• ಜಾಗತಿಕ ಮಟ್ಟದಲ್ಲಿ ಇಂದುಕೊರೋನಾ ತಾಂಡವವಾಡುತ್ತಿದೆ ಅದಕ್ಕಾಗಿ ಅನೇಕ ರೀತಿಯ ಸಲಹೆಗಳನ್ನು ಬದುಕುವ ರೀತಿ ಯನ್ನು ವೈದ್ಯಕೀಯ ಜಗತ್ತು ನಮಗೆ ತಿಳಿಸುತ್ತಿದೆ. ಆದಾಗ್ಯೂ ಕೂಡ ನಾವು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ.

ಹೀಗಾಗಿ ದಿನದಿನಕ್ಕೆ ಸೋಂಕಿತರ ಸಂಖ್ಯೆ ಯಲ್ಲಿ ಏರಿಕೆ ಕಂಡು ಬರುತ್ತಿದೆ. ನಿಮ್ಮ ಜೀವ ನಿಮ್ಮ ಕೈಯಲ್ಲಿ ಮಾಸ್ಕ ಸರಿಯಾಗಿ ಹಾಕಿಕೊಳ್ಳುವ ಬಗೆಯನ್ನು ನಾಡಿನ ಖ್ಯಾತ ಹೃದಯರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ಇತ್ತೀಚೆಗಷ್ಟೇ ಯ್ಯೂಟ್ಯೂಬ್ ಮೂಲಕ ವಿಡಿಯೋ ಮಾಡಿ ಟ್ವಿಟರ್ ಮತ್ತು ಫೇಸ್ಬುಕ್ ಲಿಂಕ್ ಗಳಲ್ಲಿ ಕಳಿಸಿದ್ದರು.ಅದನ್ನು ನೋಡಿದಾಗ ಮಾಸ್ಕ್ ಧರಿಸುವ ಮತ್ತು ಅದನ್ನು ಉಪಯೋಗಿ ಸುವ ಕುರಿತು ಸಮಗ್ರಮಾಹಿತಿ ದೊರೆಯಿತು ಇಷ್ಟೆಲ್ಲ ಹೇಳಲು ಕಾರಣ ಪ್ರತಿಯೊಬ್ಬರೂ ತಮ್ಮ ಜೀವನ ಶೈಲಿಯಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿಮಾಡಿಕೊಂಡು ಬದುಕುವುದು.

ಒಂದು ಜೀವಿಯ ದೇಹ-ಮನಸ್ಸು ಸಂಪೂ ರ್ಣ ಸಮತೋಲನದಲ್ಲಿರುವ ಸ್ಥಿತಿ ಯನ್ನು ಆರೋಗ್ಯ ಎಂದು ಕರೆಯುವರು, ವಿಶ್ವಸಂಸ್ಥೆಯ 1945 ರ ಹೇಳಿಕೆಯ ಪ್ರಕಾರ ಆರೋಗ್ಯವೆಂದರೆ ಸಂಪೂರ್ಣ ದೈಹಿಕ ಮತ್ತು ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ. ಕೇವಲ ರೋಗ- ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ,ವೈದ್ಯ ವಿಜ್ಞಾನ ಮುಂದುವರಿ ದಂತೆ 1850 ರಿಂದೀ ಚೆಗೆ ಜನ ಮಾನಸದಲ್ಲಿ ಆರೋಗ್ಯದಲ್ಲಿ ಸುಧಾರಣೆಯ ಕುರಿತು ತಿಳುವಳಿಕೆಗಳ ಕಾರ್ಯಯೋಜನೆಗಳು ಪ್ರಾರಂಭವಾದವು. ಜನರಲ್ಲಿ ವೈದ್ಯಕೀಯ ವಿಚಾರಗಳ ತಿಳುವಳಿ ಕೆ ಆಗಬೇಕೆನ್ನುವ ವಿಶ್ವಸಂಸ್ಥೆಯ(1948) ನಿರ್ಧಾರವೂ ಕೂಡ ಹೆಲ್ತ ಏಜುಕೇಶನ್ ಎಂಬ ಶೀರ್ಷಿಕೆಯಡಿ ಭಿತ್ತಿ ಪತ್ರಗಳು ಚೀಟಿಗಳ ಮೂಲಕ ಕ್ಷಯ ರೋಗದಂತಹ ಭೀಕರ ರೋಗದ ಬಗ್ಗೆ ಪ್ರಕಟವಾಗಿ ಗೋಡೆಗಳ ಮೇಲೆ ಕಾಣಿಸಿಕೊಳ್ಳತೊಡಗಿ ದವು. ಮುಂದೆ ಶಾಲಾ ಶಿಕ್ಷಣದಲ್ಲಿಯೂ ಕೂಡ ಆರೋಗ್ಯ ಶಿಕ್ಷಣವಿರಲಿ ಎಂಬ ತೀರ್ಮಾನ ದಿಂದಾಗಿ ಜೀವಶಾಸ್ತ್ರ ಪಠ್ಯದಲ್ಲಿ ಪ್ರಾಥಮಿಕ ಹಂತದಿಂದ ಆರೋಗ್ಯದ ತಿಳಿವಳಿಕೆ ನೀಡಲಾರಂಭಿಸಿತು.

ಇಷ್ಟೆಲ್ಲ ಪ್ರಕ್ರಿಯೆಗಳು ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುತ್ತಿದ್ದರೂ ಕೂಡ ಇಂದು ಮಾಧ್ಯಮಗಳಲ್ಲಿ ಕೂಡ ಹಲೋ ಡಾಕ್ಟರ ರೇಡಿಯೋದಲ್ಲಿ ಕೂಡ ವೈದ್ಯರ ಸಲಹೆ, ಪತ್ರಿಕೆಗಳಲ್ಲಿ ಪ್ರಶ್ನಿಸಿ ಸಲಹೆ ಹೀಗೆ ನಡೆಯು ತ್ತಿರುವುದನ್ನು ನೋಡಿದರೆ ನಮ್ಮ ಜನ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವತ್ತ ಕ್ಷಣ ಮಾತ್ರ ಯೋಚಿಸು ತ್ತಿಲ್ಲವಲ್ಲ ಎಂಬ ಆತಂಕ ಕಾಡುತ್ತದೆ. ಕಾರಣವಿಷ್ಟೇ ಕೆಲವು ಸಣ್ಣಸಣ್ಣ ಸಂಗತಿ ಗಳಿಗೂ ಕೂಡ ವೈದ್ಯಕೀಯ ಸಲಹೆಗಾಗಿ ಪತ್ರ ಬರೆಯುವುದು, ನೇರ ಪೋನ್ ಇನ್ ಕಾರ್ಯಕ್ರಮಗಳಲ್ಲಿ ಪೋನ್ ಮಾಡಿ ಕೇಳು ವುದನ್ನು ಕಂಡಾಗ ಇವರಿಗೆ ಸಾಮಾನ್ಯ ಜ್ಞಾನದ ಪರಿವೆಯೂ ಇಲ್ಲವಲ್ಲ ಎಂದು ಖೇದವಾಗುತ್ತದೆ.

ಪ್ರತಿ ನಿತ್ಯ ನಾವು ಸಾಮಾನ್ಯವಾಗಿ ರೂಢಿಸಿ ಕೊಳ್ಳಬೇಕಾದ ಸಂಗತಿಗಳನ್ನು ಅಳವಡಿಸಿ ಕೊಂಡರೆ ನಮ್ಮ ಆರೋಗ್ಯದಲ್ಲಿ ಸುಧಾರಣೆ ಖಂಡಿತ ಕಂಡು ಬರುತ್ತದೆ ಎಂದರೆ ತಪ್ಪಾಗ ಲಿಕ್ಕಿಲ್ಲ.ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯುವುದನ್ನು ರೂಢಿಸಿ ಕೊಂಡರೆ ಅಜೀರ್ಣ ನಮ್ಮನ್ನು ಕಾಡುವು ದಿಲ್ಲ ಎಂಬುದನ್ನು ನಾವು ಮೊದಲು ಮನಗಾಣಬೇಕು.

ಸಾಧ್ಯವಾದರೆ ಬೆಳಗಿನ ವಾಯುವಿಹಾರ, ಯೋಗವನ್ನು ರೂಢಿಸಲುಪ್ರಯತ್ನಿಸಬೇಕು. ವಾಯುವಿಹಾರದಿಂದ ಉಸಿರಾಟ ತೊಂದರೆ ಕೈಕಾಲು ಸೆಳೆತ ಇತ್ಯಾದಿಗಳನ್ನು ದೂರವಿಡ ಬಹುದು.ಇಂದಿನ ಜಗತ್ತು ಶ್ರಮರಹಿತ ರೀತಿ ಸಕಲ ಸವಲತ್ತುಗಳನ್ನು ಸಕಲ ಜೀವಿಗಳಿಗೆ ಒದಗಿಸಿದೆ.ಎಲ್ಲ ಸೌಲಭ್ಯಗಳನ್ನು ಪಡೆದ ಮನಸ್ಸುಗಳು ತನ್ನೊಡನೆ ದುಗುಡ-ದುಃಖ ದುಮ್ಮಾನಗಳೊಡನೆ ಬದುಕುತ್ತಿವೆ. ಬೇನೆ, ಬೇಸರಗಳು ಒಡನಾಡಿಗಳಂತೆ ಜೊತೆಗಿರುವ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣು ತ್ತೇವೆ. ಸುಖದ ಸೋಪಾನದಲ್ಲಿ ವಿಹರಿಸು ತ್ತಿದ್ದೇನೆಂದು ಪರಿಭಾವಿಸುವವರಲ್ಲೂ ಕೂಡ ಅವ್ಯಕ್ತ,ದುಃಖದ ಚಡಪಡಿಕೆ ಜೀವಂತ ವಿರುವ ಅನೇಕ ಜನರನ್ನು ಕಾಣುತ್ತೇವೆ. ಇಂಥ ಜನರು ಕೂಡ ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಬದಲಾವಣೆ ಪಡೆದರೆ ಖಂಡಿತವಾಗಿಯೂ ಅವರೆಲ್ಲ ತಮ್ಮ ದುಃಖ ದುಮ್ಮಾನ ದುಗುಡಗಳಿಂದ ಮುಕ್ತರಾಗಿ ಆರೋಗ್ಯದಲ್ಲಿ ಸುಧಾರಣೆ ಪಡೆಯ ಬಹುದು.

ಮನುಷ್ಯನಿಗೆ ಇಂದು ತನ್ನನ್ನು ಎಲ್ಲರೂ ಗುರುತಿಸಲಿ ಎಂಬ ಇಚ್ಚೆ.ಅಂಥ ಸಂದರ್ಭ ಮೌಲ್ಯಗಳನ್ನು ದೂರ ಸರಿಸಿ ಕೆಟ್ಟ ಪ್ರವೃತ್ತಿಗೆ ಇಳಿಯುವರು. ಅಂಥಹ ಜನರೂ ಕೂಡ ತಮ್ಮ ಕೆಟ್ಟ ಆಲೋಚನೆಯ ಮೂಲಕ ಏನನ್ನೋ ಮಾಡಲು ಹೋಗಿ ಮಾನಸಿಕ ವಾಗಿ ಜರ್ಝರಿತರಾಗುವ ಸಂದರ್ಭಗಳು ಕೂಡ ಅವರ ಆರೋಗ್ಯ ಹದಗೆಡಿಸುತ್ತವೆ. ಕಾರಣ ಮನುಷ್ಯ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಮೌಲ್ಯವನ್ನು ಅರಿತು ಬದುಕಿದ್ದಾದರೆ ಅವರ ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಕಾಣಬಹುದು.

ದಿನನಿತ್ಯ ಎದ್ದ ತಕ್ಷಣ ಒಳ್ಳೆಯ ಆಲೋಚನೆ ಯೊಂದಿಗೆ ಪ್ರತಿ ದಿನವನ್ನು ಪ್ರಾರಂಭಗೊಳಿ ಸುವವರ ಮನಸ್ಸಲ್ಲಿ ದುರಾಲೋಚನೆಗಳು ಬರದು.ಕಾರಣ ಬೆಳಗಿನ ಏಳುವ ಹೊತ್ತಿನ ಲ್ಲಿಯೇ ನಮ್ಮ ಆಲೋಚನೆಗಳು ಉತ್ತಮ ವಾಗಿರಲಿ ಆ ದಿನದ ಸಾರ್ಥಕತೆಯು ಕೂಡ ನಮ್ಮ ಆರೋಗ್ಯದಲ್ಲಿ ಒಳ್ಳೆಯ ಅವಕಾಶ ನೀಡುತ್ತದೆ.ಇನ್ನು ಊಟದ ರೀತಿ ಕೂಡ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆಯಿದೆ. ನಮ್ಮ ಬಾಯಿಯ ಚಪಲವು ಕೂಡ ಅನಾರೋಗ್ಯಕ್ಕೆ ದಾರಿ ತೋರಿಸಬಹುದು. ಕಾರಣ ಹಿತ ಮಿತ ಆಹಾರ ಪದ್ದತಿ ರೂಢಿಸಿಕೊಂಡಲ್ಲಿ ನಮ್ಮ ಜೀವನ ಶೈಲಿ ಯಲ್ಲಿ ಬದಲಾವಣೆ ಆಹಾರ ಪ್ರಕ್ರಿಯೆಯಲ್ಲಿ ಬಂದದ್ದಾದರೆ ಅನಾರೋಗ್ಯ ನಮ್ಮನ್ನು ಬಾಧಿಸದು.

ಎಷ್ಟೋ ಜನ ಎದ್ದ ಕೂಡಲೇ ಸೆರೆ, ಸಿಂಧಿ, ಅಲ್ಕೋಹಾಲ್ ಮಿಶ್ರಿತ ದ್ರವವನ್ನು ಸೇವಿಸುವರೂಢಿಯನ್ನಿರಿಸಿಕೊಂಡಿರುತ್ತಾರೆ. ಇನ್ನು ಕೆಲವರು ದಿನ ಪೂರ್ತಿ ಕುಡಿತದ ದಾಸರಾಗಿರುವರು. ಇಂಥವರು ಬದುಕು ತೀರಾ ಹದಗೆಟ್ಟು ಅನಾರೋಗ್ಯಕ್ಕೆ ತುತ್ತಾಗಿ ಬದುಕು ಹಾಳಾಗುತ್ತದೆ. ಇಂಥಹ ದುಶ್ಚಟಕ್ಕೆ ಬಲಿಯಾದವರೂ ಕೂಡ ತಮ್ಮ ಜೀವನ ಶೈಲಿಯಲ್ಲಿ ಬದಲಾ ವಣೆ ಮಾಡಿಕೊಂಡರೆ ಅಂದರೆ ತಮ್ಮ ಕುಡಿತದ ಚಟ ಬಿಟ್ಟು ಪ್ರತಿ ದಿನ ಎದ್ದ ಕೂಡಲೇ ಒಂದು ಚರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದನ್ನು ರೂಢಿಸಿ ಕೊಂಡರೆ ಅವರಿಗೆ ಮಲಬದ್ದತೆ, ಕರುಳುಹುಣ್ಣು,ಕಫ,ನೆಗಡಿ,ಮುಂತಾದ ರೋಗಗಳು ಬರುವುದಿಲ್ಲ. ಅಷ್ಟೇ ಅಲ್ಲ ಅದನ್ನು ನಿತ್ಯವೂ ರೂಢಿಸಿ ಕೊಳ್ಳುತ್ತ ನೀರಿನ ಪ್ರಮಾಣ ಸ್ವಲ್ಪ ಹೆಚ್ಚು ಮಾಡುತ್ತ ಅಂದರೆ ಒಂದು ಚರಿಗೆಯಿಂದ ಎರಡು ಚರಿಗೆಯವರೆಗೆ ಮಾತ್ರ ಸಾಗಿದರೆ ಅಜೀರ್ಣತೆಯಿಂದ ಹಿಡಿದು ಅವರಿಗೆ ಯಾವ ರೋಗರುಜಿನಗಳೂ ಕೂಡ ಕಾಡುವುದಿಲ್ಲ.

ಪ್ರತಿ ದಿನ ಒಳ್ಳೆಯ ಪುಸ್ತಕ ಓದು ಜೀವನ ಶೈಲಿ ರೂಢಿಸಿಕೊಂಡವರಿಗೆ ದುರಾಲೋಚನೆ ನಿರಾಶಾಭಾವ ಮೂಡುವುದಿಲ್ಲ.ಅಷ್ಟೇ ಏಕೆ ಅವರು ತಮ್ಮ ಒಳ್ಳೆಯ ಚಿಂತನೆಯಿಂದ ಇತರರಿಗೂ ಮಾರ್ಗದರ್ಶಕರಾಗಬಲ್ಲರು. ಹುಟ್ಟು ಸಾವಿನ ನಡುವೆ ಬರುವ ಬದುಕನ್ನು ಕಳೆಯಲು ಬಹಳತಾಳ್ಮೆ,ಸಂಯಮ ಬೇ‌ಕು. ಮುಂಜಾನೆಯಿಂದ ರಾತ್ರಿಯತನಕ ಬದುಕಿನ ಜಂಜಡದಲ್ಲಿ ಅನೇಕ ರೀತಿಯ ಸರ್ಕಸ್ ಮಾಡಬೇಕಾಗುತ್ತದೆ. ಅಲ್ಲಿ ಸುಖ ದುಃಖಗಳ ಛಾಯೆ ಎಲ್ಲ ರೀತಿಯಲ್ಲಿಯೂ ಹರಿದು ಬರುತ್ತದೆ. ಹಾಗಂತ ಕೆಟ್ಟದರ ಕಡೆಗೆ ಮನಸ್ಸು ಕೇಂದ್ರೀಕೃತವಾಯಿತೋ ಅಲ್ಲಿಗೆ ಮುಗಿಯಿತು, ಬದುಕು ದುಸ್ತರ. ಕಾರಣ ಬದುಕನ್ನು ಬಂಗಾರವಾಗಿಸುವ ಆಲೋಚನೆ ಗಳನ್ನು ನಾವು ಮಾಡಿದರೆ ಅದರಿಂದ ಆಗುವ ಪ್ರಯೋಜನಗಳು ಅಪಾರ. ಮನಸ್ಸ ನ್ನು ವರ್ತಮಾನದಲ್ಲಿ ನಿಲ್ಲಿಸಿಕೊಂಡರೆ ಭಾವನಾತ್ಮಕವಾಗಿ ಉತ್ತಮಆಲೋಚನೆ ರೂಢಿಸಿಕೊಂಡರೆ ನಮ್ಮ ಬದುಕಿನಲ್ಲಿ ಅನಾರೋಗ್ಯಬರದು. ನಮ್ಮ ಜೀವನಶೈಲಿ ಬದಲಿಸಿಕೊಳ್ಳುವ ಜೊತೆಗೆ ಸಮಾಜವನ್ನು ಕೂಡ ಅತ್ಯುನ್ನತವಾಗಿ ನಿರ್ಮಿಸಲು ರೋಗ ರಹಿತ ಒತ್ತಡ ರಹಿತ ಮನಸ್ಸು ಅವಶ್ಯಕ. ಮೊದಲು ನಮ್ಮನ್ನು ನಾವು ರೂಪಿಸಿಕೊಳ್ಳ ಬೇಕು.ಯಾವುದೇ ಕೆಲಸ ನಮ್ಮಿಂದ ಆಗದು ಎಂದುಕೊಳ್ಳಬಾರದು. ನಾವು ದಿನನಿತ್ಯ ನಿರ್ವಹಿಸುವ ಕೆಲಸದ ಬಗ್ಗೆ ಕಾಳಜಿಯಿಂದ ತಾಳ್ಮೆಯಿಂದ ಮಾಡಿದರೆ ಕಛೇರಿಯ ಎಲ್ಲ ಸಹೋದ್ಯೋಗಿಗಳಿಗೂ ಕೂಡ ನಮ್ಮ ವರ್ತನೆ ಹಿತವೆನಿಸುತ್ತದೆ. ನಗುನಗುತ್ತ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಒಳ್ಳೆಯ ಮಾತನಾಡುವ ಮೂಲಕ ನಮ್ಮ ಜೀವನ ಶೈಲಿ ರೂಢಿಸಿಕೊಂಡರೆ ಆರೋಗ್ಯ ವೂ ಕೂಡ ಉತ್ತಮವಾಗಿರುತ್ತದೆ.

ಸಿಟ್ಟು,ಕೋಪ,ಕಿರಚಾಟ ಇಂಥಹ ಚಟುವಟಿ ಕೆ ಒಳ್ಳೆಯದಲ್ಲ. ಇದರಿಂದ ನಮ್ಮ ದೇಹದ ಆರೋಗ್ಯದಲ್ಲಿ ರಕ್ತದೊತ್ತಡದಂಥ ಕಾಯಿಲೆ ಬರುವುದಲ್ಲದೇ ಅದರಿಂದ ಇತರರ ಮೇಲೆ ಪ್ರಭಾವ ಬೀರಿ ಅವರು ನಮ್ಮ ಸಾಮಿಪ್ಯ ಬಯಸಲು ಹಿಂಜರಿಯುವ ವಾತಾವರಣ ನಿರ್ಮಾಣವಾಗುತ್ತದೆ.ನಗುನಗುತ್ತ ಒಳ್ಳೆಯ ಮಾತುಗಳನ್ನಾಡುತ್ತ ಕೆಲಸ ನಿರ್ವಹಿಸುವು ದನ್ನು ರೂಢಿಸಿಕೊಳ್ಳಬೇಕು. “ನಿಂದಿಸಿದವರನ್ನು ವಂದಿಸಿ ನೋಡಿ ಆಗ ನಿಂದಿಸಿದವರ ಮನ ಲಜ್ಜೆಯಿಂದ ಕುಗ್ಗುವುದು ” ಎಂಬ ಶರಣರ ವಾಣಿಯಂತೆ ಶಾಂತಿ ಸಹನೆಯ ಬದುಕನ್ನು ನಾವು ರೂಢಿಸಿ ಕೊಳ್ಳಬೇಕು.

ನಿರಂತರ ದುಡಿಮೆ ಇರಲಿ ದಣಿದ ಮನಸ್ಸಿಗೆ ಶರೀರದ ಮೂಲಕ ವಿಶ್ರಾಂತಿ ಕೊಡುವುದು ಕೂಡ ನಮ್ಮ ಜೀವನ ಶೈಲಿಯಲ್ಲಿ ರೂಢಿಸಿ ಕೊಳ್ಳುವುದು ಅಗತ್ಯ. ಎಂತಹ ಕ್ಲಿಷ್ಟ ಸಂದರ್ಭದಲ್ಲೂ ಒಂದು ಹಾಸ್ಯ ಚಟಾಕಿ ಹಾರಿಸಿ ಉಲ್ಲಾಸಮಯ ವಾತಾವರಣ ಸೃಷ್ಟಿ ಮಾಡಲು ಸಾಧ್ಯವೆಂಬಂತೆ ದಣಿದ ಮನಸ್ಸಿಗೆ ಮನರಂಜನೆಯ ಚಟುವಟಿಕೆ ಯಲ್ಲಿ ಭಾಗವಹಿಸುವಿಕೆ ಕೂಡ ಬದುಕು ಉಲ್ಲಾಸದಿಂದಿರಲು ಸಾಧ್ಯ.ಕುಟುಂಬದ ಸದಸ್ಯರೊಡನೆ ಕೂಡ ನಗು ನಗುತ್ತ ಮಾತನಾಡಿ ಅದು ಕೂಡ ನಮ್ಮ ಜೀವನ ಶೈಲಿಯಲ್ಲಿ ನಾವು ಅಳವಡಿಸಿ ಕೊಳ್ಳಬೇಕಾ ದ ಸಹಜ ಕ್ರಿಯೆ. ನಮ್ಮ ಹೆಗಲ ಮೇಲಿನ ಭಾರವನ್ನು ಮನೆಯವರೆಲ್ಲ ರೊಂದಿಗೆ ಹಂಚಿಕೊಂಡು ಮಾಡಲು ಸಾಧ್ಯ.

ಅಹಂಕಾರ,ನಿರಾಸೆ ಅತಿಯಾದರೆ ಬಾಳು ಪ್ರಪಾತಕ್ಕೆ ಬೀಳುವುದು. ಭವಿಷ್ಯತ್ತಿನ ಬಗ್ಗೆ ಚಿಂತೆ ಹೆಚ್ಚಾದರೆ ಮನಸ್ಸು ಒತ್ತಡಕ್ಕೆ ಒಳಗಾಗುವುದು.ಮನಸ್ಸಿನ ತಾಳ್ಮೆ ಕೂಡ ಬಹು ಮುಖ್ಯ.ನಿಮ್ಮ ಪ್ರತಿಭೆಯನ್ನು ಸದೃಡವಾಗಿ ದುಡಿಸಿಕೊಳ್ಳುವ ಮೂಲಕ ಜೀವನ ಶೈಲಿ ಇರಲಿ. ಒಳ್ಳೆಯದರ ಕಡೆಗೆ ಮನಸ್ಸು ಎಳೆಯುವುದು ಅಪರೂಪ. ಎಚ್ಚರಿಕೆಯಿಂದ ಸನ್ನಡತೆಯ ಕಡೆಗೆ ಗಮನ ಹರಿಸುವ ಮೂಲಕ ನಮ್ಮ ಜೀವನ ಉತ್ತಮಗೊಳಿಸಬಹುದು. ವೈಯುಕ್ತಿಕ ಕೌಟುಂಬಿಕ, ಸಾಮಾಜಿಕವಾದ ಎಲ್ಲ ಆಯಾಮಗಳೊಂದಿಗೆ ನಮ್ಮ ವ್ಯಕ್ತಿತ್ವವನ್ನು ತೆರೆದುಕೊಳ್ಳುವ ಮೂಲಕ ಒಂದು ಮಹತ್ತರ ಕ್ರಿಯೆ ನಮ್ಮ ವ್ಯಕ್ತಿತ್ವವನ್ನು ರೂಢಿಸಬಲ್ಲದು.

ಅದಕ್ಕಾಗಿ ಈ ಕೆಳಕಂಡ ಕೆಲಸ ಸಂಗತಿ ಗಳನ್ನು ನಾವು ನಮ್ಮ ದೈನಂದಿನ ಬದುಕಲ್ಲಿ ರೂಢಿಸಿಕೊಂಡರೆಅನುಕೂಲ.

ಸಾರ್ಥಕ ಮನುಷ್ಯನ ಲಕ್ಷಣಗಳು

  • ಆಸೆ,ಕೋಪ,ನಾಲಗೆ ಈ ಮೂರನ್ನು ಹತೋಟಿಯಲ್ಲಿಡಿ.
  • ವ್ಯಾಪಾರ,ಪ್ರಯಾಣ,ಮದುವೆ ಈ ಮೂರಕ್ಕೂ ಆತುರ ಪಡಬೇಡಿ
  • ಬುದ್ದಿಶಕ್ತಿ,ಸಾಮರ್ಥ್ಯ,ಸಂತೋಷ ಈ ಮೂರಕ್ಕೂ ಬೆಲೆ ಕೊಡಿ.
  • ಹಣ,ಸಮಯ,ಶಕ್ತಿ ಈ ಮೂರನ್ನು ವ್ಯರ್ಥ ಮಾಡಬೇಡಿ
  • ಧರ್ಮ,ನ್ಯಾಯ,ವಿನಯ ಈ ಮೂರಕ್ಕೂ ಗೌರವ ಕೊಡಿ.
  • ದೇಶ,ಗೌರವ,ರಾಷ್ಟ್ರಧ್ವಜ,ಈ ಮೂರಕ್ಕಾಗಿ ಹೋರಾಟ ಮಾಡಿ
  • ಅನ್ಯಾಯ,ಅಹಂಕಾರ, ದ್ರೋಹ. ಈ ಮೂರನ್ನು ದ್ವೇಷಿಸಿ

ಹೀಗೆ ಇಂಥ ಅನೇಕ ಉತ್ತಮಸಂಗತಿಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ನಮ್ಮ ಬದುಕನ್ನು ರೂಪಿಸಿಕೊಂಡಲ್ಲಿ ಇವುಗಳ ಮೂಲಕ ಉಂಟಾಗಬಹುದಾದ ಶಾರೀರಿಕ. ಮಾನಸಿಕ ಅನಾರೋಗ್ಯವು ನಮ್ಮನ್ನು ಬಾಧಿಸದು ಎಂದರೆ ತಪ್ಪಾಗಲಿಕ್ಕಿಲ್ಲ

               🔆🔆🔆              

ಶ್ರೀ ವೈ.ಬಿ.ಕಡಕೋಳ
ಶಿಕ್ಷಕರು,ಮಾರುತಿ ಬಡಾವಣೆ,‌ ಸಿಂದೋಗಿ ಕ್ರಾಸ್ ಮುನವಳ್ಳಿ-591117