ಹೊರ್ಗೆ ಮಳೆ ಧೋ ಅಂತ, ಮನದೊಳಗಿನ ಇಳೆ ಕೂಡ ಒದ್ದೆ ಒದ್ದೆ, ಎನೋ ತುಡಿತ ಅಕ್ಷರಗಳ ಮಳೆ ಪದಗಳೊಳಗೆ ಗಂಟಿಕ್ಕಿ ಒಂದೊಂದೇ ಹನಿ ಟಪಟಪ ಸುರಿವ ಸದ್ದು. ಅಷ್ಟರಲ್ಲಿ ಮಳೆಯ ಸುಳಿಗಾಳಿಗಿರಲಿ ಅಂತ ಒಂದಷ್ಟು ಶೇಂಗಾ ಹುರಿದು ಉಪ್ಪುಕಾರ ಹಚ್ವಿಡೋಣ ಸಂಜಿಮುಂದು ತಿನ್ನಲ್ಲಿಕ್ ಛೊಲೋ ಆಗ್ತು ಅಂತ,ಶೇಂಗಾಡಬ್ಬಿಯಿಂದ ತೆಗೆದು ಒಮ್ಮೆ ಕಣ್ಣಾಡಿಸಿ ಅವನ್ ಪ್ಲೇಟ್ನಲ್ಲಿ ಸುರಿದು ಒಂದುನಿಮಿಷ ಸೆಟ್ ಮಾಡಿ ನಿಂತೆ. ಆಗ ಮನಸ್ಸಿನಲ್ಲಿ , ಈ ಒಂದು ನಿಮಿಷದಲ್ಲಿ ಏನೆಲ್ಲ ಯೋಚನೆಗಳು ಬರಬಹುದೂಂತ ಸುಮ್ಮನೆ  ಒಂದು ಲಹರಿ ಹಂಗಾ ಕಣ್ಣ ಮುಂದೆ  ಬಂತು.


ಹೌದಲ್ವಾ! ಒಂದೇ ನಿಮಿಷದಲ್ಲಿ ಏನೇನೆಲ್ಲ ಯೋಚಿಸಬಹುದು . ಕಣ್ಣುಮುಚ್ಚಿ ಬಿಡೋದ್ರೊಳಗೆ ಇಡೀ ಧುನಿಯಾ ಸುತ್ತಿ ಬರಬಹುದು ಅಲ್ವೆನೋ?.ಸಿಹಿನೆನಪಿನ ಕಾರಂಜಿ ಜೊತೆಗೆ ಕಹಿನೆನಪಿನ ತುಂತುರು ಹನಿ.ನಿಜ ಹೇಳ್ಲಾ, ಮೊದಲರ್ಧ ಕ್ಷಣ ನೀನೆ ತುಂಬಿದ್ದೇ.

ಗುಲಬರ್ಗಾ(ಈಗಿನಕಲಬುರ್ಗಿ)ನೆನಪಾಯಿ  ತು, ಬಾಬಾನ ಜೋಡಿ ಪುಟಾಣಿ ಕೈಗಳಿಂದ ಹಿಡಿದ ಅವರ ಕೈ ಸ್ಪರ್ಶ, ಅಬ್ಬಾ! ಎಂಥ ಅಮ್ಮನಾಪ್ತತೆ. ನೆನೆದಾಗೊಮ್ಮೆ ಬೆಚ್ಚನೆಯ ಮಡಿಲು.  ದಾರಿ ಎರಡು ಬದಿ ಜನಗಳು ಇಂದಿರಾ ಗಾಂಧಿ ನೋಡೋಕೆ. ಬಾಬಾ  ಇಂದಿರ ಗಾಂಧಿನ  ನೋಡೋಕೆ ಐದು/ಆರು ವರುಷದ ನನ್ನ ಕರಕೊಂಡು ಹೋಗಿದ್ರು. ಕಾರು ಹತ್ತಿರ ಬಂತು.


ಕಾರಿನಿಂದಲೆ ಎಲ್ಲರೆಡೆಗೆ ಕೈಮಾಡುತ್ತ ಹೋದರು.ಕಾರು ಮುಂದೆ ಹೋಯಿತು. ಬಾಬಾ  ತೋರಿಸಿದ  ಇಂದಿರ ಗಾಂಧಿ ನನ್ನೆಡೆಗೆ  ನೋಡಿ  ಮುಗುಳುನಗೆ  ಬೀರಿ ದಂತಾಯ್ತು. ಎನೊಂದು ಅರಿಯದ ವಯಸ್ಸು, ಒಂದು ರೀತಿ ಖುಷಿ ಆಗಿದ್ದಂತು ಹೌದು.ಮುಗಿತು ಭಾರಿ ಬಿಸಿಲ ನಡುವಿನ ಆಯಾಸ, ಮನೆ ನೆನಪಿಗೂ ಮುಂಚೆ ಕ್ಷಣ ಮಾತ್ರದಲಿ ನಮ್ಮನ್ನ ಹಾಯ್ದು ಹೋದ ಕಾರು ಗಕ್ಕನೆ ನಿಂತಂಗಾತು. ಕಾರನಿಂದಿಳಿದ ಇಂದಿರಾ ಕೈಲಿ ಬೊಕ್ಕೆ ಹಿಡಿದು ನನ್ನೆಡೆಗೆ ಬಂದು ಹೂಗುಚ್ಚ ಕೊಟ್ಟು ಕೆನ್ನೆ ತಟ್ಟಿದ ನೆನಪು ಬಾಬಾ ತನ್ನ ನೆನಪಲ್ಲಿ ಅಗಾಗ ನೀರೆರೆದು ಹಸಿರುಡಿಸುತ್ತಿದ್ದಂತ ನೆನಪು.
ಹೂಗುಚ್ಛ ಒಣಗೊವರೆಗೂ ಅದರೊಟ್ಟಿಗೆ ಆಡಿದೆಲ್ಲ ನೆನಪು. ಅ ನೆನಪಿನ ಹಿಂದೆನೆ ರಾಶಿ ರಾಶಿ ನೀಲಿ ಚಿಟ್ಟೆಗಳುಬಂದು ನಂಗೆ ರೆಕ್ಕೆ ತೊಡಿಸಿ ಅವಗಳೊಟ್ಟಿಗೆ ನನ್ನ ಹಾರಸ ಕ್ಕೊಂಡು ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ದ ಕಾನನದಲಿ ಇಳಿಸಿದಂತ ನೆನಪು. ಹಾಗೆ ಮುಂದಕ್ಕೆ   ಹೋದೆ,   ಹೋದಗಳಿಗೆಲಿ ಯಾವಾಗ ಆ್ಯಕ್ಟೀವ್ ಹೊಂಡಾ ಹತ್ತಿದ್ನೋ ಗೊತ್ತಿಲ್ಲ, ಮಳೆ ಸುರಿತಿದೆ ರಭಸವಾಗಿ ಸುರಿವ ಮಳೆಲಿ;

ರಿಮ್ ಜಿಮ್ ಗಿರೇ ಸಾವನ್ ಸುಲಗ ಸುಲಗ ಜಾಯೇ ಮನ್, ಬಿಗೀ ಆಜ್ ಇಸ್ ಮೌಸ್ ಮ್ಮೇ ಲಗಿ ಕೈಸಿ  ಸುರಗಿ ಯೇ ಅಗನ್ ….

ಅಂತ ಹಾಡಕೊಂತ ಹೋಗುವಾಗ, ಗಾಡಿ ಸ್ಕಿಡ್ ಆಗಿ ಬಿದ್ದಾಗಿತ್ತು. ಏಳೋಕಾಗ್ತಿಲ್ಲ ಬಲವಂತವಾಗಿ ಹಾಗೂ ಹೀಗೂ ಸಂಬಾಳಿಸಿ ಎದ್ದೆ, ಎದ್ದು ನೋಡಿದ್ರೆ ಪೂರ್ತಿ ಮಂಜು ಆವರಿಸಿದೆ, ಸುತ್ತ ಹಸಿ ಹಸಿ ತಂಪೆರೆವ ಕಾನನದ ಮಧುರ ವಾತಾವರಣ , ಪಕ್ಕದಲ್ಲಿ ಆಗಲೆ ನಿಂಜೋಡಿ  ಕಾಫಿ ಕುಡಿತಿದೀನಿ, ನೀ ನೋಡಿದ್ಯಲ್ಲ  ಅದೇ ಸಿನಿಮಾ ನೊಡಕೊಂತ ಏಳೆಂಟು ಸೆಕೆಂಡ್ ಬ್ಲಾಂಕ್, ಯಾಕೆಗೊತ್ತಾ? ಕಳೆದು ಹೋದೆ ಆ ಹಾಡಲ್ಲಿ ಆ ಕಾಡಲ್ಲಿ.
     

ಹಾಗೆ ಮುಂದಕ್ಕೆ ಟೊರೆಂಟೋ ಕಾಡಲ್ಲಿ, ಕಿಲಿಮಂಜಿರೋ ಹಿಮದ ಬೆಟ್ಟದಲ್ಲಿ ಒಬ್ಬಳೆ ಅಲಿತಿದೀನಿ ,ಯಾರು ಇಲ್ಲ  ನನ್ನ ಜೋಡಿ, ನೀ ಬರೋದಿಲ್ಲಾಂತ ಗೊತ್ತು.ನನ್ನ ಕೋಪಕ್ಕೆ ನನ್ನ  ಅಸಹಾಯಕತೆಗೆ ಸದಾ ನಾ ಏಕಾಂಗಿ, ಮನದ ಈ ಅಲೆಮಾರಿತನಕ್ಕೆ ನಾ ಮಾತ್ರ ಜೊತೇಂತ ಗೊತ್ತಾಯ್ತು.
  

ಯಾಕೋ ಕೈ ಕಾಲು  ಇಡೀ ದೇಹ  ಸಾಥ್ ಕೊಡ್ತಿಲ್ಲ  ಮುಂದಿನ ನಡಿಗೆಗೆ , ಕೊರೆವ ಹಿಮಚಳಿ.ನನ್ನ ದನಿಗೆ ನನ್ನದೇ ದನಿ ಸೇರಿ ಮತ್ತೆ ನಾ ಚಿತ್ತಾಗುವ ಹುನ್ನಾರ.

   ಅರೆ ಅಲ್ಲೊಂದು ನದಿ ಕಾಣ್ಸತಿದೆ. (ನಿನ್ನ ನೆನಪುಗಳದ್ದು) ನಿರೋಳಗಿರೊ ಆ ಮೆಟ್ಟಿಲ ಮೇಲಿನ ಪುಟ್ಟ ಮಂಟಪದಲ್ಲಿ  ಭುಜಕ್ಕೆ ಭುಜ ತಾಗಿಸಿ ಕೂತು ನೀರೊಳಗಿದ್ದ ಪಾದಕ್ಕೆ ಸಣ್ಣ ಸಣ್ಣ ಮೀನು ಇಡುತಿದ್ದ ಕಚಗುಳಿಗೆ ಪುಳಕಿತಳಾಗ್ತಿದ್ದೆ. ಅದ್ಯಾವ ಮಾಯದಲ್ಲಿ ನನ್ನ ಕೈ ತಗೊಂಡು ನಿನ್ನ ಕೈಲಿಟಕೊಂಡು.


“ನನ್ನ ಬದುಕಲಿ ನಿನ್ನೊಂದು ಮರೆಯದಂತ ಪುಟ ಲವ್ ಯು “  ಅಂದ್ಜಾಂಗಾಯ್ತು. ಸಿಕ್ಕಾಪಟ್ಟೆ ನಗು ಬಂತು, ಈಗಲೂ ಬರ್ತಿದೆ ( ಅವ ಹಾಗೆ ಯೋಚಿಸಿರ ಬಹುದಾಂತ. ಮತ್ತಾಮೇಲೆ  ನಂಗೆಂತ ಬೇರೆ ಕೆಲ್ಸ ಇಲ್ವಾ,ನಿನ್ನ ಬಗ್ಗೆ ಮಾತ್ರ ಯೋಚಿ  ಸೋಕೆ ಅಷ್ಟು ಜನರಲ್ಲಿ ನೀ ಒಬ್ಬಳು ಅಷ್ಟೇ ಕಿವಿಲಿ ಹೇಳಿದ ಹಾಗಾಯ್ತು) ಅದನ್ನಲ್ಲೇ ಬಿಟ್ಟು ನಾ ಆ ನದಿ, ಬೆಟ್ಟ ದಾಟಿ ಬಂದು ನಿಂತೇ, ಒಂದು ಮಗು  ಅಳೋದನಿ  ಕೇಳಿ ರಮಿಸೋಣಾಂತ ಬಂದರೆ ಆಗ್ಲೇನೀ ಬಂದು ರಮಿಸ್ತಿದ್ದೆ. ಸರಿ ಅಲ್ಲೇ ದೂರದಲ್ಲಿ  ಹಿಮಾ ಲಯದ ತಪ್ಪಲು ಕಾಣ್ಸತ್ತು , ಓಡಿ ಹೋದೆ ನಿನ್ನ ನೆನಪಿನ ದೂರದಿಂದ, ಅಬ್ಬಾ ! ಆ ಹಿಮಾಲಯ ಅದರ ಅಗಾಧತೆಗೆ ಮನಸ್ಸು ರೋಮಾಂಚ ನವಾಯಿತು. ಅದರ ತಂಪಿನ ಹವೆ ಸ್ನೇಹದ ಗುರುತಿಗೆ ನನಗೆ ಚುಂಬಿಸಿ ದಂತಾಯಿತು. ಅಲ್ಲೆ ಇರೋ ದೇವದಾರು ಮರದ  ಕೆಳಗೆ ಕೂತೆ,   ಸಿಕ್ಕಾಪಟ್ಟೆ ಆಯಾ ಸಾಂತ ಅನ್ಸಿತ್ತು. ಮಲಗೋಣಾಂತ ಅನ್ನಕೊಳ್ಳೋದ್ರಲ್ಲಿ,ಮತ್ತೆ ಬರೆಯೋದು ಓದೋದು, ಮನೆ ಕೆಲ್ಸ, ಬಾಳ ಇದೆ  ಚಡಪಡಿಕೆ ಗೊಂದಲ,ನಡುವೆ ನೀ ಬಂದು ‘ಮಲಗು ಮಲಗು ಚಾರುಲತೆ ನಿನಗು ಮನಸಿದೆ’
ಹಾಡಿ ಮಲಕ್ಕೊ ಸುಮ್ಮನೆ ಅಂತ ನವಿರಾಗಿ ಗದರಿಸಿದೆ ಒಂದು ಧೀರ್ಘ ನಿದ್ದೆಆವರಿಸಿತು.
ಮಲಗಿ   ಎದ್ದರೆ ಈಗ ಓದೂಂತ ರಾಶಿ ಪುಸ್ತಕ, ನುಡಿಸೋಕೆ ವೀಣೆ, ಪೇಯಂಟ್ ಮಾಡೋಕೆ ಕ್ಯಾನವಸ್ ತಂದಿಟ್ಟುಹೋಗಿದ್ದೆ. ಇಲ್ಲ ನನಗಾಗಲ್ಲಾ, ಗಾಡಿಯಿಂದ ಬಿದ್ದು ಮುರಿದ ಕೈ ಬಾದೆ ಕೊಡ್ತಿದೆ.ಏನು ಮಾಡೋ ಕಾಗಲ್ಲ ನಂಗೆ ಅಂತ ಹೇಳೋದ್ರೊಳಗೆ ನೀ ಹೋಗಾಗಿತ್ತು ದೂರ ತುಂಬಾ ದೂರ.

  
ಬಾಳ ಸೊಕ್ಕು ಇವಂಗೆ ಪ್ರೀತಿ ಅನ್ನೋದೇ ಗೊತ್ತಿಲ್ಲ  ಅಂತ ಅಂದಕ್ಕೊಂಡು ಒದೊಂದೇ ಪುಸ್ತಕ  ಬದಿಗಿರಿಸಿ ವೀಣೆ ನುಡಿಸೋಣಾಂತ ಶೃತಿ ಸರಿ ಮಾಡಿ ಹಂಸಾನಂದಿ ರಾಗದಸ್ವರ ಗಳನ್ನ ಮೀಟುವಲ್ಲಿ ಮತ್ತೆ ನೆನಪಾದೆ. ಹೌದಲ್ವಾ!  ನನ್ನ  ಬಗ್ಗೆ  ಮಾತ್ರ   ಕಾಳಜಿ ತಗೋಳೋಕೆ,  ಯೋಚಿಸೋಕೆ ಇವನಿಗೆ ನಾ ಒಬ್ಬಳೆ ಅಲ್ವಲ್ಲಾ, ಅಷ್ಟು ಮಂದಿ ಗೆಳತಿಯರಿರುವಾಗ.
ಮತ್ತೆ ಸಮಾಧಾನ ನಾನೂss ಒಬ್ಬಳಲ್ವಾ??  ಅಂತ.

   ಈಗ ಈ ಸ್ಥಿತಿ ನಲ್ಲಿ ಈ ಗ್ಯಾಪ್ನಲ್ಲಿ ಏನೇನೆಲ್ಲ ಅಲೋಚನೆಗಳು.  ಅಬ್ಬಾ ,! ಪರವಾಗಿಲ್ವೇ ನಾ ಕೂಡ ಚೆನ್ನಾಗಿನೆ ಯೋಚಿಸ್ತೀನಿಂತ ಅನತ್ಸು. ನಗು ಕೂಡ ತೇಲಿ ಬಂತು  ಅದು ನನಗೂ ಗೊತ್ತಾಯ್ತು.

   ಅಷ್ಟೊತ್ತಿಗೆ ಬೀಪ್ ಬೀಪ್  ಶಬ್ಧ ಅವನ್  (woven) ಶೇಂಗಾ ಫ್ರೈ ಮಾಡ್ಲಿಕ್ ಇಟ್ಟಿದ್ದೆ ಒಂದು ನಿಮಿಷ . ಆಯ್ತೂಂತ ಕಾಣತ್ತೆ. ಒಂದು ನಿಮಿಷದ ಯೋಚನೆಯಲಹರಿಯ, ಹುರಿದ ಶೇಂಗಾದ ಪರಿಮಳದಲ್ಲಿ. 

   ಎಷ್ಟು ಮಜಾ , ನಗು ನನಗೆ ನಾನೆ ನಕ್ಕೆ , ಹೀಗೆಲ್ಲ ಯೋಚಿಸಿದೇಂತ. ತಕ್ಷಣಕ್ಕೆ ನಿನಗೆ ಹೇಳಬೆಕೂಂತ ಅನ್ಸತ್ತು  ಹೇಳಿದೆ…🦋
      

                    🔆🔆🔆

✍️ಶಾಲಿನಿ ರುದ್ರಮುನಿ, ಹುಬ್ಬಳ್ಳಿ