ಬಸವಾ
ಎಂದೊಡೆ ;

ಕತ್ತಲೆ ಕಳೆದು
ಬದುಕಿನ ಬವಣೆ
ದೂರ ಸರಿದು
ಬೆಳಕಿನೆಡೆಗೆ ಹೆಜ್ಜೆ ಹಾಕಲು

ಅನುಭಾವಿ ಶರಣರ
ಸಂಗವೇ ದೊರೆತು
ಕೂಡಲ ಸಂಗಮನ
ಒಲುಮೆಗೆ ಪಾತ್ರನಾಗುವೆಡೆ

ಜ್ಞಾನ, ಮೌಲ್ಶಗಳ ರಾಶಿಯೇ
ವಚನಗಳು ಸುಳಿಯಲು
ಮನದುಂಬಿ ಸೆಳೆಯಲು
ಜೀವನಕೆ ನಿತ್ಶ ಪಾಠವಾಗಲು.

ಉಡುವ-ಉಂಬುವ
ನುಡಿವ-ನಡೆವ
ಬದುಕಿನ ಬಗೆ ಏನೆಂದು
ಮಾರ್ಗ ತೋರಲು

ಇಷ್ಟಲಿಂಗ ಪೂಜೆ
ಅಂತರಿಕ ಶುದ್ಧಿಗಾಯ್ತು
ಭಕ್ತಿಭಾವ ಧಾರೆಯಿಂದ
ಸನ್ಮಾರ್ಗದ ದಾರಿ ಕಾಣಲು

ಮೇಲು-ಕೀಳು
ಭೇದ-ಭಾವ ಅಳಿಸಿ ಹಾಕಿ
ಸಕಲರೂ ಸಮಸಮಾನರೆಂದು
ಯುಕ್ತ ಜೀವನಕೆ ಶಕ್ತಿ ತುಂಬಲು

ಅಂದಿನಿಂದ ಇಂದಿಗೂ
ನಿನ್ನ ಹೆಸರಿನಲ್ಲಿ ಮಠ-ಮಾನ್ನಿಗ ಅನೇಕರು
ನಿನ್ನ ಜಯಂತಿ, ಜಾತ್ರೆಯ ತೇರುಗಳನ್ನು
ಎಳೆಯುವವರೇ ಸಾಂಗೋಪಾಂಗವಾಗಿ
ತಮ್ಮ ಬುತ್ತಿಗಾಗಿ, ಮೇಲೋಗರಿಗಾಗಿ !

ಚಾಚೂ ತಪ್ಪದೆ ವಚನಗಳಮೇಲೊಂದಿಷ್ಟು
ವಚನ ಪ್ರವಾಚಿಸುವವರೇ ಹೆಚ್ಚು ರುಚಿಗಾಗಿ !
ಆಚರಣೆಗಳಲ್ಲಿ ಪಚನಮಾಡಿಕೊಳ್ಳದೇ
ಅಂತರಂಗದಲ್ಲಿ ಭುಕ್ತಿ ತುಂಬಿರಲು, ಮತ್ತೆ ಮತ್ತೆ
ನೆನಪಾಗುತ್ತವೆ ಬಸವಪೂರ್ವದ ಆ ದಿನಗಳು… !
🔆🔆🔆

                       
✍️ ಅಮರ್ಜಾ. 
           (ಅಮರೇಗೌಡ ಪಾಟೀಲ).           
    ಜಾಲಿಹಾಳ,ಬು.ಬ.ನಗರ. ಕುಷ್ಟಗಿ