ಅಶ್ವಮೇಧ ನೆತ್ತಿಯ ಮೇಲೆ ನಿನ್ನ ಕತ್ತಿಯ ನೆರಳು ಬಿಡಿಸಿಕೊಂಡಷ್ಟೂ ಬಿಗಿಯಪ್ಪುಗೆ ಹಾರುವ ಉಸಿರಿಗೆ ಆಸರೆಯಾಗದಕೊರಳು ವಿಲಾಸದ ರಂಗವಿದು ಮನಬಂದಂತೆ ಹೊರಳು ಚಿತೆಯ
ಬೆಂಕಿಯಿಂದೆದ್ದ ನಿನ್ನ ರೂಪ ರಕ್ಕಸನಿಗೂ ನಡುಕ ಇದೆಂತಹ ಶಾಪ ನೆಲಮುಗಿಲನೊಂದು ಮಾಡುವ ತಾಪ ಕರಗುತಿಹವಿಲ್ಲಿ ಬೆಂದ ಜೀವಗಳ ಆಲಾಪ
ಮಾತೆಲ್ಲವೂ ಮೌನ ಚಿತಾಗಾರದೊಳಗೆ ಚಟಪಟ ಸದ್ದಿನ ಓಡಾಟ ಬೆಂಕಿಯೊಳಗೆ ಲೀನವಾಯಿತಲ್ಲ ಕಣ್ಣೀರು ಅನಂತದೊಳಗೆ ಪ್ರಾಣವಿಹುದೇ ಕಳೆದುಕೊಂಡ ಬಂಧುಗಳೊಳಗೆ
ಬಲು ಭೀಕರ ಅಶ್ವಮೇಧದ ಯಾಗ ಅಲೆಕ್ಸಾಂಡರನಿಗಿಲ್ಲ ಜೊತೆಯಾಗುವ ಯೋಗ,
ತಡೆದು ನಿಲ್ಲಿಸುವರಿಲ್ಲ ನಿಲ್ಲಲೆಲ್ಲಿದೆ ಜಾಗ ಎಲ್ಲೆಲ್ಲೂ ಚರಮಗೀತೆಯದೊಂದೇ ರಾಗ
ಹಾರುತಿದೆ ಮೌಲ್ಯಗಳ ಹರಿದ ಅಂಗಿ ಬದಲಾಯಿತು ಮೆರೆದುಬಿಡುವ ಜಗದ ಭಂಗಿ
ಉಪದೇಶಗಳೀಗ ಅಡಗಿ ಹೋಗಿವೆ ತಂಗಿ ಸಹಿಸು ಸಂಪ್ರದಾಯದಂತೆ ಇದೆಲ್ಲವ ನುಂಗಿ
🔆🔆🔆
✍️ ಶ್ರೀಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸರಕಾರಿ ಪ್ರಥಮದರ್ಜೆ ಕಾಲೇಜು ಬೀಳಗಿ