ಕನ್ನಡದ ಪ್ರಪ್ರಥಮ ಮಹಿಳಾ ಕವಿಯತ್ರಿ
ಸ್ವಾಭಿಮಾನದ ಪ್ರತೀಕವಾದ ಅಸ್ಮಿತೆ ಈ ಸ್ತ್ರೀ
ಮಹಿಳಾ ಚಳವಳಿಯ ಶಕ್ತಿ ಸತ್ವ ಪ್ರತಿಪಾದಕಿ
ಚೆನ್ನಮಲ್ಲಿಕಾರ್ಜುನನ ನಿಜವಾದ ಸೇವಕಿ

ನಿರ್ಮಲ ಶೆಟ್ಟಿ ಸುಮತಿಯರ ಸುಪುತ್ರಿ
ಉಡುತಡಿಯ ಕ್ಷೇತ್ರದ ಮುದ್ದು ಕುವರಿ
ವಿಧಿಲಿಖಿತದಂತೆ ಎದುರಿಸಿದಳು ಮದುವೆ ಸವಾಲನ್ನು
ರಾಜ ಕೌಶಿಕನ ವಿವಾಹವಾಗಿ ಅರಮನೆ ವಾಸವನ್ನು.

ಲೌಕಿಕದ ಜಂಜಾಟವನ್ನೆಲ್ಲಾ ಬಿಟ್ಟುಕೊಟ್ಟು
ವಿರಕ್ತ ಭಾವನೆಯಲ್ಲಿ ತೊರೆದು ಅಧಿಕಾರ ಸಂಪತ್ತು
ಅರಸೊತ್ತಿಗೆಯ ಪೀಠದಿಂದಿಳಿದು ಜನಸಾಮಾನ್ಯಳಾಗಿ
ಅನುಭಾವಿಯಾಗಲು ಮುನ್ನಡೆದಳು ಕೇಶಾಂಬರಿಯಾಗಿ

ಮರೆವಿನಿಂದಲ್ಲದೆ ಅರಿವಿನಿಂದ ಅಕ್ಕನಿಂದೆನಿಸಿದ ನಿಧಿ ರಚನೆಯಾಯ್ತು ವಚನಗಳ ಜೊತೆಗೆ ಯೋಗಾಂಗ ತ್ರಿವಿಧಿ ಅನುಭವ ಮಂಟಪದಲ್ಲಿ ಸ್ವಾಗತದ ಸಂಭಾಷಣೆ
ವೇದಾಂತದನುಭಾವದ ಉತ್ತುಂಗದ ಋಷಿವಾಣಿಯೇ

ಒಲಿದಳಿವಳು ರೂಹಿಲ್ಲದ ಸಾವಿಲ್ಲದ ಚೆಲುವನನ್ನು
ಸ್ತುತಿ ನಿಂದೆಗಳ ಸಮನಾಗಿ ಕಾಣಬೇಕೆಂಬ ಭಾವವನ್ನು
ತನ್ನ ಕರಸ್ಥಳದಲ್ಲಿ ನಿಲ್ಲೆಂದು ಆಹ್ವಾನಿಸಿದಳು ಶಿವನನ್ನು
ಭವ ಬಂಧನ ಬಿಡಿಸಿ ತೋರೆಂದು ಪರಮ ಸುಖವನ್ನು

ಭಕ್ತಿ ಫಲ ಪಕ್ವವಾಗಿ ದೇಹದ ಸಿಪ್ಪೆಯೊಳಗಿರುವಂತೆ
ಹೆಪ್ಪಿಟ್ಟ ಹಾಲು ಗಟ್ಟಿಯಾಗಿ ತುಪ್ಪವಾಗಿ ಸಿಹಿಯಾದಂತೆ
ಕರಗದ ಕತ್ತಲೆಯ ಬೆಳಕನ್ನುಟ್ಟು ಗೆಲ್ಲಿದವಳು
ವೈರಾಗ್ಯ ನಿಧಿಯಾಗಿ ಶರಣ ಸಾಹಿತ್ಯದ ಮುತ್ತಾದವಳು

ಕಲ್ಯಾಣದ ಕ್ರಾಂತಿಯಲ್ಲಿ ತೊಡಗಿಸಿಕೊಂಡ ಹರಿಕಾರ್ತಿ
ಹರಿಹರರ ಮಹಾದೇವಿಯಕ್ಕ ರಗಳೆಯಲಿ ಜೀವನಭಿತ್ತಿ
ಸಾಹಿತ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ವಚನಕಾರ್ತಿ
ಶ್ರೀಶೈಲದ ಕದಳಿ ವನದಲ್ಲಿ ಲಿಂಗೈಕ್ಯಳಾದ
ಕರ್ಪೂರದಾರತಿ

           🔆🔆🔆

✍️ಸುಜಾತ ರವೀಶ್, ಮೈಸೂರು