ಅಂದು
ಅವಳ ಗರ್ಭಚೀಲದ ತುಂಬಾ
ತುಂಬಿಕೊಂಡಿತ್ತು ಕಣ್ಣೀರು
ಈಗ
ಮಿಡಿಯುತ್ತಿದ್ದಾನೆ ಬೆಳೆದ ಮಗ
ಲೋಕದ ಸಂಕಟಕ್ಕೆ

ಆಗ
ಅವಳ ನಾಲಿಗೆಯ ರುಚಿಗೆ
ಒಪ್ಪೊತ್ತು ಅನ್ನದ ಬೇಡಿಕೆಯಿತ್ತು
ಈಗ
ಆಗದವರಿಗೂ ಬಡಿಸುವಾಗ
ಅವಳ ಹಸಿದ ಹೊಟ್ಟೆ ತಣ್ಣಗಾಯಿತು

ಅವಳ ಸುತ್ತಲೂ
ನಿಂದನೆ ಅವಮಾನಗಳ ಸೊಲ್ಲಿತ್ತು
ಈಗ ಎತ್ತ ಹೋದರೂ
ಗೌರವದ ಮಳೆ
ಅವಳದ್ದೇ ರಕ್ತ ಮಾಂಸದ ತುಣುಕಿಗೆ
ಅವಳ ನೆಮ್ಮದಿಗೆ ಖುಷಿಗೆ
ಇಲ್ಲ ಯಾವ ಹೆಸರು

ಅವಳ ಮುಗ್ಧತೆಯನು
ಚಪ್ಪಲಿಯಡಿಯಲ್ಲಿ ಹೊಸಕಿದ್ದರು
ಅಂದು
ಅವಳ ಮೊಲೆ ಹಾಲು
ಮನುಷ್ಯತ್ವವನ್ನೇ ಮರಿ ಹಾಕುತ್ತಲೇ ಇದೆ
ಈಗಲೂ

ಪಂಜರದ ಹಕ್ಕಿಯನು
ಹಾರಿ ಬಿಡಲೇ ಇಲ್ಲ ಯಾರೂ
ನೀರು ಕಾಳು ಕಡ್ಡಿ
ಹಾಕಲೇ ಇಲ್ಲ ಯಾರೂ
ಅವಳು ಈಗಲೂ ಹೇಳುತ್ತಾಳೆ
ಕೂಡಿಟ್ಟು ತಿನ್ನಬಾರದು ಎಂದು

ಮೊನ್ನೆ ಮೊನ್ನೆಯ ತನಕ ‘
ಹಸಿಯುತ್ತಲೇ ಇದ್ದಳು ಅವಳು
ಪಂಜರವೂ ಕಾಯುತ್ತಲೇ ಇತ್ತು
ಅವಳು ಹಾರುವುದ ನೋಡಲು

ಈಗ
ಮಳೆ ಬಂದ ನೆಲ
ಘಮ್ಮೆನ್ನುತ್ತಿದೆ
ಬೆಚ್ಚನೆಯ ಗೂಡಿನೊಳಗೆ
ತುಂಬು ವಸಂತ

(ನಮ್ಮ ತಾಯಿಯವರ 61 ನೇ ವರ್ಷದ ಜನ್ಮದಿನದ ನಿಮಿತ್ತ‌ ಬರೆದ ಕವನ,ನಿಮ್ಮ ಶುಭಹಾರೈಕೆಗಳಿರಲಿ)

                      🔆🔆🔆

✍️ ಡಾ.ಬೇಲೂರು  ರಘುನಂದನ.           ಕನ್ನಡ ಸಹಾಯ ಪ್ರಾಧ್ಯಾಪಕರು      ಸ.ಪ್ರ.ದ.ಕಾಲೇಜು,ವಿಜಯನಗರ ಬೆಂಗಳೂರು