ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯರು ಈ ಹಿಂದೆ ‘ಹೊಸತು’ ಪತ್ರಿಕೆಯಲ್ಲಿ ಸುನಂದಾಳಬರೀ ಎರಡು ರೆಕ್ಕೆ’ ಕೃತಿಯ ಕುರಿತು ಬರೆದ ಸುದೀರ್ಘ ವಿಮರ್ಶೆ ಇಲ್ಲಿದೆ.. ನಂತರದ ದಿನಗಳಲ್ಲಿ ಇದೇ ಕಾದಂಬರಿ, ಅಲ್ಲೇ ಎಂ.ಎ.ಮೊದಲವರ್ಷಕೆ ಪಠ್ಯಪುಸ್ತಕ ವಾದುದು ಡಾ. ಉಪಾಧ್ಯ ಅವರ ಕನ್ನಡ ಪ್ರೀತಿಗೆ ಕೈಗನ್ನಡಿಯಾಗಿದೆ. ಸರ್ ಖುಷಿಯ ಧನ್ಯವಾದಗಳು.

ಬದಲಾವಣೆಯ ದಿಕ್ಸೂಚಿ – ಬರೀ ಎರಡು ರೆಕ್ಕೆ -ಡಾ. ಜಿ.ಎನ್ ಉಪಾಧ್ಯ.

ಬರೀ ಎರಡು ರೆಕ್ಕೆ’ ಸುನಂದಾ ಕಡಮೆಯವರ ಚೊಚ್ಚಲ ಕಾದಂಬರಿ. ಕವಿ, ಕತೆಗಾರರಾಗಿ, ಅಂಕಣಕಾರ್ತಿಯಾಗಿ ಸಾಕಷ್ಟು ಹೆಸರು ಮಾಡಿರುವ ಸುನಂದಾ, ಉತ್ತರಕನ್ನಡ ಜಿಲ್ಲೆಯ ಗ್ರಾಮೀಣ ಪರಿಸರದ ಎಲ್ಲ ಸ್ತರದ ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿ ದಾಖಲಿಸುವ ಗಂಭೀರ ಯತ್ನದಲ್ಲಿ ಯಶಸ್ವಿಯಾಗಿರು ವುದು ಉಲ್ಲೇಖನೀಯ ಅಂಶ. ತಮ್ಮ ಕೃತಿ ಗಳಲ್ಲಿ ಸಮಕಾಲೀನ ಜೀವನವನ್ನು ಚಿತ್ರಿ ಸುವುದರ ಜೊತೆಗೆ ನಮ್ಮ ಕಣ್ಣು ತೆರೆಸುವ ಕೆಲವು ಸತ್ಯಗಳನ್ನು ಹೇಳುವ ಪ್ರಯತ್ನ ವನ್ನು ಅವರು ಮಾಡುತ್ತಾ ಬಂದಿದ್ದಾರೆ. ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಆರೋಗ್ಯಪೂರ್ಣ ಸಂದೇಶವನ್ನು ನೀಡುವ, ಹಾಗೆಯೇ ಮಹಿಳಾ ಚಿಂತನೆಗೆ ಹೊಸ ಆಯಾಮವನ್ನು ನೀಡುವ ನಿಟ್ಟಿನಿಂದಲೂ ಪ್ರಸ್ತುತ ಕಾದಂಬರಿ ನಮಗೆ ಮುಖ್ಯವಾಗು ತ್ತದೆ. ಸಾಹಿತ್ಯಕ್ಕೆ ಸಾಮಾಜಿಕಜವಾಬ್ಧಾರಿಯ ಪ್ರಜ್ಞೆ ಹಾಗೂ ಬದ್ಧತೆಗಳಿರಬೇಕೆಂಬ ಆಶಯ ಈ ಕೃತಿಯಲ್ಲಿ ಎದ್ದು ಕಾಣುತ್ತದೆ. ಮನುಷ್ಯ ಸಂಬಂಧದ ವಿವಿಧ ಮುಖಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿ ಒಂದು ಉತ್ತಮ ಪ್ರಾದೇಶಿಕ ಕಾದಂಬರಿಯಾಗಿಯೂ ನಮ್ಮ ಗಮನ ಸೆಳೆಯುತ್ತದೆ. ಇದೊಂದು ಸಾಮಾಜಿಕ ಕಾದಂಬರಿ. ಜನಸಾಮಾನ್ಯರ ದಿನನಿತ್ಯದ ಬದುಕಿನೊಳಗೂ ಸತ್ಯಗಳನ್ನು ಅಲ್ಲಿನ ಬಹುಸೂಕ್ಷ್ಮಗಳನ್ನು ತೆರೆದು ತೋರು ವಲ್ಲಿ ಈ ಕಾದಂಬರಿ ಯಶಸ್ವಿಯಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬ ವ್ಯವಸ್ಥೆಯ ವಿಶೇಷವಾದ ಆದ್ಯತೆಯನ್ನು ನೀಡಲಾಗಿದೆ. ಈ ಕೌಟುಂಬಿಕ ಆವರಣದ ಒಳಗೇ ಮಹಿಳೆಯರು ತಮ್ಮ ಅಸ್ಥಿತ್ವಕ್ಕಾಗಿ ನಡೆಸುವ ಹೋರಾಟ ಈ ಕಾದಂಬರಿಯಲ್ಲಿ ಸಶಕ್ತವಾಗಿ ಪಡಿಮೂಡಿದೆ.ಈ ಕಾದಂಬರಿ ಯ ಉದ್ದೇಶ ಕೇವಲ ಕತೆಯನ್ನು ಹೇಳುವು ದಕ್ಕಷ್ಟೇ ಸೀಮಿತವಾಗಿಲ್ಲ.ಮೇಲು ನೋಟಕ್ಕೆ ಇದು ಕಳಸದ ಗುಡ್ಡೆಯ ಬಾಯಕ್ಕಳ (ಗಂಗಬಾಯಕ್ಕ) ಪರಿವಾರದ ಕತೆಯಾಗಿ ಕಂಡರೂ ಈ ಕುಟುಂಬದಲ್ಲಿ ಚಾಕರಿ ಮಾಡಿ ಕೊಂಡು ಬಂದಿರುವ ಸಣ್ಣಿ (ಸಣ್ಣಮ್ಮ)ಯ ಸಾಹಸದ ಕತೆಯನ್ನೂ ಹೇಳುತ್ತದೆ. ಪ್ರಸ್ತುತ ಗ್ರಾಮೀಣ ಪರಿಸರ ನಿಂತ ನೀರಲ್ಲ. ಬದಲಾ ಗುತ್ತಿರುವ ನೆಲೆ ಯಾಗಿದೆ. ಅಂಕೋಲೆ ಪೇಟೆಯ ಆಸುಪಾಸಿನ ಕಳಸದ ಗುಡ್ಡೆ, ಸುಂಕಸಾಳೆ, ಮಾಸ್ತಿಕಟ್ಟೆ, ಅಜ್ಜಿಕಟ್ಟೆ, ಕೊಪ್ಪ ಮೊದಲಾಗಿ ಸುತ್ತ ಮುತ್ತ ನೆಲೆ ನಿಂತ ಜನಸಾಮಾನ್ಯರ ತಳಮಳ , ಸಂವೇದನೆ, ಸಂಘರ್ಷಗಳನ್ನು ಈ ಕಾದಂಬರಿಯಲ್ಲಿ ಬಹು ಹೃದ್ಯವಾಗಿ ಕಟ್ಟಿಕೊಡಲಾಗಿದೆ.

ಕಳಸದ ಗುಡ್ಡೆಯ ಬಾಯಕ್ಕಳ ಗಂಡ ತೀರಿಹೋಗಿ ಹದಿನೆಂಟು ವರ್ಷವಾಗಿದೆ. ಬಾಯಕ್ಕಳಿಗೆ ಇಬ್ಬರುಮಕ್ಕಳು.ದೊಡವಳು ಸರೋಜಿನಿ, ಹೈಸ್ಕೂಲು ಶಿಕ್ಷಕಿಯಾಗಿ ಸವಣೂರಿನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಆಕೆಯ ತಮ್ಮ ದಿಗಂಬರ. ಅಪ್ಪನ ಆಸ್ತಿ ಯನ್ನು ನೋಡಿಕೊಂಡು ಕಳಸದ ಗುಡ್ಡೆ ಯಲ್ಲಿ ಅಂಗಡಿಯೊಂದನ್ನಿಟ್ಟುಕೊಂಡು ತಾಯಿಯ ಆರೈಕೆಯ ಜವಾಬ್ದಾರಿ ಹೊತ್ತು ಊರಲ್ಲಿ ನೆಲೆಸಿದ್ದಾನೆ. ಸರೋಜಿನಿಗೆ ಇನ್ನೂ ಮದುವೆಯಾಗಿಲ್ಲ. ಏನೇನೋ ಕಾರಣ ಹೇಳಿ ಬಂದ ಸಂಬಂಧಗಳನ್ನೆಲ್ಲ ತಿರಸ್ಕರಿ ಸುತ್ತಾ ಬಂದ ಆಕೆ ಈಗ ನಲವತ್ತರ ಸನಿಹ ದಲ್ಲಿದ್ದಾಳೆ. ಅಕ್ಕನ ಮದುವೆಯಾಗದೇ ತಾನು ಮದುವೆಯಾಗುವುದಿಲ್ಲ ಎಂದು ಕುಳಿತ ದಿಗಂಬರನಿಗೂ ಮೂವತ್ತಾರರ ಹರೆಯ. ದಿಗಂಬರನ ಸೋದರಮಾವ ಮಧುಕರ ಅಂಕೋಲೆಯಲ್ಲಿ ಜವಳಿ ಅಂಗಡಿ ಇಟ್ಟುಕೊಂಡಿದ್ದ, ಮಧುಕರ ತನ್ನ ಸೋದರಳಿಯ ದಿಗಂಬರನಿಗೆ ಮದುವೆ ಮಾಡಿಸಲು ಮಾಸ್ತಿಕಟ್ಟೆಯ ನೀಲಕಂಠ ಶೆಟ್ಟಿಯ ಮಗಳು ಅರುಂಧತಿಯ ಜಾತಕ ತೆಗೆದುಕೊಂಡು ತನ್ನ ಅಕ್ಕ ಬಾಯಕ್ಕಳ ಮನೆಗೆ ಬರುವ ಸನ್ನಿವೇಶದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಮಧುಕರ ತಂದ ಸಂಬಂಧ ಒಪ್ಪಿಗೆಯಾಗಿ ಈಗ ಮದುವೆಯ ಸಂಭ್ರಮ.

‘ಪ್ರತೀ ವರ್ಷದ ಬೇಸಿಗೆಯಲ್ಲೂ ಮನೆಯಲ್ಲೊಂದು ಮಂಗಲಕಾರ್ಯದ ಕನಸು ಕಾಣುತ್ತ ಸುಮ್ಮನೇ ಇದ್ದ ಬಾಯಕ್ಕನಿಗೆ ಇದ್ದಕ್ಕಿದ್ದಂತೆ ಎದುರಾದುದು ಮಗ ದಿಗಂಬರನ ಆಷಾಡ ಮಾಸದ ಅವಸರದ ಮದುವೆ’ ಕಾದಂಬರಿಯ ಮೊದಲರ್ಧ ಮದುವೆಯ ಕುರಿತಾದ ವರ್ಣನೆಯನ್ನು ಒಳಗೊಂಡಿದೆ.

ಬಾಯಕ್ಕಳ ಮನೆಯ ಮದುವೆಯ ಸಂಭ್ರಮ ಬಹಳ ದಿನ ಉಳಿಯಲಿಲ್ಲ, ಚಿಕ್ಕ ಪುಟ್ಟ ವಿಷಯಗಳಿಗೆ ಕಲಹಗಳು ಏಳ ತೊಡಗಿದವು. ಸೊಸೆ ಅರುಂಧತಿಗೂ ಅತ್ತೆಯ ಬಗೆಗೆ ಬೇಸರ ಮೂಡಿ ಮಾತು ಮಾತಿಗೆ ಜಗಳ ಮಾಮೂಲಾಯಿತು. ಈ ನಡುವೆ ಗರ್ಭಿಣಿಯಾದ ಅರುಂಧತಿಗೆ ಮಾತು ಬಿದ್ದು ಹೋಗಿ ಮೂಕಿಯಾಗಿ ಬಿಡುತ್ತಾಳೆ. ಹೆರಿಗೆಯ ಅನಂತರ ಆಕೆ ಮೊದಲಿನಂತಾಗುತ್ತಾಳೆ. ಈ ಮಧ್ಯೆ ಸರೋಜಿನಿಯು ತೆಗೆದುಕೊಂಡ ನಿರ್ಧಾರ ದಿಂದ ಬಾಯಕ್ಕನಿಗೆ ವಿಪರೀತ ಕೋಪ ಬರುತ್ತದೆ. ಸರೋಜಿನಿ ಮದುವೆ ಯಾಗದೇ ಹೆಣ್ಣುಮಗುವೊಂದನ್ನು ದತ್ತು ತೆಗೆದು ಕೊಂಡದ್ದು ಆಕೆಗೆ ಸರಿಬರಲಿಲ್ಲ. ಇದರಿಂದ ಬಾಯಕ್ಕ ಮಾನಸಿಕ ತೋಲನ ಕಳೆದು ಕೊಂಡು ಹುಚ್ಚಿಯಂತಾಗುತ್ತಾಳೆ. ‘ಬಾಯಕ್ಕನಿಗೆ ಎಷ್ಟೋ ವರ್ಷಗಳಿಂದ ಒಳಗೆಲ್ಲೋ ಅಡಗಿಕೊಂಡಿದ್ದ ಮಗಳ ಮೇಲಿನ ಸಂಶಯವೊಂದು ತಟ್ಟನೆ ಹೊರ ಬಂದು ಕಾಡಲಾರಂಭಿಸಿತು.ಎಷ್ಟುಯೋಚನೆ ಮಾಡಿದರೂ ಆ ವಿಷಯವನ್ನು ಅರಗಿಸಿ ಕೊಳ್ಳಲು ಸಾಧ್ಯವಾಗದೇ ಇದ್ದಲ್ಲೇ ಸಣ್ಣದಾ ಗುತ್ತ ಸಾಗಿದ್ದಳು. ಹೇಗೆ ಬೆಳೆದು ದೊಡ್ಡವ ಳಾದಳೆಂದೇ ತಿಳಿಯಲಿಲ್ಲ, ತನ್ನದೇ ಹಟ. ತಾನು ಹಾಕಿಕೊಂಡ ಹಾದಿಯಲ್ಲೇ ಹೋದಳು. ಎಂದು ಬಾಯಕ್ಕ ಮಗಳ ವಿಷಯವನ್ನು ವಿಪರೀತ ಹಚ್ಚಿಕೊಂಡು ಕೊರಗುತ್ತಾಳೆ. ಮೊಮ್ಮಗು ಮನೆಗೆ ಬಂದರೂ ಸಂಭ್ರಮ ಪಡುವ ಸ್ಥಿತಿಯಲ್ಲಿ ಅವಳಿಲ್ಲ. ನಡು ಹರೆಯದಲ್ಲೇ ಗಂಡನನ್ನು ಕಳೆದುಕೊಂಡ ಬಾಯಕ್ಕ ಬದುಕಿನಲ್ಲಿ ಸುಖ ಕಂಡವಳಲ್ಲ. ದಿಗಂಬರನ ಮದುವೆಯ ಅನಂತರ ಮನೆಯಲ್ಲಿ ಶಾಂತಿ ನೆಮ್ಮದಿ ಕಾಣೆಯಾಗುತ್ತದೆ. ಹೊಸಕಾಲಮಾನದಲ್ಲಿ ತಾಳ್ಮೆ ಸಹಕಾರ ಮಾನವೀಯ ಮೌಲ್ಯಗಳು ಕಾಣೆಯಾಗುತ್ತಿರುವ ಬಗೆಗೆಇಲ್ಲಿವಿಷಾದವೂ ವ್ಯಕ್ತವಾಗಿದೆ.

ಬಾಯಕ್ಕಳ ಮನೆಯ ಕೆಲಸದಾಳು ಸಣ್ಣಿಯ ಸಂಸಾರದ ಕತೆಯೂ ಈ ಕಾದಂಬರಿಯಲ್ಲಿ ಬಹಳ ಮಹತ್ವ ಪಡೆದು ಕೊಂಡಿದೆ. ಸ್ವಾಭಿಮಾನದಿಂದ ಸಂಪೂರ್ಣ ವಾಗಿ ಸ್ಫುಟವಾಗಿ ಎದಗದು ನಿಲ್ಲುವ ಜೀವ ಸಣ್ಣಿಯದು. ಕಳಸದ ಗುಡ್ಡೆಯ ಒಕ್ಕಲ ಕೊಪ್ಪದಲ್ಲಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಗಂಡ ದೇವು ಹಾಗೂ ಮಗ ಮಾದೇವನೊಂದಿಗೆ ನೆಲೆಸಿರುವ ಆಕೆ ಅವಿ ದ್ಯಾವಂತೆ. ಮುಗ್ಧಳೂ ಅಕ್ಷರ ವಂಚಿತಳೂ ಆಗಿರುವ ಸಣ್ಣಿಯದು ಕ್ರಿಯಾಶೀಲ ವ್ಯಕ್ತಿತ್ವ. ತಕ್ಕಮಟ್ಟಿನ ಲೋಕಾ ನುಭವ ಹೊಂದಿರುವ ಆಕೆ ಕ್ರಾಂತಿ ಕಾರಿ ಮಹಿಳೆಯೂ ಆಗಿದ್ದಾಳೆ. ಸಣ್ಣಿ ಶ್ರಮ ಜೀವಿ. ‘ಒಂದೇ ಅಂಗಣವಿದ್ದ ಕೆಂಪು ಮಣ್ಣಿನ ಗಚ್ಚಿನ ಗೋಡೆಯ ಒಣ ಹುಲ್ಲು ಹೊದೆಸಿದ ಸಣ್ಣ ಹಟ್ಟಿ’ ಗಂಡ ದೇವು ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುತ್ತಾನೆ. ಹೀಗಿರುವಾಗ ಊರಲ್ಲಿ ಸಾರಾಯಿ ಅಂಗಡಿ ಶುರುವಾಗಿ ಒಕ್ಕಲ ಕೊಪ್ಪದ ಗಂಡಸರೆಲ್ಲ ಕುಡಿತದ ಚಟಕ್ಕೆ ಬಲಿಯಾಗಿ ಹೆಂಗಸರೆಲ್ಲ ನಾನಾ ತರದ ತೊಂದರೆಗಳನ್ನು ಎದುರಿಸಬೇಕಾಗು ತ್ತದೆ. ದೇವು ದಿನಾ ಕುಡಿದು ಬಂದು ನಿಶೆ ಯಲ್ಲಿ ಹೆಂಡತಿ ಸಣ್ಣಿಯನ್ನು ಬೈದು ಥಳಿಸು ವುದು ಮಾಮೂಲಿ ಸಂಗತಿಯಾಗಿತ್ತು.

ಹೀಗಿರುವಾಗ ನೋವುಂಡ ಸಣ್ಣಿ ಒಂದು ದಿನ ಇದಕ್ಕೆಲ್ಲ ಕಾರಣ ಊರಲ್ಲಿ ತಲೆಯೆತ್ತಿ ನಿಂತ ಸಾರಾಯಿ ಅಂಗಡಿ ಎಂಬುದನ್ನು ಕಂಡುಕೊಂಡು ಪಚ್ಚನ ಅಂಗಡಿಯ ಮೇಲೆ ದಾಳಿ ಮಾಡಿ ಅಲ್ಲಿನ ಸಾರಾಯಿಯನ್ನು ಚೆಲ್ಲಿ ಪ್ರತಿಭಟಿಸುತ್ತಾಳೆ. ಸಣ್ಣಿ ಸುತ್ತಲಿನ ಅಮಾಯಕ ಬಡ ಮಹಿಳೆಯರ ಮೇಲಾಗು ತ್ತಿರುವ ದೌರ್ಜನ್ಯವನ್ನು ಕಂಡು ಸೆಟೆದು ನಿಲ್ಲುತ್ತಾಳೆ. ಅಲ್ಲಿನ ಮಹಿಳೆಯರನ್ನು ಜಾಗೃತಗೊಳಿಸುವ ಹೊಣೆಗಾರಿಕೆ ಯನ್ನು ನಿಭಾಯಿಸುತ್ತಾಳೆ.ಸಣ್ಣಿ ಹೋರಾಟವನ್ನು ಮುನ್ನಡೆಸುವ ಮಾರ್ಗದರ್ಶಿಯೂ ಆಗು ತ್ತಾಳೆ.

ಸಾಮಾನ್ಯ ಮಹಿಳೆ ಸಣ್ಣಿ ಹುಟ್ಟುಹಾಕಿದ ವೈಯಕ್ತಿಕ ನೆಲೆಯಪ್ರತಿಭಟನೆ ಸಾಮೂಹಿಕ ಸ್ವರೂಪ ಪಡೆದು ಹೋರಾಟವಾಗಿ ರೂಪು ಗೊಳ್ಳುತ್ತದೆ. ‘ಆ ಹಾಳ ಸರಾಯಿ ಅಂಗ್ಡಿ ಬಂದ ಮ್ಯಾನೇ ಕೊಪ್ಪದ ಎಲ್ಲಾ ಹಟ್ಟೀ ಮಾನಾ ಮರ್ವಾದೇನೂ ಬೀದಿ ಪಾಲಾಯ್ತು’ ಎಂಬುದನ್ನು ಕಂಡುಕೊಂಡ ಸಣ್ಣಿ ಕೊಪ್ಪದ ಬಹುಪಾಲು ಹೆಂಗಸರನ್ನು ಸೇರಿಸಿ ಹೋರಾಟಕ್ಕೆ ಸಿದ್ಧವಾಗುತ್ತಾಳೆ. ಸಣ್ಣಿಯ ಈ ಘನ ಕಾರ್ಯಕ್ಕೆ ಸಾಯಿತ್ರಿ ಲಕ್ಷ್ಮೀ ಗಿರಿಜೆ ಪಾರತಿ ನಾಗಿ ರಾಕಮ್ಮ ದೇವಕಿ ಉತ್ತರೆ ಗುಲಾಬಿ ಜಟ್ಟಮ್ಮ ಮಂಕಾಳಿ ತುಳಸಿ ಮೊದಲಾದವರ ದಂಡೇ ಒಂದಾಗಿ ಉಪಾಯದಿಂದ ಸಾರಾಯಿ ಅಂಗಡಿಯಲ್ಲಿ ಕಳ್ಳಬಟ್ಟಿ ಮಾರಾಟ ಮಾಡಲಾಗುತ್ತಿದೆಯೆಂದು ದೂರು ನೀಡಿ ಪೊಲೀಸ್ ದಾಳಿಗೂ ಕಾರಣರಾಗುತ್ತಾರೆ.

ಕಳಸದ ಗುಡ್ಡೆಯ ಹೆಂಗಸರೆಲ್ಲ ಸೇರಿ ತಹಶೀಲ್ದಾರ ಕಚೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸಿ ತಮ್ಮ ಊರಲ್ಲಿಯ ಸಾರಾಯಿ ಅಂಗಡಿ ಮುಚ್ಚಬೇಕೆಂದು ಒತ್ತಾ ಯಿಸುತ್ತಾರೆ. ಇದನ್ನು ಗಮನಿಸಿದ ಸರಕಾರ ಕಳಸದಗುಡ್ಡೆಯನ್ನು ಪಾನಮುಕ್ತ ಹಳ್ಳಿ ಯೆಂದು ಘೋಷಿಸುತ್ತದೆ. ಹಳ್ಳಿಯ ಅಶಿಕ್ಷಿತ ಮಹಿಳೆಯೊಬ್ಬಳು ಸಾರಾಯಿ ಆಂದೋಲನ ಆರಂಭಿಸಿ ಯಶಸ್ಸು ಪಡೆದುದನ್ನು ಗಮನಿ ಸಿದ ಸರಕಾರ ಸಣ್ಣಿಯನ್ನು ಕಿತ್ತೂರು ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಸಾಮಾನ್ಯ ಕೂಲಿಯಾಗಿದ್ದ ಸಣ್ಣಿ ಕಾದಂಬರಿಯ ಕೊನೆಗೆ ಸಣ್ಣಮ್ಮಳಾಗಿ ಜನಪ್ರೀಯತೆ ಪಡೆಯುತ್ತಾಳೆ. ಶೋಷಣೆ‌ ದಬ್ಬಾಳಿಕೆಗಳನ್ನು ಮೆಟ್ಟಿನಿಲ್ಲುವ ಬಂಡಾಯ ಮನೋಧರ್ಮ ಈ ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಮಧ್ಯಪಾನದಂತಹ ಸಾಮಾಜಿಕ ಅನಿಷ್ಠ ದಿಂದ ಉಂಟಾಗುವ ತೊಂದರೆಗಳನ್ನು ಬಿಂಬಿಸಿ ಗ್ರಾಮೀಣ ಪರಿಸರದ ಸ್ತ್ರೀಯರು ಅನುಭವಿಸುತ್ತಿರುವ ಬವಣೆಗಳ ಕುರಿತೂ ಈ ಕಾದಂಬರಿ ನಮ್ಮ ಗಮನ ಸೆಳೆಯುತ್ತದೆ. ತಳವರ್ಗದ ಗ್ರಾಮೀಣ ಮಹಿಳೆಯರ ನಿಜವಾದ ಬದುಕು ಇಲ್ಲಿ ಅನಾವರಣ ಗೊಂಡಿದೆ. ಎಂಥ ಕಷ್ಟದಲ್ಲೂ ತಮ್ಮ ಅಚಲ ಶೃದ್ಧೆ, ಜೀವನೋತ್ಸಾಹದಿಂದ ಚಿಮ್ಮಿ ನಿಲ್ಲುವ ಇಲ್ಲಿನ ಸ್ತ್ರೀ ಪಾತ್ರಗಳು ವಿಶಿಷ್ಟ ವಾಗಿವೆ. ದಟ್ಟವಾದ ಜೀವನಾನುಭವವನ್ನು ಇಲ್ಲಿ ಲೇಖಕರು ತಮ್ಮ ಮೂಲ ದೃವ್ಯವ ನ್ನಾಗಿ ಬಳಸಿಕೊಂಡಿರುವುದು ಅವಲೋಕ ನೀಯವಾಗಿದೆ. ಇಲ್ಲಿನ ಪಾತ್ರಗಳಿಗೆ ವಾಸ್ತವದ ಅರಿವಿದೆ. ಇಲ್ಲಿನ ಸ್ತ್ರೀ ಪಾತ್ರಗಳು ತಾವು ವಾಸ್ತವದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಒಂದಾಗಿಹೋರಾಟವನ್ನು ರೂಪಿಸಿಕೊಂಡು ಜಯಶಾಲಿಗಳಾಗುತ್ತಾರೆ. ಶ್ರಮಜೀವಿಗಳ ದೈನಂದಿನ ಬದುಕಿನ ಏರಿಳಿತಗಳನ್ನು ಚಿತ್ರಿಸುವ ಪರಿ ಮನೋಜ್ಞವಾಗಿದೆ. ಇಲ್ಲಿ ಮಹಿಳೆಯರೇ ಪುರುಷರಿಗಿಂತ ಪ್ರಬಲವಾಗಿ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಪರಿಸರ ದಲ್ಲಿ ನೆಲೆಸಿರುವ ಅಕ್ಷರವಂಚಿತ ಸಾಮಾನ್ಯ ಮಹಿಳೆಯರೂ ಸಂಘಟಿತರಾಗಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡಬಲ್ಲರು ಎಂಬುದನ್ನು ಇಲ್ಲಿ ಪರಿಣಾಮಕಾರಿಯಾಗಿ ಸೆರೆಹಿಡಿಯಲಾಗಿದೆ. ಹೀಗಾಗಿ ಸ್ತ್ರೀವಾದಿ ನೆಲೆಯಿಂದಲೂ ಈ ಕಾದಂಬರಿ ನಮಗೆ ಮುಖ್ಯವಾಗುತ್ತದೆ.

‘ಬರೀ ಎರಡು ರೆಕ್ಕೆ’ ಸ್ತ್ರೀ ಪ್ರಧಾನ ಕಾದಂಬರಿಯೂ ಆಗಿದೆ. ಇದು ಸ್ತ್ರೀಯರ ಹೋರಾಟದ ಕತೆಯನ್ನು ಹೇಳುತ್ತಿರುವು ದರಿಂದ ಸಾಂಸ್ಕೃತಿಕವಾಗಿಯೂ ಅಷ್ಟೇ ಮುಖ್ಯವಾಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೈಹಿಕವಾಗಿ ಮಾನಸಿಕವಾಗಿ ನಾನಾ ಬಗೆಯಲ್ಲಿ ದೌರ್ಜನ್ಯಕ್ಕೊಳಗಾಗಿ ಚಡಪಡಿಸುವ ಹೆಣ್ಣುಮಕ್ಕಳು ಕೊನೆಗೂ ಹೋರಾಟದಲ್ಲಿ ಜಯಶೀಲರಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಸ್ತ್ರೀಯ ನಿಜವಾದ ಶಕ್ತಿ, ಸ್ವರೂಪವನ್ನು ಇಲ್ಲಿ ಕಾದಂಬರಿಕಾರರು ಬಯಲುಗೊಳಿ ಸಿದ್ದಾರೆ.

ತನ್ನ ಹೋರಾಟದ ಮೂಲಕ ಊರಿನ ಕೇರಿಯನ್ನು ಉಳಿಸಿದ ಸಣ್ಣಮ್ಮ ಇದೊಂದು ದೊಡ್ಡ ಸಾಧನೆಯೆಂದು ಭಾವಿಸಿಕೊಂಡವಳಲ್ಲ. ‘ಹೋರಾಟಾ ಗೀರಾಟಾ ಎಂತಾ ಮಾಡನೀಲಾ, ನಾಮ ಹೆಂಗಸರೆಲ್ಲಾ ಒಂದಾದೊ’ ಎಂದು ಸಂಭ್ರಮ ಪಡುತ್ತಾಳೆ. ಸ್ತ್ರೀ ಸಂವೇದನೆ ಇಲ್ಲಿ ತೀವ್ರವಾಗಿ ತನ್ನ ಸ್ವರೂಪವನ್ನು ಪ್ರಕಟಿಸಿದೆ. ಮಹಿಳೆಯ ಪ್ರತಿನಿಧೀಕರಣವನ್ನು ಸಮ ತೋಲನ ಸಮಾಜ ನಿರ್ಮಾಣವಾದ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ. ಮಹಿಳೆ ಯರ ಸಬಲೀಕರಣದ ಸಂದರ್ಭದಲ್ಲಿ ಈ ಅಂಶ ಮಹತ್ವ ಪಡೆದುಕೊಳ್ಳುತ್ತದೆ. ಸಮಾಜದಲ್ಲಿ ನಡೆಯುವ ಮಹಿಳೆಯರ ಶೋಷಣೆ, ದೌರ್ಜನ್ಯಗಳ ಬಗೆಗೆ ಅರಿವು ಮೂಡಿಸಿ ಆ ಪರಿಸ್ಥಿತಿಯನ್ನು ಬದಲಾಯಿ ಸುವ ಪ್ರಜ್ಞಾಪೂರ್ವಕ ಕ್ರಿಯೆಯೂ ಈ ಕಾದಂಬರಿಯಲ್ಲಿ ನಡೆದಿದೆ. ಹೆಣ್ಣಿನ ಭಾವನೆಗಳಿಗೂ ಬೆಲೆಯಿದೆ ಎಂಬುದನ್ನು ಎತ್ತಿ ತೋರಿಸುತ್ತಾ ಸಮಾಜದ ಬದಲಾವ ಣೆಯ ಆಶಯಕ್ಕೂ ಇಲ್ಲಿ ಆದ್ಯತೆ ನೀಡ ಲಾಗಿದೆ. ಇಲ್ಲಿನ ಮಹಿಳೆಯರು ಅಸಹಾ ಯಕರಂತೆ ಕಂಡುಬಂದರೂ ತಮ್ಮ ಅಸ್ತಿತ್ವಕ್ಕೆ ದಕ್ಕೆ ಬಂದಿದೆ ಎಂಬ ಅರಿವಾದಾಗ ಸೆಟೆದು ನಿಲ್ಲುತ್ತಾರೆ. ಕುಡಿದ ಅಮಲಿನಲ್ಲಿ ನಿತ್ಯ ಗಂಡನಿಂದ ಹೊಡೆತ ತಿನ್ನುತ್ತ ಬಂದ ಸಣ್ಣಿ ಒಂದು ದಿನ ‘ಎಲ್ಲ ಸಹನೆಯೂ ಒಮ್ಮೆಲೇ ಇಳಿದುಹೋದಂತೆ ಎಲ್ಲಿತ್ತೋ ಆ ಶಕ್ತಿ ಎಂಬಂತೆ ಹೊಡೆಯಲು ಬಂದ ಅವನನ್ನು ಮೊಣಕೈಯಲ್ಲೇ ಗೋಡೆಗೆ ಒತ್ತಿ ಹಿಡಿದು ‘ಇಲ್ಲಾದ್ದ ರಗಳೆ ತೆಗೀತಿ ನೀನು, ಎಟ್ ದಿನಾ ಸಂದ್ ಸುಮ್ನಿರಬೇಕ್ ನಾ, ಕೊಂದೇ ಬಿಡತೀ ನಿನ್ನಾ’ ಎನ್ನುತ್ತ ಆರ್ಭಟ ಮಾಡಿದ್ದೇ ದೇವು ಕೈಕಾಲೆಲ್ಲ ಥರಗುಟ್ಟಿದಂತಾಗಿ ನಿಶ್ಯಕ್ತಿಯಿಂದ ಅಲ್ಲೇ ಬಿದ್ದು ಬಿಟ್ಟ’. ಹೀಗೆ ಇಲ್ಲಿನ ಮಹಿಳೆಯರು ಸಮಾಜದ ಕಟ್ಟುಪಾಡುಗಳನ್ನು ಮೀರುವ ಮೂಲಕ ಹೊಸ ಬದಲಾವಣೆಯ ದಿಕ್ಸೂಚಿಯಾಗುತ್ತಾರೆ.

ಸ್ತ್ರೀ ಸ್ವಾತಂತ್ರ್ಯವನ್ನೂ ಸಹ ಇಲ್ಲಿ ಎತ್ತಿ ಹಿಡಿಯಲಾಗಿದೆ. ಆಧುನಿಕ ಶಿಕ್ಷಣ ಪಡೆದು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸರೋಜಿನಿ ಮದುವೆಯ ಹಂಗು ಹರಿದು ಜನರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೇ ಹೆಣ್ಣು ಮಗುವೊಂದನ್ನು ದತ್ತು ತೆಗೆದು ಕೊಂಡು ಅದರ ಲಾಲನೆ ಪಾಲನೆಯಲ್ಲಿ ನಿರತಳಾಗುತ್ತಾಳೆ. ಅಂಕೋಲೆ ಹೈಸ್ಕೂಲಿ ನಲ್ಲಿ ಓದುತ್ತಿರುವ ದೇವೂನ ತಂಗಿ ಮಾಲಿನಿ ತಾನು ಮೆಚ್ಚಿದ ಗುನುಗರಮಗ ರಮಾನಂದ ನೊಂದಿಗೆ ಮನೆ ಬಿಟ್ಟು ಹೋಗುತ್ತಾಳೆ. ವ್ಯವಸ್ಥೆಯ ಒಳಗಿದ್ದೂ ತಮ್ಮ ಮನಸ್ಸಿನಂತೆ ನಡೆದುಕೊಳ್ಳಬಲ್ಲ ದಿಟ್ಟತನ ಧೈರ್ಯ ಇಲ್ಲಿನ ಮಹಿಳೆಯರಿಗಿದೆ. ಸರೋಜಿನಿ ವಿದ್ಯಾವಂತೆ. ಆಕೆಯದು ಸ್ವತಂತ್ರ ಪ್ರವೃತ್ತಿ. ಆಕೆ ಸ್ವಾಭಿಮಾನದ ಹೆಣ್ಣು, ತನ್ನ ವೈಯಕ್ತಿಕ ಬದುಕಿನಲ್ಲಿ ಅನ್ಯರು ತಲೆ ಹಾಕುವುದನ್ನು ಆಕೆ ಎಳ್ಳಷ್ಟೂ ಸಹಿಸಳು. ವಿವಾಹ ಸಂಪ್ರ ದಾಯಗಳಿಗೆ ಮಹತ್ವ ನೀಡದೇ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ಕೊಡುತ್ತಾಳೆ.ಸಾಂಸಾ ರಿಕ ಜಂಜಡ ದಲ್ಲಿ ಹಣ್ಣಾಗಿದ್ದ ಸಣ್ಣಿಯಲ್ಲಿ ಹೋರಾಟದ ಕಿಡಿ ಹೊತ್ತಿಸಿದವಳು ಸರೋಜಿನಿಯೇ. ಕುಡಿದು ಬಂದು ಹಿಂಸಿ ಸುವ ದೇವುನ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೊಡುವಂತೆ ಆಕೆ ಸಣ್ಣಿಗೆ ಸೂಚಿಸುತ್ತಾಳೆ. ‘ಸಣ್ಣೀ ನೀ ಹೀಂಗ್ ತೀಡೂದ ಗೀಡೂದ ಎಲ್ಲಾ ಬಿಡೇ, ನಿಂಗೆ ತಾಕತ್ ಇದ್ರೆ ಮೊದ್ಲು ಆ ಸಾರಾಯಿ ಅಂಗ್ಡಿ ಬಾಗ್ಲು ಹಾಕ್ಸು ನೋಡ್ವ’ ಎಂದು ಸಣ್ಣಿಯ ಸಮಸ್ಯೆಗೆ ಪರಿಹಾರ ಸೂಚಿಸು ತ್ತಾಳೆ. ಮಳ್ಳು ಹಿಡದಂಗೆ ಯಾಸಾ ಮಾಡಿ ಅಂಗಡೀಗೆ ಬೆಂಕಿ ಹಾಕಿಬಿಡೇ, ಕಡೇಗಂದು ಕಡೇಗೆ ನೋಡ್ವ’ ಎಂದು ಸಣ್ಣಿಯಲ್ಲಿ ಧೈರ್ಯ ತುಂಬಿದವಳು ಸರೋಜಿನಿ. ‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಮಾತಿಗೆ ಅಪವಾದ ವಾಗಿ ಇಲ್ಲಿನ ಸ್ತ್ರೀ ಪಾತ್ರಗಳು ಮೂಡಿ ಬಂದಿವೆ. ಪುರುಷ ಪ್ರಯತ್ನದ ನೆರವಿಲ್ಲದೇ ತಾವೇ ಒಂದಾಗಿ ವ್ಯವಸ್ಥೆಯ ವಿರುದ್ಧ ಸಟೆದುನಿಂತು ಸ್ತ್ರಿತ್ವದ ಅಭಿಮಾನ ನಿಷ್ಠೆಯನ್ನು ಕಾಯ್ದುಕೊಳ್ಳುತ್ತಾರೆ.

ಇಲ್ಲಿನ ಸ್ತ್ರೀ ಪುರುಷ ಪಾತ್ರಗಳ ನಡುವೆ ಪೈಪೋಟಿ ಇಲ್ಲ. ಸಹಜೀವಿಗಳಾಗಿ ಅವರು ತಂತಮ್ಮ ಪಾತ್ರಗಳನ್ನು ನಿಭಾಯಿಸುತ್ತಾರೆ. ಎಂಥ ಕಷ್ಟದ ಸಂದರ್ಭದಲ್ಲೂ ಅಳು ನುಂಗಿ ನಗೆ ನಕ್ಕು ತಮ್ಮ ಸತ್ವವನ್ನು ತೋರುತ್ತಾರೆ. ಸ್ತ್ರೀಯರ. ಬದುಕಿನ ಬವಣೆಗಳ ಬಗೆಗೆ ಕಾದಂಬರಿಕಾರರು ತಳೆದಿರುವ ಅನುಕಂಪ, ಔದಾರ್ಯ ಗಮನೀಯ ಅಂಶ. ಹೋರಾಟ ದಲ್ಲಿ ಗೆದ್ದ ಸಣ್ಣಮ್ಮ ಮಾನ ಸನ್ಮಾನಗಳ ಸುರಿಮಳೆಯಲ್ಲೂ ಬೀಗದೇ ಗಂಡನಿಂದ ಹೊಡೆತ ತಿಂದು ತವರು ಮನೆಯಲ್ಲಿ ಯಾತನೆಯ ಬದುಕು ನಡೆಸುತ್ತಿರುವ ತುಳಸಿಯನ್ನು ನೋಡಿ, ಭೇಟಿಯಾಗಿ ಸಾಂತ್ವನ ಹೇಳುತ್ತಾಳೆ. ‘ಅವಳೀಗ ದೊಡ್ಡ ಮನುಷ್ಯಳಾಗಿದ್ದಾಳೆ. ನಮ್ಮೂರನ್ನು ಈಗ ಸಾರಾಯಿಮುಕ್ತ ಹಳ್ಳಿ ಅಂತ ಮಾಡಿ ಸರಕಾರ ಅವಳ ಕೆಲಸಕ್ಕೆ ಬಹುಮಾನ ಗಿಹುಮಾನ ಎಲ್ಲ ಕೊಟ್ಟು ಅವಳೀಗ ಮನೆಗೆಲಸ ನಿಲ್ಲಿಸಿ ದ್ದಾಳೆ’ ಆದರೂ ಆಕೆ ಮಾನವೀಯ ನೆಲೆಯಿಂದ ಸಹಜೀವಿಗಳ ಕಷ್ಟಕ್ಕೆ ಸ್ಪಂದಿಸುತ್ತಾಳೆ. ಗ್ರಾಮೀಣ ಅಕ್ಷರ ವಂಚಿತ ಹೆಣ್ಣುಮಕ್ಕಳು ಸಹ ತಮ್ಮ ಸ್ತ್ರೀ ಪ್ರಜ್ಞೆ ಯನ್ನು ಹೇಗೆ ಕಾಯ್ದುಕೊಂಡು ಬಂದಿ ದ್ದಾರೆಂಬುದರ ನಿರೂಪಣೆ ಇಲ್ಲಿದೆ. ಪ್ರಜಾ ಪ್ರಭುತ್ವದ ಆಶಯಗಳನ್ನು ಸಾಕಾರಗೊಳಿ ಸುವ ಯತ್ನವೂ ಈ ಕಾದಂಬರಿಯಲ್ಲಿ ಯಶಸ್ವಿಯಾಗಿ ನಡೆದಿದೆ.

ಪ್ರಸ್ತುತ ಕಾದಂಬರಿಯಲ್ಲಿ ಎದ್ದು ಕಾಣು ವುದು ಸಾಮಾಜಿಕ ಸಮಸ್ಯೆಯ ವಿವೇಚನೆ, ಕಾದಂಬರಿಯ ಮೂಲಕ ತಮ್ಮ ಪರಿಸರ , ಅಲ್ಲಿನ ಜನಜೀವನದ ಪರಿಶೀಲನೆಗೆ ಕೃತಿಕಾರರು ಮುಂದಾಗಿ ಜೀವನ ನಿಷ್ಠೆ ಯನ್ನು ತೆರೆದು ತೋರಿದ್ದಾರೆ.ಸಾಮಾನ್ಯರೂ ಸಹ ತಮ್ಮ ಬದುಕಿನಲ್ಲಿ ಹೋರಾಟದ ಮೂಲಕ ಘನತೆಯನ್ನು ತಂದುಕೊಳ್ಳ ಬಹುದು ಎಂಬ ಸತ್ಯವೂ ಇಲ್ಲಿ ಪ್ರಕಟ ವಾಗಿದೆ. ಕಾದಂಬರಿಯ ಕಥಾವಸ್ತು ಸಾಮಾನ್ಯ ಅನ್ನಿಸಿದರೂ ಅದನ್ನು ಬಹು ಸಂಯಮದಿಂದ ಚಿತ್ರಿಸಿದ ನಿರ್ವಹಿಸಿದ ರೀತಿ ಅವಲೋಕನೀಯ ಅಂಶ. ಕಲಾತ್ಮಕ ಯಶಸ್ಸಿನ ದೃಷ್ಟಿಯಿಂದಲೂ ಈ ಕಾದಂಬರಿ ನಮ್ಮ ಗಮನ ಸೆಳೆಯುತ್ತದೆ. ವರ್ತಮಾನದ ಇತಿಹಾಸವನ್ನು ಸಾಮಾಜಿಕ ಜೀವನವನ್ನು ನಿರ್ಲಿಪ್ತವಾಗಿ ದಾಖಲಿಸುವ ಕಲೆ ಸುನಂದಾ ಕಡಮೆಯವರಿಗೆ ಚೆನ್ನಾಗಿ ಸಿದ್ದಿಸಿದೆ. ಕೃತಿ ಯಲ್ಲಿ ಎದ್ದು ಕಾಣುವ ಸ್ವಂತಿಕೆ ವೈಯಕ್ತಿಕತೆ ಶೈಲಿ ಭಾಷೆಯ ಬಳಕೆಯಲ್ಲಿ ತೋರುವ ಸೃಜನ ಗುಣ, ಗ್ರಾಮೀಣ ಬದುಕಿನ ವೈವಿಧ್ಯ ವ್ಯಾಪ್ತಿಯನ್ನು ಸೆರೆ ಹಿಡಿದ ಪರಿ ಶ್ಲಾಘ ನೀಯ.ಮಹಿಳೆಯರ ಸಂಘರ್ಷ, ಹೋರಾ ಟದ ಕತೆಯನ್ನು ಕಾವ್ಯಮಯವಾಗಿ ಕಟ್ಟಿಕೊಟ್ಟ ಸುನಂದಾ ಕಡಮೆ ಅವರ ಕಲಾ ನಿಷ್ಠೆ ಅಪೂರ್ವವಾದುದು. ತಮ್ಮ ಚೊಚ್ಚಲ ಕಾದಂಬರಿಯಲ್ಲೇ ಸಾಕಷ್ಟು ಪ್ರಭುದ್ಧತೆ ಯನ್ನು ಮೆರೆದಿರುವ ಅವರು ಒಳ್ಳೆಯ ಕಾದಂಬರಿ ಮಾರ್ಗದಲ್ಲಿ ಸಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರಿಗೆ ಹಾರ್ದಿಕ ಅಭಿನಂದನೆಗಳು.

-ಡಾ. ಜಿ ಎನ್ ಉಪಾಧ್ಯ

         🔆🔆🔆

 ಪ್ರಕಾಶ ಕಡಮೆ, ನಾಗಸುಧೆ ಹುಬ್ಬಳ್ಳಿ