ಮರುಕಳಿಸದಿರಲಿ
ಹಳೆಯ ನೆನಪುಗಳು
ಏಕಾಕಿಯಾದ ನೀರಸ ಗಳಿಗೆಗಳ ನೆರಿಗೆಗಳಲಿ
ಅಡ್ಡಾಡದಿರಲಿ ಅವರ ಹಸನ್ಮುಖಿ ಚಹರೆಯ ಛಾಯೆಗಳು.
ಈಗಿಲ್ಲಿ ತಾವಿಲ್ಲ ಹಳೆಯದಕೆ

ಹೊಸ ಅವಮಾನಗಳು
ಹೊಸ ನೋವುಗಳು.
ಹೊಚ್ಚ ಹೊಸ ವಂಚನೆಯ ಸಂಚುಗಳು
ಭರ್ತಿ ಮಾಡಿಯಾಗಿದೆ ಖಾಲಿ ಜಾಗಗಳ!

ಸುಡುಸುಡು ಬೆಂಕಿ ಕೆಂಡಗಳಂತಿದ್ದ ಮೊದಲ ನೋವೀಗ
ನೀರ್ಗಲ್ಲಂತೆ ತಣ್ಣಗಾಗಿವೆ
ಸಾವಿಗೆ ಸಮೀಪವೆನಿಸಿದ್ದ ಅವಮಾನಗಳ ಅಗ್ನಿಯೀಗ
ಆರಿದ ಕೆಂಡವಾಗಿವೆ

ಹತಾಶೆಯಂಚಿಗೆ ತಳ್ಳಿದ್ದ
ಸ್ವಂತದವರ ವಂಚನೆಯ ಮುಳ್ಳುಗಳಿಗ
ಚುಚ್ಚುವ ಹರಿತ ಕಳೆದು ಕೊಂಡಿವೆ.

ಈಗಿಲ್ಲಿ ಮತ್ತೆ ಮರುಕಳಿಸದಿರಲಿ ಹಳೆಯ ನೆನಪುಗಳು
ಮರೆತುಹೋದ ನೋವು ಅವಮಾನ ಹತಾಶೆಗಳು
ಮತ್ಯಾರನ್ನೂ ಕಾಡದಿರಲಿ
ಹಸುಗೂಸುಗಳ ಹೂನಗೆ ಮಾಸದಿರಲಿ

                    🔆🔆🔆

   ✍️ಕು.ಸ.ಮಧುಸೂದನ
       ರಂಗೇನಹಳ್ಳಿ