ಅಪ್ರಮಾಣಿಕ ಜೀವನದ ಮರಣ ಶಾಸನದಂತಿರುವ ತತ್ವಪದ, ಅದಕ್ಕೆ ನನ್ನದೊಂದು ವಿಮರ್ಶೆ.
ದುಡುದುಡಿಯ_ಸಂಸಾರ!
“””””””””””””””””””””””
ಕಳ್ಳ ಮಳ್ಳರು ಕೂಡಿ ಮಳ್ಳು ಜನರ ಮಾಡಿ,
ಕಳ್ಳಿಯ ಕರಿಗಡಬು ಬಸಿದಾರ!ಮನದೊಳ್ಗ,
ಸುಳ್ಳಪಳ್ಳದಂದರ ಹಾಕ್ಯಾರ!॥
ಸುಳ್ಳಪಳ್ಳರು ಕೂಡಿ ಸುಳ್ಳ ಸುರಗಿಯ ಮಾಡಿ,
ಕಳ್ಳಿಲ್ಲದ ಕಂಕಣ ಕಟ್ಟ್ಯಾರ!ಮನದೊಳ್ಗ,
ಯಾದಿಲ್ಲದ ಶ್ಯಾದಿನ ಮಾಡ್ಯಾರ!॥
ಉಳ್ಳ ಪಳ್ಳೊರು ಕೂಡಿ ಪಳ್ಳಾದ ಮನಿ ಮಾಡಿ,
ಸುಳ್ಳಾದ ಸೋಬಾನ ಮಾಡ್ಯಾರ!ಮನದೊಳ್ಗ,
ಸತುವಿಲ್ಲದ ಶಿಶುವೊಂದು ಹಡದಾರ!॥
ಕಾಳಿ ಬೊಳೇರು ಕೂಡಿ ಕಳ್ಳು ಬಳ್ಳಿಯ ಮಾಡಿ,
ಕುಲಾಯಿ ತೊಟ್ಟಿಲ ಕಟ್ಟಿಸ್ಯಾರ!ಮನದೊಳ್ಗ,
ಕೂಸಿಲ್ದಽ ಹೆಸರೊಂದು ಇಟ್ಟಾರ!॥
ದೊಡ್ಡ ದಡ್ಡರು ಕೂಡಿ ಧರುಮ ದೊಡ್ಡಿಯ ಮಾಡಿ,
ದುಡ್ಡ ಡಬುಗೊಳಿ ಮುಳ್ಳ ಬೆಳಿಸ್ಯಾರ!ಮನದೊಳ್ಗ,
ದುಡುದುಡಿಯ ಸಂಸಾರ ನಡಿಸ್ಯಾರ!॥
ಗಂಡ ಹೆಂಡರು ಕೂಡಿ ಮರಣ ಸಂಸಾರ ದೂಡಿ,
ಮುಸುರೆಯ ಮಾರೀನ ದೂರಿಡು! ಮನದೊಳ್ಗ,
ಶರಣರಿಗೆ ಶರಣಾಗಿ ನುಡಿಸ್ಸಾರ!॥
(ಇದು ಭಾವ ಪರವಶದೊಳಗ ಮುಂಜಾವಿನೊಳ್ಗ ಮೂಡಿದ ಪದ ಅರ್ಥದೊಳ್ಗ ಅನರ್ಥವಿಲ್ಲವೆಂಬುದು ನನ್ನ ಭಾವನೆ)
ರಚನೆ: ಬೀಜಾಕ್ಷರಿ(ಶರಣಪ್ಪ ಕರಡಿ) ತೊಂಡಿಹಾಳ.
ವಿಮರ್ಶೆ
ಇಂತಹ ಪದಗಳು ಹುಟ್ಟಲುಭಾವಪರವಶತೆ ಯೊಂದರಿಂದಲೇ ಸಾಧ್ಯ, ಅದ್ಭುತ ತತ್ವ ಚಿಂತನೆ.
ಈ ಕಳ್ಳರು ಮಳ್ಳರು ಅಧುನಿಕತೆ ಕೊಟ್ಟ ಶ್ರೀಮಂತಿಕೆಗೆನೇ ಹುಟ್ಟಿದವರು. ಇವಕ್ಕೆ ಒಬ್ಬ ತಂದೆ ಇಲ್ಲ ಇಂತಹವುಕ್ಕೆ ಪ್ರಾಮಾಣಿಕತೆಯೆಂಬ ಸಂಸ್ಕಾರ ಹೆಂಗ ಬರುತ್ತೆ. ಮತ್ತವರು ಕಳ್ಳಿಯ ಕರಗಡಬ ಮಾಡಿ ಮುಗ್ದ ಜನರ ಮುಂದಿಟ್ಟಾಗ ಅವು ಕರಗಡಬ ಅಂತಾನೆ ಬಾಯೋಳಗ ಇಟ್ಟು ಕೊಂಡು ಮರುಳಾಗುತ್ತವೆ, ಆ ಕಳ್ಳಿಯ ಕರಗಡಬು ವಿಷ ಎಂದು ತಿಳಿಯೋದು ಇಲ್ಲ. ಇದು ನಮ್ಮ ಚುನಾವಣೆಯಲ್ಲಿ ಮೋಸ ಮಾಡುವ ರಾಜಕಾರಣಿಗಳಿಗೆ ಕನ್ನಡಿ ಹಿಡಿಯುವ ಎಂತಹ ಸತ್ಯದ ಮಾತಲ್ಲವೇ..?
ಸುಳ್ಳು ಭರವಸೆಯ ಸರದಾರರನ್ನ ಎರಡನೆಯ ತ್ರಿಪದಿ ಸೂಚಿಸುತ್ತೆ ಇವರು ಸುಳ್ಳಿನಿಂದ ಹೆಣೆಯುವ ಕುಂತಂತ್ರಗಳು ಒಂದಾ ಎರಡಾ.. ಯಾಕಂದರ ಇವುಕೆ ಮನುಷ್ಯತ್ವದ ಗಂದಗಾಳಿನೆ ಬಡಿದಿಲ್ಲ. ಅದನ್ನ ಕಳ್ಳಿಲ್ಲದ ಕಂಕಣ ಕಟ್ಯಾರ ಎನ್ನುವ ಸಾಲು ಪಸಂದಾಗಿ ಹೆಡೆಮುರಿಕಟ್ಟಿದೆ. ಸುಳ್ಳು ಬರವಸೆಯ ಕದಿಮರನ್ನ ಇವರಿಗೆ ನೀತಿ ಇಲ್ಲ ನಿಯತ್ತು ಇಲ್ಲ ಎಂದು ಹೇಳಲು ಯಾದಿಯಿಲ್ಲದ ಶಾದಿ ಮಡ್ಯಾರ ಎನ್ನುವ ಸಾಲು ಸೊಗಸಾಗಿ ವಿಡಂಬನೆಗೈದಿದೆ.
ಮೂರನೆಯ ನುಡಿ ಉಳ್ಳವರು ಮಾಡುವ ಹರಕ -ಪುರುಕ ಕೆಲಸಗಳಿಗೆ ಸೊಗಸಾಗಿ ಚಟ್ಟಕಟ್ಟಿದೆ. ಇವರು ಜನರಿಗೆ ಏನೆಲ್ಲ ಮಾಡಿದ್ದೇವೆ ಎನ್ನುತ್ತಾರೋ ಅದೆಲ್ಲ ಸುಳ್ಳಿನ ಸೌದ ಎಂದು ಹೇಳಲು ಪದಕಾರ ಹೆಣೆದ ಸಾಲು ಉಳ್ಳವರನ್ನ ಅಕ್ಷರಗಳಲ್ಲೇ ನೇಣುಗಂಬಕ್ಕೆರಿಸಿದೆ. ಆದರೆ ಅವುಕ್ಕೆ ಜೀವವಿಲ್ಲ ಸುಳ್ಳು ಹೆಣದಾಗಲೆ ಪ್ರಾಣ ಬಿಟ್ಟಿದ್ದಾವೆ. ನಿಯತ್ತಿಲ್ಲದ ಆ ಅರೆಜೀವಿಗಳ ಸೋಬಾನಕ್ಕೂ ಲೆಕ್ಕವಿಲ್ಲ ಹಾಗಾಗಿ ಅವೆಲ್ಲ ನಿಜವಿದ್ದರೂ ಅವು ಸುಳ್ಳೆ ಯಾಕೆಂದರೆ ಅವೆಲ್ಲ ಅವರ ತೀಟೆ ತೀರಿಸಿದ ಶೋಬಾನ ಗಳು. ಅದನ್ನು ಸುಳ್ಳಾದ ಶೋಬಾನ ಮಾಡ್ಯಾರ ಎಂದು ಹೇಳಿ,
ಸತುವಿಲ್ಲದ ಶಿಶುವ ಹಡೆದಾರ
ಎನ್ನುವ ಸಾಲಲ್ಲಿ ಗಂಬೀರ ಅರ್ಥವುಂಟು. ಇಂತವರಿಗೆ ಹುಟ್ಟಿದ ಮಕ್ಕಳು ಸತ್ಯವಂತರು ಮತ್ತು ಶಕ್ತಿಯುಳ್ಳವರಾಗಲು ಸಾಧ್ಯವಿಲ್ಲ. ಯಾಕೆಂದರೆ ಇವೆಲ್ಲ ಇವರದೆ ಮೊಳಕೆ ಗಳಲ್ಲವೆ..? ಗಾದೆ ಹೇಳುವ ಹಾಗೆ ಬೀಜ ದಂತೆ ಮೊಳಕೆ. ಹಾಗಾಗಿ ಆ ಸಾಲು ನೀತಿ ಇಲ್ಲದವರು ತಾವಷ್ಟೆ ಹಾಳಾಗೊಲ್ಲ ಇಡೀ ತಮ್ಮ ಕಾಂದಾನವನ್ನೆ,ಪೀಳಿಗೆಯನ್ನೆ ಇಡಿ ಕುಲವನ್ನೇ ದುರ್ಬಲ ಮಾಡಿ ಹೋಗುತ್ತಾರೆ ಎನ್ನುವ ಸೂಚನೆಯಿದೆ.
ನಾಲ್ಕನೆಯ ನುಡಿಯಲ್ಲಿ ಇಂತಹ ನೀತಿಯಿಲ್ಲದ ಹುಚ್ಚು ನಾಯಿಗಳಿಗೆ ಜೊತೆಯಾಗುವವರು,ಸ್ನೇಹ ಮಾಡುವವರು ಸಂಬಂಧ ಬೆಳೆಸುವವರಾದರು ಎಂತವರು? ಅವರೂ ಅವರೇ. ಅದಕ್ಕೆ ಕವಿ ಇಲ್ಲಿ ಕಾಳೆರು ಬೋಳೆರು ಎನ್ನುವ ಪದದಲ್ಲಿ ನಿಯತ್ತಿಲ್ಲದವರೆಗೆ ನಿಯತ್ತಿಲ್ಲದವರೆ ಜೊತೆಯಾಗಿ ಮಾಡುವ ಕಾರ್ಯಗಳು ಎಂತಹ ಅನರ್ಥವನ್ನು ಸೃಷ್ಟಿಸುತ್ತವೆ ಮತ್ತು ಸಮಾಜ ಸುಧಾರಣೆಯೆಂಬುದು ಇಂತವ ರಿಂದ ಶೂನ್ಯ ಎಂಬ ಸೂಚನೆ ಕೊಡಲು ಕವಿ ಇಲ್ಲಿ ಕೂಸಿಲ್ಲದ ಹೆಸರನ್ನು ಇಟ್ಟಿದ್ದಾರೆ ಎಂದು ಹೇಳುತ್ತಾನೆ. ಕಾಗದಗಳಲ್ಲಿ ಯೋಜನೆಗಳನ್ನು ತೋರಿಸಿ ದುಡ್ಡು ನುಂಗಿ ಹೊಟ್ಟೆ ಬೆಳೆಯಿಸಿಕೊಂಡಿರುವ ನಮ್ಮ ಹಲಕಾ ರಾಜಕಾರಣಿಗಳು, ರಾಜಕಾರಣಿಗಳ ಕಾಲು ನೆಕ್ಕುವ ಕದಿಮ ಅಧಿಕಾರಿಗಳು ಇದಕ್ಕೊಂದು ದೊಡ್ಡ ಉದಾಹರಣೆ.
ಇನ್ನು ಐದನೆಯ ನುಡಿಯಂತೂ ಅಧುನಿಕ ಧರ್ಮ ಲಂಡರನ್ನು ಬೊಟ್ಟು ಮಾಡಿ ತೋರಿಸಿದಂತಿದೆ. ಇವರಿಗೆ ಧರ್ಮ ನಿಯತ್ತಾ ಗಿರಲು ಬೇಕಿಲ್ಲ ಅಧಿಕಾರ ಹಿಡಿಯಲು ಬೇಕಾಗಿದೆ. ಇನ್ನೊಬ್ಬರನ್ನು ಹತ್ತಿಕ್ಕಿ ತಾವು ಮೆರೆಯಲು ಬೇಕಾಗಿದೆ. ಹಾಗಾಗಿ ಕವಿ ಇಲ್ಲಿ
ದೊಡ್ಡ ದಡ್ಡರು ಸೇರಿ ಧರ್ಮ ದೊಡ್ಡಿ ಮಾಡಿ ದುಡ್ಡ ಡಬಗಳ್ಳಿ ಮುಳ್ಳ ಬೆಳೆಸ್ಯಾರ
ಎನ್ನುತ್ತಾನೆ. ಇದರ ಅರ್ಥ ಇವರ ಧರ್ಮ ಸಾಕುವುದಲ್ಲ ಇದು ಚುಚ್ಚಿ ಕೊಲ್ಲೋ ಧರ್ಮ. ಮತ್ತಿವರ ಸಂಸಾರ ನಡೆಯದೋ ಇಂತಹ ದುಡ್ಡಿನಿಂದಲೇ. ಜನರ ಕಣ್ಣಿಗಷ್ಟೆ ಇವರು ಧರ್ಮದ ಸೋಗು ಹಾಕಿ ಹರಾಮ ದುಡ್ಧಲ್ಲಿ ಅಧಿಕಾರ ಅಂತಸ್ತು ಆಸ್ತಿ ಎಲ್ಲ ಮಾಡಿಕೊಂಡು ಮೆರೆಯುತ್ತಾರೆ ಎನ್ನುವ ಸೂಚನೆಯಿದೆ.
ಕೊನೆಯ ನುಡಿಯ ಮೊದಲ ಸಾಲಂತು ತತ್ವಪದಕಾರನ ತೀಕ್ಷ್ಣ ದೃಷ್ಟಿಯ ಪ್ರತೀಕ ವೆಂಬಂತಿದೆ. ಇಂತಹವರ ಸಂಸಾರಗಳಿಗೆ ಅರ್ಥವೇ ಇಲ್ಲ ಹಾಗಾಗಿ ಇವರು ಮರಣ ಸಂಸಾರ ನಡೆಸುತ್ತಾರೆ.ಮತ್ತಿಲ್ಲಿಯಕೊನೆಯ ಎರಡು ಸಾಲುಗಳು ಎಂತಹ ದುಷ್ಟರೂ ಕೂಡಾ ಸನ್ಮಾರ್ಗವ ಹಿಡಿಯಬಹುದು ಹಾಗಾಗಿ ಲಂಚ ಪಡೆಯುವ, ಮಂಚ ಹಿಡಿಯುವ ಅನೈತಿಕ ಮಾರ್ಗವ ತೊರೆದು, ಶರಣರ ಕಾಯಕ ಮಾರ್ಗವ ಹಿಡಿದು ಒಳ್ಳೆಯ ಕಾರ್ಯವ ಮಾಡಿ ಎನ್ನುವ ಆಶಯವಿದೆ. ಶರಣರ ಕಾಯಕ. ದಾಸೋಹ ಮತ್ತು ಅಸಂಗ್ರಹ ಬುದ್ದಿಯ ಕಾಯಕವದು. ಆ ಮಾರ್ಗವ ಹಿಡಿದು ಎಲ್ಲರಿಗಾಗಿ ಬದುಕಿ ಎಲ್ಲರ ಬಾಳು ಹಸನಾಗುವಂತೆ ದುಡಿರಿ ಎನ್ನುವ ಶರಣ ಮಾರ್ಗವ ಹೇಳುತ್ತಾರೆ ಬೀಜಾಕ್ಷರಿ ಶರಣಪ್ಪ ಕರಡಿ.
🔆🔆🔆
✍️ ಶ್ರೀ ಪರಸಪ್ಪ ತಳವಾರ ಕನ್ನಡ ಸ.ಪ್ರಾ. ಸಪ್ರದಕಾಲೇಜು, ಲೋಕಾಪೂರ.