ನಮ್ಮವ್ವನ ಬಿಸಿಬಿಸಿ ಸುಡು ರೊಟ್ಟಿ
ತಿಂದರ ಆಗತೀವಿ ಬಲು ಗಟ್ಟಿ
ಒಂದ ತಿಂದರ ಬೈದ ಬಿಡತಾಳ
ತಿನಕೋತ ಎಣಿಸಿದರ ಗದರತಾಳ//

ಜಿಗಿಟ ಹಾಕ್ಕೊಂಡು ಕುಂತರಕೀ
ನೂರ ಮಂದಿಗಾದರೂ ಕೊಡಾಕೀ
ಪಟ ಪಟ ರೊಟ್ಟಿ ಅವ್ವ ಬಡಿತಿದ್ದರಂಗ
ಕೇಳತೇತಿ ಮದ್ದಳೆ ತಾಳದ ಸ್ವರದಂಗ

ಒಲ್ಲೆ ಯವ್ವ ನಾ ಅಂದರ ರೊಟ್ಟಿ
ಮಾಡಿ ಮುಟುಗಿ ತಿನಿಸತಾಳ ತಟ್ಟಿ
ಬ್ಯಾಸರಂದರ ಬಡಿತಾಳ ತಾಲಿಪಿಟ್ಟಿ
ಪ್ರೀತಿ ಪಾಳಿ ಹಚ್ಚಿ ತಿಂತೀವಿ ಮುಟ್ಟಿ//

ಕುಡಿ ಒಲಿಮ್ಯಾಲಿನ ಕಾರಬ್ಯಾಳಿ
ತಾಜಾ ಬೆಣ್ಣಿ ರೊಟ್ಟಿ ಮ್ಯಾಗ
ಕೆಂಪ ಹಿಂಡಿ ಹಚ್ಚಿ ತಿನ್ನುವಾಗ
ಹಸಿವು ಹೋಗತೇತಿ ಆಗಿ ಗಾಳಿ//

ಅಮ್ಮನ ಪ್ರೀತಿ ರೊಟ್ಟಿ ಗರಿ ಗರಿ
ಜಗತನ್ಯಾಗ ಸಿಗುವುದಿಲ್ಲ ಬಿಡರಿ
ಆಕೀ ನಮಗ ಬರೀ ಜನ್ಮದವ್ವ ಅಲ್ಲರೀ
ಹಸಿದ ಹೊಟ್ಟೆಗೆಲ್ಲ ರೊಟ್ಟಿ ಅವ್ವರಿ

ಯವ್ವಾ ಅಂದರ ಹಿಟ್ಟನಾದಿ ಬಿಡತಾಳರಿ
ಸರಿಗಮ ಪಲ್ಲವಿ ಸ್ವರ ಮುಗಿಯುದರಾಗ
ಬಿಸಿ ಬಿಸಿ ಭರವಸೆ ರೊಟ್ಟಿ ತಾಟನ್ಯಾಗ
ನಮ್ಮವ್ವನ ಪ್ರೀತಿ ರೊಟ್ಟ್ಯಾಗ ನೋಡರಿ//

🔆🔆🔆

✍️ ರೇಮಾಸಂ (ಡಾ.ರೇಣುಕಾತಾಯಿ.ಎಂ. ಸಂತಬಾ)