‘ಗುರು’ ಎಂದರೆ ಯಾರು ಎಂಬ ಪ್ರಶ್ನೆಗೆ ಬುದ್ಧಿಗೆ ಹೊಳೆಯುವ ಸರಳವಾದ ಉತ್ತರವೆಂದರೆ ಮಗುವಾಗಿದ್ದಾಗ ಅಕ್ಷರ ತಿದ್ದಿಸಿ, ಬುದ್ಧಿ ಹೇಳುವ ತಂದೆ-ತಾಯಿ, ಶಾಲೆ-ಕಾಲೇಜುಗಳಲ್ಲಿ ವಿದ್ಯೆ ಹೇಳಿಕೊಡುವ ಶಿಕ್ಷಕರು ಮತ್ತು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳವ ಅವಕಾಶ ದೊರೆತಾಗ ಆ ವಿಷಯದಲ್ಲಿ ನಿಪುಣತೆಯನ್ನು ಹೊಂದಿದ ಮತ್ತು ಸರಿಯಾಗಿ ಮಾರ್ಗದರ್ಶನ ನೀಡುವ ವ್ಯಕ್ತಿ ಎಂಬುದು. ‘ಗುರು’ ಎಂಬ ಪದದ ಅರ್ಥವನ್ನು ವಿಸ್ತರಿಸಿ ತಿಳಿದಾಗ.

‘ಗುರು’ ಎಂದರೆ ಅಜ್ಞಾನದ ಅಂಧಕಾರ ದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊ ಯ್ಯುವ ಶಕ್ತಿ ಎಂಬ ಅರಿವುಮೂಡುತ್ತದೆ.

ಇದರೊಂದಿಗೆ ಮನೆಯಲ್ಲಿನ ತಂದೆ-ತಾಯಿ, ಶಾಲೆಯಲ್ಲಿನ ಶಿಕ್ಷಕರು, ಹೆಚ್ಚಿನ ಜ್ಞಾನವನ್ನು ಪಡೆಯಲು ಮಾರ್ಗದರ್ಶನ ನೀಡುವ ವ್ಯಕ್ತಿಗಳಲ್ಲದೇ ಬದುಕಿನಲ್ಲಿ ’ಗುರು’ವಾಗಿ ದಾರಿ ತೋರುವಲ್ಲಿ ಜೀವನಾನುಭವಗಳು ಮುಖ್ಯಪಾತ್ರ ವಹಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.


ನ್ಯೂ ಜೆರ್ಸಿಯ ಕನ್ನಡ ಕೂಟದ ವತಿಯಿಂದ ನಡೆಸಲಾಗುವ ’ಕನ್ನಡ’ ಶಾಲೆಯಲ್ಲಿ ನಮ್ಮ ಪುಟ್ಟ ಹಾಡೊಂದನ್ನು ಕಲಿತಿದ್ದ. ಆ ವರ್ಷ ಕನ್ನಡ ಕೂಟ ಏರ್ಪಡಿಸಿದ್ದ ‘ಮಕ್ಕಳೋತ್ಸವ’ ಕಾರ್ಯಕ್ರಮದಲ್ಲಿ ಕನ್ನಡ ಶಾಲೆಯ ಮಕ್ಕಳ ಸಮೂಹ ಗಾಯನವಿತ್ತು. ಆ ಹಾಡಿನ ಸಾಲುಗಳಿವು.


“ಕಲಿಸು ಗುರುವೆ ಕಲಿಸು, ಕಲಿಸು ಸದ್ಗುರುವೆ ನೀ ಕಲಿಸು|
ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು,
ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು,
ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು,
ಧರೆಯ ದುಷ್ಟರ ನಡುವೆ ಜಾಣನಾಗಲು ಕಲಿಸು ||”

ಹಾಡನ್ನು ರಾಗವಾಗಿ ಹಾಡಲು ಅಭ್ಯಾಸ ಮಾಡುತ್ತಿದ್ದ ಪುಟ್ಟನಿಗೆ ಪ್ರಶ್ನೆಯೊಂದನ್ನು ಕೇಳಿದೆ. “ಗುರು ಅಂದ್ರೆ ಯಾರೋ ಕಂದ?” ಎಂಬ ನನ್ನ ಪ್ರಶ್ನೆಗೆ “Teacher” ಎಂದು ಉತ್ತರ ಹೇಳಿದ ಪುಟ್ಟ. ಅಷ್ಟಕ್ಕೇ ಸುಮ್ಮನಾಗದ ನಾನು, “ಟೀಚರ್ ಅಂದ್ರೆ ಯಾರು?” ಅಂದಾಗ, “One who teaches,” ಎಂದ. ತನ್ನ ಮಾತು ಮುಂದುವರೆಸಿ, “ಒಂದ್ನಿಮಿಷ ಇರಮ್ಮ, ಗೂಗಲ್ ನಲ್ಲಿ ನೋಡಿ ಹೇಳ್ತೀನಿ” ಎನ್ನುತ್ತ ಕಂಪ್ಯೂಟರಿನ ಮುಂದೆ ಕುಳಿತುಕೊಂಡ ಪುಟ್ಟ, ಅಂತರ್ಜಾಲದ ’ಗೂಗಲ್’ ಪುಟದಲ್ಲಿ ’ಟೀಚರ್’ ಎಂಬ ಪದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕಿದ. “TEACHER ಅಂದ್ರೆ, MenTor, InspirE, EducAte, CoaCh, SHare, InfluEnce, EncouRage” ಎಂದು ಪುಟ್ಟ ಹುಡುಕಿದ ಮಾಹಿತಿಯಲ್ಲಿ ಟೀಚರ್ ಎನ್ನುವ ಪದವನ್ನು ಅನೇಕ ಗುಣ ವಿಶೇಷಕಗಳಿಂದ ವಿವರಿಸಲಾಗಿತ್ತು. ಇದು ನಾವೆಲ್ಲರೂ ಒಪ್ಪುವ ಮಾತೇ ಆಗಿದೆ. ನಮ್ಮ ಪುಟ್ಟ ಕಲಿತಿದ್ದ ಹಾಡಿನ ಈ ಸಾಲುಗಳು, ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ತಮ್ಮ ಮಗನ ಶಾಲೆಯ ಶಿಕ್ಷಕನಿಗೆ ಇಂಗ್ಲೀಷಿನಲ್ಲಿ ಬರೆದ ಪತ್ರದ ಕನ್ನಡಾನುವಾದಿತ ಸಾಲುಗಳು ಎನ್ನುವ ಒಂದು ಮಾಹಿತಿಯಿದೆ. ಅಲ್ಲದೇ ಅಬ್ರಹಾಂ ಲಿಂಕನ್ ಈ ಪತ್ರವನ್ನು ಬರೆದಿಲ್ಲ ಎನ್ನುವ ಮಾಹಿತಿಯೂ ಇದೆ.


ಅಬ್ರಹಾಂಲಿಂಕನ್ ಅಸೋಸಿಯೇಶನ್   ಪ್ರಕಟಿಸಿದ ‘ಫಾರ್ ದ ಪೀಪಲ್’ ಎನ್ನುವ ನ್ಯೂಸ್ ಲೆಟರಿನಲ್ಲಿದ್ದ ಈ ಮಾಹಿತಿಯನ್ನು ನಾನು ಗೂಗಲಿನಿಂದ ಪಡೆದಿದ್ದೆ. ಯಾರ ಲೇಖನಿಯಿಂದ ಮೂಡಿದ ಪದಗಳಿವು ಎನ್ನುವುದಕ್ಕಿಂತ, ಹಾಡಿನ ಪ್ರತಿಸಾಲುಗಳು ಎಷ್ಟು ಅರ್ಥಗರ್ಭಿತವಾಗಿವೆ ಎನ್ನುವುದು ಮುಖ್ಯವೆನಿಸಿಕೊಳ್ಳುತ್ತದಲ್ಲವೇ? ಈ ಅರ್ಥಪೂರ್ಣ ಗೀತೆಯನ್ನು ನಾನೂ ಹಾಡಿಕೊಳ್ಳಲು ಪ್ರಾರಂಭಿಸಿದ್ದೆ. ಮತ್ತೆ-ಮತ್ತೆ ಹಾಡಿಕೊಂಡಂತೆಲ್ಲ, ಜೀವನದ ಅನುಭವಗಳಿಂದ ಬರೆದ ಸಾಲುಗಳಿವು, ಅಲ್ಲಿನ ಪದಗಳನ್ನು ಸುಲಭವಾಗಿ ಓದಿಕೊಂಡು, ಇಂಪಾಗಿ ಹಾಡಿಕೊಂಡು ಹೋಗಬಹುದು, ಆದರೆ ಅವುಗಳನ್ನು ಅಂತರಾಳಕ್ಕೆ ಇಳಿಸಿಕೊಂಡು, ನಮ್ಮ ಅನುಭವಗಳಿಗೆ ಒರೆಹಚ್ಚಿ ನೋಡಿದಾಗಲೇ ತಿಳಿವು ಮೂಡುತ್ತದೆ ಎಂದು ಅನಿಸಿತ್ತು.


ವ್ಯಕ್ತಿಯೊಬ್ಬನ ಬದುಕಿನಲ್ಲಿ ಅವನ ಜೀವನಾನುಭವಗಳೇ ಗುರುವಾಗಿ, ಬದುಕಿಗೆ ದಾರಿ ತೋರುವ ದೀಪವಾಗುತ್ತವೆ ಎನ್ನುವ ಮಾತಿಗೆ ಡಿ.ವಿ.ಜಿ.ಯವರ ಕಗ್ಗವೊಂದರ ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿವೆ ಎಂದು ಯಾವಾಗಲೂ ಅಂದುಕೊಳ್ಳುತ್ತೇನೆ.

ಅನುಭವದ ಪಾಲೊಳು ವಿಚಾರ ಮಂಥನವಾಗೆ | ಜನಿಯಿಕುಂ ಜ್ಞಾನನವನೀತವದೆ ಸುಖದಿಂ ||
ಗಿಣಿಯೋದು ಪುಸ್ತಕ ಜ್ಞಾನ ; ನಿನ್ನನುಭವವೆ | ನಿನಗೆ ಧರುಮದ ದೀಪ – ಮಂಕುತಿಮ್ಮ ||”

“ಗಿಣಿಯೋದು ಪುಸ್ತಕ ಜ್ಞಾನ, ನಿನ್ನನುಭವವೆ ನಿನಗೆ ಧರುಮದ ದೀಪ”


ಎನ್ನುವ ಮಾತು ನನ್ನ ಕಾಲೇಜು ದಿನಗಳ ಲ್ಲಾದ ಪ್ರಸಂಗವೊಂದನ್ನು ನೆನಪಿಸುತ್ತದೆ. ಪದವಿ ತರಗತಿಯ ಪಠ್ಯಕ್ರಮದಲ್ಲಿ ನಮಗೆ ಸಸ್ಯಶಾಸ್ತ್ರ ಒಂದು ವಿಷಯವಾಗಿತ್ತು. ಪ್ರಯೋಗ ತರಗತಿಯಲ್ಲಿ ವಿದ್ಯಾರ್ಥಿಗಳು ಬಗೆ ಬಗೆಯ  ಸಸ್ಯಗಳ   ಸೂಕ್ಷ್ಮವಾದ ತಳಿರುಗಳನ್ನು- ಮೊಗ್ಗುಗಳನ್ನು ಪರೀಕ್ಷಿಸಿ, ಗುಣಧರ್ಮಗಳನ್ನು ವಿವರಿಸಿ, ಮೂಲ ಸಸ್ಯದ ವೈಜ್ಞಾನಿಕ  ಹೆಸರನ್ನು ಕಂಡು ಹಿಡಿ ಯುವುದು   ಸಸ್ಯಶಾಸ್ತ್ರದಲ್ಲಿನ   ಒಂದು ಕಲಿಕಾ  ಪದ್ಧತಿ.  ನಮ್ಮ  ಅಧ್ಯಾಪಕರು ಹತ್ತಿರದ ಕಾಡುಗಳಿಂದ ಸಸ್ಯಗಳ ಮಾದರಿ ಗಳನ್ನು  ಸಂಗ್ರಹಿಸಿ   ಪ್ರಯೋಗಾಲಯದಲ್ಲಿ ಉಪಯೋಗಿಸುತ್ತಿದ್ದರು. ಕೆಲವೊಮ್ಮೆ ನಮ್ಮ ಅಕ್ಕಪಕ್ಕದ ಪರಿಸರದ ಸಸ್ಯಗಳನ್ನೇ ಕೊಟ್ಟು, ನಮ್ಮ ಜಾಣ್ಮೆಯನ್ನು ಪರೀಕ್ಷಿಸಿ ನೋಡುವುದಿತ್ತು. ಹೀಗೆ ಒಮ್ಮೆ ಪ್ರಯೋಗಾ ಲಯದಲ್ಲಿ ಕೊಟ್ಟ ಸಸ್ಯದ ಮಾದರಿಯನ್ನು ನಾವೆಲ್ಲ ವಿದ್ಯಾರ್ಥಿಗಳು ಪರೀಕ್ಷಿಸಿ, ಗುಣ ಧರ್ಮಗಳನ್ನು ಬರೆದು, ಮಾದರಿಯನ್ನು ಗುರುತಿಸಿ, ಅದರ ವೈಜ್ಞಾನಿಕ ಹೆಸರನ್ನು ಪತ್ತೆಹಚ್ಚುವುದರಲ್ಲಿ ಅಸಮರ್ಥರಾದೆವು. ನಾವು ಓದುತ್ತಿದ್ದ ಸಸ್ಯಶಾಸ್ತ್ರದ ಪುಸ್ತಕಗಳ ಜ್ಞಾನವನ್ನೆಲ್ಲ ಸುರಿದರೂ ಆ ಸಸ್ಯವನ್ನು ಗುರುತಿಸಲಾಗಲಿಲ್ಲ.


ಅಧ್ಯಾಪಕರ ಸಹಾಯ ಕೇಳಿದಾಗ,    “ಅಷ್ಟೂ ಗೊತ್ತಾಗಲಿಲ್ಲವೇನ್ರೀ, ಅದರ ಹೆಸರು  Spondias  mombin    ಅಂದರೆ    ಅಮಟೆಕಾಯಿ ಗಿಡ”  ಎಂದು ನಕ್ಕುಬಿಟ್ಟಾಗ ಮುಖ ಸಪ್ಪಗೆ ಮಾಡಿಕೊಂಡಿ ದ್ದೆವು. ತರಗತಿಯ ನಂತರ ಸಸ್ಯದ ಮಾದರಿ ಯನ್ನು ಕೈಯಲ್ಲಿ ಹಿಡಿದು (ನಮ್ಮ ಸಂಗ್ರಹ ಣೆಗೆ ಸೇರಿಸಲು), ಗೆಳತಿಯ ಮನೆಯತ್ತ ನಡೆದಿದ್ದೆವು. ಬಾಗಿಲಲ್ಲೆ ನಮ್ಮನ್ನು ಸ್ವಾಗತಿ ಸಿದ ಗೆಳತಿಯ ತಾಯಿ ನಮ್ಮ ಕೈಲಿದ್ದಸಸ್ಯದ ತುಂಡನ್ನು ನೋಡಿ, “ಏನು ಇವತ್ತು ಕ್ಲಾಸಿ ನಲ್ಲಿ’ಅಮಟೆಕಾಯಿ’ ಗಿಡ ಕೊಟ್ಟಿದ್ದಾರೆ” ಎಂದಾಗ ಮತ್ತೊಮ್ಮೆ ಪೆಚ್ಚಾಗಿದ್ದೆವು. ನಮ್ಮ ಪುಸ್ತಕಜ್ಞಾನದ ಮುಂದೆ ಗೃಹಿಣಿಯ ಅನು ಭವದ ಜ್ಞಾನ ಮೇಲುಗೈ ಸಾಧಿಸಿತ್ತು! ಜೀವನದಲ್ಲಾಗುವ ಹಲವಾರು ಅನುಭವ ಗಳು ಪುಸ್ತಕದ ಜ್ಞಾನವೆನ್ನುವುದು ಬರೀ ಗಿಳಿಪಾಠ, ಜೀವನಾನುಭವವೇ ಗುರು ಎನ್ನುವ  ಮಾತನ್ನು   ಒಪ್ಪಿಕೊಳ್ಳುವಂತೆ ಮಾಡುತ್ತವೆ.

“ಅನುಭವದ ಪರಿ ನೂರ್ವರಿಗೆ ನೂರು, ನೂರು ಪರಿ | ದಿನವೊಂದರೊಳೆ ಅದೊಬ್ಬಂಗೆ ನೂರುಪರಿ”

ಎನ್ನುವ  ಸಾಲುಗಳಂತೆ   ಜೀವನಾನುಭವ ಗಳೂ ನೂರಾರು.   ಜೀವನದಲ್ಲಿ    ಸತ್ಯ- ಅಸತ್ಯ,   ಧರ್ಮ-ಅಧರ್ಮ,   ನ್ಯಾಯ- ಅನ್ಯಾಯ,   ಸರಿ-ತಪ್ಪುಗಳನ್ನು   ತೂಗಿಸಿ ನೋಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳು ವಲ್ಲಿ, ಬದುಕಿನ ಸಿಹಿ-ಕಹಿಗಳ ಅರಿವನ್ನು ಮೂಡಿಸುವಲ್ಲಿ   ಸಹಾಯಕ್ಕೆ   ಬರುವ ಹಲವಾರು ಅನುಭವಗಳು ನಮಗೆ ಗುರು ವಾಗಿ ಮಾರ್ಗದರ್ಶನ ಮಾಡುತ್ತವೆ.


ಇಂದಿನ   ದಿನಗಳಲ್ಲಿ    ಅಂತರ್ಜಾಲ- ಸಾಮಾಜಿಕ ಮಾಧ್ಯಮಗಳಲ್ಲಿ ಅದೆಷ್ಟೋ ಲೆಕ್ಕವಿಡಲಿಕ್ಕಾಗದಷ್ಟು ಮಾಹಿತಿ ದೊರೆಯು ತ್ತಿದೆ.  ಹಾಗೆ ಪಡೆದ ಒಳ್ಳೆಯ,   ಉತ್ಕೃಷ್ಟ ವಾದ   ಮಾಹಿತಿಗಳನ್ನು  ಮನನ ಮಾಡಿ ಕೊಳ್ಳುವ ಪ್ರಯತ್ನ ಪಡದೇ, ಅವುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೇಲಿ ಬಿಡುವುದೇ ಬಹುತೇಕರ ರೂಢಿಯಾಗಿದೆ. ಇದರೊಂದಿಗೆ ಹಿರಿಯರು, ಅನುಭವಿಗಳು ಏನೇ   ಹೇಳ ಹೊರಟರೂ   ಅದನ್ನು  ಒಪ್ಪಿ ಕೊಳ್ಳದೇ ಅಂತರ್ಜಾಲವನ್ನೇ ಗುರುವೆಂದು ತಿಳಿಯುವ   ಮತ್ತು   ಅಲ್ಲಿಂದ   ಪಡೆದ ಅರೆಬರೆ ಮಾಹಿತಿ ಯನ್ನೇ ಜ್ಞಾನವೆಂದು ಕೊಂಡವರ ಸಂಖ್ಯೆಯೂ ಹೆಚ್ಚಾಗಿದೆ.


ಹಲವಾರು   ಬಾರಿ  ಇಂತಹ   ಗೂಗಲ್ ಜ್ಞಾನಿಗಳು, ಅನುಭವ ಜ್ಞಾನಿ ಗಳೊಂದಿಗೆ ವಾದಕ್ಕಿಳಿಯುವುದೂ ಕಂಡು ಬರುತ್ತದೆ. ಇವರಿಬ್ಬರ ನಡುವಿನ ಮಾತಿನ ಘರ್ಷಣೆ ಕಂಡಾಗಲೆಲ್ಲ,

“ಅರೆಕೊಡದ ಬುಡುಬುಡಿಕೆ, ಅಲ್ಪತೆಯ ಮೆರವಣಿಗೆ, ತಥ್ಯವಿಲ್ಲದ ಹೊಟ್ಟು ತೂರುತಿಹರು”

ಎನ್ನುವ ಕವಿಯ ಮಾತುಗಳು ಗೂಗಲ್ ಜ್ಞಾನಿಗಳಿಗೆ ಹೇಳಿಮಾಡಿಸಿದಂತಿವೆ ಎನಿಸು ತ್ತದೆ. ನಾವು ಪಡೆಯುವ ಯಾವುದೇ ಮಾಹಿತಿಯನ್ನು ಜ್ಞಾನವೆಂದುಕೊಂಡರೆ,

“ಜೀವನಾನುಭವವೆಂಬ ಹಾಲಿನಲ್ಲಿ ವಿಚಾರಗಳ ಮಂಥನವಾದಾಗಲೇ ಜ್ಞಾನವೆಂಬ ಬೆಣ್ಣೆ ಉತ್ಪತ್ತಿಯಾಗುತ್ತದೆ”

ಎನ್ನುವ   ಹಿರಿಯರ    ಮಾರ್ಗದರ್ಶನದ ಪಾಡೇನು?  ಮಕ್ಕಳೋತ್ಸವದ   ಕಾರ್ಯಕ್ರ ಮಕ್ಕೆ ಪುಟ್ಟನ ಹಾಡಿನ ತಯಾರಿ ಭರದಿಂದ ಸಾಗಿತ್ತು. ತಾಯ್ನಾಡಿನಿಂದ ದೂರವಿದ್ದರೂ, ಕನ್ನಡ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ಕನ್ನಡ   ಓದಲು-ಬರೆಯಲು   ಕಲಿತಿರುವ ಪುಟ್ಟ,  ಹಾಡನ್ನು   ಕನ್ನಡದಲ್ಲೇ   ಬರೆದು ಕೊಂಡು ಹಾಡಿಕೊಳ್ಳುತ್ತಿದ್ದ.

“ಜಗವೆಲ್ಲ ಒಂದಾಗಿ ಜರಿದರೂ ಸರಿಯೇ, ನನ್ನನ್ನೇ ನಾ ನಂಬುವ ಬಗೆ ನೀ ಕಲಿಸು,
ಅಳುವಿನಲಿ ಅವಮಾನ ಇಲ್ಲೆಂಬುದ ಕಲಿಸು, ನನ್ನನೇ ನಾ ನೋಡಿ ನಗುವುದನು ಕಲಿಸು,
ಮಾನವೀಯತೆಯಲಿ ನಾ ಮರುಗುವು ದನು ಕಲಿಸು, ಮಾನವೀಯತೆಯಲಿ ನಾ ಕರಗುವುದನು ಕಲಿಸು,
ಜಾಣನಾಗಲು ಕಲಿಸು, ಕಲಿಸು ಗುರುವೇ ಕಲಿಸು….”

ಈಸಾಲುಗಳು ಪುಟ್ಟನಿಗೆ ಅರ್ಥವಾಗದೇ      ಇದ್ದರೂ, ಹಾಡನ್ನು ಕೇಳಿಸಿಕೊಳ್ಳುತ್ತಿದ್ದ, ಪುಟ್ಟನೊಂದಿಗೆ ಧ್ವನಿ ಸೇರಿಸಿ ಹಾಡುತ್ತಿದ್ದ ನನಗೆ,  ಬದುಕಿನ. ಪಯಣದಲ್ಲಿ  ನಮಗಾ ಗುವ ಅನುಭವಗಳನ್ನು ಈ ಸಾಲುಗಳಿಗೆ ಹೋಲಿಸಿ ನೋಡುವಂತಾಗಿತ್ತು. ಅಂತರಾಳ ಕ್ಕಿಳಿಯುವ ಜೀವನಾನುಭವಗಳು ನಮ್ಮ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ  ಇಂತಹ ಸಂದರ್ಭಗಳಲ್ಲಿ ನಮ್ಮ ಅಂತರಾತ್ಮ ವೇ ಗುರುವಾಗಿ     ದಾರಿ      ತೋರಿಸುತ್ತದೆ ಎನಿಸಿತ್ತು.


“ನೀವು ನಿಮ್ಮೊಳಗಿನಿಂದಲೇ ಬೆಳೆಯಬೇಕು. ಯಾರೂ ನಿಮಗೆ ಕಲಿಸಲಾರರು, ನಿಮ್ಮಾತ್ಮವೇ ನಿಮ್ಮ ಗುರು”

ಎನ್ನುವ   ಸ್ವಾಮಿ ವಿವೇಕಾನಂದರ   ಮಾತು ಗಳಲ್ಲಿನ  ಅರ್ಥವನ್ನು ಮತ್ತೊಮ್ಮೆ ಕಂಡು ಕೊಂಡಿದ್ದೆ.   ಬದಲಾದ   ಕಾಲದಲ್ಲಿ   ಬರೀ ಮಾಹಿತಿಯನ್ನಷ್ಟೇ ನೀಡುವ ಅಂತರ್ಜಾಲದ  ಪುಟಗಳೇ    ‘ಗುರು’   ವಿನಂತಾಗಿರುವುದು, ನಿಜವಾದ’ಗುರು’ವಿನ ಬಗ್ಗೆ ಅರಿತುಕೊಳ್ಳುವ ಅರಿವನ್ನೂ ಕಡಿಮೆಯಾಗಿಸಿವೆಯಲ್ಲವೇ?ಎಂದು  ಪ್ರಶ್ನಿಸಿಕೊಳ್ಳುವಂತಾಗಿತ್ತು. ಹಿರಿಯರು, ಅನುಭವಿಗಳು ಏನೇ ಹೇಳ ಹೊರಟರೂ   ಅದನ್ನು   ಒಪ್ಪಿಕೊಳ್ಳದೇ ಅಂತರ್ಜಾಲವನ್ನು ಜಾಲಾಡುವವರಲ್ಲಿ ತಾನೂ ಒಬ್ಬನಾಗಿ, ಕಂಪ್ಯೂಟರಿನ ಮುಂದೆ ಕುಳಿತು ಮಾಹಿತಿ ಕಲೆಹಾಕುವ ನಮ್ಮ ಪುಟ್ಟನಿಗೆ ನಾನು ಹೇಳುವ ಮಾತಿದು:
“ಗುರು ಎಂದರೆ ಗೂಗಲ್ ಅಲ್ಲ ಕಂದ”!

              🔆🔆🔆                    
✍️ ಸರಿತಾ ನೂಲಿ. ನ್ಯೂಜರ್ಸಿ,ಅಮೇರಿಕ