ಮೋಡದ ಅಂಚಿಗೆ
ಭಾರದ ಸಂಚಿಗೆ
ಕರುಣೆಯ ಮಿಂಚು
ಮೈದಳೆಯಿತು ಭುವಿಯೊಡಲು.

ಗಗನದಿ ಬಾನ್ಸುರಿ
ಆವಿಯ ತಣಿಸಿ
ಹದಗೊಂಡಿತು ಹನಿ
ಇಳೆಗೆ ಸಂತೈಸುವ ಸ್ಪರ್ಶದಿ.

ತುಂಬಿತು ಭಾವದ ಕಡಲು
ಹಚ್ಚ ಹಸಿರಿನ ಘಮಲು
ಎದೆಯ ಸವರಿದೆ ತಂಗಾಳಿ
ಕನಸು ಮನಸಿನ ಓಕಳಿ.

ಮೈದಡವಿ ನಿಂತಿದೆ ಹೂವು
ಮುದ ನೀಡುವ ತೇವವು
ಸೃಷ್ಟಿಯ ಮಹಿಮೆಯ ಠಾವು
ತೊಟ್ಟಿಕ್ಕಿದೆ ಕರುಣೆಯ ಛಾಯೆ.

ಜಿನುಗುವ ಬಯಕೆ
ಬನವೆಲ್ಲ ರಾಶಿಯ ಕಳೆ
ಮಳೆರಾಯನ ಆಲಿಂಗನಕೆ
ಹರಿಸಿದೆ ರೈತನ ಹರ್ಷದ ಹೊಳೆ.

ಕಪ್ಪೆಯ ಕರೆಯ ಸದ್ದಿಗೆ
ಬಿರಿದ ನೆಲದ ನೋವಿಗೆ
ಹಸಿವಿನ ತಾಪಕೆ
ಭರವಸೆಯ ಹೊನಲಿನ ದೀವಿಗೆ.

     🔆🔆🔆             

✍️ರೇಷ್ಮಾ ಕಂದಕೂರ, ಸಿಂಧನೂರ