ದ್ವೇಷಿಸುವವರು ರಾಜ್ಯವನು ಕಟ್ಟಬಹುದು, ಕವಿತೆಯನ್ನಲ್ಲ
ಆಳುವವರು ಗೋಡೆಗಳ ಸೃಷ್ಟಿಸಬಹುದು, ಕವಿತೆಯನ್ನಲ್ಲ

ಯಾರ ಹಂಗಿನಲಿ ಇಲ್ಲ ಶಬ್ದಗಳು ಯಾರ ಮುಲಾಜಿನಲೂ
ನೀ ನನ್ನ ಅಸಹಾಯಕನಾಗಿಸಬಹುದು, ಕವಿತೆಯನ್ನಲ್ಲ

ಹೆದರಿಸಿ ಬೆದರಿಸಿ ಗದರಿಸಿ ಬಾಯಿ ಮುಚ್ಚಿಸಬಲ್ಲಿರಿ ನೀವು
ದರ್ಪದಿಂದ ನನ್ನನು ದಬಾಯಿಸಬಹುದು, ಕವಿತೆಯನ್ನಲ್ಲ

ನೀನು ಇಡೀ ಮುಗಿಲಿನ ಮೇಲೂ ಸಾಧಿಸಬಲ್ಲೆ ವರ್ಚಸ್ಸು
ಕಣ್ಣಿಗೆ ಕಾಣುವಷ್ಟು ನೆಲ ಗೆಲ್ಲಬಹುದು, ಕವಿತೆಯನ್ನಲ್ಲ

ಉಪಕಾರದಡಿ ಸಿಲುಕಿಲ್ಲ ನನ್ನ ಕಾವ್ಯ ಕೃಪೆಗೆ ಮಣಿದಿಲ್ಲ
ಬೇಕಿದ್ದರೆ ನೀ ನನ್ನ ಬಾಗಿಸಬಹುದು, ಕವಿತೆಯನ್ನಲ್ಲ

ಅನುಭಾವದ ಅಭೇದ್ಯ ತಳಹದಿಯಿದೆ ನನ್ನ ಅಕ್ಷರಗಳಿಗೆ
ನೀನು ಕೋಟೆ ಕೊತ್ತಲಗಳ ಕೆಡುಹಬಹುದು, ಕವಿತೆಯನ್ನಲ್ಲ

ಬಿದ್ದುಹೋಗಲು ನನ್ನ ಗಜಲ್ ಉರುಳು ಬೊಂಬೆಯಲ್ಲ ಸೋದರ
ನೀನು ನೂರು ತಲೆಗಳನು ಉರುಳಿಸಬಹುದು, ಕವಿತೆಯನ್ನಲ್ಲ

ಯಾರೂ ಯಾರನೂ ನೆನಪಿಡುವುದಿಲ್ಲ ಕೊನೆವರೆಗೆ ‘ಅಲ್ಲಮ’
ಹೌದು, ಅವಳೂ ಎಲ್ಲವನು ಮರೆಯಬಹುದು, ಕವಿತೆಯನ್ನಲ್ಲ

               🔆🔆🔆

✍️ಗಿರೀಶ್ ಜಕಾಪೂರ, ಸೊಲ್ಲಾಪೂರ