ಕಳೆದೆರಡು ತಿಂಗಳ ಹಿಂದೆ ಧಾರವಾಡದ ರಂಗಾಯಣದಲ್ಲಿ ಗೆಳೆಯ ಚಂದ್ರಶೇಖರ ಮಾಡಲಗೇರಿ ಅವರ ಕಾರ್ಯಕ್ರಮದಲ್ಲಿ ಫೇಸ್ಬುಕ್ ಜೀವ ಬೆಂಗಳೂರಿನ ಮಂಜುಳಾ.ಡಿ ಭೆಟ್ಟಿಯಾದಳು. ಹೊಸ ಪರಿಚಯ, ಹೊಸ ಭೆಟ್ಟಿ ಎಂದು ಅನಿಸಲೇ ಇಲ್ಲ. ಸದಾ ಲವಲವಿಕೆಯ ಪಾದರಸ ದಂತಹ ಈ ಸೃಜನಶೀಲ ಮನಸ್ಸಿಗೆ ಹೊಟ್ಟೆಪಾಡಿನ ನೌಕರಿಯಿಂದಾಗಿ ಯಾವುದೋ ಕಟ್ಟುಪಾಡಿನ ಆಳದಲ್ಲಿ ಬಿದ್ದಂತೇ ಯೋಚನೆಯಲ್ಲೇ ಮುಳುಗಿರುತ್ತಿ ದ್ದಳು. ಕೊನೆಗೆ ತಿಳಿಯಿತು ಇವರು ಬೆಂಗಳೂರಿನ ಪಂಚಾಯತಿ ಯೊಂದರ ಪಿಡಿಓ ಅಂತ .ಪಿಡಿಓಗಳ ಸಮಸ್ಯೆಗಳನ್ನೆಲ್ಲಾ ಕಂಡರಿತ ನನಗೆ ಇವಳು ಬಹು “ಗಟ್ಟಿಗಳು” ಎಂದರಿತು ಮನದಲ್ಲೇ ಇವಳ ಕೆಲಸಗಳ ನೆನೆದು ” ಸಲಾಮು ” ಸಲ್ಲಿಸಿದೆ.

ಹಾವ – ಬಾವ – ನಡುವಳಿಕೆ – ಪ್ರೀತಿ ವಿಶ್ವಾಸದಲಿ ಮಂಜುಳಾ ಮನೆ ಮಗಳೇ . ತನ್ನ ವ್ಯಕ್ತಿತ್ವದ ವಿಕಸನಕೆ, ಮನಸ್ಸಿನ ಶಾಂತಿಗೆ, ಸಮಾಧಾನಕೆ ಇವಳು ಅಕ್ಷರ ಪ್ರೀತಿಯ ಹುಟ್ಟಿಸಿಕೊಂಡಿರುವಳು.

2020 ರಲ್ಲಿಯೇ ಒಮ್ಮೆಲೇ ಮೂರು ಮೂರು ಪುಸ್ತಕಗಳನ್ನು ತಂದು ಕೆಲವರು ಮೂಗು ಮುರಿಯುವ ಹಾಗೆ ಮಾಡಿರುವ ಇವಳಿಗೆ ಕವಿತೆಗಳೆಂದರೆ ಬಹು ಇಷ್ಟ .

“ಆಸೆಯ ಕಂದೀಲು “ ಕವನ ಸಂಕಲನದ ಇವಳ ಈ ಸಾಲುಗಳು ಸೀದಾ ಸಾದಾ ಅನಿಸಿದರೂ ಇಂದಿನ ಕಂದಾಚಾರದ ಬದುಕಿನ ಕೈಗನ್ನಡಿಯಾಗಿದೆ.

ಹೆತ್ತವರನ್ನು ವೃದ್ಧಾಶ್ರಮಕ್ಕೆ
ಬಿಟ್ಟು ಬಂದ ಮಕ್ಕಳು
ಆವರ ಹಿಂದೆ
ಜೀವ ಕಳೆದುಕೊಂಡೀತೇನೋ
ಎನ್ನುವಂತೆ ಓಡಿದ್ದು ಮಾತ್ರ
ಅವರು ಸಾಕಿದ ನಾಯಿ…..

ಎನ್ನುವಲ್ಲಿ ಪ್ರಸ್ತುತ ಸಂದರ್ಭದಲ್ಲಿ ಪಾಲಕರು / ಮಕ್ಕಳ ನಡುವಿನ ದುರಂತ ಸಂಬಂಧಕ್ಕೆ ಸಾಕ್ಷಿಯಾಗಿ ಮಕ್ಕಳಿಗಿಂತ ನಾಯಿಯಲ್ಲೇ ನಂಬಿಕೆ,ಪ್ರಮಾಣೀಕತೆ,
ಅನುಬಂಧ ತುಂಬಿದೆ ಎನ್ನುವದು ಸಂಬಂಧಗಳ ಕೊಂಡಿಯ ಕಳಚುವಿಕೆಯ ಕ್ಷಣಕ್ಕೆ ಸಾಕ್ಷಿಯಾಗಿದೆ.

ಕೆಳಜಾತಿಯವನೆಂದು ಆತನನ್ನು
ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ
ಅವರು ಸಾಕಿದ ನಾಯಿ
ಆ ಮನೆಯ ಒಳಗೆಲ್ಲಾ
ಓಡಾಡುತ್ತಿತ್ತು…..

ಎನ್ನುವಲ್ಲಿ ಜಾತಿ ಪದ್ಧತಿ, ಬಡವ ಶ್ರೀಮಂತರ ನಡುವಿನ ಅಂತರ ” ನಮ್ಮದು ನಾಯಿಪಾಡು ” ಎನ್ನುವದಕಿಂತ ಆಳದಲ್ಲಿ ಮನುಷ್ಯನ ಒದ್ದಾಟಗಳನ್ನು ಅಕ್ಷರಗಳ ರೂಪದಲ್ಲಿ ಸೆರೆಹಿಡಿದಿರುವಳು.

ಅಮ್ಮ ಹೇಳಿಕೊಟ್ಟಿದ್ದಳು
ಹಂಚಿ ತಿನ್ನಬೇಕೆಂದು
ಮಕ್ಕಳು ಆಮ್ಮನನ್ನೇ
ಹಂಚಿಕೊಂಡರು…..

ಎನ್ನುವಾಗಲಂತೂ ಮಕ್ಕಳಮನಸ್ಸಿನ ಇಳಿಗತಿಯ ಬದುಕಿಗೆ ಸಾಕ್ಷಿಯಾಗಿದೆ. ಅಪ್ಪ ಮಹಾಮೌನಿ ; ಅಮ್ಮ ವಾಚಾಳಿ. ಅಮ್ಮ ತನ್ನ ಬದುಕಿನಲ್ಲಿ ಈ ವಾಚಾಳಿ ತನದಿಂದಲೇ ಅಪ್ಪ ಹೋದನಂತರ , ತಮ್ಮ ಹೆಂಡತಿಯನ್ನು ಸಂತೈಸುವ ಮಕ್ಕಳ ಕೆಂಗಣ್ಣಿಗೆ ಗುರಿಯಾಗುವಳು. ಇದರಿಂದಾಗ ಸಾಯುವ ತನಕ ಸಾಕಿದ ಆ ತಾಯಿಯನ್ನೇ “ಹಂಚಿಕೊಂಡು” ತಮ್ಮ ಕರ್ತವ್ಯ ನೆರವೇರಿ ಸುವರು ; ಅವಳು ಸತ್ತಾಗ ಆಳೆತ್ತರದ
ಫೋಟೋದೊಂದಿಗೆ ಸಂಭ್ರಮಿಸುವರು. ಇವೆಲ್ಲವೂ ತಿಳಿದೂ – ತಿಳಿದು , ಗೊತ್ತಿದ್ದೂ – ಗೊತ್ತಿದ್ದೂ ಘಟಿಸುವ ಘಟನೆಗಳಾಗಿವೆ.

ಮನೆಯಿಂದ ಮಂದಿರ ಮಸೀದೆ
ತುಸು ದೂರವೇ ಇದೆ
ಸಾಗುವ ಹಾದಿಯಲ್ಲಿ
ನೋವಿನಲ್ಲಿದ್ದವರ ಕೊಂಚ
ನಗಿಸಿಬಿಡೋಣ…..

ಎಂಬುವದು ಇವರ ” ಮನುಜಮತ ” ಕ್ಕೆ ಸಾಕ್ಷಿಯಾಗಿದೆ. ಜಾತಿ ಮತ ಧರ್ಮಗಳ ದಾರಿಯಲ್ಲಿ ಮನುಷ್ಯನ ನೋವು – ಬಡತನ ದ ಚಿತ್ರ ಕಣ್ಣಿಗೆ ಕಟ್ಟಿ ನಗುವಿನ ಮಾನವ ಧರ್ಮಕೆ ದಾರಿಯಾಗುವ ಎಂಬ ಸಂದೇಶ ವಿದ್ದು ಭಾವೈಕ್ಯತೆಗೆ ಮೆರಗನ್ನು ತಂದಿದೆ.

ನಾವಿಬ್ಬರೂ ಮತ್ತೊಮ್ಮೆ
ಅಪರಿಚಿತರಾಗುವುದು
ನನಗೆ ಬೇಕಿಲ್ಲ…..

ಎನ್ನುವಲ್ಲಿ , ನಡುವಳಿಕೆಯ ಕುರಿತು ವ್ಯಾಖ್ಯಾನ ಇದೆ. ಇರುವಷ್ಟು ದಿನ ಖುಷಿಯಾಗಿ ಇದ್ದು ಪರಿಚಿತರಂತೇ ಇರುವಾ ಎಂಬ ಸಂದೇಶದ ಸಾಲುಗಳಿವು.

ಇನ್ನೂ ಓದುತ್ತಿದ್ದ ವಯಸ್ಸಿನಲ್ಲಿ ವೈಯಕ್ತಿಕ ಜೀವನದ ತಿರುವು ತಂದ ಮನೋತೀವ್ರತೆ ಬರವಣಿಗೆಯ ಹಾದಿಯಲ್ಲಿ ಸಾಗುವಂತೆ ಮಾಡಿತು ಎನ್ನುವ ಮಂಜುಳಾರ ಕವಿತೆ ಯಲ್ಲಿ ಭಾಷೆಯ ಹಿಡಿತವಿದೆ. ಚೆಂದದ ಮನಸ್ಸೊಂದರ ಕಾಯುವಿಕೆ ಇದೆ. ಭಾವೈಕ್ಯತೆ ಮಾನವೀಯತೆಯ ಶಬ್ಧಗಳು ಅಲ್ಲಲ್ಲಿ ಮಿಂಚಿ ಕವಿತೆಯ ಹೊಳಪು ಹೆಚ್ಚಿಸುವದು. ಆಸೆಯ ಕಂದೀಲಿನ ಹೊಳಪಿನಲಿ ಮುಂಜುಳಾ ಭರವಸೆಯ ಪ್ರತಿಭೆ.

“ನಿನಾದವೊಂದು” ಮತ್ತು “ಸಂಪಿಗೆ ಮರ ”
ಮಂಜುಳಾಳ ಇನ್ನಿತರ ಎರಡು ಅಂಕಣ ಬರಹದ ಸಂಕಲನಗಳು.

ನಾಗಸುಧೆಯ ಮನೆಮಗಳಂತಿರುವ ಪ್ರೀತಿಯ ಮಂಜುಳಾ, ನಿನ್ನ ವೃತ್ತಿ- ಪ್ರವೃತ್ತಿ; ಬದುಕು – ಬರಹಕ್ಕೆ ಶುಭಕೋರಿ,ಸರಕಾರೀ ನೌಕರಿ ಎಂಬ ಮಂಜಿನಲಿ ನಿನ್ನ ಸೃಜನಶೀಲತೆ ಬತ್ತದೇ ಅದು ಕಾಮನಬಿಲ್ಲಿ ನಂತೇ ಕಂಗೊಳಿಸಲಿ ಎಂದು ಆಶಿಸಿ, ಆ ಕಿರುನಗೆಯ ಖುಷಿಗೆ ಅಭಿನಂದಿಸುವೆ.

🔆🔆🔆.

✍️ಪ್ರಕಾಶ ಕಡಮೆ ನಾಗಸುಧೆ, ಹುಬ್ಬಳ್ಳಿ