ಎಲ್ಲರಿಗೂ ಅಕ್ಷಯ ತೃತೀಯೆಯ ಈ ಶುಭ ಸಂದರ್ಭದ ಶುಭಾಶಯಗಳು. ಜಗತ್ತಿಗೆ ಕವಿದಿರುವ ಕತ್ತಲು ಕಳೆದು ಬೆಳಕು ಮೂಡಲಿ.

ಪವಿತ್ರವಿದು ವೈಶಾಖ ಶುದ್ಧ ಪಕ್ಷದ ಈ ತದಿಗೆ
ನಾಂದಿಯಾಗಿತ್ತು ಮಹಾಭಾರತದ ಬರವಣಿಗೆಗೆ
ಸೂರ್ಯ ಚಂದ್ರರು ಇಂದು ಗರಿಷ್ಠತಮ ಕಾಂತಿಗೆ
ಶ್ರೇಷ್ಠವೆನ್ನುವರು ಲೋಹ ಚಿನ್ನ ಬೆಳ್ಳಿ ಖರೀದಿಗೆ

ಇಂದೇ ಆಗಿತ್ತು ಪರಶುರಾಮರ ಜನನ
ಕೃಷ್ಣನನುಜ ಬಲರಾಮನ ಜನ್ಮ ದಿನ
ಪಾಂಡವರಿಗೆ ಅಕ್ಷಯ ಪಾತ್ರೆಯ ಕೊಡುಗೆ
ಆತ್ಮಸಖ ಮುರಾರಿಯ ಅನುಗ್ರಹ ಕುಚೇಲನಿಗೆ

ಸ್ವರ್ಗದಿಂದ ಈ ಪುಣ್ಯ ದಿನ ಗಂಗಾವತರಣ
ಕುಬೇರನು ಮಾಡುವೆನಿಂದು ಲಕ್ಷ್ಮೀ ಆರಾಧನ
ಮಾಡಬೇಕು ಇಂದು ಪಶು ಸೇವೆ ಅನ್ನ ವಿದ್ಯಾದಾನ
ದುಶ್ಚಟಗಳ ತ್ಯಜಿಸಿ ಲೌಕಿಕ ಪಾರಮಾರ್ಥಿಕ ಸಾಧನ

ಮಾಡುವರಿಂದು ಸೌಭಾಗ್ಯ ಗೌರಿ ಉಪಾಸನ
ಶಕ್ತ್ಯಾನುಸಾರ ಸುವಾಸಿನಿ ಆರಾಧನ
ಬೇಸಿಗೆ ಧಗೆಗೆ ಪಾನಕದ ಸಮಾರಾಧನ
ಸಮರ್ಪಣೆ ಮಾವಿನ ಹಣ್ಣಿನ ಬಾಗಿನ

ಅಕ್ಷಯ ತದಿಗೆ ಇದು ಶ್ರೇಷ್ಠ ಮಂಗಳ ಮುಹೂರ್ತ
ಜೀವನೋತ್ಕರ್ಷದ ಸಂಕಲ್ಪಗಳ ಸಾಕಾರದ ಅರ್ಥ
ಎಲ್ಲಾ ಶುಭ ಕಾರ್ಯಗಳಿಗೆ ಅಮೃತ ಗಳಿಗೆ
ಆರ್ಥಿಕ ಧಾರ್ಮಿಕ ಆಧ್ಯಾತ್ಮಿಕ ಎಲ್ಲ ಕಾರ್ಯಗಳಿಗೆ.

ಸಹಕಾರ ಸೌಹಾರ್ದ ಸಮಾಧಾನಗಳು ತುಂಬಿರಲಿ
ಪ್ರೀತಿ ಪ್ರೇಮ ಆನಂದ ಹೊಳೆ ಉಕ್ಕಿ ಹರಿಯಲಿ
ಮಾನವೀಯತೆಯ ಸೆಲೆಯಲ್ಲಿ ಅಂತರಂಗವು ಅರಳಲಿ ಜಗದಿ ನೆಮ್ಮದಿ ಶಾಂತಿ ನಗೆ ಅಕ್ಷಯವಾಗಲಿ.

(ಎಲ್ಲರಿಗೂ ಅಕ್ಷಯ ತೃತೀಯೆಯ ಈ ಶುಭ ಸಂದರ್ಭದ ಶುಭಾಶಯಗಳು. ಜಗತ್ತಿಗೆ ಕವಿದಿರುವ ಕತ್ತಲು ಕಳೆದು ಬೆಳಕು ಮೂಡಲಿ)

 ✍️ಸುಜಾತಾ ರವೀಶ್,ಮೈಸೂರು