ಕವಿತೆಯೊಂದು ಒಂಟಿಯಾಗಿ,
ಹೊಂಚಿ,ಕಾಯುತ್ತಿದೆ…
ಅರ್ಥವಾಗದ್ದನ್ನು- ಅರ್ಥಮಾಡಿಸುವವರಿಗಾಗಿ.
ಅನುಕಂಪಕ್ಕಾಗಿ ಅಲ್ಲ.
ತಾನೇಕಟ್ಟಿಕೊಂಡ ಬೆಚ್ಚಗಿನ ಗೂಡಲ್ಲಿ,
ಒಂಟಿ ಹಕ್ಕಿಯೊಂದು ಕುಳಿತು
ಹಾಡುತ್ತಿದೆ.(ಅದು ಹಾಡಲ್ಲದೆಯೂ
ಇರಬಹುದು.)
ಅನುಕಂಪಕ್ಕಾಗಿ ಅಲ್ಲ.-
ಮರಚಿಗುರುವದು,
ಹೂ ಅರಳುವದು,
ಮಳೆಸುರಿಯುವದು,
ಕಾಲ,ಕಾಲಕ್ಕೆ ಸೃಷ್ಟಿಯ ಬಣ್ಣ
ಬದಲಾಗುವದು.
ಕವಿತೆ ಕಾತುರದೊಂದಿಗೆ
ಕಾಯುತ್ತಿದೆ,ಹರಿವ ಹೊಳೆಯ
ಸೆಳವಿನಗುಂಟ ಈಜಿ
ಕಡಲಸೇರಲು,ದಡ ಸೇರಲಿಕಲ್ಲ.
ಪದಗಳ ಜಾತ್ರೆಯಲಿ ಸುತ್ತಾಡಿ,
ಸುಸ್ತಾಗಿ,ಕೊನೆಗೆ ಬಣ್ಣ ಬಣ್ಣದ
ಟೊಳ್ಳುಗಳ ಖರೀದಿಸಿ,ಅದರಲ್ಲಿ
ತನಗಿಷ್ಟ ಭಾವಗಳ ತುಂಬಲು.
ಕವಿತೆ ಒಮ್ಮೊಮ್ಮೆ ಒಳಗೊಳಗೇ
ನಗುತ್ತದೆ ಕೂಡ.
ಅರ್ಥವಾಗದ್ದನ್ನು ಅರ್ಥವಾಗಿಸ
ಹೊರಟವರ ಅನುಕಂಪಕ್ಕಾಗಿ ಅಲ್ಲ.
ಅಸಹಾಯಕತೆಗೆ.
ಕವಿತೆ ಕಾಯುತ್ತಿದೆ.

🔆🔆🔆

✍️ಅಬ್ಳಿ,ಹೆಗಡೆ. ಹೊನ್ನಾವರ