ಕನ್ನಡದ ಸ್ವರಮಾಲೆಯ ಎಲ್ಲ ಅಕ್ಷರಗಳನ್ನೂ ಮೊದಲ ಪದದಲ್ಲಿ ಬಳಸಿ ಅಮ್ಮನಿಗೊಂದು ನುಡಿನಮನ . ನನ್ನಮ್ಮ ಇದ್ದುದೂ ಹೀಗೇ ನನ್ನ ಮನಸ್ಸಿನಲ್ಲಿ ಮೂಡಿರುವ ಅವಳ ಚಿತ್ರವೂ ಇದೇ
ಅವನಿ ತೂಕದ ಸಹನಾಮಯಿ
ಅಚ್ಚುಕಟ್ಟಿಗೆ ಇನ್ನೊಂದು ಹೆಸರು
ಅಜಾತ ಶತ್ರು ಇವಳೇ ನನ್ನಮ್ಮ
ಆತ್ಮೀಯತೆ ಅಪ್ಯಾಯತೆಗಿನ್ನೊಂದು ರೂಪ
ಆಚಾರ ವಿಚಾರಗಳ ನಿಜ ಪ್ರತಿರೂಪ
ಆಪ್ತ ಸಲಹೆಗಾರ್ತಿ ನನಗಾದವಳು ನನ್ನಮ್ಮ
ಇಳೆಯಂತೆ ಅಗಾಧ ಸಹಿಷ್ಣುತೆ ತಳೆದವಳು
ಇಂಗಿತಜ್ಞೆಯಾಗಿ ಎಲ್ಲರ ಅನುಸರಿಸಿದವಳು
ಇತಿಮಿತಿಗಳ ತಿಳಿಸಿಕೊಟ್ಟವಳು ನನ್ನಮ್ಮ
ಈತಿ ಬಾಧೆಗಳ ಕೇಳದೆಯೇ ಪೂರೈಸಿದಳು
ಈಕ್ಷಣದಲೇ ಅಂತರಂಗವನ್ನು ಅಳೆದವಳು
ಈಡೇರಿಸಿದಳು ಆಸೆಗಳನ್ನೆಲ್ಲ ನನ್ನಮ್ಮ
ಉತ್ಸಾಹದ ಚಿಲುಮೆ ನಿಜದಲ್ಲಿ ಇವಳು
ಉತ್ಥಾನಕ್ಕೆ ಪಥ ದರ್ಶಿನಿಯಾದವಳು
ಉಡುಗೊರೆ ಇವಳು ದೇವನದು ನನ್ನಮ್ಮ
ಊಡಿಸಿದ್ದಳು ಜೀವಕ್ಕೆ ಅಮೃತ ನಿಧಿಯ
ಊರುಗೋಲಾದಳು ಸವೆಸಲು ಬಾಳದಾರಿಯ
ಊರ್ಜಸ್ವಿ ಇವಳು ತೇಜೋಮಯಿ ನನ್ನಮ್ಮ
ಋಜು ಮಾರ್ಗದಲ್ಲಿ ಸದಾ ನಡೆದ ಮೇಧಾವಿ
ಋಣ ಭಾರವ ಹೊರಿಸಿದಂತಹ ಸಾಧ್ವಿ
ಋಕ್ಷದಂತೆ ಮಿನುಗುತಿಹಳು ನನ್ನಮ್ಮ
ಎದೆಗೊತ್ತಿಕೊಂಡು ಆಶ್ರಯ ಕೊಟ್ಟವಳು
ಎದೆಗಾರಿಕೆ ಬೆಳೆಯಲನುವು ಮಾಡಿದವಳು
ಎರಕ ಹೊಯ್ದಳು ನೀತಿ ಸಂಸ್ಕಾರಗಳ ನನ್ನಮ್ಮ
ಏರಂಡ ತೈಲದಂತೆ ತಂಪನೀಯುವಳು
ಏಕತಾನದ ದೃಷ್ಟಿ ಹರಿಸೆ ಹೇಳಿದವಳು
ಏಕಾಂಗಿಯಾಗಿಸೆನ್ನ ಹೋಗಿಬಿಟ್ಟಳು ನನ್ನಮ್ಮ
ಐಷಾರಾಮವನೆಂದೂ ಬಯಸದ ನಿತ್ಯಕರ್ಮಿ
ಐಹಿಕ ದೆಡೆಗೆ ದುರಾಸೆ ಇರದ ನಿಷ್ಕಾಮಿ
ಐಬು ತೋರಗೊಡಬಾರದೆಂದವಳು ನನ್ನಮ್ಮ
ಒಡಲಲ್ಲಿ ನವಮಾಸ ಹೊತ್ತುಕೊಂಡವಳು
ಒಗೆತನಕ್ಕೆ ಎಂದೂ ಹೆದರಿ ಓಡದವಳು
ಒಗ್ಗಟ್ಟಿನ ಮಹಿಮೆ ತಿಳಿಸಿದವಳು ನನ್ನಮ್ಮ
ಓಂಕಾರದ ಹಿರಿಮೆ ಅರಿತಿದ್ದವಳು
ಓಲೆ ಬರೆಯುವ ಕಲೆ ಕಲಿಸಿದವಳು
ಓಜಸ್ಸು ಎಂದರೆ ಇವಳು ನನ್ನಮ್ಮ
ಔದಾಸೀನ್ಯವನೆಂದು ತೋರಗೊಡದವಳು
ಔಷಧ ಕೊಟ್ಟು ಆರೈಕೆ ಮಾಡಿದವಳು
ಔಪಚಾರಿಕತೆ ಸಹಿಸದವಳು ನನ್ನಮ್ಮ
ಅಂಕೆ ಶಂಕೆಯಲ್ಲಿ ನಮ್ಮ ಬೆಳೆಸಿದವಳು
ಅಂದಿಗೆ ತೊಡಿಸಿ ಆನಂದಿಸಿದವಳು
ಅಂಕಿತವು ನಿನಗೆ ಈ ಜೀವನವು ನನ್ನಮ್ಮ .
ಕನ್ನಡ ಸಾಹಿತ್ಯ ಪ್ರೀತಿ ಬೆಳೆಸಿದ ಕನ್ನಡತಿ
ಕನಿಕರ ದಯೆಗಳ ತೋರಿಸಿದ ಕರುಣಾಮೂರ್ತಿ ಕಕ್ಕುಲಾತಿಯಿಂದೆಮ್ಮ ಕಾಪಿಟ್ಟ ನನ್ನಮ್ಮ
ಖಂಡ ತುಂಡ ಮಾತುಗಳ ನಿಷ್ಠುರವಾದಿ
ಖಿಲ್ಲತ್ತುಗಳಿಗೆ ಎದುರು ನೋಡದ ವಾಸ್ತವವಾದಿ
ಖರ್ಜೂರದಂತೆ ಮಧುರ ಇವಳು ನನ್ನಮ್ಮ
ಗಂಗೆಯಂತೆ ಪಾಪ ತೊಳೆವ ಅಘನಾಶಿನಿ
ಗಂಧದಂತೆ ಸಾರ್ಥಕ ಬಾಳಿದ ಪಾವನಿ
ಗತ್ತು ಗೈರತ್ತು ತೋರದ ಸರಳೆ ನನ್ನಮ್ಮ
ಘನತೆ ಗೌರವ ಮುಖ್ಯವೆಂಬುದಕ್ಕೆ ಮಾದರಿ
ಘರ್ಷಣೆಗಳಿಗೆ ತೊಡಗದ ಉದಾರಿ
ಘೋಷಿಸುವೆ ನನ್ನ ಪ್ರಾಣ ನೀ ನನ್ನಮ್ಮ
ಚಂದ್ರಿಕೆಯ ಚೆಲ್ಲುವ ತನಿ ಕಂಪು
ಚಂಪಕ ಕುಸುಮದಂತೆ ಇನಿ ಕಂಪು
ಚಿರಸ್ಥಾಯಿ ಮನದ ಭಿತ್ತಿಯಲ್ಲಿ ನನ್ನಮ್ಮ
ಛತ್ರಿಯಂತೆ ಆಶ್ರಯ ನೀಡಿದಾಕೆ
ಛಲವಾದಿ ಛಾತಿ ತೋರಿಸಿ ಗೆದ್ದಾಕೆ
ಛೂಮಂತ್ರ ಹಾಕಿ ನೋವು ಮರೆಸಿದ ನನ್ನಮ್ಮ
ಜಮಾ ಖರ್ಚುಗಳ ಕಡೆ ನಿಗಾ ವಹಿಸಿದವಳು
ಜಯಾಪಜಯಗಳ ಸಮಾ ನೋಡೆಂದವಳು
ಜವರಾಯನ ಕರೆಗೆ ಹೊರಟೇ ಬಿಟ್ಟಳು ನನ್ನಮ್ಮ
ಝೋಂಪಿನಲ್ಲೂ ತಪ್ಪು ಹೆಜ್ಜೆ ಇಡದ ಜಾಗೃತಿ ಝೇಂಕಾರದ ಸ್ವರವೆಂದರೆ ಅತಿ ಪ್ರೀತಿ
ಝಡಿತಿಯಲ್ಲಿ ನಮ್ಮ ತೊರೆದಳು ನನ್ನಮ್ಮ
ಟೀಕೆ ಮಾಡುವವರ ಬಾಯಿ ಮುಚ್ಚಿಸಿದವಳು
ಟೋಪಿ ಹಾಕುವವರ ಬಗ್ಗೆ ಎಚ್ಚರಿಸಿದವಳು
ಟೊಂಕ ಕಟ್ಟಿ ಸೇವೆ ಮಾಡುತ್ತಿದ್ದ ನನ್ನಮ್ಮ
ಠರಾವು ಮಾಡಿ ನಿಯಮ ರೂಪಿಸುತ್ತಿದ್ದಳು
ಠಕ್ಕು ವಂಚನೆಗಳನೆಂದೂ ಸಹಿಸದವಳು
ಠಾಕುಠೀಕುಗಳಿಗೆ ಮಾರುಹೋಗದ ನನ್ನಮ್ಮ
ಡಂಬಾಚಾರವನೆಂದು ಪುರಸ್ಕರಿಸದವಳು
ಡಬ್ಬಿಗಳಲ್ಲಿ ಪುಡಿಗಾಸು ಉಳಿಸಿದವಳು
ಡೌಲು ಮಾಡದ ನಿಗರ್ವಿ ನನ್ನಮ್ಮ
ಢಕ್ಕುಳಿತನವನೆಂದೂ ಸೈರಿಸುತ್ತಿರಲಿಲ್ಲ
ಢಾಳುಬಣ್ಣದ ಸೀರೆ ಧರಿಸುತ್ತಿರಲಿಲ್ಲ
ಢೋಂಗಿ ಜನರ ದೂರವಿಡುತ್ತಿದ್ದ ನನ್ನಮ್ಮ
ತಥ್ಯಕ್ಕೆ ಎಂದೂ ಮೊದಲ ಪ್ರಾಶಸ್ತ್ಯ
ತನಯೆಯರೆಂದರೆ ಅದೆನಿದು ವಾತ್ಸಲ್ಯ
ತವರ ಆಸರೆಯೇ ಇವಳು ನನ್ನಮ್ಮ
ಥಟ್ಟನೆ ಪರರ ನೆರವಿಗೆ ಸಹಾಯಹಸ್ತ
ಥಾಲಿಯನ್ನಿಟ್ಟು ಬಡಿಸಿದರೆ ಪೂರ್ಣಹಸ್ತ
ಥೇಟ್ ಅನ್ನಪೂರ್ಣೆಯೇ ಇವಳು ನನ್ನಮ್ಮ
ದಿನಾಂಕ ದಿನಾಚರಣೆಗಳಲ್ಲಿ ಒಳ್ಳೆ ನೆನಪು
ದೀಪ ಬೆಳಗಿದಂತೆ ಮನೆಗೆಲ್ಲ ಬೆಳಕು
ದೇಶಭಕ್ತಿಯನ್ನು ತುಂಬಿಸಿದಳು ನನ್ನಮ್ಮ
ಧನ ಕನಕಗಳ ವಾಂಛಲ್ಯ ಅವಳಿಗಿರಲಿಲ್ಲ
ಧವಳ ವರ್ಣವೆಂದರೆ ಬಹಳ ಪ್ರಿಯವಲ್ಲ
ಧಾರಣಶಕ್ತಿಯನ್ನು ಬೆಳೆಸಿದವಳು ನನ್ನಮ್ಮ
ನಗೆ ಮೊಗದಲ್ಲಿ ಸದಾ ಹಸನ್ಮುಖಿ
ನೇರ ಮಾತಿನವಳು ನಿಷ್ಕಪಟಿ
ನೃಸಿಂಹನ ನಿಜಭಕ್ತೆ ನನ್ನಮ್ಮ
ಪಟ್ಟಾಂಗ ಹೊಡೆಯುವುದಲ್ಲ ಸ್ವಭಾವ
ಪಾರಮಾರ್ಥಿಕ ಚಿಂತನೆಯ ಭಕ್ತಿಭಾವ
ಪರಮಾತ್ಮನ ನಂಬಿದವಳು ನನ್ನಮ್ಮ
ಫಲಿತಾಂಶಕ್ಕಿಂತ ಪ್ರಯತ್ನ ಮುಖ್ಯವೆಂದವಳು
ಫಳಾರ ಉಪಾಹಾರಗಳ ನೇಮ ಆಚರಿಸಿದವಳು
ಫಲಾಫಲ ಭಗವಂತನದೆಂದವಳು ನನ್ನಮ್ಮ
ಬಂಧು ಮಿತ್ರರಿಗೆಲ್ಲ ಪ್ರಿಯ ಆತಿಥೇಯಳು
ಬಾಯಿ ಲೆಕ್ಕದಲಿ ಮಹಾ ಪ್ರವೀಣಳು
ಬಂಗಾರದಂಥ ಗುಣದವಳು ನನ್ನಮ್ಮ
ಭ್ರೂ ಮಧ್ಯದಲ್ಲಿ ಸಿಂಧೂರ ರಾರಾಜಿಸುತ್ತಿರಲು
ಭೂಮಿ ತೂಕದ ಸೈರಣೆಯ ತೋರಿದವಳು
ಭುವನದೊಳಗೆಲ್ಲಾ ಅತಿಶಯಳು ನನ್ನಮ್ಮ
ಮೆಲುನುಡಿಯ ಮೆಲುನಡೆಯ ಮೆದು ಹೃದಯಿ
ಮೃದು ಮಧುರ ಸುಭಾಷಿಣಿ ಮಮತಾಮಯಿ
ಮಲ್ಲಿಗೆ ಹೂ ಪ್ರಿಯೆ ಇವಳು ನನ್ನಮ್ಮ
ಯಶಸ್ಸು ಹೊಂದಿರೆಂದು ಸದಾ ಹರಸಿದವಳು
ಯಾಚಕರಿಗೆ ಕೈತುಂಬಾ ನೀಡಿದವಳು
ಯಾಂತ್ರಿಕತೆಗೆಡೆ ಕೊಡದ ಕ್ರಿಯಾಶೀಲೆ ನನ್ನಮ್ಮ
ರಂಗವಲ್ಲಿಯ ಅಂಗಳದಿ ಬಿಡಿಸಿದವಳು
ರಸಪಾಕವನ್ನು ದಿನವೂ ಮಾಡಿದವಳು
ರಾರಾಜಿಸುತ್ತಿಹಳೆಮ್ಮ ಹೃದಯದಲ್ಲಿ ನನ್ನಮ್ಮ
ಲವಲವಿಕೆಯಲ್ಲಿ ಜೀವನ ನಡೆಸಿದವಳು
ಲಲಿತ ಕಲೆಗಳಲ್ಲಿ ಅಭಿರುಚಿಯುಳ್ಳವಳು
ಲಂಬೋದರನ ಆರಾಧಕಿ ನನ್ನಮ್ಮ
ವಾಗಾಡಂಬರವನೆಂದೂ ಮಾಡದವಳು
ವಿನಯ ಶೀಲತೆಗಳನ್ನು ಕಲಿಸಿದವಳು
ವಿಜಯ ಮಾರ್ಗವನ್ನು ತೋರಿದ ನನ್ನಮ್ಮ
ಶಾಸ್ತ್ರ ಪುರಾಣಗಳನ್ನು ಓದಿಕೊಂಡಿದ್ದವಳು
ಶಿಕ್ಷಣದ ಮಹತ್ವವನ್ನು ಅರಿತುಕೊಂಡಿದ್ದವಳು
ಶಕುಂತಲಾ ನಾಮಧೇಯದ ನನ್ನಮ್ಮ
ಷಡಕ್ಷರಿ ಮಂತ್ರದ ಉಚ್ಚಾರಣೆ
ಷೋಡಷೋಪಚಾರಗಳ ಆಚರಣೆ
ಷಟ್ಕರ್ಮಗಳ ಮಾಡಿದವಳು ನನ್ನಮ್ಮ
ಸಂವಾದ ಸಂಭಾಷಣೆಗಳಲ್ಲಿ ಮೃದುಭಾಷಿ
ಸಂವೇದನೆಗಳಿಗೆ ಮಿಡಿಯುತ್ತಿದ್ದ ಹಿತೈಷಿ
ಸಂಸ್ಕೃತಿಯ ಸಂಪ್ರೀತಿ ನನ್ನಮ್ಮ
ಹೊಣೆಗಾರಿಕೆ ಹೊತ್ತು ಜವಾಬ್ದಾರಿ ಮೆರೆದವಳು
ಹೊಂದಾಣಿಕೆಯ ಸಮರಸ ಸೂತ್ರ ಹೊಸೆದವಳು
ಹ್ಲಾದಿನಿ ಇವಳು ಹಾಸ ಪೂರ್ಣೆ ನನ್ನಮ್ಮ
ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು
🔆🔆🔆
✍️ ಸುಜಾತಾ ರವೀಶ್ , ಮೈಸೂರು
ಪ್ರಕಟಣೆಗಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು
ಸುಜಾತಾ ರವೀಶ್
LikeLiked by 1 person