನ ಕ್ಕಿಂತ ಬೇರೆ ಮಾದರಿಗಳೇ ಇಲ್ಲ. ಇದು ವ್ಯಕ್ತಿಗಳ ಸಾಧನೆಯ ಮಾನದಂಡವಾಗಿದೆ. ಆದರೆ ಈ ಶಿಕ್ಷಿತರೆಲ್ಲಾ ನಿಜವಾಗಿಯೂ ಚಾರಿತ್ರ್ಯವಂತರೂ, ಶೀಲವಂತರೂ ಆಗುತ್ತಿ ದ್ದಾರೆಯೇ? ಶಿಕ್ಷಿತರಾದ ಜನ ಶೀಲವಂತ ರಾಗಿ, ಚಾರಿತ್ರ್ಯವಂತರಾಗಿ ರೂಪುಗೊಳ್ಳದ ಸಮಾಜದ ಭವಿಷ್ಯ ಹೇಗೆ ತಾನೇ ಉನ್ನತ ವಾಗಿರಲು ಸಾಧ್ಯ.

ಎಲ್ಲಾ ವಿದ್ಯಾಭ್ಯಾಸದ ಗುರಿ ಪುರುಷಸಿಂಹ ರನ್ನು ನಿರ್ಮಾಣ ಮಾಡುವುದು. ಹಾಗೆ ಮಾಡುವುದನ್ನು ಬಿಟ್ಟು ಹೊರಗೆ ನಯ ಮಾಡುವುದಕ್ಕೆ ನಾವು ಯಾವಾಗಲೂ ಯತ್ನಿಸುತ್ತಿರುವೆವು. ಒಳಗೆ ಏನೂ ಇಲ್ಲದೆ ಹೊರಗಿನದರಲ್ಲಿ ನಯ ಮಾಡಿದರೆ ಬಂದ ಪ್ರಯೋಜನವೇನು? ಎಂದು ಕೇಳಿದ್ದರು ಸ್ವಾಮಿವಿವೇಕಾನಂದರು. ಆದರೆ ಸ್ವಾತಂತ್ರ್ಯೋತ್ತರ ಭಾರತವೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿಕೊಂಡು ಬಂದಿರುವುದು ಇದೇ ಹೊರಗಿನಿಂದ ನಯ ಮಾಡುವ ಕೆಲಸವನ್ನು!ಹೊರಗಿನಿಂದ ನಾವುಮಾಡಲು ಹೊರಟ ಸುಧಾರಣೆಗಳು ಯಾವುದೇ ಫಲ ನೀಡಲಾರದು.ಬೇರಿಗೆ ನೀಡಬೇಕಾದ ನೀರು ಗೊಬ್ಬರವನ್ನು ರೆಂಬೆ ಕೊಂಬೆಗಳಿಗೆ ನೀಡಿ ಕೊಬ್ಬಿಸುವ ಪ್ರಯತ್ನದಲ್ಲಿದ್ದೇವೆ. ಅದರ ಪರಿಣಾಮವಾದ ಅನಾಹುತಗಳನ್ನು ನೋಡುತ್ತಲೇ ಬಂದಿದ್ದೇವೆ.
ಶೀಲವಂತ, ವಿದ್ಯಾವಂತ, ಚಾರಿತ್ರ್ಯವಂತ ಯುವಜನರ ಪರಿಣಾಮವಾಗಿ ಎಲ್ಲಾ ಬಗೆಯ ಗುಲಾಮಿತನದ ಅವಶೇಷಗಳನ್ನೂ ಕೊಡವಿ ಮೇಲೆದ್ದು ನಿಲ್ಲಬೇಕಾಗಿತ್ತೋ ಅಂತಹ ಯುವಜನತೆ ಜನಜಂಗುಳಿಯ ರೂಪದಲ್ಲಿ ಅಶಾಂತವಾಗಿ ವರ್ತಿಸುತ್ತಿದೆ. ಸಮಾಜದ ಕಷ್ಟಗಳಿಗೆ ಸ್ಪಂದಿಸಬೇಕಾಗಿದ್ದ ಈ ತಲೆಮಾರು ದೊಂಬಿ, ಗಲಭೆಗಳಲ್ಲಿ ಕ್ರಿಯಾಶೀಲಗೊಂಡು ನಮ್ಮ ದೇಶವನ್ನೇ ಒಡೆಯುವ ಘೋಷಣೆಗಳನ್ನು ಹಾಕುವಲ್ಲಿ ಕ್ರಿಯಾಶೀಲವಾಗಿದೆ. ಸೈನಿಕರ ಮೇಲೆ ಕಲ್ಲೆಸೆದು,ಮಾಲ್-ಮಂದಿರಗಳಲ್ಲಿ ಬಾಂಬು ಇಟ್ಟು ಅಮಾಯಕರ ಸಾವಿಗೆ ಕಾರಣರಾಗು- ತ್ತಿದ್ದಾರೆ.ಮತ್ತೊಂದೆಡೆ ಗಾಂಜಾ, ಅಫೀಮು ಗಳ ದಾಸರಾಗಿ, ಕ್ಷಣಿಕ ಸುಖದಲ್ಲಿ ಕಳೆದು ಹೋಗುತ್ತಿದ್ದಾರೆ.ಇಂತಹ ಸನ್ನಿವೇಶದಿಂದ ಯುವ ಜನರನ್ನು ಮೇಲೆತ್ತಬೇಕಾದರೆಅದು ವಿವೇಕಾನಂದರ ಕಲ್ಪನೆಯ ಶಿಕ್ಷಣ ಪ್ರಯೋಗಗಳಿಂದ ಸಾಧ್ಯ. ವಿಚಿತ್ರವೆಂದರೆ ನಮ್ಮ ಸೆಕ್ಯುಲರ್ ಶಿಕ್ಷಣಕ್ಕೆ ಮೌಲ್ಯಗಳ ರೂಪದಲ್ಲಿ ಏನನ್ನಾದರೂ ಕೊಡುವ ಪ್ರಸ್ತಾಪವೇ ಅಹಿತವಾಗಿ ಕಾಣುತ್ತದೆ. ಅದು ಭೌತಿಕ ನೆಲೆಯ ಅರಿವನ್ನು, ಮೆಟೀರಿಯಲಿಸ್ಟಿಕ್ ಜೀವನ ದಾರಿಯನ್ನು ಮಾತ್ರ ನಿರ್ಲಜ್ಜವಾಗಿಯೇ ಭೋಧಿಸುವು ದರಲ್ಲಿ ಪರಮಾನಂದವನ್ನು ಕಾಣುತ್ತಿದೆ. ಆಮೂಲಕ ನೆಲವನ್ನು,ನಿಸರ್ಗವನ್ನು, ಬೆಟ್ಟ–ಗುಡ್ಡ,ನದಿ-ಕಡಲನ್ನೂ ಬಿಡದಂತೆ ಬಳಸಿ ಬಿಸಾಕುವ ಪ್ರವೃತ್ತಿಗೆ ಕಡಿವಾಣವೇ ಇಲ್ಲದಂತೆ ಸರಕುಮೋಹಿ ತಲೆಮಾರು- ಗಳನ್ನು ಪೋಷಿಸುತ್ತಲೇ ಬರಿದಾಗುತ್ತಿರುವ ನಿಸರ್ಗದ ತೊಟ್ಟಿಲನ್ನು ತುಂಬಿಕೊಳ್ಳುವ ದಾರಿಕಾಣದೆ ಕಂಗಾಲಾಗುತ್ತಿದೆ.ಯಾಕೆಂದರೆ ನಾವು ಶೀಲಸಂಪನ್ನರಾದ ಚಾರಿತ್ರ್ಯವಂತ ರಾದ ಮಾನವರನ್ನು ಶಿಕ್ಷಣದ ಮೂಲಕ ಸಿದ್ಧಗೊಳಿಸುತ್ತಿಲ್ಲ. ಇದಕ್ಕೇನಾದರೂ ಒಂದು ಪರಿಹಾರದ ದಾರಿಯನ್ನು ಕಂಡುಕೊಳ್ಳಬೇಕಲ್ಲವೇ?
🔆🔆🔆
✍️ಡಾ.ಪ್ರಿಯಾಂಕ.ಎಂ.ಜಿ ತುಮಕೂರು