ಶನಿವಾರದಂದು ರಾತ್ರಿ ನನಗೆ ನನ್ನ ಕಾಲೇಜಿನ ಸ್ನೇಹಿತರು ವಾಟ್ಸಪ್‍ನಲ್ಲಿ ಸಂದೇಶವನ್ನು ಕಳುಹಿಸಿದರು. ಅದೇನೆಂದರೆ ಭಾನುವಾರ ರಜೆ ಇದ್ದುದರಿಂದ ಎಲ್ಲರೂ ಒಟ್ಟುಗೂಡಿ ಮಂಗಳೂರಿನ ಸಸಿಹಿತ್ಲು ಸಮೀಪದಲ್ಲಿ ರಿವರ್ ಫೆಸ್ಟಿವಲ್‍ಗೆ ಹೋಗುವ ನಿರ್ಧಾರ ತೆಗೆದುಕೊಂಡರು.ನಾನು ಮಂಗಳೂರಿ ನವಳು ಆದರು ಯಾವತ್ತು ಅಂತಾಹ ಉತ್ಸಾಹವನ್ನು ನೋಡದ ನನಗೆ ಆ ಉತ್ಸಾಹವನ್ನು ನೋಡುವ ಕುತೂಹಲ ಮೂಡಿತು. ನನ್ನ ಸ್ನೇಹಿತರೂ ಉತ್ಸುಕ ರಾಗಿದ್ದರು. ಆದರೆ ನನ್ನ ಭಯ ಏನೆಂದರೆ ಎಲ್ಲರಾ ಮನೆಯಲ್ಲಿ ಅಪ್ಪ ಸುಪ್ರೀಮ್ ಕೋರ್ಟ್ ಅಮ್ಮ ಹೈಕೋರ್ಟ್ಆಗಿರುತ್ತಾರೆ, ಆದರೆ ನನ್ನ ಮನೆಯ ಸುಪ್ರೀಮ್ ಕೋರ್ಟ್ ಹಾಗು ಹೈಕೋರ್ಟ್ ನನ್ನ ಅಮ್ಮ ಆಗಿರು ವುದರಿಂದ ಅನುಮತಿ ಹಾಗು ಹಣ ಮಂಜೂರಿ ಹೇಗೆ ಮಾಡುವುದೆಂಬ ಚಿಂತೆ ನನಗೆ ಮೂಡಿತ್ತು. ಆದರು ಏನೋ ಒಂದು ಮಣ್ಣು ಧೈರ್ಯ ಎಂಬಂತೆ ಅಮ್ಮನ ಅನುಮತಿ ಇಲ್ಲದೆ ಗೆಳೆಯರೊಡನೆ ಬರುತ್ತೇನೆಂದು ಒಪಿಕೊಂಡೆ. ಎಲ್ಲಾ ಗೆಳೆಯರಿಗೂ ಬರುವ ಸಮಯವನ್ನು ತಿಳಿಸಿ ಮಲಗಿದೆ.
ಮಾರನೇ ದಿನ ಭಾನುವಾರ, ನನಗೆ ಆಲಸ್ಯದ ದಿನವೆಂದೇ ಪ್ರಸಿದ್ಧ. ಯಾಕೋ ಗೊತ್ತಿಲ್ಲ ಶನಿವಾರದಂದು ಹೊರಗೆ ಹೋಗುವ ಎಂದು ಜೋಶ್‍ನಲ್ಲಿದ್ದ ನನಗೆ ಎಲ್ಲಿಗೂ ಹೋಗುದು ಬೇಡ ಎಂದೆನಿಸಿತು. ಎಂದಿನಂತೆ ಎಲ್ಲಾ ಕೆಲಸವನ್ನು ಮುಗಿಸಿ ಕುಳಿತು ವಾಟ್ಸಾಪ್‍ನ ಗ್ರೂಪಿನಲ್ಲಿ ಗೆಳೆಯರ ಪ್ರತಿಕ್ರಿಯೆಯನ್ನು ನೋಡುತಿದ್ದೆ. ಜೋಶ್‍ನಲ್ಲಿದ್ದ ಎಲ್ಲರೂ ಈಗ ನಿರಾಸಕ್ತ ರಾಗಿದ್ದರು. ನನಗೂ ಹೋಗಲು ಬೇಸರವೆನಿಸಿತು. ಅಷ್ಟರಲ್ಲಿ ನನ್ನ ಪ್ರಾಧ್ಯಾಪಕರ ಕರೆ ಬಂದಿತು. ಅವರೂ ಅಲ್ಲಿಗೆ ಹೋಗುವ ವಿಷಯವನ್ನು ತಿಳಿಸಿದರು, ನಿರಾಸಕ್ತ ಆಗಿದ್ದ ನನಗೆ ಅದೆಲ್ಲಿಂದ ಜೋಶ್ ಬಂತೆಂದು ಗೊತ್ತಿಲ್ಲ ಧೈರ್ಯದಿಂದ ಅಮ್ಮನನ್ನು ಕರೆಯಲೆಂದು ಹೋಗುವಾಗ ಎಂದಿನಂತೆ ನನಗೆ ಶತ್ರು ಎದುರಾದ ಅದ್ಯಾರೆಂದರೆ ಅಮೆಜಾನ್ ಡೆಲಿವರಿ ಬಾಯ್. ಯಾಕೆ ನನಗೆ ಅವನು ಶತ್ರು ಆದ ಎಂದು ನಿಮ್ಮ ತಲೆಯಲ್ಲಿ ಪ್ರಶ್ನೆ ಮೂಡಿರಬಹುದು ಅಲ್ಲವೇ?, ಅದ್ಯಾಕೆಂದರೆ ನನ್ನ ಒಳ್ಳೆಯ ಕೆಲಸದಂದು ಅಮ್ಮನ ಬಳಿ ಹಣ ಕೇಳಲು ಹೋಗುವಾಗ ಯಾರಾದರೂ ಬಂದು ಹಣ ಕೇಳಿ ಹೋಗಿರುವುದಿದೆ. ಅದಾದ ನಂತರ ನನಗೆ ಹೇಗೆ ಧೈರ್ಯ ಬರುವುದು ನೀವೇ ಹೇಳಿ?.ನನ್ನ ಒಳ್ಳೆ ದಿನವೋ ಅಥವಾ ನನ್ನ ಪಾಲಿಗೆ ಬಂದ ಶನಿಯೋ ಎಂದು ಗೊತ್ತಿಲ್ಲ ಎಂದೋ ಮಾಡಿದ್ದ ಆರ್ಡರ್ ಬಂದಿದ್ದು ಭಾನುವಾರ, ಸತತ ಎರಡನೆಯ ಬಾರಿ ಬಲೂನಿನ ಗಾಳಿ ಹೋದ ಹಾಗೆ ನನ್ನ ಜೋಶ್ ಹಾರಿ ಹೋಗಿತ್ತು. ಆದರೂ ಹಿಂಜರಿಯದೇ ಮುಂದೆ ನಡೆದೆ. ಧೈರ್ಯ ಒಂದು ಶೇಕಡದಷ್ಟೂ ಬರಲಿಲ್ಲ. ಗಪ್ಪನೆ ಹೋಗಿ ಆರ್ಡರ್ ತೆಗೆದುಕೊಂಡೆ. ಆದರೂ ಮನಸ್ಸು ಪಶ್ಚಿಮ ದಿಕ್ಕಿನ ರಿವರ್ ಫೆಸ್ಟಿವಲ್ ಅತ್ತ ಇತ್ತು, ವಿಧಿ ಇಲ್ಲದೆ ಮನೆಗೆ ಹೋಗಿರುವಾಗ ಅಮ್ಮನ ಕೂಗು ಕೇಳಿಸಿತು, “ಬೇಗ ಊಟ ಮಾಡಿ ಸಫ್ರೈಜ್ ಇದೆ” ಎಂದು. ಈ ಸಫ್ರೈಜ್ ಕೇಳಿದ ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಮೂಡಿತ್ತು. ಯಾವತ್ತು ರಜೆ ಎಂದರೆ ಸಾಕು ಏನಾದರೂ ಕೆಲಸವನ್ನು ಹುಡುಕಿ ಮಾಡಿಸುವ ನನ್ನ ಅಮ್ಮನಿಗೆ ಇವತ್ತು ಎಲ್ಲಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಯೋಚನೆ ಮೂಡಿತು, ಇವತ್ತು ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸಿದ್ದಾನೆ?” ಎಂದು.
ಖುಷಿಯಲ್ಲಿ ನನ್ನ ಮನಸ್ಸು ಕುಣಿಯುತಿತ್ತು, ಗಪ ಗಪನೆ ಊಟ ಮುಗಿಸಿ ಒಂದು ತಾಸಿನಿಂದ ಗಾಢ ನಿದ್ದೆಯಲ್ಲಿರುವಾಗ ನನ್ನ ತಾಯಿ “ಹೊರಡಿ ಹೊರಡಿ” ಎಂದಾಗ ಹೊರಗೆ ಹೋಗುವ ಉತ್ಸಾಹದಿಂದ
ಬೇಗ ಬೇಗನೆ ಎದ್ದು ತಯಾರಾಗಲು ಹೊರಟ ನನಗೆ ನನ್ನ ಅಮ್ಮ ಬುಟ್ಟಿ ತರಲು ಹೇಳಿದರು. ನಾನು ಒಂದು ಕ್ಷಣಕ್ಕೆ ಆಶ್ಚರ್ಯ ಚಕಿತಳಾದೆ. ನನಗೆ ಹೋಗಲಿರುವುದು ಸಸಿಹಿತ್ಲು ಆದರೆ ಬುಟ್ಟಿ ಏಕೆ ಎನ್ನುವುದು ತೋಚಲಿಲ್ಲ. ಬುಟ್ಟಿ ತೆಗೆದುಕೊಂಡು ನಡೆದೆ ಮನೆಯತ್ತ. “ಎಲ್ಲರೂ ಬನ್ನಿ ತೋಟಕ್ಕೆ ಹೋಗೋಣ ಬಿದ್ದ ತೆಂಗಿನ ಕಾಯಿಗಳನ್ನು ಹೆಕ್ಕಿ ತರೋಣ” ಎಂದರು. ಹೇಗೆ ಕೊರೋನ ವೈರಸ್‍ನಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೋ, ಹಾಗೆ ನನ್ನ ಜೋಶ್ ಎಂಬುದು ಮಾಯವಾಗಿತ್ತು. ಸತತ ಮೂರು ಗಂಟೆಗಳ ಕಾಲ ತೋಟದಲ್ಲಿನ ತೆಂಗಿನ ಕಾಯಿಗಳನ್ನ ಹೊತ್ತು ಇನ್ನು ಯಾವತ್ತೂ ರಜೆನೆ ಬೇಡ ಎಂದು ನನಗೆ ನಾನೇ ಶಪಿಸಿ ಕೊಂಡೆ. ಆದರೂ ಆ ಮೂರು ಗಂಟೆ ನನ್ನ ತಾಯಿ ತಂಗಿಯರ ಜತೆ ತೋಟದಲ್ಲಿ ಕೆಲಸ ಮಾಡಿದಾದರೂ ಅವರೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವ ಅವಕಾಶವೂ ನನಗೆ ದೊರೆಯಿತು. “ಅದೇನೊ ಚಂದ”, ಕೆಲವೊಂದು ಅಮೂಲ್ಯ ಸಮಯ, ಕೆಲವೊಂದು ಕ್ಷಣಗಳುನಮಗೆ ನಮ್ಮ ಕುಟುಂಬದ ಜತೆ ಕಾಲ ಕಳೆಯಲು ಸಿಗುತ್ತದೆ ಅದನ್ನ ನಾವು ಹೇಗೆ ಉಪಯೋಗಿಸಿಕೊಳ್ಳು ತ್ತೇವೆ ಎಂಬುದು ನಮಗೆ ಬಿಟ್ಟಿದ್ದು. ಕೆಲವು ಚಿಕ್ಕ ಚಿಕ್ಕ ಕ್ಷಣಗಳು ನಮಗೆ ಸಮಯದ ಪಾಠವನ್ನು ಕಲಿಸುತ್ತದೆ.
ಆದರೂ ನಾನು ಯಾವತ್ತೂ ನೋಡದ ರಿವರ್ ಫೆಸ್ಟಿವಲ್ ಈ ವರುಷವೂ ನನಗೆ ನೋಡಲು ಸಿಗಲಿಲ್ಲ, ಮುಂದಿನ ವರುಷವಾದರೂ ನೋಡೊ ಭಾಗ್ಯ ಸಿಗುವುದು ಎಂಬುದೇ ನನ್ನ ಆಶಯ.
🔆🔆🔆
✍️ ರವೀನ ವೆನಿಷ ರೊಡ್ರಿಗಸ್
ಆಳ್ವಾಸ್ ಕಾಲೇಜು, ಮೂಡುಬಿದಿರೆ