ಗಲ್ಲಿ ಗಲ್ಲಿಯಲಿ ತಿರುಗುತೀವಿ ನಾವು
ನಮ್ಮ ನೋವು ಸಂಕಷ್ಟ ಬಲ್ಲಿರೇನು ನೀವು
ಬೆಳಗಿನಿಂದ ಸಂಜೆವರೆಗೆ ದುಡಿಯುತೀವಿ ನಾವು

ಆದರೂ ನಮ್ಮ ಕೈ ಖಾಲಿ ಖಾಲಿ ಬಲ್ಲಿರೇನು ನೀವು
ಎರಡ್ಹೊತ್ತು ಊಟಕ್ಕೆ ತಪನಪಡುತೀವಿ ನಾವು ಆದರೂ ನಮ್ಮ ಹೊಟ್ಟೆ ಖಾಲಿ ಖಾಲಿ ಬಲ್ಲಿರೇನು ನೀವು

ನಾವೂ ಓದಲಿಲ್ಲ ನಮ್ಮವರೂ ಓದಿರಲಿಲ್ಲ
ನಾವೀಗ ನಮ್ಮಕ್ಕಳ ಓದಿಸಲು ಹೋರಾಟ ನಡೆಸೀವಿ ನಾವು
ಆದರೂ ನಮ್ಮ ಕನಸು ನನಸಾಗದೆ ನಮ್ಮ ತಲೆ ಖಾಲಿ ಖಾಲಿ ಬಲ್ಲಿರೇನು ನೀವು

ಉದ್ಯೋಗ ಇದ್ದರೆ ಹೊಟ್ಟೆಗಿಷ್ಟು ಆಸರೆ ತಿಳಿದೀವಿ ನಾವು
ಕೂಲಿ ಮಾಡುವ ನಮಗೆ ಹೊಟ್ಟೆಯ ಉದ್ಯೋಗವೊಂದೆ ಖಾಯಮ್ಮು ಸೆರೆ ಬಲ್ಲಿರೇನು ನೀವು

ಆಟಕ್ಕುಂಟು ಲೆಕ್ಕಕ್ಕಿಲ್ಲ ‌ನಾವೆಂದರೆ ಬರಿ ನಾವೆ…! ಬಲ್ಲೆವು ನಾವು
ನಮ್ಮ ಹಸಿವೆ ಮೂಲ ಬಂಡವಾಳ
ನಮ್ಮನಾಳುವ ಮಾಲೀಕರಿಗೆ…ಬಲ್ಲಿರೇನು ನೀವು

ಎಚ್ಚರದ ದೀಪ ಹಚ್ಚಿ ಹೋದರು
ನಮ್ಮ ಮಹಾನ್ ಚೇತನ ಬಾಬಾ ಸಾಹೇಬ ಅಂಬೇಡ್ಕರರು….ಮರೆತಿಲ್ಲ ನಾವು

ಆದರೂ ನಮಗಿಲ್ಲಿ ಕತ್ತಲು ದಾರಿ ಕಂಗೆಡಿಸುತಿರುವುದಿನ್ನೂ ಯಾಕೋ? ಏನೋ?
ತಿಳಿಯದಂತಾಗಿದೆ ನಮಗಿನ್ನೂ….ಬಲ್ಲಿರೇನು ನೀವು

ಕಂಬಳಿ ಹೊದ್ದ ಜೀವ ಬೆಚ್ಚಗೂ ಇರಬಹುದು
ಕಿಚ್ಚೂ ಹಚ್ಚಬಹುದು…! ಬೆಂಕಿಯಷ್ಟೇ ಸತ್ಯ ತಿಳಿದಿದ್ದೇವೆ ನಾವು
ಈ ಚಿಂತನೆಯ ಸೂರ್ಯ ಮೂಡನೇಕೋ ಇನ್ನೂ?
ನಮ್ಮ ಬಾಳಲ್ಲಿ ಬಲ್ಲಿರೇನು ನೀವು

ಶತಮಾನಗಳು ಹಾಗೆಯೇ ಉರುಳಿಹೋಗುತ್ತಿವೆ…
ನಮ್ಮ ಅವಸ್ಥೆ ಮಾತ್ರ ಹಾಗೆಯೇ ಹದಗೆಡುತ್ತಿದೆ ಕೈಕಾಲು ಕತ್ತರಿಸಿಕೊಂಡು ನರಳುತಿದ್ದೇವೆ

ಅಕ್ಷರಶಃ ಅಸ್ಥಿಗೂಡಾಗುತ್ತಿದ್ದೇವೆ ನಾವುನಮ್ಮ ಗೂಡಿಗೆ ಜೀವ ನೀಡಿ ವಾಸಿ ಮಾಡಲು ಯಾರಾದರೂ ಮುಂದೆ ಬಂದಾರೆಂದು ಕೇಳುತ್ತಿರುವೆ ಬಲ್ಲಿರೇನು ನೀವು…..

‌‌‌🔆🔆🔆

✍️ವೇಣುಜಾಲಿಬೆಂಚಿ,ರಾಯಚೂರು.