ಇದು ಬಂಗಡೆಮೀನು.ಜನಸಾಮಾನ್ಯನಿಗೂ ಕೈ ಗೆಟಕುವ ದರದಲ್ಲಿ ಸಿಗುವದು. ಕೆಜಿಗೆ ಒಂದು ಸಾವಿರ ರೂಪಾಯಿಯ ಪಾಪ್ಲೇಟ್, ಕಾಣೆ ಮೀನುಗಳನ್ನು ತಿನ್ನುವ ಶ್ರೀಮಂತ ದೊರೆಗಳಿಗೂ ಸಹ ನೂರಾಐವತ್ತು ರೂಪಾ ಯಿಯ ಈ ಬಂಗಡೆ ತಿಂದರೇನೇ ತೃಪ್ತಿ, ಸಂತೃಪ್ತಿ. ಇದು ಒಂಥರಾ ಬದಾಮು ಮತ್ತು ಶೇಂಗಾ ಬೀಜದ ಸಂಬಂಧವಿದ್ದಂತೆ.
ತಿನ್ನುವಾಗಲೂಈ ಬಂಗಡೆ ನಿರುಪದ್ರವಿಯೆ. ಒಂದೇಉದ್ದನೆಯ ಮುಳ್ಳು. ತಿನ್ನುವಾಗ ಯಾರ ಬಾಯಿಗೂ ಚುಚ್ಚುವದಿಲ್ಲ. ಹೊಸ ದಾಗಿ ಮೀನು ತಿನ್ನಲು ಕಲಿಯುವರಿಗಂತೂ ಇಂಗ್ಲೀಷ್ ಗೈಡ್ ಇದ್ದಂತೆ .ತಿಂದಾದ ಮೇಲೆ ಅಷ್ಟೇನು ಬಾಯಿ ಮುಂದೆ ವಾಸನೆ ಏನೂ ಬರುವದಿಲ್ಲ.
ಇದು ತಂಡೋಪತಂಡವಾಗಿ ಸಮುದ್ರದಲಿ ಸಂಚರಿಸುವದರಿಂದ ಬಲೆಗೆ ಒಮ್ಮೆಲೇ ಬಿದ್ದು ಬಡವರ ಹೊಟ್ಟೆಗೂ ಪಾಲುದಾರ ವಾಗುವದು. ಇದರ ರುಚಿಯಲ್ಲಿ ಮಿಗಿಲಿಲ್ಲ . ಬಂಗಡೆ ಫ್ರೈಗೇ ಅಗ್ರಸ್ಥಾನ, ಮಸಾಲೆ, ಸುಕ್ಕಾನೂ ಅಗದೀ ರುಚಿಕಟ್ಟು. ಆದರೂ ಇವೆಲ್ಲಕಿಂತ ಹೆಚ್ಚಾಗಿ ನನಗಂತೂ ಅನ್ನದ ಜೊತೆ ಕಲಿಸಿಕೊಳ್ಳಲು ಇದರ ಸಾರೇ ರುಚಿಕರ. ಇಂತಹ ಸಾರು ತಯಾರಿಸುವಾಗ ಒಂದು ಬಂಗಡೆಯನ್ನು ೩ ಭಾಗಗಳಾಗಿ ತಲೆಯ ಭಾಗ,ನಡುವಿನ ಭಾಗ ಮತ್ತು ಬಾಲದ ಭಾಗಗಳಾಗಿ ಕತ್ತರಿಸುವರು.ಸಾರು ತಯಾರಿಸುವಾಗ ನನ್ನ ಅಮ್ಮನ ರುಚಿಕಟ್ಟ ನ್ನೇ ಸುನಂದಾಳೂ ಮುಂದುವರಿಸಿಕೊಂಡು ಬಂದಿರುವುದು ನನಗಂತೂ ಈ ಬಂಗಡೆ ಪದಾರ್ಥ ನನ್ನ ಬಾಲ್ಯವನ್ನೇ ನೆನಪಿಸುತ್ತದೆ..
ಈ ಮೂರೂ ಭಾಗದಲಿ ಪ್ರಾಯಶಃ ತಲೆಯ ಭಾಗಕ್ಕಿಂತ ರುಚಿ ಇನ್ನೊಂದಿಲ್ಲ. ಆದರೆ ಯಾವುದೋ ಪೂರ್ವಾಗ್ರಹ ಪೀಡಿತವೋ ಏನೋ ಮನೆಗೆ ಯಾವುದೇ ಗೆಸ್ಟ್ ಬಂದರೆ ಅಪ್ಪಿ ತಪ್ಪಿ ಅವರ ತಾಟಲಿ ತಲೆ ಬಿದ್ದಿತು ಅಂದರೆ ಬಡಿಸಿದವಳ ಬಾಳು ಅಂದಿನ
ದಿನಕೆ ಮೂರಾಬಟ್ಟೆಯಾದಂತೆಯೇ. ಕೆಲ ಪ್ರತಿಷ್ಠಿತ ಮನೆಗಳಲಿ ಗಂಡಸರಿಗೆ ಅವರ ಗೌರವಕ್ಕನುಗುಣವಾಗಿ ಮೀನಿನತಲೆ ಬಡಿ ಸುವಂತಿಲ್ಲ, ಅದೇನಿದ್ದರೂ ಹೆಂಗಸರಿಗೆ. ನನಗಂತೂ ತಲೆ ಇಲ್ಲದೇ ಉಂಡರೂ
ಉಂಡಂತೆನಿಸುವದಿಲ್ಲ. ಆ ತಲೆಯಲೂ ಕಣ್ಣು, ಚಪ್ಪು ಜಗಿದು ನುಂಗುವದೆಂದರೆ ಅದರ ರುಚಿ ಇನ್ನೊಬ್ಬರಿಗೆ ಹೇಳಲಸಾಧ್ಯ.
ಪ್ರತೀ ಮನೆಯ ತಾಯಿಯೂ ತನ್ನ ಪ್ರೀತಿಯ ಮಗನಿಗೆ ಚಂದದ ಬಾಲದಹೋಳು ಹಾಕು ವುದೇ ತನ್ನ ಜನ್ಮಸಿದ್ಧ ಹಕ್ಕೆಂದು ತಿಳಿದಿರು ವಳು. ನಡುವಿನ ಹೋಳಿನ ರುಚಿಯೂ ಅಮೃತ ಸಮಾನವೇ. ಅವಿಭಕ್ತ ಕುಟುಂಬ ದಲ್ಲಿ ಗಂಡಂದಿರ ಊಟದ ನಂತರವೇ
ಹೆಂಗಸರ ಊಟ ಎಂಬ ಅಸಮಾನ ಪದ್ದತಿ ಇತ್ತು…. ಕೆಲ ಸಂದರ್ಭದಲ್ಲಿ ಕೆಲ ಹೆಣ್ಣು ಮಕ್ಕಳಿಗೆ ಮೀನಿನ ಹೋಳೇ ಇರುತ್ತಿರಲಿಲ್ಲ.
ಅದನ್ನು ಬಲ್ಲ ಕೆಲವು ಚಾಲಾಕಿ ಗಂಡಸರು ತಮಗೆ ಬೇಡದಿದ್ದರೂ ಮೀನಿನ ಹೋಳು ಗಳನ್ನು ಹಾಕಿಸಿಕೊಂಡು ಅನ್ನದಲಿ ಅದನ್ನು ಹೂತಿಟ್ಟು ಹೆಂಡತಿಗಾಗಿ ಉಳಿಸುವ ಪದ್ಧತಿ ಯೂ ಇತ್ತಂತೆ. ಅದು ಗಂಡ ಹೆಂಡಿರ ಪ್ರೀತಿ, ಜಾಣ್ಮೆ,ಲವಲವಿಕೆಗಳ ವಿಷಯಕೆ ಸಂಬಂಧಿ ಸಿದ್ದು.
ಸಾಕಲ್ಲ? ಬಂಗಡೆಯ ಕುರಿತುನನ್ನ ಪ್ರಬಂಧ. ಇದನ್ನು ಓದಿದ ನಿಮಗೆ ಯಾರಿಗಾದರೂ ಬಂಗಡೆ ತಿನ್ನುವ ಮನಸಾದರೆ ಒಂದು ದಿನ ಮೊದಲೇ ತಿಳಿಸಿ ನಾಗಸುಧೆಗೆ ಬನ್ನಿ, ನಿಮಗೆ ಸ್ವಾಗತ .
🔆🔆🔆
✍️ ಪ್ರಕಾಶ ಕಡಮೆ, ನಾಗಸುಧೆ ಹುಬ್ಬಳ್ಳಿ
ನಾನು ಮೀನು ತಿನ್ನದಿದ್ದರೂ ಕಡಮೆ ಸರ್ ಅವರ ಬಂಗಡೆ ಮೀನು ರುಚಿಕಟ್ಟಾಗಿದೆ.ಲೇಖನ ಖುಷಿ ಕೊಟ್ಟಿತು ಸರ್. ಅಭಿನಂದನೆ.
LikeLike
ಧನ್ಯವಾದಗಳು, ಡಾ. ಪುಷ್ಪಾ.
ನಿಮ್ಮ ಓದಿಗೆ ಖುಷಿ.
…. ನಾ ಕಡಮೆ.
LikeLiked by 1 person