ಸ್ವಂತ ಸ್ವಾರ್ಥದ ಆಶೆ ಅಭಿಲಾಷೆಗಳಿಗಿಂತ
ಸರ್ವರಿಗೂ ಒಳಿತ ಬಯಸುವ ಆಂತರ್ಯ
ಮಮತೆ ಸಮತೆಗಳ ಅಕ್ಕರೆ ಮಾಧುರ್ಯ
ಸಕಲರಿಗೂ ಆಸರೆಯಾಗುವ ಔದಾರ್ಯ.!

ಮಾತು ಮಾತಿಗೆ ಮುಗುಳ್ನಗುವ ಸ್ವಭಾವ
ಪರರ ನೋಯಿಸದ ಸೌಜನ್ಯ ಹಾವಭಾವ
ಸಜ್ಜನಿಕೆ ಸಾತ್ವಿಕ ಗುಣದೊಡತಿಗೆ ಸುನಮನ
ಹುಟ್ಟುಹಬ್ಬದ ಸಡಗರಕಿದೋ ಈ ಕವನ.!

ಜೀವನಸಾರಥಿಯಾದ ಒಲುಮೆ ಜೀವಕ್ಕೆ
ಬಾಳು ಬೆಳಗಿದ ನಲುಮೆಯಾ ಭಾವಕ್ಕೆ
ಹುಟ್ಟುಹಬ್ಬದ ಸಂಭ್ರಮದ ಶುಭಾಶಯ
ಚಿರಂತನ ಸಂತಸವಿರಲೆಂಬ ಸದಾಶಯ.!

ಪೂಜಿಸುವ ಅಚ್ಯುತನ ಅನುಗ್ರಹವಿರಲಿ
ಆರಾಧಿಸುವ ಶ್ರೀಗುರುವಿನ ಕೃಪೆಯಿರಲಿ
ನಂಬಿದ ಶೋಭಮಾತೆ ಶ್ರೀರಕ್ಷೆಯಿರಲಿ
ಹರಸುವ ಕೋಟಿದೈವ ಕಾರುಣ್ಯವಿರಲಿ.!

ನಿತ್ಯ ನಿರಂತರ ನಗೆ ನಲಿವಿನ ಹರಿವಿರಲಿ
ಸಕಲಕಾರ್ಯಗಳಲಿ ಗೆಲುವ ಝರಿಯಿರಲಿ
ನಕ್ಕು ನಗಿಸುತ ನಡೆವ ಈ ಪರಿ ಚಿರವಿರಲಿ
ಯಶಸ್ಸು ಶ್ರೇಯಸ್ಸುಗಳು ನಿರಂತರವಿರಲಿ.!

ಆಸ್ಥೆ ಮಮತೆಯಲ್ಲಿ ಮಾತೆಯಾದವಳಿಗೆ
ಪ್ರೀತಿ ಅಕ್ಕರೆಯಲ್ಲಿ ಮಗುವಾಗುವವಳಿಗೆ
ಜನುಮದಿನದ ಹಾರ್ದಿಕ ಅಭಿನಂದನೆ
ಅಂತರಾಳದ ಹಾರೈಕೆಗಳ ಶುಭಕಾಮನೆ.!

(ಜೀವದ ಜೊತೆಗಾತಿಗೆ ಜನ್ಮದಿನದ ಶುಭಕಾಮನೆಗಳ ಕಾವ್ಯ ಕಾಣಿಕೆ..- ನಿಮ್ಮದೊಂದು ಹಾರೈಕೆಯಿರಲಿ)


                  🔆🔆🔆
✍️ಎ.ಎನ್.ರಮೇಶ್.ಗುಬ್ಬಿ.