ನನಗೆ ಚಿಕ್ಕಂದಿನಿಂದಲೂ ಕೈ ಗಡಿಯಾರ ಎಂದರೆ ಯಾಕೇನೋ ತುಂಬಾ ಆಕರ್ಷಕ ವಾಗಿ ಮನಸೆಳೆಯುತಿತ್ತು. ಪ್ರಾಥಮಿಕ ಶಾಲೆಗೆ ಹೋಗುವಾಗ ತೆಂಗಿನ ಗರಿಗಳಿಂದ ಮಾಡಿದ ” ವಾಚ್ ” ನ್ನು ಕೈಗೆ ಕಟ್ಟಿ ಖುಷಿ ಪಡುತಿದ್ದೆ. ಅಂತೂ ಪಿಯೂಸಿಗೆ ಬಂದಮೇಲೆ ಅಪ್ಪನ ಹಳೆಯ ವಾಚನ್ನು ಕಾಡಿ ಬೇಡಿ ಪಡೆದು ಹಳೆಯ ಮಷಿನ್ಗೆ ಹೊಸ ಕೇಸು ಬೆಲ್ಟು ಹಾಕಿಕೊಂಡು ಮೂರುವರ್ಷಗಳ ಕಾಲ ಮನಸಾ ಮೆರೆದೆ.

ಬಿ.ಎ.-2 ಕ್ಕೆ ಬಂದಾಗ ನನ್ನ ಪ್ರೀತಿಯ ಸೋದರ ಮಾವ ಕೆ.ಜಿ.ಶೆಟ್ಟಿಯ ಕೈಲಿದ್ದ ಹೊಚ್ಚಹೊಸ ” ರಿಕೋ ” ವಾಚನ್ನು ಆಸೆ ಗಣ್ಣಿಂದ ಕಂಡಾಗ ನನ್ನ ಮನದಾಸೆ ಬಲ್ಲ ಆ ಮಾನವೀಯ ಮನಸ್ಸಿನ, ಅಂತಃಕರಣದ ಜೀವ ಹಿಂದೆ ಮುಂದೆ ನೋಡದೆ ನನ್ನ ಕೈಗೆ ಹಸ್ತಾಂತರಿಸಿದಾಗ ಆದ ಆನಂದ ವರ್ಣಿಸಲ ಸಾಧ್ಯ. ಅದು ನನ್ನ ಕೈ ಸಂಗಾತಿಯಾಗಿ ದಶಕಗಳ ಕಾಲ ಮಿಂಚಿತು. ಒಮ್ಮೆಆ ವಾಚ್ ಗಾಗಿ ಇಡೀ ಮನೆ ಹುಡುಕಿ ಹುಡುಕಿ ಎಲ್ಲೂ ಸಿಗದೇ ಬಳಲಿಬೆಂಡಾದಾಗ ಬಾಡಿದ ಮುಖಕೆ ಕಾರಣ ಕೇಳಿದ ಸುನಂದಾ, ನನ್ನ ಕೈಲೇ ಅದು ಕಂಗೊಳಿಸುವದ ಕಂಡು ನನ್ನ ಮರಗುಳಿತನಕ್ಕೆ ನಾಚಿಕೆ ಪಟ್ಟದ್ದೂ ಇಂದು ನಿನ್ನೆಯ ಘಟನೆಯಂತೆ ಅನಿಸುವದು. ಈ ಘಟನೆಯ ಎಳೆ ಹಿಡಿದು ಇವಳು ” ವಾಚಿನ ವೃತ್ತಾಂತ ” ಎಂಬ ನಗೆಬರಹದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿ, ಅಂದಿನ ಆ ” ಪುಟ್ಟ ಪಾದದ ಗುರುತು ” ಇಂದು ದಾಪುಗಾಲಾದದ್ದು ನೆನೆದರೆ ಮನ ಪುಳಕಹೊಂದುವದು.

ಈ ನಡುವೆ ಯಾಕೇನೋ ವಾಚೆಂದರೆ ಒಂಥರಾ ಅಲರ್ಜಿಯಂತಾಗಿ ವಾಚು ಕಟ್ಟುವದನ್ನೇ ಬಿಟ್ಟು ಹುಬ್ಬಳ್ಳಿಯ HDMC ಯಲ್ಲಿ ನೌಕರಿಗೆ ಹಾಜರಾದೆ. ನನ್ನ ಬೋಳು ಕೈಗಳಿಗೆ ಮನದಲ್ಲೇ ಆತಂಕ ಪಟ್ಟ ಅಲ್ಲಿಯ ಸಿಬ್ಬಂದಿ ಬಂಧುಗಳಾದ ಬೆಣಗಿ, ಚೌವ್ಹಾಣ್, ತ್ರಿವೇಣಿ, ಜಲಜಾ , ನಿವೇದಿತಾ, ಕುಷ್ಟಗಿ , ಚಿನ್ನು ಯುಗಾದಿ ಅಮವಾಸೆಯ ದಿನ ನನ್ನ ಹುಟ್ಟಿದ ಹಬ್ಬವೆಂದು ಅರಿತ ಅವರು ನನಗೆ ಗೊತ್ತು ಮಾಡದೇ HMT ವಾಚನ್ನು ನನ್ನ ಕೈಗೆ ಕಟ್ಟಿ ಸಂಭ್ರಮಿಸಿದ್ದು ನೆನೆದರೆ ಇಂದಿಗೂ ರೋಮಾಂಚನ. ಇದಾದ ಐದು ವರ್ಷಗಳ ಬಳಿಕೆ ಈ HMT ಯನ್ನು ಎಲ್ಲೋ ಕೇಳಿಕೊಂಡು , ಬೇಡಪ್ಪ ಈ ವಾಚಿನ ಸಹವಾಸವೇ ಸಾಕೆಂದು ಕುಳಿತರೆ ಬಿಡಬೇಕಲ್ಲ ? ಸ್ನೇಹದ ಸಂಕೋಲೆ !!!

ವರ್ಷಗಳ ಹಿಂದೆ ಸರಕಾರೀ ಸೇವೆಯಿಂದ ನಿವೃತ್ತನಾದ ದಿನ ನನ್ನ ಜೀವದ ಶಿಷ್ಯ ದೀಪಕ ಮೂಡಲಗಿ ಹೇಳದೇ ಕೇಳದೇ ನಾನೆಂದೂ ಕಂಡಿರದ ಬೆಲೆಬಾಳುವ ವಾಚನ್ನು ಆತ್ಮೀಯವಾಗಿ ಕೈಗೇರಿಸಿ ನನಗೆ ಚಕಿತಪಡೆಸಿ ತಾನೂ ಸಂಭ್ರಮಿಸಿದ. ವರ್ಷಗಳ ತನಕ ತೆಪ್ಪಗೆ ಬಟ್ಟೆಗಳ ತಳದಲ್ಲಿ ಬಿದ್ದ ಈ ಸ್ನೇಹದ ಸಂಕೋಲೆಯನ್ನು ಮೊನ್ನೆ ಮನೆಗೆ ಬಂದ ನವ್ಯಾ ಕಂಡು, ಹೀಗೇ ಬಿಟ್ಟರೆ ಇದು ಇಲ್ಲೇ ಇದ್ದು ನಶಿಸಿ ಬಿಡಬಹುದು ಎಂಬ ಆತಂಕದಿಂದ ನನಗರಿವಿಲ್ಲದೇ ಬೆಂಗಳೂರಿಗೆ ಒಯ್ದು ವಾಚು ಕಟ್ಟಿದ ತನ್ನ ಕೈಗಳ ಫೋಟೋ ನಜ್ಮಾಳ ಧ್ವನಿಯೊಂದಿಗೆ ಕಳುಹಿಸಿ ನನಗೆ ಅಚ್ಚರಿ ಪಡಿಸಿದಳು .

🔆🔆🔆

✍️ ಪ್ರಕಾಶ ಕಡಮೆ, ನಾಗಸುಧೆ ಹುಬ್ಬಳ್ಳಿ