ಮರತೇನೆಂದರೂ ಮರೆಯಲಿ ಹ್ಯಾಂಗ್…
ಹೌದು ಕೆಲವು ಕ್ಷಣಗಳು, ಕೆಲವು ಸಂದರ್ಭ ಗಳು, ಕೆಲವು ವ್ಯಕ್ತಿಗಳು, ಕೆಲವು ಘಟನೆ ಗಳು ಮರೆಯಬೇಕೆಂದರೂ ಮರೆಯದೇ ಹೃದಯವೆಂಬ Hard Disk ನಲ್ಲಿ ಸಿಲುಕಿಕೊಂಡಿರುತ್ತವೆ. ‘ಮರೆವು’ ಮನುಷ್ಯ ನಿಗೆ ದೇವರ ವರದಾನ ವೆಂಬುದು ಸತ್ಯ. ನೆನಪಿನಷ್ಟೇ ಮರೆವು ಕ್ಷಣ ಮನುಷ್ಯನಿಗೆ ನೆಮ್ಮದಿ ನೀಡಬಲ್ಲದು. ಕಾಲನ ಪಯಣ ದಲ್ಲಿ ನೆನಪಿಗೆ ಮರೆವಿನ ಮುಸುಕು ಆವರಿಸಿ ಕೊಳ್ಳುತ್ತಾಹೋಗುವುದು.

ಸಾಹಿತ್ಯ ಮಾತ್ರ ಕಾಲದಿಂದ ಕಾಲಕ್ಕೆ ಮರುವಿನ ಈ ಮುಸುಕನ್ನು ಸರಿಸಬಲ್ಲದ್ದು. ಯುಗಗಳು ಉರುಳಿದಂತೆ ಬದಲಾವಣೆಯ ಕ್ರಿಯೆಗೆ ಸಾಹಿತ್ಯ ಚಾಲನೆನೀಡಿ,ಹೊಸತನದ ಮೂಸೆಯಲ್ಲಿ ಯುಗ ಮೌಲ್ಯಗಳನ್ನು ಉಳಿಸಿ ಮಹದುಪಕಾರ ಮಾಡಿದೆ. ಕಾಲಚಕ್ರದಡಿ ಕೃತಯುಗ ಉರುಳಿ, ತೇತ್ರಾಯುಗ ಉರುಳಿ,ದ್ವಾಪಾರಯುಗವೂ ಉರುಳಿ ಹೋಗಿದೆ. ಕಾಲಚಕ್ರ ನಿಂತಿಲ್ಲ. ಕಲಿಯುಗಕ್ಕೂ ಕರೆದುಕೊಂಡು ಬಂದಿದೆ. ಮೌಲ್ಯ ಅಪಮೌಲ್ಯಗಳ ತುಲನೆಯನ್ನು ಕಾಲದಿಂದ ಕಾಲಕ್ಕೆ ಸಾಹಿತ್ಯ ಅನುಸಂಧಾನ ಗೊಳಿಸುತ್ತಲೇ ಬಂದಿದೆ.ಈಕಾರಣದಿಂದಲೇ ಸಾಹಿತ್ಯ ಚರಿತ್ರೆಯ ಮರುಓದು, ಮರು ವ್ಯಾಖ್ಯಾನ, ಮರು ವಿಮರ್ಶೆಗಳು ನಡೆಯುತ್ತಲೆ ಇವೆ.

‘ಕರ್ಣ’ ನ ಪಾತ್ರ ಇವತ್ತಿಗೂ ಕೂಡಾ ಹಲವಾರು ಮೌಲ್ಯಗಳನ್ನು, ಸಂಘರ್ಷ ಗಳನ್ನು ನೆಮ್ಮೆದುರು ಹಿಡಿದು ತರುತ್ತಲೇ ಇದೆ.ಮಹಾಭಾರತದಲ್ಲಿ ‘ದುರಂತನಾಯಕ’ ನಾದ ಕರ್ಣ ಹಲವಾರುಸವಾಲುಗಳೊಂದಿಗೆ ಹಲವಾರು ಪ್ರಶ್ನೆಗಳೊಂದಿಗೆ, ಹಲವಾರು ವೈರುಧ್ಯ ನೆಲೆಯೊಂದಿಗೆ ನಮ್ಮ Hard Disk ನಲ್ಲಿ ಉಳಿದುಕೊಂಡಿದ್ದಾನೆ. ಕರ್ಣನ ಕುರಿತಾಗಿ ಹೆಮ್ಮೆ, ಕರುಣೆ,ಮೆಚ್ಚುಗೆ, ಧನ್ಯತೆ, ಭಾವಗಳು ಆ ವ್ಯಕ್ತಿಯು ರೂಢಿಸಿಕೊಂಡ ಹಲವು ಬದ್ಧತೆಗಳಿಂದ ಎಲ್ಲರ ಎದೆಯಲ್ಲಿ ಅಚ್ಚಳಿಯದೆ ಉಳಿದಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರ್ಣನದು ಮೂರು ಅವತಾರ. ರಾಧೇಯ ಕರ್ಣ, ಅಂಗಾಧಿಪತಿ ಕರ್ಣ, ಕೌಂತೇಯ ಕರ್ಣ. ಈ ಮೂರು ಹಂತಗಳು ಕರ್ಣನು ಅನುಭಸಿದ ಶೋಷಣೆಯನ್ನೇ ಅನಾವರಣ ಗೊಳಿಸಿ ಸಮಾಜದ ನಗ್ನತೆಯನ್ನು ತೋರುತ್ತವೆ.

ಕ್ಷತ್ರೀಯ ವಂಶದಲ್ಲಿ ಜನಿಸಿದರೂ, ಸೂತ ದಂಪತಿಗಳ ಆಶ್ರಯಕ್ಕೆ ಬಂದು, ರಾಧೆಯ ಮಮತೆಯ ಮಡಿಲಲ್ಲಿ ಬೆಳೆದು, ತನ್ನ ಪರಾಕ್ರಮ ಸತತ ಪ್ರಯತ್ನಗಳಿಂದ ಜಾತಿ ಮೀರಿ ಬೆಳೆದರೂ ‘ಸೂತ’ ನೆಂಬ ಹೀಯಾ ಳಿಕೆ ಅವನ ಎಲ್ಲಾ ಸಾಮರ್ಥ್ಯವನ್ನು ನುಂಗಿ ಹಾಕುತ್ತದೆ.ವರ್ಗ, ವರ್ಣ, ಸಂಘರ್ಷ ದಲ್ಲಿ ಅಂದು ನಲುಗಿದ ಕರ್ಣನ ಸ್ಥಿತಿ ಇವತ್ತಿಗೂ ಆ ಶೋಷಣೆಯಡಿ ನರಳುತ್ತಿ ರುವ ಅನೇಕ ಕರ್ಣರ ಎದೆಯನ್ನು ಸುಡುತ್ತಿದೆ. ಅಂದಿನ ಶೋಷಣೆಯ ಬೇರು ಇಂದೂ ಹಲವು ರೆಂಬೆ ಕೊಂಬೆಗಳನ್ನು ಚಾಚಿಕೊಂಡುಶೋಷಣೆಯ ನಿರಂತರತೆಯನ್ನು ಸಾಕ್ಷೀಕರಿಸುತ್ತಿದೆ.

ಅಂಗದೇಶದ ಅರಸು ಪಟ್ಟ ಕರ್ಣನ ಬದುಕಿನ ಎರಡನೇಯ ಹಂತ. ಈಸಂದರ್ಭ ದಲ್ಲಿ ಕರ್ಣನ ಸ್ಟೇಟಸ್ ಸಾಮಾಜಿಕವಾಗಿ ಉನ್ನತ ಮಟ್ಟಕ್ಕೇರಿದರೂ ಅವನಪರಾಕ್ರಮ ಅವನ ಸಾಮರ್ಥ್ಯ, ಅವನ ಪ್ರತಿಭೆ ಕುರು ರಾಜಕುಮಾರ (ದುರ್ಯೋಧನ) ನ ಪಾದ ಸೇವೆಗೆ ಮೀಸಲಾದದ್ದು, ಮತ್ತೊಂದು ದುರಂತ. ಸಾಮಾಜಿಕ ಮನ್ನಣೆ, ಗೌರವಕ್ಕೆ ಹಾತೊರೆದ ಕರ್ಣ ದುರ್ಯೋಧನನೆಂಬ ಸ್ನೇಹ ಸರಪಳಿಯಲ್ಲಿ ಸ್ವತಹ ತನ್ನನ್ನೇ ಬಂಧಿಸಿಕೊಂಡು ಸ್ವಾತಂತ್ರತೆಯನ್ನು ಕಳೆದುಕೊಳ್ಳುವುದು ವಿಪರ್ಯಾಸ. ಏನೋ ಮಾಡಲು ಹೋಗಿ, ಮತ್ತೆಲ್ಲೋ ಸಿಲುಕಿ ಕೊಳ್ಳುವ ಕರ್ಣ ತನ್ನತನವನ್ನು ದುರ್ಯೋ ಧನನಲ್ಲಿ ಒತ್ತೆ ಇಡುತ್ತಾನೆ. ಇವತ್ತು ಕೂಡಾ ಎಷ್ಟೋ ಯುವಕರು ವಿದ್ಯಾವಂತರಾಗಿ ದ್ದರೂ, ಪ್ರಜ್ಞಾವಂತರಾಗಿದ್ದರೂ ತಮ್ಮ ಅಸ್ತಿತ್ವಕ್ಕಾಗಿ ತಮ್ಮತನಕ್ಕಾಗಿ ಎಲ್ಲೋ ಯಾರದೋ ಕಾಲ ಕೆಳಗೆ ಅದನ್ನು ಒತ್ತೆ ಇಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ.

‘ಕುಂತಿಯ ಪುತ್ರ ಕರ್ಣ’ ಇದು ಕರ್ಣನ ಬದುಕಿನ ಕೊನೆಯ ಹಂತ ಆಶ್ಚರ್ಯ ಪಡುವ ಅಗತ್ಯವಿಲ್ಲ. ಕಾರಣ ಇಷ್ಟೇ ಇವನ ಜನನಕ್ಕೆ ಕುಂತಿ ಕಾರಣವಾಗಿದ್ದರೂ ಅದು ರಹಸ್ಯವಾಗಿ ಉಳಿಯುವಂತೆ ಕೊನೆಯ ವರೆಗೂ ರಾಜಕಾರಣ ಕಾಪಾಡಿಕೊಂಡು ಬರುವುದರಿಂದ ಕರ್ಣ, ರಾಧೇಯನಾಗಿ ಬೆಳೆಯುವುದು, ಅಂಗಾಧಿಪತಿಯಾಗಿ ಜೀವಿಸುವುದು, ಕೌಂತೇಯನಾಗಿ ಸಾಯು ವುದನ್ನು ನಾವು ಗಮನಿಸುತ್ತೇವೆ. ಅದಕ್ಕೆ ಇದು ಕರ್ಣನ ಕೊನೆಯ ಹಂತ. ಅನಂತ ಮೂರ್ತಿಯವರ ‘ಸಂಸ್ಕಾರ’ ಕಾದಂಬರಿ ಯಂತೆ ಸತ್ತ ನಂತರ ಕರ್ಣ ಕೌಂತೇಯನಾಗಿ ಕ್ಷತ್ರೀಯನಾಗಿ ಸಂಸ್ಕಾರ ಪ್ರಕ್ರಿಯೆಗೆ ಒಳ ಗಾಗುತ್ತಾನೆ. ಇದ್ದಾಗ ಕರ್ಣನನ್ನುಗೌರವಿಸದ ಸಮಾಜ, ಸತ್ತಾಗ ನಮ್ಮವನೆಂದು ಕೊಳ್ಳಿ ಇಡುವುದು ನಗೆ ಪಾಟಲಿಗೆ ಈಡು ಮಾಡು ತ್ತದೆ. ಇಂದು ನಮ್ಮ ಪ್ರತಿಭಾವಂತ ಎಷ್ಟೋ ಯವಕರು ಇದ್ದೂ ಸತ್ತಂತೆ ಬದುಕುತ್ತಾರೆ. ಸಾಧನೆಯ ಮೆಟ್ಟಿಲೇರಿದಾಗ ಜಾತಿ, ಪಂಗಡ ಗಳಿಂದ ಗೌರವ, ಸನ್ಮಾನಕ್ಕೆ ಒಳಗಾಗುತ್ತಿ ದ್ದಾರೆ. ‘ಪ್ರತಿಭೆ’ ಗೂ ಇಂದು ಜಾತಿ, ಧರ್ಮ, ಪಂಗಡದ ಅಂಟುಜಾಡ್ಯ ಆವರಿಸಿದೆ.

ಇದು ಕರೋನಾ ವೈರಸ್ಗಿಂತ ಕ್ರೂರ, ಭಯಂಕರ. ಕರೋನಾಕ್ಕಾದರೂ ವ್ಯಾಕ್ಸಿನ್ ಸಿಗಬಹುದು, ಆದರೆ ಜಾತಿ, ಧರ್ಮ ಪಂಗಡಕ್ಕೆ ಯಾವ ಕಾಲಕ್ಕೂ ಔಷಧಿನೂ ಇಲ್ಲಾ, ವ್ಯಾಕ್ಸಿನ್ ಇಲ್ಲಾ, ಅಲ್ಲವೇ…?

             🔆🔆🔆

✍️ಡಾ.ಪುಷ್ಪಾವತಿ ಶಲವಡಿಮಠ
ಸಾ: ಹಾವೇರಿ.