ದಶಕಗಳ ಹಿಂದಿನ ಮಾತು.. ನಮ್ಮ ತಾಯಂದಿರು, ಅಜ್ಜಿಯಂದಿರು ಸಾಯಂಕಾಲದ ಹೊತ್ತಲ್ಲಿ ನೀಟಾಗಿ ಬಾಚಿ ಕೊಂಡು ಮನೆಯ ಹಿತ್ತಿಲಲ್ಲಿ ಅರಳಿದ ಜಾಜಿಯನ್ನೋ, ಸಂಜೆ ಮಲ್ಲಿಗೆಯನ್ನೋ ತುರುಬಿಗೆ ಮುಡಿದು, ಒಂದು ಹೊರೆ ಕೆಲಸವಿದ್ದರೂ ಮೊಗದಲ್ಲಿ ನಿರಾಳತೆಯನ್ನು ಸೂಸುತ್ತ ಕೆಲ ಹೊತ್ತಾದರೂ ಮುಗುಳ್ನಗುತ್ತ ಕೂರುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟುತ್ತಿದೆ. ಇಂದು ಕಲಿಕೆಯ ಭರದಲ್ಲಿ, ಮನೆಯ ಒಳಗೂ ಹೊರಗೂ ದುಡಿಯುವ ಧಾವಂತದಲ್ಲಿ ಈ ನಿರಮ್ಮಳ ಗಳಿಗೆಗಳಿಂದ ವಂಚಿತರಾಗು ತ್ತಿದ್ದೇವಲ್ಲವೇ ನಾವು?
ಮಾಲಿನಿ ಪ್ರೌಢಶಾಲಾ ಶಿಕ್ಷಕಿ.. ಒಂದು ವರ್ಷದಿಂದ ಕೈ ಬೆರಳುಗಳ ನಡುಕದ ತೀವ್ರ ಸಮಸ್ಯೆಗೆ ಒಳಗಾಗಿದ್ದರು.ಥೈರಾಯಿಡ್ ಸಮಸ್ಯೆಯಾಗಲೀ ರಕ್ತಹೀನತೆಯಾಗಲೀ ಇಲ್ಲವೆಂದು ಪರೀಕ್ಷೆಗಳು ಖಾತ್ರಿಪಡಿಸಿದ್ದವು.
ಅವರ ಸಮಸ್ಯೆಯ ಆಳಕ್ಕೆ ಇಳಿದಂತೆಲ್ಲ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಂತೆಲ್ಲ ಸಮಸ್ಯೆಯ ಮೂಲವಿರುವುದು ಅವರ ಜೀವನಶೈಲಿ ಯಲ್ಲಿ ಎಂಬುದು ಪತ್ತೆಯಾಗಿತ್ತು..
ಬೆಳಿಗ್ಗೆ ಒಂಬತ್ತರೊಳಗೆ ತಿಂಡಿ, ಅಡಿಗೆ ಸಿದ್ಧಪಡಿಸಿ ಮಕ್ಕಳಿಬ್ಬರನ್ನು ರೆಡಿ ಮಾಡಿ, ಗಡಿಬಿಡಿಯಲ್ಲಿ ನಾಲ್ಕು ತುತ್ತು ನುಂಗಿ, ಗಂಡನಿಗೂ ತನಗೂ ಊಟದ ಡಬ್ಬಿ ಕಟ್ಟಿ ಕೊಂಡು ಬಸ್ಸೋ ಟ್ರಾಕ್ಸೋ ಹಿಡಿದು ಹೈಸ್ಕೂಲ್ ಮುಟ್ಟುವರೆಗೆ ಮೇಲುಸಿರು ಬಂದಂತಾಗುತ್ತಿತ್ತು. ಮತ್ತೆ ಡ್ಯೂಟಿಯಲ್ಲಿ ಹೈರಾಣಾಗಿ ಮನೆಗೆ ಬಂದರೆ ಇಷ್ಟು ಕೆಲಸ ಗುಡ್ಡೆಯಾಗಿ ಬಿದ್ದಿರುತ್ತಿತ್ತು.. ತಾಯಿಯಾಗಿ, ಪತ್ನಿಯಾಗಿ, ಶಿಕ್ಷಕಿಯಾಗಿ ಹೀಗೆ ಎಲ್ಲಾ ಪಾತ್ರಗಳಲ್ಲಿ ಪರ್ಫೆಕ್ಟ್ ಆಗುವ ಒತ್ತಡದಲ್ಲಿ ಮಾಲಿನಿಯ ನರಗಳು ತೀವ್ರ ಪ್ರಚೋದನೆ ಗೊಂಡು ಬೆರಳುಗಳ ನಡುಕ ಆರಂಭ ಗೊಂಡಿತ್ತು.
ಇಂದಿನ ಮಹಿಳೆ ಪುರುಷನಿಗೆ ಸರಿಸಾಟಿ ಯಾಗಿ ಎಲ್ಲವನ್ನೂ ನಿಭಾಯಿಸುವಳೆಂಬು ದನ್ನು ಹೆಮ್ಮೆಯಿಂದ ಹೇಳಬಹುದು ನಿಜ, ಆದರೆ ತನ್ನ ಮನಸ್ಸಿನ ನಿರಾಳತೆ,ನೆಮ್ಮದಿ, ನಿರುದ್ವಿಗ್ನತೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಹಾಗೆ ನೋಡಿದರೆ ಪುರುಷನ ಮೂರು ಪಟ್ಟು ಹೆಚ್ಚು ಕೆಲಸಗಳಲ್ಲಿ ತೊಡಗುವ ಅನಿವಾರ್ಯತೆ ಆಕೆಗಿದೆ. ವೃತ್ತಿ ಜೀವನ, ಅಡಿಗೆ ಹಾಗೂ ಇತರ ಮನೆಗೆಲಸ, ಮಕ್ಕಳ ಪಾಲನೆ ಈ ಮೂರೂ ನೆಲೆಗಳಲ್ಲಿ ಆಕೆಯ ದುಡಿಮೆಯನ್ನು ಅಪೇಕ್ಷಿಸಲಾಗುತ್ತಿದೆ. ಇವುಗಳಲ್ಲಿ ಯಾವುದಾದರೂ ಒಂದನ್ನು ಆಕೆ ನಿರ್ಲಕ್ಷಿಸಬಹುದೇ? ಸಾಧ್ಯವೇ ಇಲ್ಲ. ಆಫೀಸಿನ ಮೀಟಿಂಗಿಗೆ ಸಿದ್ಧಳಾಗುವಷ್ಟೇ ತನ್ಮಯತೆಯಿಂದ ಹೋಳಿಗೆಯ ಹದದ ಬಗ್ಗೆ, ಚಕ್ಕುಲಿಯ ರುಚಿಯ ಬಗ್ಗೆ ಆಕೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಈ ನಡುವೆ ಮಗುವಿಗೆ ಜ್ವರ ಬಂದರೆ ರಾತ್ರಿಯಿಡೀ ಕಾಲ ಮೇಲೆ ಮಲಗಿಸಿಕೊಂಡು ತಣ್ಣೀರು ಪಟ್ಟಿ ಬದಲಾಯಿಸುತ್ತ ಇರಲೇಬೇಕು..
ನಮ್ಮ ಭಾರತೀಯ ಸಮಾಜದಲ್ಲಿ ಮಹಿಳೆಯರು ನಾಲ್ಕು ಗೋಡೆಗಳಿಂದ ಹೊರಬಂದು ವೃತ್ತಿಪರರಾದ ಓಘದಲ್ಲಿ ಪುರುಷರೂ ಮನೆಗೆಲಸ ಹಾಗೂ ಮಕ್ಕಳ ಪಾಲನೆಯಲ್ಲಿ ಹೆಗಲು ಕೊಡುತ್ತಿರುವುದು ಕಂಡುಬರುತ್ತಿಲ್ಲ. ಅಪವಾದಗಳು ಇರಬಹುದು, ಆದರೆ ಸಾಮಾನ್ಯವಾಗಿ ಮಹಿಳೆಯೇ ಎಲ್ಲವನ್ನೂ ಎಲ್ಲರನ್ನೂ ನಿಭಾಯಿಸುವ ಒತ್ತಡಕ್ಕೆ ಸಿಲುಕುತ್ತಿದ್ದಾಳೆ. ಪ್ರತೀ ಕ್ಷಣವೂ ಮುಂದೇನು ಮಾಡಬೇಕು.. ನಾಳೆಗೇನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಾನಸಿಕವಾಗಿ ಕಾರ್ಯನಿರತ ಳಾಗಿದ್ದರಷ್ಟೇ ಉದ್ಯೋಗಿಯಾಗಿ, ಪತ್ನಿ ಯಾಗಿ, ತಾಯಿಯಾಗಿ ಪರಿಪೂರ್ಣ ಪಾತ್ರ ವಹಿಸಲಾದೀತು. ಬಿಡುವಿಲ್ಲದ ಈ ದೈಹಿಕ ಹಾಗೂ ಮಾನಸಿಕ ದುಡಿತ ಅನೇಕ ರೋಗ ಲಕ್ಷಣಗಳಿಗೆ ಕಾರಣವಾಗುತ್ತಿದೆ.ಈನಿಟ್ಟಿನಲ್ಲಿ ಕೈ ಬೆರಳುಗಳ ನಡುಕ, ನಿದ್ರಾಹೀನತೆ, ತಲೆನೋವು, ತಲೆಯಲ್ಲಿ ತ್ರಾಸಾಗುವುದು, ಬೆನ್ನು ನೋವು, ಮೈ ಕೈ ಜಗೆತ, ಹಸಿವಾಗ ದಿರುವುದು, ಜೀರ್ಣವಾಗ ದಿರುವುದು, ಮಲಬದ್ಧತೆ, ಮೂಲವ್ಯಾಧಿ, ತೂಕ ಕಡಿಮೆ ಆಗುವುದು, ಬೊಜ್ಜು ಬರುವುದು, ಆತಂಕ, ಖಿನ್ನತೆ, ಮಲಗಿದರೂ ವಿಶ್ರಾಂತಿ ಸಿಗದಿರುವುದು ಇವೇ ಮುಂತಾದ ಲಕ್ಷಣಗಳು ತಲೆದೋರುತ್ತಿವೆ. 2010 ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ ಗೃಹಿಣಿಯರಿಗಿಂತ ದುಡಿಯುವ ಮಹಿಳೆ ಯರಿಗೆ 33 ಶೇಕಡಾ ಹೆಚ್ಚು ಒತ್ತಡವಾಗು ತ್ತದೆ ಎಂದು ವಿಶ್ಲೇಷಣೆ ಮಾಡಲಾಗಿದೆ. 56 ಶೇಕಡಾ ಉದ್ಯೋಗಸ್ಥ ಮಹಿಳೆಯರು ಕಳೆದ ಐದು ವರ್ಷಗಳಲ್ಲಿ ತಮ್ಮ ಮೇಲಿನ ಒತ್ತಡ ಎರಡು ಪಟ್ಟಾಗಿದೆ ಎಂದು ಪ್ರಶ್ನಾವಳಿಗೆ ಉತ್ತರಿಸಿದ್ದಾರೆ.ವೃತ್ತಿ ಜೀವನ ಹಾಗೂ ಕುಟುಂಬ ಜೀವನದ ಸಮತೋಲನ ಮಾಡಿಕೊಂಡು ಮಹಿಳೆ ಯರು ತಮ್ಮ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಸಮಯ ಮೀಸಲಿಡಬೇಕು. ಇಲ್ಲವಾದರೆ ಪೆಟ್ರೋಲು ಹಾಕಲೂ ಸಮಯವಿಲ್ಲದೇ ಗಾಡಿಯ ಆಕ್ಸಲರೇಟರ್ ಒತ್ತುತ್ತಲೇ ಇದ್ದರೆ ಕೊನೆಗೆ ಏನಾಗುತ್ತದೆ ಹಾಗಾಗುತ್ತದೆ ನಮ್ಮ ಪರಿಸ್ಥಿತಿ ಎಂದಿದ್ದಾರೆ ‘ಫೆರಾರಿ ಮಾರಿದ ಫಕೀರ’ ಪುಸ್ತಕದ ಲೇಖಕರು!* ದೈಹಿಕ ಆರೋಗ್ಯಕ್ಕಾಗಿ ನಿತ್ಯ ಅರ್ಧ ಗಂಟೆ ವಾಕಿಂಗ್/ ವ್ಯಾಯಾಮಕ್ಕೆ ಮೀಸಲಿಡೋಣ. ಈ ನಿಟ್ಟಿನಲ್ಲಿ ಯಾವ ನೆಪ ಬೇಡ.* ಕೆಲಸಗಳ ಪ್ಲಾನಿಂಗಿಗೆ ಅಂತಲೇ ಒಂದು ಹತ್ತು ನಿಮಿಷ ಮೀಸಲಿಟ್ಟು ಬಿಡೋಣ.. ಇಲ್ಲವಾದರೆ ಸ್ನಾನ ಮಾಡುವಾಗ, ತಲೆ ಬಾಚುವಾಗ, ಚಹಾ ಕುಡಿಯುವಾಗ ಚಿಂತೆಯಲ್ಲೇ ಕಳೆದುಬಿಡುತ್ತೇವೆ. ರಿಲ್ಯಾಕ್ಸ್ ಆಗುವ ಕ್ಷಣಗಳ ಮಾಧುರ್ಯವನ್ನು ಮಿಸ್ ಮಾಡಿಬಿಡುತ್ತೇವೆ.* ಪ್ರತೀ ತುತ್ತಿನ ರುಚಿಯನ್ನು ಆಸ್ವಾದಿಸೋಣ… ಉಣ್ಣುವುದೂ ಒಂದು ಧ್ಯಾನಕ್ರಿಯೆಯೇ!* ಬೆಳಿಗ್ಗೆ ಹಾಸಿಗೆಯಲ್ಲಿ ಕಣ್ಣುಬಿಡುವಾಗಲೇ ಚಟ್ನಿ ಏನು ಮಾಡಲಿ, ಸಾಂಬಾರೇನು ಪಕಾಯಿಸಲಿ, ಕರೆಂಟು ಬಿಲ್ಲು ಕಟ್ಟಲು ಕೊನೆಯ ದಿನ ಬಂದಿದೆಯೇ ಎಂದು ಮುಂತಾದ ಪಟ್ಟಿಯೇ ತಯಾರಾಗಿರುತ್ತದೆ. ಅದರ ಬದಲು ಒಂದು ಹತ್ತು ನಿಮಿಷ ಯಾವ ಯೋಚನೆಯನ್ನೂ ಮಾಡದೇ ಮನಸ್ಸನ್ನು ನಿರಮ್ಮಳವಾಗಿಟ್ಟುಕೊಂಡರೆ ಉದ್ವಿಗ್ನತೆಯ ಮಟ್ಟ ಕಡಿಮೆ ಆಗುತ್ತದೆ.* ಮಲ್ಟಿಟಾಸ್ಕಿಂಗ್ ಅಥವಾ ಒಮ್ಮೆಗೇ ಅನೇಕ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಹೆಣ್ಣಿಗಿದೆ. ಆದರೆ ಒಮ್ಮೆಗೇ ಹೀಗೆ ಮೂರ್ನಾಲ್ಕು ಕೆಲಸಗಳನ್ನು ನಿರ್ವಹಿಸುವಲ್ಲಿ ಲಕ್ಷ್ಯ ವಹಿಸಬೇಕಾದರೆ ನರಗಳು ಸೋತುಹೋಗಬಹುದು. ಬೆಳಿಗ್ಗೆ ಒಂಬತ್ತಕ್ಕೇ ಬ್ಯಾಟರಿ ಡೌನಾದಂತೆ ಎನಿಸುವುದು ಇದರಿಂದಲೇ. ಹೀಗಾಗಿ ಒಂದೊಂದಾಗಿ ಕೆಲಸ ಮುಗಿಸುವುದೇ ರಿಲ್ಯಾಕ್ಸ್ ಆಗಿರಲು ಸೂಕ್ತ.* ಟಿವಿ, ವಾಟ್ಸಾಪು, ಫೇಸ್‌ಬುಕ್ ಬಿಡುವಿನ ಸಮಯದಲ್ಲಿ ರಿಲ್ಯಾಕ್ಸ್ ಆಗಲು ಬಳಸು ತ್ತೇವೆ ಎಂಬುದು ಭ್ರಮೆಯಷ್ಟೇ. ನಮ್ಮ ಸಂತೋಷ ನಮ್ಮಲ್ಲಿದೆಯೇ ಹೊರತೂ ಬೇರೆಯವರ ಲೈಕುಗಳಲ್ಲಿ ಅಲ್ಲ.ಕೆಲಸಗಳನ್ನು ಮಾಡಿ ಮುಗಿಸುವು ದೊಂದೇ ಗುರಿಯಾದಲ್ಲಿ ಅದು ನಮ್ಮನ್ನು ದಣಿವಿಗೊಳಪಡಿಸುತ್ತದೆ. ಅದರ ಬದಲು ಕೆಲಸದ ಪ್ರಕ್ರಿಯೆಯನ್ನು ನಮಗಿಷ್ಟವಾಗು ವಂತೆ ಮಾಡಿದೆವೆಂದರೆ ಮನಸ್ಸು ಉಲ್ಲಸಿತವಾಗುತ್ತದೆ.ಮನೆಯ ಜವಾಬ್ದಾರಿಗಳನ್ನು ಪತಿ ಮತ್ತು ಮಕ್ಕಳೊಂದಿಗೆ ಹಂಚಿಕೊಳ್ಳುವ ಮೂಲಕ ಮಹಿಳೆಯರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಇಂದಿನ ಅಗತ್ಯತೆ. ಅರ್ಥ ಮಾಡಿಕೊಳ್ಳುವ – ಮಾಡಿಸುವ ಮನಸ್ಸುಗಳು ಬೇಕು.* ಸದಾ ಬೇರೆಯವರ ಅನುಕೂಲಕ್ಕೆ, ಬೇರೆಯವರನ್ನು ಮೆಚ್ಚಿಸಲು ಹೆಣಗಾಡಬೇಕಾದ ಅಗತ್ಯ ಇಲ್ಲವೆಂಬುದನ್ನು ಅರಿತರೆ ಬಹಳಷ್ಟು ಒತ್ತಡ ಕಡಿಮೆ ಆಗುತ್ತದೆ.
* ನಮ್ಮಿಷ್ಟದ ಸಂಗೀತ ಕೇಳುವುದು, ನಮ್ಮಷ್ಟಕ್ಕೇ ಹಾಡು ಗುನುಗುವುದು, ರಂಗೋಲಿ ಹಾಕುವುದು ಇತ್ಯಾದಿ ಮರೆತ ಹವ್ಯಾಸಗಳಿಗೆ ನೀರೆರೆಯೋಣ.
ಇವೆಲ್ಲ ತುಂಬಾ ದೊಡ್ಡ ವಿಷಯಗಳಲ್ಲದಿರಬಹುದು. ಆದರೆ ಈ ಸಣ್ಣ ಸಂಗತಿಗಳು ನಮ್ಮ ಜೀವನಶೈಲಿಯನ್ನು ಬದಲಾಯಿಸಬಲ್ಲವು. ನಿತ್ಯದ ಚಟುವಟಿಕೆಗಳನ್ನು ತುಸು ನಿಧಾನಗೊಳಿಸಿದರೆ ನಮ್ಮೊಳಗನ್ನು ಸಡಿಲಿಸಬಲ್ಲವು.
ಮಾಡುವ ಯಾವುದೇ ಕೆಲಸವನ್ನೂ ನಿಧಾನವಾಗಿ ಮಾಡಬೇಕೆಂಬುದು ಹೇಳಿದಷ್ಟು ಸುಲಭವಲ್ಲ. ಗಡಿಬಿಡಿಯ ಕುದುರೆಯನ್ನು ನಮಗರಿವಿಲ್ಲದೇ ಏರಿ ದೌಡಾಯಿಸಿಬಿಡುವುದು ರೂಢಿಯಾಗಿ ಬಿಟ್ಟಿರುತ್ತದೆ. ನಿಧಾನತೆಯನ್ನು ಉದ್ದೇಶ ಪೂರ್ವಕವಾಗಿ ಅಳವಡಿಸಿ ಕೊಂಡಲ್ಲಿ ಸಮಯ ವ್ಯರ್ಥವಾಗುವುದೆಂದು ಮೇಲ್ನೋಟಕ್ಕೆ ಎನಿಸಿದರೂ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ.ಯಾವುದನ್ನೂ ಗಾಬರಿಯಿಂದ ಕಳವಳದಿಂದ ಮುಗಿಸಿ ದೌಡಾಯಿಸುವ ಅಗತ್ಯವಿಲ್ಲ. ತಾನು ಕೂಗಿದರಷ್ಟೇ ಸೂರ್ಯ ಹುಟ್ಟುವನೆಂಬ ಕೋಳಿಯ ಭ್ರಮೆಯಿಂದ ಹೊರಬಂದು ಇತರರಿಗೂ ಜವಾಬ್ದಾರಿ ಗಳನ್ನು ವರ್ಗಾಯಿಸಿ ರಿಲ್ಯಾಕ್ಸ್ ಆಗೋಣವೇ ಗೆಳತಿ?
🔆🔆🔆
✍️ಡಾ. ಸೌಮ್ಯ ಕೆ.ವಿ. ಯಲ್ಲಾಪುರ.
Hrudayakke hattiravada lekhana mattu baravanige. Really appreciate your commitment towards writing and professional life! Hats off for balancing it so well dear. Thank you 🙏🏻
LikeLike
ಹೆಣ್ಣಿಗೆ ವಿರಾಮವೇ ಇಲ್ಲದ ದುಡಿತ ..ಮನೆಯಲ್ಲಿಯೇ ಇರಲಿ ಹೊರಗಿರಲಿ ಯಲ್ಲೆ ಆದರು ವಿಶ್ರಾಂತಿ ಇಲ್ಲದ ಜೀವನಕ್ಕಾಗಿ ನಾಳಿನ ನೆಮ್ಮದಿಯ ಬದುಕಿಗೆ ಸ್ವಲ್ಪವೇ ಆದರೂ ವಿರಾಮ ಬೇಕು .ಅದಕ್ಕಾಗಿ ಅವಳು ಬೇರೆ ಬೇರೆ ಕೆಲಸದಲ್ಲಿ ತಲ್ಲಿನತೆಯಲಿ ಇರುತ್ತಾಳೆ.ವಿಷ್ಣುವಿನ ದಶಾವತಾರದ ತರಹ….😊😊
LikeLiked by 1 person
ಚಿಂತನೆಯ ಒರೆಗೆ ಹಚ್ಚುವ ಬರಹ. ಸಕಾಲಿಕ. ಸಾರ್ವಕಾಲಿಕ ಸತ್ಯ.
LikeLike
ಚಂದದ ಬರಹ
LikeLike
Multitasking ಹೆಣ್ಣಿನ ವಿಶೇಷ ಸಾಮರ್ಥ್ಯವೇ ಹೊರತು …..ಅನಿವಾರ್ಯವಲ್ಲ…
ಉತ್ತಮ ಲೇಖನ👏👏
LikeLike
ರಿಲ್ಯಾಕ್ಸ ಮೂಡ್ ಬೇಕೆಬೇಕು..ಸುಂದರ ಲೇಖನ ಗೆಳತಿ..
LikeLiked by 1 person