ಕಣ್ಣಿನಲ್ಲಿ ಕಣ್ಣು ಬೆರೆಸಿ
ನೋಡಬೇಡ ಮಾಧವಾ
ನಾ ತಲೆಯೆತ್ತಿ ನಿನ್ನನು
ನೋಡಲಾರೆ ಇನಿಯಾ.!
ನೋಟದಲ್ಲಿ ನೋಟವಿರಿಸಿ
ಕಾಡಬೇಡವೋ ಕೇಶವಾ
ನಾ ನಿಂತಲ್ಲೇ ನಾಚಿಕೆಯಲಿ
ನೀರಾದೇನೋ ಪ್ರಿಯಾ.!
ಮುಗ್ದಸ್ನಿಗ್ದ ನಗೆಯ ಹರಿಸಿ
ಸೆಳೆಯಬೇಡ ಯಾದವಾ
ನಾ ಕುಳಿತಲ್ಲೆ ಲಜ್ಜೆಯಲಿ
ಕರಗಿಬಿಟ್ಟೇನೋ ಇನಿಯಾ.!
ಕರದಲಿ ಕರವ ಜೋಡಿಸಿ
ಮೀಟಬೇಡ ವಾಸುದೇವ
ನಾ ನಿನ್ನೊಳಗೆ ಕ್ಷಣದಲ್ಲೇ
ಕಳೆದುಹೋದೇನು ಪ್ರಿಯಾ.!
ಅನುರಾಗನುಡಿಯ ಸ್ಫುರಿಸಿ
ಕುಣಿಸಬೇಡವೋ ಕೇಶವಾ
ನಾ ನಿನ್ನಯ ಒಲವಿನಲಿ
ತೇಲಿಹೋದೇನು ಇನಿಯಾ.!
ಉಸಿರಿಗೆ ಉಸಿರ ಬೆರೆಸಿ
ಮೈಮರೆಸಬೇಡ ಮಾಧವಾ
ನಾ ಭವ ತೊರೆದು ನಿನ್ನಲಿ
ಲೀನಳಾದೇನೋ ಪ್ರಿಯಾ.!
ಜೀವ ಭಾವ ಸಮೀಕರಿಸಿ
ವಿವಶವಾಗಿಸಬೇಡ ವಾಸುದೇವ
ನಾ ಆತ್ಮಸಮರ್ಪಣೆಯಲಿ ನಿನ್ನಲೇ
ಐಕ್ಯಳಾಗಿ ಏಕಳಾದೇನೋ ದೇವ.!
🔆🔆🔆
✍️ ಎ.ಎನ್.ರಮೇಶ್. ಗುಬ್ಬಿ.