ಹಬ್ಬ ಹರಿದಿನಗಳ ಸಂಭ್ರಮದಲಿ
ತೆಲಾಡುತಿರುವ ಮುಗ್ದ ಜನರ ನಡುವೆ
ತನ್ನದೇ ವಕ್ರದೃಷ್ಟಿಯ ಬೀರಿ
ಎಲ್ಲಿಂದಲೋ ದೂರದೂರಿನಿಂದ
ಧುತ್ತೆಂದು ಎದೆಯುಬ್ಬಿಸಿ ಬಂತೊಂದು ಕ್ರಿಮಿ…

ಜಾತಿ ಮತ ಪಂಥಗಳಿಂದ ಮೇಲೆದ್ದ
ಕೆಲ ಕೀಳು ರಾಜಕಾರಣಿಗಳ ಮಧ್ಯದಲ್ಲಿ
ಬಡವ ಬಲ್ಲಿದನೇಂಬ ಭೆದ-ಭಾವ ತೋರದೆ
ತನ್ನದೇ ಛಾಪು ಮೂಡಿಸಲು
ಧುತ್ತೆಂದು ಎದೆಯುಬ್ಬಿಸಿ ಬಂತೊಂದು ಕ್ರಿಮಿ…

ಹಸಿವು ದಾಹ ತೀರಿಸಲು ದುಡಿವ ಕೈಗಳಿಗೆ
ಒಂದು ಅಗುಳಿಗೂ ಬೇಡುವ ಸ್ಥಿತಿಯ ತಂದೊಡ್ಡಿ
ತನ್ನವರಿಗೂ- ತನ್ನೂರಿಗೂ ಬೇಡವಾಗಿಸಿ
ಇನ್ನೊಬ್ಬರಲಿ ಬೇಡುವ ಹಾಗೆ ಮಾಡಿಸಿ
ಧುತ್ತೆಂದು ಎದೆಯುಬ್ಬಿಸಿ ಬಂತೊಂದು ಕ್ರಿಮಿ…

ಉಸಿರನೆಳೆದರೆ ಜೀವ ಉಳಿವುದೆಂಬ
ಭ್ರಮೆಯಲಿದ್ದ ನಮ್ಮೆಲ್ಲರ
ಮೋರೆಗೆ ಮುಸುಕು ಹಾಕಿಸಿ
ಇವರು ನಮ್ಮವರೇ? ಎಂಬ ಪ್ರಶ್ನೆಯ ಮೂಡಿಸಿ
ಧುತ್ತೆಂದು ಎದೆಯುಬ್ಬಿಸಿ ಬಂತೊಂದು ಕ್ರಿಮಿ…

ನಾನು-ನನ್ನದು ಎಂಬುವ‌ ಸ್ವಾರ್ಥಿಗಳಲ್ಲಿ
ನನ್ನೆದುರು ಎಲ್ಲರು ಒಂದೇ ಎಂಬ ಭಾವ ಮೂಡಿಸಿ
ಹೊಲಸು ರಾಜಕೀಯದ ಗೋಳಿಗೆ ಹೋಗದೆ
ದಾನ- ಧರ್ಮವ ಮಾಡೆಂದು ಸಾರಿ ಸಾರಿ ಹೇಳಲು
ಧುತ್ತೆಂದು ಎದೆಯುಬ್ಬಿಸಿ ಬಂತೊಂದು ಕ್ರಿಮಿ…

🔆🔆🔆

✍️ ರೋಶನ್ ಜಮೀರ್. ನ. ಶಿರಗುಪ್ಪಿ

ಹುಬ್ಬಳ್ಳಿ