ಬಾಲ್ಯದಲ್ಲಿ :
ಊರ ಉಗಾದಿಗೆ
ಪೆಟ್ಟಿ ಅಂಗಡಿಯ ಸೆಟ್ಟಿಯಲ್ಲಿ
ಪಟ್ಟುಹಿಡಿದು ತಂದ
ನನ್ನಪ್ಪನ ಬೆವರಿನ ಬೆಲ್ಲಕ್ಕೆ
ನೂರಾರು ಇರುವೆ, ನೊಣಗಳು
ಮುತ್ತಿಗೆ ಹಾಕುತ್ತಿದ್ದವು.
ಮುಷ್ಟಿಯುಂಡೆಯ ಹೂರಣಕ್ಕೆ
ಕಣಕದ ಕವಚ ಕಟ್ಟಿ
ನನ್ನವ್ವ ತಟ್ಟಿದ ಒಬ್ಬಟ್ಟಿನಲ್ಲಿ
ವಾಕರಿಕೆ ತರಿಸುವಷ್ಟು
ಸಿಹಿಯ ಸಾಹುಕಾರಿಕೆಯಿತ್ತು.

ಉಂಡು, ತೇಗಿ, ಒತ್ತರಿಸಿ ಬಂದ
ಸಿಹಿ ನಿದ್ದೆಯನ್ನು
ಅಪ್ಪ-ಅವ್ವ ನೆಟ್ಟ
ಕಹಿ ಮರದ ನೆರಳಿನಲ್ಲಿ
ಖರ್ಚಾಗುವಷ್ಟು ಕಳೆದಿದ್ದೇನೆ.
ಈ ಅಂತಸ್ತಿಗೆ
ಅಂದು ಒಂಟಿ ಕಾಲಲ್ಲಿ ತತ್ತರಿಸಿದ್ದೇನೆ.

ಇಂದು,
ನಾನು ‘ಮಾಲ್’ನಲ್ಲಿ ಕೊಂಡ
ಬೆಲೆ ಬಿಲ್ಲೆಯ ‘ಆಗ್ರ್ಯಾನಿಕ್’ ಬೆಲ್ಲವು
ತಾನು ಕರಗುವ ಕಾವು, ಕಸುವು ಕಾಣದೆ
ನನ್ನ ‘ವಿಲ್ಲಾ’ ಮನೆಯ
ಇಟಾಲಿಯನ್ ಕಿಚನ್‍ನಲ್ಲೇ
ಕಿಚಡಿಯಾಗಿ ಕೊಳೆಯುತ್ತಿದೆ.

ನಮಗೆಂದೇ,
‘ಹಳ್ಳಿಮನೆಯ ಹೋಳಿಗೆ’ಯೇ
ಐಷಾರಾಮಿ ಓಣಿಯ ಹೋಟೆಲ್ಲಿಗೆ
ಇಂದು ಹಾತೊರೆದು ಬಂದಿದೆ.
ಬಕ್ಷೀಸಿನ ಆಸೆಗೆ,
ಬಾಗು ಬೆನ್ನಿನ ಬಾಣಸಿಗ
ಬಡಿಸಿದ ಬಿಸಿ ಹೋಳಿಗೆಯ
ತುಪ್ಪದಲ್ಲಿ ತನ್ನ ಬೆರಳ
ಅದ್ದಿ ಅದ್ದಿ ಚೀಪುವ ಮಗನು
ಟೇಬಲ್ಲಿನ ತುದಿಗೆ ಕೂತು
ತನ್ನ ಸುಖವ ಚಪ್ಪರಿಸುತ್ತಾನೆ.
ಈ ಹೊತ್ತಿಗೆ…………………..
ನನ್ನ ಪಾಪಪ್ರಜ್ಞೆ
ಒಬ್ಬಟ್ಟಿನ ಬೆರಣಿಯಲ್ಲಿ
ನನ್ನವ್ವನ ಬೆರಳ ಗುರುತು ಹುಡುಕುತ್ತ

🔆🔆🔆

✍️ ನ.ಯತೀಶ್ ಕುಮಾರ್. ಕನ್ನಡ ಸಹಾಯಕ ಪ್ರಾಧ್ಯಾಪಕರು, ಕುದೂರು