ಒಣಗಿದ ಹೆಗಲಿಗೆ ಜೋಳಿಗೆ ಹಿಡಿದು ಹೊರಟಿರುವೆ ನನಗೊಂದಿಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ
ಅಲ್ಲಿ ನನ್ನ ಮಕ್ಕಳು ಹಸಿವಿನಾರ್ಭಟಕೆ ತತ್ತರಿಸಿದ್ದಾರೆ ಒಂದಿಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ

ಎಷ್ಟೋ ವರುಷಗಳಿಂದ ಯುದ್ಧ ಮಾಡುತ್ತ ಬಂದಿರುವೆ ಅವರ ಹಸಿವಿಗಾಗಿ ಕನಸಿಗಾಗಿ
ಹಸಿವಿನ ಬಾಧೆ ಜೋಳಿಗೆಯ ತೇಪೆ ಮುಚ್ಚಲಾಗಲಿಲ್ಲ ಹಸಿವಿಂಗುವಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ

ಹೋರಾಟಗಳ ಮಾಡಿ ಮಾಡಿ ಸುಸ್ತೂ ಆಗಿದ್ದೇವೆ ನಾನು ಮತ್ತು ನನ್ನ ಮಕ್ಕಳು ಬಿಡುವಿಲ್ಲದೆ ದುಡಿದರೂ
ಹೊಟ್ಟೆ ತುಂಬಿಸುವ ಮೋಜು ಜೂಜಾಟವಾಡುತಿದೆ ದಯಮಾಡಿ ಕೇಳಿದಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ

ನಮ್ಮ ಬೆನ್ನಿಗೆ ನಾವು ಅಂಟಿ ಹೋಗಿದ್ದೇವೆ ಮತ್ತೆ ಕಿತ್ತಿ ಬರಬೇಕೆಂದರೆ ಬೆನ್ನು ನಮ್ಮ ಹಸಿವು ಕಿತ್ತಿದಂತೆ
ಅದು ಆಗದ ಮಾತು ಅದಕ್ಕೆ ಲೆಕ್ಕವಿಡಲಾಗದ ಹಸಿವಿಗೆ ಲೆಕ್ಕವಿಲ್ಲದಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ

ಆ ದೂರದ ಆಕಾಶದಷ್ಟೇ ನಮ್ಮ ಆಸೆಗಳೂ ಮತ್ತು ನಮ್ಮ ಬದುಕೂ ಆಗಿಹೋಗಿದೆ ಇನ್ನೆಲ್ಲಿದೆ ಭರವಸೆ
ಬಂಡೇಳದೆ ದಿವಾಳಿಯೇಳುವುದೊಂದೇ ಆಗಿಬಿಟ್ಟಿದೆ “ಜಾಲಿ” ಮರಳಿಬರದಷ್ಟು ವಿಷದ ಬಾಟಲಿಗಳು ದಾನವಾಗಿ ನೀಡಿ

               🔆🔆🔆

✍️ ವೇಣು ಜಾಲಿಬೆಂಚಿ, ರಾಯಚೂರು.