ಬೇಡಿಕೊಂಡು ಉಣಬೇಡಾ
ದುಡಿದುಕೊಂಡು ಕರೆದುಕೊಂಡು ಉಣ್ಣು
ಇದು ನಿಜ ಧರ್ಮವೆಂದು ಜಗಕೆ ಸಾರಿದ
ಶರಣ ಬಸವನೇ ನಿನಗಿದೋ ಶರಣು

ಮನುಜರ ದೇಹದಲ್ಲಿ ಹರಿಯುವ ರಕ್ತವೆಲ್ಲ
ಕೆಂಪು ಅದಕೆ ಬಡವ ಬಲ್ಲಿದನೆಂಬ ಭೇದವೆಲ್ಲಿ?
ಎಂದು ಕೇಳಿದ ಮಾನವತಾವಾದಿ ಬಸವ
ನಿನಗೆದೋ ಶರಣು

ಎಲ್ಲಿದೆ ಜಾತಿ ಎಲ್ಲಿದೆ ಧರ್ಮ?
ಸಕಲ ಜೀವಿಗಳಿಗೂ ಒಳಿತ ಬಯಸುವುದ ರಲ್ಲಿದೆ
ಎಂಬ ಸರಳ ತತ್ವ ನೀಡಿದ ವಿಶ್ವ ಗುರುಬಸವ
ನಿನಗಿದೋ ಶರಣು

ಗೊಡ್ಡು ಆಚರಣೆ ತೂರಿ                   
ಮೌಢ್ಯದ ಕತ್ತಲು ಕುಕ್ಕಿ
ಆಚೆಗೆ ನಿಂತು ಬಯಲಾದ ಬಸವ
ನಿನಗಿದೋ ಶರಣು

ಯುಗಾಂತರದ  ಹೆಣ್ಣಿನ ಮೌನಕ್ಕೆ     ಧ್ವನಿಯಾಗಿ
ನ್ಯಾಯನೀತಿಗೆ ನಿಷ್ಠುರನಾದ
ಜಗದ ಜ್ಯೋತಿಯಾದ ಬಸವ        
ನಿನಗಿದೋ ಶರಣು

ಕಾಯ ಹಿಡಿದು ಕಾಯಕ ಮಾಡು
ಅದರ ಮಾಟ ದಾಸೋಹದಲಿ ನೋಡು
ಎಂದ ಕಾಯಕಯೋಗಿ ಬಸವ    
ನಿನಗಿದೋ ಶರಣು

ಚಪ್ಪಲಿ ಮಾಡುವನಾದರೇನು?
ಚಪ್ಪರ ಹಾಕುವನಾದರೇನು?      
ಎರಡಕೂ ಬೇಕು ಶ್ರಮ
ಎನುತ ಶ್ರಮಕೆ ಗೌರವ ತಂದಾತ
ಶ್ರಮಸಂಸ್ಕೃತಿಯ ಹರಿಕಾರ ಬಸವ
ನಿನಗಿದೋ‌ ಶರಣು

ಕನ್ನಡವೇ ಉಸಿರೆಂದಾತ                   
ನೆಲದ ಜನಕೆ ದನಿಯಾದಾತ
ದೀನದಲಿತರದೆಗೆ ತಂಪ ತಂದಾತ         
ನಿಜ ಶರಣ ಬಸವ
ನಿನಗಿದೋ ಶರಣು

ನಿನ್ನ ಹೆಸರಿಡಿದು ಇಂದು ಬದುಕಿದವರೇ ಬಹಳ
ನಿನ್ನ ನಿಜ ಅಂತರಂಗವ ಬಲ್ಲರೇ?
ನಿನ್ನ ನಿಜಸಂದೇಶ ಎತ್ತೆತ್ತ ಹೊರಟಿದೆಯೋ ಮಹಾರಾಯ

ಮತ್ತೊಮ್ಮೆ ಜಗದ ಕಣ್ಣು ತೆರೆಸೋ ಮಹನೀಯ
ಒಂದಾಗಿರಬೇಕೆಂಬ ಮಾತು ಎರಡಾಗಿದೆ
ನಿಜದ ನಿಲವು ತಿಳಿಸೋ ವಿಭೂತಿಪುರುಷ ಬಸವ
ನಿನಗಿದೋ ಶರಣು.

                       🔆🔆🔆

  ✍️ಡಾ.ಪುಷ್ಪಾವತಿ ಶಲವಡಿಮಠ     
         ಹಾವೇರಿ