ಹಿರಿಯರೂ ,   ಗೌರವಾನ್ವಿತರೂ   ಆದ ಸೌದತ್ತಿಯಡಾ.ವೈ.ಎಂ.ಯಾಕೊಳ್ಳಿಯವರು  ನನ್ನ ” ಅಮ್ಮನಿಗೊಂದು ಕವಿತೆ “ ಯ ಕುರಿತು ಹೀಗೆ ಬರೆದಿರುವರು, ಅವರ ಕಾವ್ಯ ಪ್ರೀತಿಗೆ ತಲೆದೂಗುವೆ ; ತಲೆಬಾಗುವೆ.       

ಕಡಮೆ ಕುಟುಂಬ ಕನ್ನಡ ಸಾಹಿತ್ಯಲೋಕ‌ ದಲ್ಲಿ ತುಂಬ ಪ್ರಸಿದ್ಧವಾದ ಹೆಸರು. ಕಥೆಗಾರ್ತಿ ಸುನಂದಾ ಪ್ರಕಾಶ ಕಡಮೆ, ಕವಯಿತ್ರಿ ಕಾವ್ಯಾ ಕಡಮೆ ,ಕವಿ ಪ್ರಕಾಶ ಕಡಮೆ ಹೀಗೆ ಇಡೀ ಕುಟುಂಬವೆ ಸಾಹಿತ್ಯಕ್ಕೆ ಅರ್ಪಿತವಾದದ್ದು. ಮನೆಯನ್ನೇ ಸಾಹಿತ್ಯ ಜಗಲಿಯನ್ನಾಗಿ ಮಾಡಿಕೊಂಡು ನಿರಂತರ ಸಾಹಿತ್ಯದ  ಚಟುವಟಿಕೆಗಳಲ್ಲಿ   ತೊಡಗಿ ಕೊಂಡಿರುವ ಅಪರೂಪದ ಕುಟುಂಬವದು.


ಹಿರಿಯರಾದ ಪ್ರಕಾಶ ಕಡಮೆಯವರ ಮೂರನೆಯ ಕವನ ಸಂಕಲನ  ‘ಅಮ್ಮನಿ ಗೊಂದು ಕವಿತೆ’.1987ರಲ್ಲಿ ಮೊದಲ ಕವನ ಸಂಕಲನ ‘ಗಾಣದೆತ್ತು ಮತ್ತು ತೆಂಗಿನಮರ’ ಎಂಬ ಕವನ ಸಂಕಲನ ಪ್ರಕಟಿಸಿದ್ದ   ಅವರು    1997 ರಲ್ಲಿ          ‘ಆ ಹುಡುಗಿ’ ಸಂಕಲನ ಪ್ರಕಟಿಸಿದರು.. ಇಪ್ಪತ್ತು ವರ್ಷಗಳ ನಂತರ (2017) ನಾಗಸುಧೆ ಪ್ರಕಾಶನದ ಮೂಲಕ ಮೂರನೆಯ ಕವನ ಸಂಕಲನ ‘ಅಮ್ಮನ ಕವಿತೆ ‘. ಸಂಕಲನ ಹೊರತಂದಿದ್ದಾರೆ.


ಈ  ಸಂಕಲನದಲ್ಲಿ  38 ಕವಿತೆಗಳಿದ್ದು ಮುನ್ನುಡಿ ಬರೆದ ಆರ್.ಜಿ.ಹಳ್ಳಿ ನಾಗರಾಜ  ರವರು ಗುರುತಿಸುವಂತೆಸಂಕಲನದುದ್ದಕ್ಕೂ ‘ಅಮ್ಮ , ಅಮ್ಮನ ಮೂಲಕ ಅಪ್ಪ , ಮನಃ ಸಾಕ್ಷಿಯಾದ ಬಾಳಸಂಗಾತಿ, ಮಕ್ಕಳ ಮುದ್ದು ಅಕ್ಷಿಯನ್ನು ತೆರೆದಿಟ್ಟ’   ಸಂಕಲನವಾಗಿದೆ .

ಕವಿ ಪ್ರಕಾಶರ ಕವಿತೆ ದೈನಂದಿನ ಬದುಕನ್ನು ನಂಬಿದ ಕವಿತೆ. ಅವರದು ದಿನನಿತ್ಯದ ಜಂಜಡಗಳಿಗೆ ಒತ್ತು ಕೊಡುವ ಕವಿತೆಯಾ ದರೂ ಅದು ವರ್ತಮಾನದ ಕಾಲದ ಅಗತ್ಯ ವಾದ  ಸಾಮಾಜಿಕ   ಚಿಂತನೆಯಿಂದಲೂ ದೂರ ಹೋಗುವದಿಲ್ಲ.ಮೊದಲ ಕವಿತೆಯೆ ಚಿಂದಿ ಆಯುವವರ ಬದುಕನ್ನು ಸಹಾನು ಭೂತಿಯಿಂದ ನೋಡುತ್ತದೆ.


ಚಿಂದಿಆಯುವ ಹೆಣ್ಣುಮಗಳು ಕಸದ ರಾಶಿಯ ನಡುವೆ ಸಿಗುವ   ವಸ್ತುವನ್ನೇ   ತುತ್ತು ಕೂಳಿನ ಕಾರಣಕ್ಕಾಗಿ ಎತ್ತಿಟ್ಟುಕೊಳ್ಳು ವುದನ್ನು:

ಹರಿದ ಚಪ್ಪಲಿ
ಬಿರಿದ ನಿರೋಧವೋ
ಬಾಚುವಳು ನಿಧಿ ಕಂಡಂತೆ ಅಕ್ಕರೆ
ತುಂಬುವಳು ಜೋಳಿಗೆ
ಒಂದ್ಹೊತ್ತಿನ ಕೂಳಿಗೆ

ಎಂದು ಚಿತ್ರಿಸುತ್ತಾರೆ.ಹಳ್ಳಿಯಿಂದ   ಬಂದ   ಪ್ರತಿಯೊಬ್ಬರಿಗೂ ಅದರಿಂದ ಎಷ್ಟೇ ದೂರ ಬಂದರೂ   ಹಳ್ಳಿಯ   ನೆನಪು   ಅನಂತ ಸಾಧ್ಯತೆಗಳ ಗಣಿ. ಹಳ್ಳಿಯಿಂದ ಬಹು ದೂರ ಬಂದಿರುವ ಕವಿಗೆ ಈಗ ಎಂದಾದರೊಮ್ಮೆ ಹಳ್ಳಿಯಿಂದ ಬರುವ ಚೀಲ ಹೊತ್ತು ತರುವ ವಸ್ತುಗಳಲ್ಲಿ ಹಿಂದಿನನೆನಪುಗಳು ನುಗ್ಗುತ್ತವೆ ಚೀಲ ತುಂಬಿ ಬಂದ ‘ಬೆರಕೆ ಬಸಳೆಯ ಕಟ್ಟು ಗದ್ದೆ, ಇಷಾಡದ ಮಾವು,  ಎಳೆ ಎಳೆ   ನುಗ್ಗೆ ಸೊಪ್ಪು ‘, ಇವುಗಳನ್ನೆಲ್ಲ  ಹೊರಗೆ  ತಗೆದ‌  ಮೇಲೂ ಖಾಲಿ ಚೀಲದ ತಳದೊಳಗೆ,

ಚೀಲ ಬರಿದಾದರೂ
ಕಾತರದಿ ಅರಸುತಿರುವೆ ತಳದಲ್ಲಿ
ಊರ ಗಾಳಿ ಬೆಳಕು
ಅಮ್ಮನ ನೋಟ, ಅಪ್ಪನ ಸ್ಥಿತ ಪ್ರಜ್ಞೆ

ಗಳನ್ನು ಹುಡುಕುತ್ತಾರೆ. ಪಟ್ಟಣದ ವೇಗ ದಲ್ಲಿ ಹಳ್ಳಿಯಿಂದ ಬಂದ ಚೀಲ ಕವಿಯ ಅಂತರಾತ್ಮದ ಬಿಸುಪನ್ನು ಬಡಿದೆಬ್ಬಿಸುವ‌ ದನ್ನು ನೆನಪಿಸುತ್ತಾರೆ.ಎಷ್ಟೇ ಮುಂದುವರೆ ದರೂ ನಮ್ಮಮೂಲತನವನ್ನುಬಿಡಬಾರದು ಎನ್ನುವದು ಕವಿಯ ಇರಾದೆ. ಅದನ್ನು ಅವರು ಸ್ಪಷ್ಟವಾಗಿ,

‘ಮಗುವಿನ ಹಾಗೆ ಮನಬಿಚ್ಚಿ               ನಗಬೇಕು,ಎಂತಲೂ ಹಾರಬೇಕು    ಹಕ್ಕಿಯಂತೆ, ಈಸಬೇಕು ಗರಿ ಬಿಚ್ಚಿ ಮೀನಿನ ಹಾಗೆ’

ಎಂದು ಹಂಬಲಿಸುವದರಲ್ಲಿ ಕಾಣಬಹುದು.

ಯಾವುದೇಕಾಲವಿರಬಹುದು ಅಮ್ಮಅಮ್ಮ  ನೇ. ಎಷ್ಟೇಕಾಲ ದಾಟಿದರೂಅಮ್ಮನ ಪ್ರೀತಿ ಬದಲಾಗಲಾರದು.ಮಕ್ಕಳು ಮುನಿಸಿ ಕೊಂಡು ಊಟಬಿಟ್ಟು ಮಲಗಿದಾಗ ಕವಿಯ ಹೆಂಡತಿ ಮಕ್ಕಳನ್ನು ಮುದ್ದು ಮಾಡಿ ಊಟ ಮಾಡಿಸುವದನ್ನು   ಕಂಡಾಗ   ಅವರಿಗೆ ಅವರಮ್ಮನೂ ತಾನು ಮಗುವಿದ್ದಾಗಊಟ ಬಿಟ್ಟು  ಮಲಗಿದ   ತನ್ನನ್ನು  ರಾತ್ರಿ  ಎಬ್ಬಿಸಿ ಉಣ್ಣಿಸಿದ್ದು ನೆನಪಾಗುತ್ತದೆ.


ಸಂಕಲನದ   ಮಹತ್ವಾಕಾಂಕ್ಷಿ     ಕವಿತೆಗಳ ಲ್ಲೊಂದು ‘ಬಸಲೆ ಬಳ್ಳಿ’ ತೆಂಗಿನ ಗಿಡವನ್ನು ತಬ್ಬಿ ನಿಂತ ಈ ಬಳ್ಳಿ ಎತ್ತರಕ್ಕೆ ಬೆಳೆದು ನಿಂತ ತೆಂಗಿನ ಮರಕ್ಕೆ

ಬೆಳೆದೆ ನೀ ಎತ್ತರಕೆ ತೆಂಗಿನ ಮರವಾಗಿ
ನಾ ಇದ್ದಲ್ಲೆ ಹರಡಿ ಬಸಲೆ ಚಪ್ಪರವಾದೆ
ಚಿಗುರಿ ಗರಿ ಬಿಚ್ಚಿ ಆಗಾಗ
ನನಗೆ ನೀನಾಗುವಾಸೆ

ಕೇಳಿಕೊಳ್ಳುವದನ್ನು ಗಮನಿಸಬಹುದಕವಿ ಸದಾ ಹಿಂದುಳಿದವರ ಪರ,  ಕೆಳಗಿನವರ ಪರವಾಗಿ ಚಿಂತನೆ ಮಾಡುತ್ತಾನೆ. ಅವರು ತುಂಬ ಚಿಕ್ಕ ಸಂಗತಿಗಳನ್ನು ಗಮನಿಸುತ್ತಾರೆ ಎಂಬುದಕ್ಕೆ‘ಸೀಟು ಸಿಕ್ಕ ಜನ’ಕವಿತೆಯನ್ನು ಗಮನಿಸಬಹುದು  ಕವಿತೆ  ಬರಿ   ಬಸ್ಸಿನಲ್ಲಿ ಸೀಟು ಸಿಗುವದರ ಬಗೆಗೆ ಮಾತನಾಡುತ್ತದೆ ಎನ್ನುವ ಹೊತ್ತಿಗೆ ,ಇನ್ನೂ ಗಂಭೀರವಾಗಿ

ಸೀಟು ಸಿಕ್ಕರೆಷ್ಟು ಬಿಟ್ಟರೆಷ್ಟು
ಅಲ್ಪ ಕಾಲದ ಸಹಪಯಣ
ಲೋಕ ಗೆಲ್ಲುವ ಗಡಿಬಿಡಿ
ಪರಸ್ಪರ ಹೊಂದಾಣಿಕೆಗೆ ನಿಲ್ಲುವ ಹೊತ್ತಿಗೆ ಜರ್ಜರಿತ ಆಯುಷ್ಯ

ಎಂದು ಕವಿತೆಯ ಜೊತೆ ಜೊತೆಗೆ ಬದುಕಿನ ಚಿಂತನೆಯನ್ನೂ ಮಾಡುತ್ತದೆ.


‘ಅಂಕೋಲೆ ಎಂದರೆ’ ಎನ್ನುವ ಕವಿತೆ ಕವಿಯ ಬಾಲ್ಯದ ನೆನಪನ್ನು ಬಿಡಿಸಿಡುತ್ತದೆ. ಕವಿಯ ಯೌವನ ಅರಳಿದ್ದು ಅಲ್ಲಿಯೇ. ಅದು   ಬದುಕು  ಮತ್ತು    ವಯಸ್ಸು     ಎರಡರ ದೃಷ್ಟಿಯಿಂದಲೂ ತಲ್ಲಣದ ಕಾಲ. ಅರೆಕಾಲಿ ನೌಕರಿ,  ಕಿಸೆಯಲ್ಲಿ‌    ಒಂದರ ನೋಟಿಗೂ ಬರ,  ಆದರೆ ಆ ಏನಿಲ್ಲದ ಬದುಕಿನಲ್ಲೂ   ಇದ್ದ ಸಂಭ್ರಮವನ್ನು, ಆ ಅಂಕೋಲೆಯಲ್ಲಿಯೇ

ಇಪ್ಪತ್ತರ ಹುಡುಗಿಯೊಟ್ಟಿಗೆ ಮೋಹ
ಮತ್ತು ಮದುವೆ

ಎನ್ನುತ್ತ,ಅಂಕೋಲೆಯೊಂದಿಗಿನ  ಬಿಡಲಾ   ಗದ ಸಂಬಂಧವನ್ನು:

ನನ್ನ ಬದುಕ ವಿಶ್ವ ವಿದ್ಯಾಲಯ ಅಂಕೊಲೆ
ನನಗೂ ಅದಕೂ ಬಿಡಿಸಲಾಗದ ಸಂಕೋಲೆ


ಎಂದು ಸರಳವಾಗಿ ಬಿಚ್ಚಿಡುತ್ತಾರೆ. ಕವಿಗೆ ಕಡಲಿಗೂ ತಮ್ಮ ಪ್ರೇಮಿಗೂ ಯಾವುದೇ ಅಂತರವಿಲ್ಲ.ಮೂರು ದಶಕದ ಸಂಬಂಧ ವನ್ನು ನಾನು ಮತ್ತು ಅವಳು ಕವಿತೆಯಲ್ಲಿ ಚಿತ್ರಿಸಿದ್ದಾರೆ:

           ಎಂದೆಂದೂ ಹಸನ್ಮುಖಿ
             ಕಚೇರಿಯ ಕಡತಗಳ
             ಪುಟಪುಟದಲ್ಲೂ
         ಕಂಡಿದ್ದೇನೆ ಇವಳದೇ ಕೆನ್ನೆ        

ಎಂದು ಚಿತ್ರಿಸುವಲ್ಲಿ ಕವಿತೆ ರಮ್ಯವಾಗುತ್ತದೆ

ಸಂಕಲನದ ‘ಕಾಡುವದು ಸದಾ ನನ್ನ’ ಎಂಬ   ಕವಿತೆ   ಬಡತನದ  ದುರಂತವನ್ನು ವಸ್ತುನಿಷ್ಠವಾಗಿ    ಬಿಡಿಸುವಲ್ಲಿ   ಯಶಸ್ವಿ ಯಾಗಿದೆ. ಬಹಳ  ‌‌ಚಿಕ್ಕದಾಗಿರುವ   ವಸ್ತು ಗಳನ್ನು  ಸಹ ಗಮನಿಸುತ್ತಾರೆ ಎನ್ನುವದಕ್ಕೆ ಸಂಕಲನದ   ಸ್ಮಾರ್ಟ್ಫೋನ್   ಮತ್ತು ಗೂಡಂಗಡಿ ಯಂತಹ    ಕವಿತೆಗಳನ್ನು ಗಮನಿಸಬಹುದು. ಇಂದಿನ ಯುಗಕ್ಕೆ ಸ್ಮಾರ್ಟ್ಫೋನ್ಎಷ್ಟುಮುಖ್ಯ ಎನ್ನುವುದನ್ನು  ಅವರು   ಚಿತ್ರಿಸುತ್ತ  ಸ್ಮಾರ್ಟ್‌  ಫೋನು ಏನೆಲ್ಲವೂ ಆಗಿದೆ ಎಂಬುದನ್ನು ವಿವರಿಸಿದೆ ‘ಗೂಡಂಗಡಿ’ ಎಂಬ ಕವಿತೆ:

‘ಗೂಡಂಗಡಿ ಅಂದರೆ ಸಮಾಜದ ಬ್ರಹ್ಮಾಂಡ
ಹೊಸ ಹೊಸ ಜಾಹಿರಾತಿನ ಭೂಖಂಡ’
ಎಂದು ಬರೆಯುತ್ತಾರೆ. 


ಈ   ಸಂಕಲನದ    ಶೀರ್ಷಿಕೆಯಾಗಿರುವ ಅಮ್ಮನಿಗೊಂದು   ಕವಿತೆ   ಈ  ಸಂಕಲನದ ಮುಖ್ಯ   ಕವಿತೆಗಳಲ್ಲಿ  ಒಂದು.   ಅಮ್ಮನ ಯೌವನ,ಮದುವೆಯಾದ ಮೇಲೆ  ಗಂಡನ  ಮನೆಯನ್ನು ಕಟ್ಟಿದರೀತಿಯನ್ನು,ಮಕ್ಕಳನ್ನ  ಬೆಳೆಸಿದ  ಹಂತಗಳನ್ನು ವಿವರವಾಗಿ  ರೇಖಿ  ಸಿದೆ.ಅಮ್ಮ ವರ್ಷಧಾರೆ. ಅವಳು   ತವರಿಗೆ ಹೋದರೆ ಸಾಕು, ಇಡೀ  ಮನೆ   ಅಸ್ತವ್ಯಸ್ತ ವಾಗುತ್ತದೆ ಅದನ್ನು ಕಂಡ ಅಪ್ಪ ದಿಕ್ಕುಗೆಟ್ಟು ತವರಿಗೆ ಹೋಗಿ   ಕಾರುಮಾಡಿ   ಕರೆತರುತ್ತಿ ದ್ದರು ಎಂದು ಕವಿತೆ ಸರಾಗವಾಗಿ ಚಿತ್ರಿಸಿದೆ. ಕನ್ನಡದಲ್ಲಿ ಅವ್ವನ ಕವಿತೆಗಳ ಸಾಲಿನಲ್ಲಿ  ಈ ಕವಿತೆಗೂ ಒಂದು ಸ್ಥಾನವಿದೆ.  ಇಂದು ಅಮ್ಮನಿಲ್ಲ,‌ ಆದರೆ ಅವಳು ಕಟ್ಟಿದ ಬದುಕು ಇದೆ ಎನ್ನುವದನ್ನು ಕವಿತೆಯ ಕೊನೆಯ ಸಾಲು:
“ಕ್ಷಮಿಸು ಅಮ್ಮಾ ನೀ ಕೊಟ್ಟ ಉಸಿರು ಇದು”
ಎನ್ನುವಲ್ಲಿ ಸಾಂದ್ರವಾಗಿ ತೋರಿದೆ.

ಕಡಮೆಯವರ ಕವಿತೆ ತುಂಬಸರಳವಾದದ್ದು ದೈನಂದಿನ  ಚಟುವಟಿಕೆಗಳನ್ನು   ಬದುಕಿನ ಸಣ್ಣಸಣ್ಣ ಸಂಗತಿಗಳನ್ನು ಕವಿತೆಯಾಗಿಸು ತ್ತಾರೆ.ಅವರ ಎಲ್ಲ ಕವಿತೆಗಳು ಶ್ರೇಷ್ಠ ಎಂದು ಯಾರೂ ಹೇಳಲಾರರು. ಆರ್. ಜಿ . ಹಳ್ಳಿ ನಾಗರಾಜರು ಹೇಳುವಂತೆ:
ಕಡಮೆಯವರ ಈ ಸಂಕಲನ ನಾಲ್ಕು ಕಾಲ ನೆನಪಲ್ಲಿರುವ ಕೆಲವಾದರೂ ಕವಿತೆಗಳನ್ನು ಒಳಗೊಂಡಿದೆ ಎನ್ನುವದೇ   ಈ  ಸಂಕಲನದ  ಶ್ರೇಷ್ಠತೆಯಾಗಿದೆ”
   ಎರಡು ದಶಕಗಳ ನಂತರ  ಉತ್ತಮವಾದ ಸಂಕಲನವನ್ನು   ಹೊರತಂದಿದ್ದಕ್ಕೆ    ಅವರನ್ನು   ಅಭಿನಂದಿಸುತ್ತೇನೆ.

                      ———–

    ಡಾ.ಯಾಕೊಳ್ಳಿ .ವೈ.ಎಂ. ಸವದತ್ತಿ

                       🔆🔆🔆
  ✍️ಪ್ರಕಾಶ ಕಡಮೆ,ನಾಗಸುಧೆ         ಹುಬ್ಬಳ್ಳಿ