“ನಿನಗಿಂ ಮಿಗಿಲ್ ಸೀತೆ
ನನಗೆ ದೇವತೆ, ಮಾತೆ! ಶ್ರದ್ಧೆಗೆಟ್ಟಿರ್ದೆನಗೆ
ಶ್ರದ್ಧೆಯಂ ಮರುಕಗೊಳಿಸು
ತಾತ್ಮದುದ್ಧಾರಮಂ
ತಂದ ದೇವತೆ,ಪುಣ್ಯ ಮಾತೆ !”
ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಸಾಲುಗಳಿವು. ಅಸುರನಾದ ರಾವಣನೆದೆ ಕರಿಗಿ ಅಮೃತದ ಮಳೆ ಕರೆದ ಸಂದರ್ಭದ ಮಾತುಗಳಿವು. ಹೃದಯ ಮನೋಹರಿ, ಸಾಮ್ರಾಜ್ಞಿ ಮಂಡೋದರಿಗೆ ರಾವಣನು ಮುಖಾಮುಖಿಯಾಗುವ ಸನ್ನಿವೇಶ.ಸತಿಯನ್ನು ಸಂಧಿಸಿದ ರಾವಣನು ಅವಳನ್ನು ಉದ್ದೇಶಿಸಿನುಡಿಯುತ್ತಾನೆ:
“ಪಾಪಿಯಂ ಕೈ ಬಿಡದೆ ಪುಣ್ಯಕ್ಕೊಯ್ಯುವ ದೇವಿ ನನಗೆ ನೀನೊಬ್ಬಳೆಯೇ ದಲ್!”
ಎಂದು. ಪ್ರಶಂಸೆಯ ಆ ನುಡಿ ಕೇಳಿ ಮಂಡೋದರಿ ರಾವಣನ ಕಾಲಿಗೆ ಎರಗುತ್ತಾಳೆ. ಅವಳನ್ನು ಎತ್ತಿ ರಾವಣನು ಅವಳ ಕಣ್ಣೀರು ಒರೆಸಿ ಮತ್ತೇ ಮನೋಜ್ಞವಾಗಿ ಹೇಳುತ್ತಾನೆ,
“ ದಿಟಂ, ದೇವಿ ನೀನೊಬ್ಬಳೆಯೇ ರಾವಣಗೆ ! ಮೇಣ್ ಸೀತೆ !”
“ಪಾಪಾತ್ಮನಾದ ನನ್ನ ಕೈ ಬಿಡದೆ ಪುಣ್ಯ ಕ್ಕೊಯ್ಯುವ ದೇವಿ ನಿನ್ನೋಬಳೆಯೇ” ಎಂದು ಪತ್ನಿಗೆ ಹೇಳುವ ರಾವಣ.ಮುಂದು ವರೆದು “ಮೇಣ್ ಸೀತೆ (ಮುಖ್ಯ ವಾಗಿ ಆದರಲ್ಲಿ ಪ್ರಮುಖಳು ಸೀತೆ ) ಎನ್ನುವ ಮಾತು ಮಂಡೋದರಿಯಷ್ಟೇ ಎಲ್ಲ ಓದುಗರಿಗೂ ಅಚ್ಚರಿ ಹುಟ್ಟಿಸುತ್ತದೆ. ಅಂತರಾತ್ಮದಲ್ಲಿ ರಾವಣ ಶುದ್ಧಾತ್ಮವಾಗಿ ರುತ್ತಾನೆ ಆ ಕ್ಷಣ. ತನ್ನ ಅಂತಸ್ಥದಲ್ಲಿ ಹೇಳಿ ಕೊಳ್ಳುತ್ತಾನೆ. “ಹೌದು ಮಂಡೋದರೆ ನಿನಗಿಂತ ಮಿಗಿಲಾಗಿ ಸೀತೆ ನನಗೆ ದೇವತೆ. ಮಾತೆ. ಶ್ರದ್ಧೆಗೆಟ್ಟಿದ್ದ ನನಗೆ ಶ್ರದ್ಧೆಯನ್ನು ಮರಳಿ ಕಲಿಸಿ ನನ್ನ ಆತ್ಮದ ಉದ್ದಾರ ಮಾಡಿದ ದೇವತೆ, ಪುಣ್ಯ ಮಾತೆ” ಎಂದು ಸೀತೆಯ ಬಗ್ಗೆ ಅಪಾರ ಅಭಿಮಾನವನ್ನು ತಾಳುತ್ತಾನೆ ಸೀತಾಮೋಹ ಕಳಚಿಟ್ಟ ರಾವಣನಿಗೆ ಅವಳಲ್ಲಿ ಮಾತೃತ್ವದ ಭಾವ ಹೊಮ್ಮುತ್ತದೆ. ದುರತ್ಮನಾದ ನನ್ನನ್ನು ಶುದ್ಧಾತ್ಮನನ್ನಾಗಿ ಮಾಡಿದ ದೇವತೆ ಎಂದು ಗೌರವಿಸುತ್ತಾನೆ.
ನಾಗಚಂದ್ರನ ರಾವಣನಂತೆ ಕುವೆಂಪುವಿನ ರಾವಣನೂ ಪಶ್ಚಾತ್ತಾಪದ ಅಗ್ನಿಯಲ್ಲಿ ಬೆಂದು ಪುಟಕ್ಕಿಟ್ಟ ಚಿನ್ನವಾಗುತ್ತಾನೆ. ರಾವಣನ ಅಹಂಕಾರದಲ್ಲಿ ಅಡಗಿದ್ದ ಮೃದು ಮಧುರ ಭಾವದ ಅರಗಿಳಿಯನ್ನು ಗುರುತಿ ಸಿದ ಧನ್ಯತೆ ‘ಅನಲೆ’ಯದು. ರಾಮಾಯಣ ದಲ್ಲಿ ಕಾಣಿಸಿಕೊಳ್ಳುವ ‘ಅನಲಾ’ ಎಂಬ ಪಾತ್ರವನ್ನು ಕುವೆಂಪು ತಮ್ಮ ರಸಋಷಿತ್ವದ ದಿವ್ಯಂದೃಷ್ಟಿಯಲ್ಲಿ ರಾವಣನಂತಹ ಅಸುರ ನ ಎದೆಯನ್ನು ಕರಗಿಸಿ ಪ್ರೇಮದದೀಪವನ್ನು ದೇದೀಪ್ಯಮಾನ್ಯಗೊಳಿಸಿದ ಬೆಳಿಕಿನ ಪುಂಜ ವಾಗಿ ಚಿತ್ರಿಸಿದ್ದಾರೆ. ಮನೆ ಮನೆಗೊಬ್ಬಳು ಇಂತಹ ಮಗಳಿರಬೇಕೆಂಬ ಭಾವವನ್ನು ಉದ್ದೀಪನಗೊಳಿಸುವ ‘ಅನಲೆ’ಯರೂಪದ ಅನಂತೆತೆಯನ್ನು ಕುವೆಂಪು ಸಹೃದಯರಿಗೆ ಪರಿಚಯಿಸಿದ್ದಾರೆ.
‘ಅನಲೆ’ ರಾವಣನ ಮನ ಬೆಳಗಿದ ದೀಪ. ಅವನ ಮನಃ ಪರಿವರ್ತನೆಯ ಹರಿಕಾರಳು ಇವಳು. ರಾಮಾಯಣದಲ್ಲಿ ಬರುವ ಅಪ ರೂಪದ ಈ ಪಾತ್ರವನ್ನು ಕುವೆಂಪು ಮಾನ ವೀಯತೆಯ ಚೌಕಟ್ಟಿನಲ್ಲಿ ಹಿಡಿದಿಟ್ಟು, ಒಂದು ತುಂಬು ಕುಟುಂಬದಲ್ಲಿ ಹುಟ್ಟಿ ಎಲ್ಲರ ಪ್ರೀತಿ, ಮಮತೆ, ಆರೈಕೆ, ಮಾರ್ಗ ದರ್ಶನದಲ್ಲಿ ಬೆಳೆಯುವ ‘ಅನಲೆ’ಎಂಬ ಈ ಹೆಣ್ಣು ಮಗಳು ಆದರ್ಶವನ್ನು ಮೈಗೊಡಿಸಿ ಕೊಂಡು ಬಾಂಧವ್ಯ ಗಟ್ಟಿಗೊಳಿಸುವ, ಸಂಸ್ಕೃತಿಯನ್ನು ಮುಂದುವರೆಸುವ ಕೊಂಡಿಯಂತೆ ಚಿತ್ರಿಸುತ್ತಾರೆ.
ತುಂಬು ಕುಟುಂಬದ ಪರಿಕಲ್ಪನೆಯೇ ಛಿದ್ರ ಗೊಳ್ಳುತ್ತಿರುವ ಆಧುನಿಕ ಯುಗದಲ್ಲಿ ‘ಅನಲೆ’ ವಿಶಿಷ್ಟತೆಯಿಂದ ಎದುರುಗೊಳ್ಳು ತ್ತಾಳೆ. ರಾವಣನ ತಮ್ಮನಾದ ವಿಭೀಷಣನ ಮಗಳು ಇವಳು.ದೊಡ್ಡಪ್ಪನಾದ ಪರಾಕ್ರಮಿ ರಾವಣ, ಪತಿವ್ರತಾ ಶಿರೋಮಣಿಯಾದ ದೊಡ್ಡಮ್ಮ ಮಂಡೋದರಿ, ಧರ್ಮಭೀರು ವಾದ ತಂದೆ ವಿಭೀಷಣ, ಪತಿಯ ನೆರಳಾದ ಸಾದ್ವಿತಾಯಿ ‘ಸರಮೆ’ ಅತ್ಯಂತ ಬಲಿಷ್ಠ ನಾದ ಕುಂಭಕರ್ಣ ಇನ್ನೊಬ್ಬ ದೊಡ್ಡಪ್ಪ, ಅಣ್ಣ ಇಂದ್ರಜಿತು, ಅತ್ತಿಗೆ ಹಾಗೂ ಗೆಳತಿ ಯಾದ ತಾರಕ್ಷಿ ಇವರೆಲ್ಲರ ಮಧ್ಯ ಹೊಸ ದಾಗಿ ಆಗಮನವಾದ ಅತಿಥಿ ವಜ್ರಾರಿ (ಇಂದ್ರಜೀತು ತಾರಾಕ್ಷಿಯರ ಮಗ) ಜೀವನ ದಲ್ಲಿ ಗುರುಮಾತೆಯಂತೆ ದೊರೆತ ಸೀತೆ, ಬದುಕಿನ ಗಮ್ಯ ತಿಳಿಸುವ ತತ್ವವೇದಾಂತಿ ಶ್ರೀರಾಮನ ದರ್ಶನ, ಹೀಗೆ ಇಂತಹ ಕೂಡು ಕುಟುಂಬದಲ್ಲಿ ಬೆಳೆದವಳು ಅನಲೆ. ಇವಳು ತಂದೆಗಷ್ಟೇ ಮುದ್ದಿನ ಮಗಳಲ್ಲ. ಎಲ್ಲರ ಕಣ್ಮಣಿ. ದೊಡ್ಡಪ್ಪ ರಾವಣನಿಗೆ ಇವಳೆಂದರೆ ಅಚ್ಚುಮೆಚ್ಚು. ಹೀಗಾಗಿಯೇ ರಸಋಷಿ ಕುವೆಂಪುವಿನ ಶ್ರೀ ರಾಮಯಣ ದರ್ಶನಂ ಮಹಾಕಾವ್ಯದಲ್ಲಿ ಇವಳು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾಳೆ.
ರಾವಣನ ರಾವಣತ್ವ ಕಳೆಯುವಲ್ಲಿ ‘ಅನಲೆ’ ಯದು ಮಹತ್ವದ ಪಾತ್ರವಿದೆ. ಅನಲೆಯ ತಂದೆಯಾದ ವಿಭೀಷಣನು “ಸೀತಾಪಹ ರಣ”ವನ್ನು ತೀವ್ರವಾಗಿ ವಿರೋಧಿಸುತ್ತಾನೆ. ತಮ್ಮನ ಈ ವಿರೋಧದಿಂದ ರಾವಣನಿಗೆ ಅತಿಯಾದ ಕೋಪಬರುತ್ತದೆ. ಮನದ ಸ್ಥಿಮಿತತೆ ಕಳೆದುಕೊಳ್ಳುತ್ತಾನೆ,ಅಸ್ವತ್ಥನಾಗು ತ್ತಾನೆ,ಜ್ವರದಿಂದ ಬಳಲುತ್ತಾನೆ.ದೊಡ್ಡಪ್ಪನ ಅರೈಕೆ ಗೆ ಅನಲೆಯೇ ನಿಲ್ಲುತ್ತಾಳೆ. ಹೆಣ್ಣು ಮಕ್ಕಳಿಲ್ಲದ ರಾವಣನ ವ್ಯಕ್ತಿತ್ವವೇ ಸೀತಾ ಪಹರಣಕ್ಕೆ ಕಾರಣವಾಗುತ್ತದೆ. ಆದರೆ ಅನಲೆ ರಾವಣನ ಅಂತಃಕರಣದ ಒಂದು ಭಾಗವಾಗಿ ಗೋಚರಿಸುತ್ತಾಳೆ.
ರಾವಣನಿಗೆ ‘ಅನಲೆ’ಯ ಮೇಲೆ ಅಪಾರ ನಂಬಿಕೆ, ವಿಶ್ವಾಸ ಪ್ರೀತಿ. ‘ಅನಲೆ’ ಎಂಬ ಹೆಸರೇ ರಾವಣನನ್ನು ಕರಗಿಸಿ ಬಡುತ್ತದೆ. ಅದಕ್ಕೆ ಕುವೆಂಪು ರಾವಣ ಮತ್ತು ಅನಲೆಯ ಅನ್ಯೋನ್ಯತೆಯನ್ನು ತುಂಬಾ ಮನೋಜ್ಞ ವಾಗಿ ಕಟ್ಟಿಕೊಡುತ್ತಾರೆ.
“ಪೆಣ್ಮಕ್ಕಳ್ಳಿಲ್ಲದ ದಶಗ್ರೀವನೆರ್ದೆಯ ಅಳ್ಕರೆಯ ಅರಗಿಳಿಯ ಹರಣಮಂ ಹೊರೆವ ಹಂಜರಮನಲ್ ಚೆಲ್ವುಕಣಿಯಾಗಿರ್ದ ಆತನ್ನ ಮಗಳ್ ಅನಲೆ” (ಶ್ರೀ.ರಾ.ದ)
“ಅನಲೆ ಕೇವಲ ರಾವಣನನ ಪ್ರಾಣ ಪಕ್ಷಿ ಯನ್ನು ಕಾಪಾಡುವ ಪಂಜರ ಮಾತ್ರವಲ್ಲ ಆತನ ಉದ್ಧಾರದ ಸಂಕಲ್ಪ ರೂಪಿಯು ಹೌದು” ಆತ್ಮೋದ್ಧಾರದ ಹಂಬಲದಲ್ಲಿದ್ದ ರಾವಣನಿಗೆ ಈ ಕಾರಣದಿಂದಲೇ ಅನಲೆಯ ಸಾಮಿಪ್ಯ ಸದಾ ಬೇಕೆನಿಸುತ್ತದೆ. “ಮಗಳೊ ಬ್ಬಳೇ ತಾಯಿಯಾಗಿ ಅಪ್ಪನೊಂದಿಗಿರುವ ಅರ್ಹತೆ ಹೊಂದಿದವಳು.”ಈ ಕಾರಣದಿಂದ ಮಾನಸಿಕವಾಗಿ ಅಸ್ವಸ್ಥನಾದ ರಾವಣನಿಗೆ ತಾಯಿಯಂತಹ ಪ್ರೀತಿಯ ವಾತ್ಸಲ್ಯದ ಸಿಂಚನಗೈಯುವ ಅನಲೆ ತುಸು ಅಗಲಿ ದರೂ ಸಹಿಸಿಕೊಳ್ಳಲು ಅಸಾಧ್ಯವಾಗುತ್ತದೆ.
ತಮ್ಮ ವಿಭೀಷಣನ ವಿರೋಧದಿಂದ ಅಸ್ವಸ್ಥ ವಾಗಿ ಮಲಗಿದ ರಾವಣವು ನಿದ್ರೆಯಲ್ಲೇ ಕಣ್ಣೀರಿಡುತ್ತಾನೆ.
“ನಿದ್ದೆಯೊಳಳಲ್ ತೊಡಗಿದನ್, ಪಸುಳೆವೋಲಂತೆ, ಸರ್ವಲೋಕ ಭಯಂಕರನ್ ಆ ಮಹೇಂದ್ರಾರಿ!” “… ಭಾವಗೋಪನಕೆಳೆಸಿ ಸುರವೈರಿ ಕರೆದನ್ ಮೃದುಸ್ವರದಿ ‘ಅನಲಾ’!” ಎಂದು,
ನಿದ್ರೆಯ ಕನವರಿಕೆಯಲ್ಲೂ ‘ಅನಲೆ’ಯೇ ಬೇಕು ರಾವಣನಿಗೆ, “ನಾನು ಇಲ್ಲಿಯೇ ಇರುವೆನು ದೊಡ್ಡಪ್ಪಾ” ಎಂದು ಅನಲೆ ಉತ್ತರಿಸಿದರೆ,“ಏನಿಲ್ಲ! ನೀನ್ನಗಲಿದೋಲೆ ನಗೊಂದು ಕನಸಾದುದಕ್ಕ” ಎಂದು ಆತಂಕ ವ್ಯಕ್ತಪಡಿಸುತ್ತಾನೆ.
“ನಿದ್ದೆ ಮಾಡು ದೊಡ್ಡಪ್ಪ, ನಾನು ಎಲ್ಲಿಗೂ ನಿನ್ನ ಬಿಟ್ಟು ಹೋಗುವುದಿಲ್ಲ” ಎಂದು ಅನಲೆಯೆಂದಾಗ
“ದಿಟಮೊರೆದೆ,ಅಕ್ಕ,ಆರ್ತೊರೆ ದೊಡಂ ನೀನ್ನನುಳಿವಳಲ್ತು” (ಸತ್ಯವನ್ನೆ ನುಡಿದೆ ತಾಯೀ ಅಕ್ಕ) ಯಾರೇ ನನ್ನನ್ನು ತೊರೆದರೂ ಕೊನೆಗೆ ನೀನೇಉಳಿಯುವವಳು)
ಎಂದು ರಾವಣನು ನುಡಿಯುವಾಗ, ಅವ ನೊಳಗಿನ ತಂದೆಯ ಭಾವ ಜಾಗೃತಿವಾಗು ವುದು ಕಾಣುತ್ತದೆ. ರಾವಣ ಒಬ್ಬ ಚಕ್ರವರ್ತಿ ಹೇಗೋ ಹಾಗೇ ಒಬ್ಬ ತಂದೆಯೂ ಆಗಿ ಪರಿವರ್ತನೆ ಹೊಂದಲು ‘ಅನಲೆ’ಯ ಪ್ರೀತಿಯೂ ಸಹಕರಿಸಿದೆ. ಈ ಕಾರಣದಿಂದ ಕುವೆಂಪುರವರ ಮಹಾಕಾವ್ಯದ ಉದ್ದಕ್ಕೂ ಈ ಪಾತ್ರ ಶ್ರೇಷ್ಠವಾದ ಪ್ರೀತಿಯ ಅನಂತತೆ ಯ ಹಾಡನ್ನು ಹಾಡಿದ್ದು ಸುಶ್ರಾವ್ಯವಾಗಿ ಕೇಳಿಬರುತ್ತದೆ.
ಇಂದು ಇಂತಹ ಶುದ್ಧ ಪ್ರೀತಿ ಜಗತ್ತಿನಿಂದ ಮಾಯವಾಗುತ್ತಿರುವುದರಿಂದ ಜಾಗತಿಕ ಯುದ್ಧದ ಭೀತಿ ಪ್ರತಿಯೊಬ್ಬರ ಎದೆಯನ್ನಾ ಳುತ್ತಿದೆ. ಭಯೋತ್ಪಾದನೆ, ಕೋಮುಗಲಭೆ, ನಕ್ಸಲೆಟ್ ದಾಳಿಗಳು,ಎದೆಬೆಚ್ಚಿ ಬೀಳುಸು ತ್ತಿವೆ.‘ಅನಲೆ’ಯಂತಹಮಗಳು,ಸಹೋದರಿ ಪ್ರತಿ ಮನೆಯ ದೀಪವಾಗಿ ಬೆಳಗಿದರೆ ದ್ವೇಷ ಅಸೂಯೆಯಂತಹ, ಕೊಲೆ, ಸುಲಿಗೆ, ಅತ್ಯಾಚಾರಗಳಂತಹ ಕೃತ್ಯಗಳು ಕ್ಷೀಣಿಸಬ ಹುದೇನೊ?! “ ಪ್ರೀತಿಯೊಂದೇ ಈ ಜಗವ ನ್ನು ಅಳಬಲ್ಲ ದಿವ್ಯ ಶಕ್ತಿ”ಅದಕ್ಕೆಂದು ರಾಷ್ಟ ಕವಿ ಜಿ.ಎಸ್.ಎಸ್.“ಪ್ರೀತಿಯಿಲ್ಲದೇ ಹೂ ಅರಳಿತು ಹೇಗೆ?” ಎಂದು ಪ್ರಶ್ನಿಸಿದರೇ “ಪ್ರೀತಿಯಿಲ್ಲದೆ ನಾ ದ್ವೇಷವನ್ನೂ ಮಾಡ ಲಾರೆ” ಎನ್ನುವ ಬಂಡಾಯ ಕವಿ ಚಂಪಾ ರವರ ಮಾತುಗಳು ಮನನೀಯವಾಗುತ್ತವೆ.
ಕುವೆಂಪು ‘ಪ್ರೀತಿ, ಮಮತೆ, ವಾತ್ಸಲ್ಯ’ದ ತ್ರಿಕರಣ ರೂಪವಾಗಿ‘ಅನಲೆ’ಯಪಾತ್ರವನ್ನ ಉದ್ದೀಪನಗೊಳಿಸಿ, ರಾಮ-ರಾವಣರ ಯುದ್ಧ ಮುಗಿಯುವಷ್ಟರಲ್ಲಿ ರಾವಣ ಅನಲೆಯ ಸಹಾಯದಿಂದ ಮನಪರಿವರ್ತ ನೆಗೊಳ್ಳುವ ಕ್ರಿಯೆ ಅತ್ಯಂತ ನಾಜುಕಾಗಿ ಹೆಣೆಯಲ್ಪಡುತ್ತದೆ.
“ಅನಲೆ ಇವಳೆನ್ನ ಕಾಪಿಡುವ ದೇವಿ” “ಪುಣ್ಯ ಪ್ರಚೋದಿಯೆನಗಿದೊಂದೆ ಸೌಂದರ್ಯಮನಲೆಯೀಮುದ್ದುಚೆಲ್ವು” “ಸಾವಪ್ಪೋಡಂ ನನಗೆ, ನಿನಗೆಸಗೆ ನಾಂ ನೋವ”
ಎಂದು ರಾವಣನು ಅತಿಯಾದವಿಶ್ವಾಸ ವನ್ನ ಮಗಳಾದ ಅನಲೆಯಲ್ಲಿ ಇಂತಹ ಮಾತುಗಳಿಂದ ವ್ಯಕ್ತಪಡಿಸುತ್ತಾನೆ.
ಹೆಣ್ಣು ಮಗಳು ಒಬ್ಬ ತಂದೆಗೆ ಏನೆಲ್ಲಾ ಆಗ ಬಹುದೆಂಬುದಕ್ಕೆ ಅನಲೆಸಾಕ್ಷಿಯಾಗುತ್ತಾಳೆ. ರಾವಣನಿಗೆ ತಾಯಿಯಾಗುತ್ತಾಳೆ, ಮಾರ್ಗ ತೋರುವ ಗುರುವಾಗುತ್ತಾಳೆ, ತಿದ್ದ-ಬುದ್ಧಿ ಕಲಿಸುವ ಆಪ್ತ ಸಖಿಯಾಗುತ್ತಾಳೆ, ಅವನ ಆತ್ಮೋದ್ಧಾರದ ಮಹಾಶಕ್ತಿಯೇಆಗುತ್ತಾಳೆ. ಬಹುಶಃ ಕವಿಕುವೆಂಪು ತಮ್ಮಆತ್ಮದ ಮಗ ಳಾಗಿ ಅನಲೆಯನ್ನು ಚಿತ್ರಿಸಿ ಧನ್ಯತೆ ಹೊಂದಿ ದ್ದಾರೆ.ಇಂತಹ ಮಗಳು ಎಲ್ಲರ ಮನೆಮನೆ ಯ ದೀಪವಾಗಿರಬೇಕು ಎಂಬುದು ಕವಿಯ ಆಶಯ.
ಹದಿನಾರು ವರುಷದ ಈ ಬಾಲೆ ಕೇವಲ ರಾಮಣನ ಆತ್ಮೋದ್ದಾರಕಿ ಮಾತ್ರವಲ್ಲ ತನ್ನ ಗೆಳತಿ ತಾರಾಕ್ಷಿ (ಅಣ್ಣ ಇಂದ್ರಜಿತುವಿನ ಪತ್ನಿ) ಅತ್ತಿಗೆಯಾಗಿ ಬಂದವಳು.ಇಂದ್ರಜಿತು ಯುದ್ಧದಲ್ಲಿ ಸತ್ತಾಗ ಅವಳಿಗೆ ಸರಿ ಮಾರ್ಗ ತೋರಿದ ಅಂತಃಕರಣದ ಸಖಿಯಾಗಿ, ಮಾರ್ಗದರ್ಶಕಿಯಾಗಿ ನಿಲ್ಲುತ್ತಾಳೆ.ವಜ್ರಾರಿ ಯ ಭವಿತವ್ಯಕ್ಕೆ ಅವಳ ಜೀವಿತ ಅನಿವಾ ರ್ಯ ಎಂಬ ಸತ್ಯದ ದೀಪ ಬೆಳೆಗುತ್ತಾಳೆ. ರಾವಣನನ್ನು ಸಂತ್ಯೆಸಿದಂತೆ, ಸೀತೆ ಯನ್ನೂ ಸಂತೈಸುವವಳೂ ಇವಳೇ.ಇವಳು ಚತುರೆ ಯಾಗಿ, ಕಾರ್ಯಶೀಲೆಯಾಗಿ, ಪ್ರಬುದ್ದೆ ಯಾಗಿ ಎಲ್ಲರ ಹೃದಯವನ್ನು ಗೆದ್ದವಳು. ಅದಕ್ಕಾಗಿ ಕವಿ ಕುವೆಂಪು ಇವಳನ್ನು ‘ಸತ್ತ್ವನಿಧಿ’ ಎಂದು ಕರೆದಿದ್ದಾರೆ. ರಾವಣ ನೊಳಗಿನ ರಾಕ್ಷಸತ್ವವನ್ನು ನಾಜೂಕಾಗಿ ಕೊಲ್ಲುವವಳಿವಳೆ. ಇವಳಿಲ್ಲದಿದ್ದರೇ ಧರ್ಮ ವಿಲ್ಲ ಎಂಬ ಸತ್ಯವನ್ನು ಸ್ವತಃ ರಾವಣನೇ ಮನಗಾಣುತ್ತಾನೆ. ಅದರೆ ಅವಳು ತಮ್ಮ ವಿಭೀಷಣನ ಮಗಳು. ತಂದೆ ಕರೆದಾಗ ಅವಳನ್ನು ಕಳುಹಿಸಬೇಕಾ ಗುವುದಲ್ಲ..! ಎಂಬದುಗುಡ ಆ ರಾವಣನೆದೆ ತುಂಬಿದಾಗ
“ಅನಲೆ ನಿನ್ನ ಮಗಳಲ್ತೆ ನ್ನವಳ್.! ಇವಳೆನ್ನಕಾಪಿಡುವದೇವಿ”
(ಶ್ರೀ.ರಾ.ದ) ಎಂದು ತಮ್ಮ ವಿಭೀಷಣನಿಗೆ ಹೇಳುವಾಗ “ಇವಳು ನನ್ನವಳು” ಎಂಬ ಭಾವದಲ್ಲಿ ರಾವಣನ ಪಿತೃತ್ವ ಭಾವ ಜಾಗ್ರತ ವಾಗುವುದು. ಯಾವ ಕಾಮಾಂಧ ರಾವಣ ನನ್ನು ನಾವು ನೋಡುತ್ತೇವೆಯೋ ಅದು ನಾಶನಾಗಿ ಪಿತೃತ್ವಭಾವಅಚ್ಚೊತ್ತಿನಿಲ್ಲುವಲ್ಲಿ ಅನಲೆಯ ಪಾತ್ರ ಅಮೃತಮಯವಾಗಿ ತೋರುವುದು. ಇಂತಹ ಮಗಳು ಬೇಕೆನಿಸು ವುದಿಲ್ಲವೇ ಎಲ್ಲರಿಗೂ?!.
ತಂದೆಯ ಹಿಂದೆಯೇ ಅನಲೆ ನಡೆದಾಗ “ತಂದೆಯೊಡವೋಗಿ ಧರ್ಮಮನ್ ಸೇವಿಪೆನ್” ಎಂದು ಅವಳು ನುಡಿದರೇ, ಅದಕ್ಕೆ ರಾವಣನು “ಇಲ್ಲಿರ್ದೆ ಧರ್ಮಕ್ಕೆ ಸೇವಗೆಯ್!”, “ಧರ್ಮಮಂ ಪೊರಗಟ್ಟಿ ಸೇವಿಪುದೆಂತು?” ಎನ್ನುವ ರಾವಣನ ಮಾತಿನಲ್ಲಿ “ಅನಲೆ ಎಂದರೆ, ಧರ್ಮ. ಧರ್ಮ ಎಂದರೆ ಅನಲೆ, ಅವಳೇ ಹೋದರೇ ಧರ್ಮ ಹೋದಂತೆ” ಎಂಬ ಭಾವ. ಮೂಡು ವುದು ಸಹಜ.
ಫ್ಯಾಶನ್ ಜಗತ್ತಿನಲ್ಲಿ ತಮ್ಮನ್ನೆ ಮರೆತು ಹೋಗುತ್ತಿರುವ ಯುವತಿಯರು ಅನಲೆ ಯಂತಹ ಪಾತ್ರದಿಂದ ತಮ್ಮ ಆತ್ಮವನ್ನು ಸಂಸ್ಕರಿಸಿಗೊಳ್ಳಬೇಕಿದೆ.ಸೆಲ್ಪಿ ಹುಚ್ಚಿನಲ್ಲಿ ಕೊಚ್ಚಿ ಹೋಗುವ ಯುವತಿಯರು ಇಂದು ಸಾಕಷ್ಟು ಸಾಮಾಜಿಕ ಜಾಲತಾಣಗಳ ಹಗರಣಗಳಿಗೆ ಆಹಾರವಾಗುತ್ತಿದ್ದಾರೆ, ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮನೆ ಬೆಳಗುವ ನಂದಾದೀಪಗಳಾಗಬೇಕಾದವರು ಇಂದು ತಮ್ಮ ಆತ್ಮಜ್ಯೋತಿಯ ಬೆಳಕನ್ನು ನಂಧಿಸಿಕೊಂಡು ಕತ್ತಲೆಯ ಲೋಕಕ್ಕೆ ಜಾರು ತ್ತಿದ್ದಾರೆ. ಇದು ದುರಂತವೇ ಅಲ್ಲವೇ?
ಅನಲೆ ದೊಡ್ಡಪ್ಪನಾದ ರಾವಣ,ದೊಡ್ಡಮ್ಮ ಮಂಡೋದರಿ, ಅಣ್ಣ ಇಂದ್ರಜೀತುವಿನ ಸಾವನ್ನು ನೋಡಿದವಳು ಆ ದುರಂತಕ್ಕೆ ಸಾಕ್ಷಿಯಾದವಳು. ಅಂತೆಯೇ ಸೀತಾ– ರಾಮರ ಪುನರ್ಮಿಲನದಂತಹ ಮಂಗಳ ದೃಶ್ಯಕ್ಕೂ ಸಾಕ್ಷಿಯಾದವಳು.
ಸೀತಾ- ರಾಮರ ಅಗ್ನಿ ಪ್ರವೇಶವನ್ನೂ ಸಾಕ್ಷೀಕರಿಸಿದವಳು. ಇವಳಲ್ಲಿ ತಂತ್ರಗಾರಿಕೆ ಯೂ ಇತ್ತು. ಸೀತೆಯ ಹತ್ತಿರ ಹೋಗಿ “ನಮ್ಮನ್ನು ತಾಯಿಯಾಗಿ ಪೊರೆದವಳು, ರಾವಣನನ್ನೂ ತಾಯಿಯಾಗಿ ಪೊರೆಯ ಬೇಕು”, “ದೊಡ್ಡಪ್ಪನ ಅಂತರಾತ್ಮವನ್ನೇ ಮಿಡಿದು ನುಡಿಯಬೇಕು ಮಾತೆ ಸೀತೆ” ಎಂದು ಬೇಡಿಕೊಳ್ಳುತ್ತಾಳೆ.ಇದು ಅನಲೆಯ ಮನದಾಳದ ಬಯಕೆಯಾಗಿತ್ತು. ಯಾಕೆಂದ ರೆ ಅವಳಿಗೆ ದೊಡ್ಡಪ್ಪನ ಗುಣ-ಸ್ವಭಾವ ಗೊತ್ತು.“ಹಲಸಿನ ಹಣ್ಣಿನಂತೆ ದೊಡ್ಡಪ್ಪ” ಎಂಬ ಅರಿವಿತ್ತು. ಅವನ ಕಠಿಣತ್ವ, ದರ್ಪದ ಲ್ಲೂ ಮೃದುವಾದ ಸಿಹಿಯಾದ ಹೃದಯ ವನ್ನು ಗುರುತಿಸಿದವಳಿವಳು.“ಸೀತೆಯಂತ ಹ ಮಹಿಳೆಯನ್ನು ಸಂಧಿಸದಿರುವುದೇ ತನ್ನ ದೊಡ್ಡಪ್ಪನ ದುರ್ಮತಿಗೆ ಕಾರಣ. ಈಗ ಮಹಾಸಾಧ್ವಿ ಸೀತೆ ರಾವಣನ ಹತ್ತಿರ ಇದ್ದಾಗ ತನ್ನ ದೊಡ್ಡಪ್ಪನ ಆತ್ಮೋನ್ನತಿ ಸಾಧ್ಯ” ಎಂಬುದೇ ಅನಲೆಯ ಅಪಾರ ನಂಬಿಕೆಯಾಗಿತ್ತು. ಅದಕ್ಕಾಗಿ ತನ್ನ ಕೋರಿಕೆ ಯನ್ನು ಸೀತೆಯ ಹತ್ತಿರ ಇಡುತ್ತಾಳೆ. ತನ್ನ ಮಾತಿಗೆ ಸೀತೆ ಒಪ್ಪುವಳೆಂಬ ಭರವಸೆಯೊ ಅವಳಿಗಿತ್ತು. ಹೀಗಾಗಿ ಕವಿ ಕುವೆಂಪು ಹೆಜ್ಜೆ ಹೆಜ್ಕೆಗೂ ಇವಳನ್ನು ನೆನಪಿಕೊಳ್ಳುತ್ತಾನೆ. ‘ಅನಲೆಯ ಬೊಪ್ಪ’, ‘ಅನಲೆಯ ತಾಯಿ’ ಎಂದೇ ವಿಭಿಷಣ, ಸರಮೆಯನ್ನು ಸಂಬೋ ಧಿಸುವುದು. ಕೊನೆಗೂ ರಾವಣನ ಚಿತೆಗೆ ಕೊಳ್ಳಿ ಇಡುವಾಗಲೂ”ಅನಲೆಯ ತಂದೆ ಕಿರ್ಚಡಲ್” ಎಂದೇ ಕವಿ ಹೇಳುತ್ತಾನೆ.
ರಾಮನನ್ನು ‘ಲೋಕ ಗುರು’ ವೆಂದು, ಸೀತೆ ಯನ್ನು “ಲೋಕಮಾತೆ” ಎಂದು ಗುರುತಿಸುವ ಅನಲೆ,ರಾಮ-ರಾವಣರ ಯುದ್ಧದಲ್ಲಿ ರಾವಣ, ಸೀತೆ, ವಿಭಿಷಣ, ಅಂಜನೇಯ ಇವರೆಲ್ಲರ ಮಧ್ಯವರ್ತಿಯಾಗಿ ಕಾರ್ಯನಿ ರ್ವಹಿಸಿ ಎಲ್ಲೆಡೆ ವಾತಾವರಣ ತಿಳಿಗೊಳಿಸಿ, ಪ್ರಬುದ್ಧೆಯಾಗಿ ಬೆಳೆಯುತ್ತಾ ಹೋಗುತ್ತಾಳೆ, ರಾವಣತ್ವ ಕಳಚಿದರೇ ಪ್ರತಿ ಯೊಬ್ಬರಲ್ಲೂ ರಾಮತ್ವ ಜಾಗೃತವಾಗು ವುದು ಎಂಬ. ಮಹಾತತ್ವ ಸಿದ್ಧಾಂತಕ್ಕೆ ಕಾರಣಳಾಗುವ ಅನಲೆ ಬೆಳಕಿನ ದೀಪವಾಗಿ ನಿಲ್ಲಬಲ್ಲಳು.
ಅನಲೆಯಂತಹ ಮನೆ ಬೆಳಗುವ ಬೆಳಕಿನ ದೀಪ ಮಡದಿಯಾಗಿ, ಮಗಳಾಗಿ, ಸಹೋ ದರಿಯಾಗಿ, ಸೊಸೆಯಾಗಿ ಯಾವುದಾದರೂ ರೂಪದಲ್ಲಿ ಇಂದೂ ಬೇಕಲ್ಲವೇ? ಮನಃ ಪರಿವರ್ತನೆಗೆ ಅನಲೆಯಂತಹ ಬೆಳಕಿನ ದೀಪ ಬೇಕಲ್ಲವೇ?
🔆🔆🔆
✍️ಡಾ. ಪುಷ್ಪಾವತಿ ಶಲವಡಿಮಠ ಮುಖ್ಯಸ್ಥರು, ಕನ್ನಡ ವಿಭಾಗ, ಶ್ರೀಶಿವಲಿಂಗೇಶ್ವರ ಮಹಿಳಾ ಕಾಲೇಜ್, ಹುಕ್ಕೇರಿಮಠ, ಹಾವೇರಿ-581110.