ಮಗುವಾಗಿ ಧೆರೆಗಿಳಿದ ಪುಟ್ಟ ಪೋರ,
ಜ್ಞಾನದ ಗಣಿಗೆ ಪ್ರಶ್ನೆಗಳ ಪಣಕ್ಕಿಟ್ಟು
ಸಮಾಜದ ಓರೆಕೋರೆಗಳ ತಿದ್ದಿ,
ಭಕ್ತಿ ಮಾರ್ಗದಲಿ ಮುಕ್ತಿಯ ಹರಿಸಿ,
ಸರಳ ಸಜ್ಜನಿಕೆಯ ಭಾವದಲಿ ತಾನಾಗಿ ನಿಂತು,
ಬೆಳೆದ ಭಕ್ತಿ ಭಂಡಾರಿ ಬಸವಣ್ಣ,

ಜಾತಿ ವಿಜಾತಿಗಳ ಸೂತ್ರ ಹರಿದು,
ಮೇಲುಕೀಳಿನ ಬೇಧ ಭಾವ ತರಿದು,
ಸಾಮರಸ್ಯದ ಸಸಿ ನೆಟ್ಟು
ಮೌಡ್ಯಗಳಿಗೆ ಮಟ್ಟ ಹಾಕಿ,
ನೊಂದವರ ದನಿಗೆ ಶಕ್ತಿಯು ತಾನಾಗಿ,
ನಿಂತ ಕ್ರಾಂತಿಕಾರಿ ಬಸವಣ್ಣ,

ನಿಸ್ವಾರ್ಥ ಮನಸ್ಸಿಗೆ ಅರಿವೆ ಗುರು,
ಮನೆಮನೆಯ ಕಾಯಕವೇ ಕೈಲಾಸ,
ಶರಣರ ವಚನದೊಳಗೆ ಅನುಭಾವದ ಸಾರ ಹರಿಸಿ,
ಶರಣರ ಸಂಘ ಮಹಾಮನೆಯಾಗಿಸಿ,
ಸಂವಿದಾನದ ರೂಪಕ್ಕೆ ಭಾಷ್ಯ ಬರೆಸಿ,
ಪ್ರಜಾಪ್ರಭುತ್ವವದೆಲ್ಲ ಅಂಶಗಳು ತಾನಾಗಿ ನಿಂತು,
ನಮಿಸಿದ ವಿಶ್ವ ಗುರು ಬಸವಣ್ಣ,

ಕನ್ನಡ ನಾಡು ನುಡಿಯ ಕಿರೀಟ,
ಭುವನೇಶ್ವರಿಯ ಅಭಿಮಾನದ ಬಾವುಟವ,
ಜಗದಗಲ ಮಿಗಿಲಗಲದಲಿ ಮಿನುಗಿಸಿ,
ಕನ್ನಡದ ನೆಲವ ಬಸವಬುವಿಯ ಸೌಭಾಗ್ಯ ತಾನಾಗಿ ನಿಂತ,
ಪರಂಜ್ಯೋತಿ ಜಗಜ್ಯೋತಿ ಬಸವಣ್ಣ..

                  🔆🔆🔆

    ✍🏻 ಶಾರು ಹುಬ್ಬಳ್ಳಿ