ಅಪ್ಪಾ…ನಾನು ನಿನ್ನಂತೆ ರೈತನಾಗಬೇಕು.. ಎಂದ ಎಳೆ ಪೋರಿನ ಕಂಡು ತಲೆ ಮ್ಯಾಲಿನ ಟವಾಲ ಬಿಚ್ಚಿ ಮುಖ ಒರೆಸುತ್ತಾ ಹೌದೇನು…ಮಗಾ ಅತ ಬಿಡವಾ ದೊಡ್ಡವಳಾಗು ಆಗುವಂತಿ ಎನ್ನುತ್ತ ಪುಟ್ಟ ಮಗಳ ತೊಡಿಮ್ಯಾಲೆ ಕುಂದ್ರಸಿಕೊಂಡು ತಲೆಯ ಸವರಿದೆ.ಮಟಮಟ ಬಿಸಿಲಿ ನ್ಯಾಗ ಮೈಚರಮ ಸುಟ್ಟು ಕರಿ ಇದ್ದಿಲಾಗಿತ್ತು. ಬೆವರು ಹರಿಯುತ್ತಿತ್ತು.ಶೇಂಗಾ ಹೊಲದಾಗ ಕಳೆ ಕಿತ್ತೊದು ಎಷ್ಟ ಕಷ್ಟ ಅಂತ ಕಿತ್ತವಗ ಗೊತ್ತು.ಆದ್ರ ನನ್ನ ಮಗಳಿಗೇನೋ ಕುತೂಹಲ. ಅಪ್ಪ ದುಡಿಯೊದನ್ನು ಆಸಕ್ತಿಯಿಂದ ನೋಡುತ್ತಿದ್ಲು..ಹೊಲಕ ಬರತಿನಂತ ಒಂದ ಸಮನ ಹಟಮಾಡಿ ಬಂದಿದ್ಲು.

ಅಪ್ಪಾ..ನಾನು ರೈತ ಆಗಬೇಕೆಂದರೆ ಎನ್ ಓದಬೇಕು? ಮುಗ್ದ ಪ್ರಶ್ನೆ. ನಗು ಬಂತು. ಬಾಳ ಕಲಿಬೇಕೆನು? ಇಲ್ಲ ಬದುಕು ನೀ ಬ್ಯಾಡಂದರೂ ಕಲಿಸುತ್ತ.”ಕೋಟಿವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು” ಅಂತ ಹಿರಿಯರು ಹೇಳ್ಯಾರ. ಕಲ್ತರ ಹೊಸ ಹೊಸ ವಿಧಾನಗಳಿಂದ ಬೆಳೆತೆಗೆಯೋ ಕ್ರಮ ಅರಿತು ಬೆಳೆಯಲು ಸಾಧ್ಯ.ವಿದ್ಯೆ ಪಡೆಯ ಬೇಕು.ಸರಕಾರಿ ನೌಕರಿಗಾಗಿ ಅಲ್ಲ,ಬದುಕ ಕಟ್ಟಿಕೊಳ್ಳುವಂತೆ ಅನ್ವಯಿಸ ಬೇಕು.ಚಿಕ್ಕ ಮಕ್ಕಳಿಗೆ ಆಯಾ ಸನ್ನಿವೇಶಗಳು ಅವರ ಮೇಲೆ ಪರಿಣಾಮ ಬೀರುತ್ತದೆ.ನಾವು ನಡೆ ನುಡಿಯಲ್ಲಿ ನಕಾರಾತ್ಮಕ ಭಾವ ತುಂಬಿದರೆ ಅದು ಸಕಾರಾತ್ಮಕವಾಗಿ ಬೆಳೆಯಲು ಹೇಗೆ ಸಾಧ್ಯ?

ಪ್ರತಿ ಮನೆಯಲ್ಲೂ ಜ್ಯೋತಿ ಬೆಳಕನ್ನು ಮಾತ್ರ ನೀಡುತ್ತದೆಯೇ ಹೊರತು ಕತ್ತಲೆ ಯನ್ನಲ್ಲ.ಅದರ ಕಾಯಕ ಮನದಲ್ಲಿ ಅಡಗಿರುವ ಅಂಧಕಾರವನ್ನು ದೂರ ತಳ್ಳಿ ಚೈತನ್ಯ ತುಂಬುವುದು ಮಾತ್ರ.ಹಾಗೆ ಮಗು ಹಣತೆಯ ಬತ್ತಿಯಾದರೆ,ಎಣ್ಣೆ ನಾವಾಗಿ ಜ್ಞಾನದ ದೀಪ ಬೆಳಗುವಂತೆ ಮಾಡದಿದ್ದರೆ ಮಗು ಹೇಗೆ ತಾನೆ ಬೆಳಗಿತು? ಮೌಡ್ಯಗಳ ಬಿತ್ತುತ ಅಜ್ಞಾನ ಬೆಳೆದರೆ ನೈತಿಕತೆ ಮೂಡಿ ಬರಲು ಹೇಗೆ ಸಾಧ್ಯ? ಬೇರು ತಾನು ಹೀರಿದ ಸತ್ವ, ಸತ್ವಹೀನವಾಗಿದ್ದರೆ ಆರೋಗ್ಯಕರ ಮನಸ್ಥಿತಿ ಹೊಂದಿದ ಪೀಳಿಗೆ ಉದಯಿಸಲು ಆದೀತೇ?

ನಾವೆಲ್ಲ ನಮ್ಮ ಮಕ್ಕಳು ಮುಂದೊಂದು ದಿನ ನಾಯಕರಾಗಬೇಕೆಂದು ಬಯಸುತ್ತೇವೆ.ಆ ನಾಯಕ ಹೇಗಿರಬೇಕು?ಎಂಬುದನ್ನು ಮರೆತುಹೋಗುತ್ತೆವೆ.ನಾಯಕ ಕೇವಲ ನಾಯಕನಲ್ಲ ಅವನು “ಮಹಾನಾಯಕ”ನಾಗಿ ಬೆಳೆಯಲು ಮೊದಲು ರೋಗಗ್ರಸ್ತ ಮನಸ್ಸಿಂದ ಹೊರಬರುವುದು ಮುಖ್ಯ.ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಅವರ ಬಾಲ್ಯದಿಂದ ಮರಣಾವಸ್ಥೆಯವರೆಗೂ ಅನುಭವಿಸಿದ ಎಲ್ಲ ನೋವುಗಳಿಗೆ ಇತಿಹಾಸ ಸಾಕ್ಷಿಯಿದೆ. ಅವರ ಸಂಘರ್ಷದ ಹೊರಾಟ ಆದರ್ಶದ ಬದುಕು.ವಿಶ್ವದ ಶ್ರೇಷ್ಠ ವ್ಯಕ್ತಿ. ಇವರಂತೆ ಬದುಕುವ ಛಲ, ಓದು ಹಸಿವು, ಬರವಣಿಗೆ, ದೇಶದ ಒಳಿತು.

“ವಿದ್ಯೆ ಯಾರ ಸೊತ್ತು ಅಲ್ಲ”.ಯಾರು ಇಷ್ಟ ಪಟ್ಟು ಓದು ವರೋ ಶ್ರಮಜೀವಿಗಳೋ ಅಂತವರಿಗೆ ಗೌರವಗಳು ಬೇಡವೆಂದರೂ ಅವರ ಹುಡುಕಿಕೊಂಡು ಬರುತ್ತವೆ. ಇಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನ ಚರಿತ್ರೆ ಧಾರವಾಹಿ (ಮಹಾನಾಯಕ) ರೂಪದಲ್ಲಿ ಅವರ ಜೀವನ ಚಿತ್ರಣ ಕಣ್ಣಮುಂದೆ ಕಟ್ಟಿದಂತಿದೆ.ಬಾಲಕನ ಆತ್ಮಶಕ್ತಿ ಎಲ್ಲ ಮಕ್ಕಳಿಗೆ ತಮ್ಮ ಭವಿಷ್ಯ ರೂಪಿಸಲು ಮೂಲ ತಳ ಹದಿಯಾಗಿ, ಅಂತಹ ಮಕ್ಕಳು ಇಂದು ಸಮಾಜದ ಭವಿಷ್ಯ ನಿರ್ಮಿಸಲುಬೇಕಿದೆ.ಅದು ಮನೆ ಯಿಂದ ಸಾಧ್ಯ ನಂತರ ಬಾಹ್ಯ ಪರಿಸರ ಕೈಜೋಡಿಸಿದಾಗ ಸಮಾಜಕ್ಕೊಂದು ಆಕಾರ ಬರಲು ಕಾಲ ಪಕ್ವವಾದಿತು.

ಸರ್…ಜಗದೀಶ ಚಂದ್ರ ಬೋಸ್ ರವರು ಸಸ್ಯಗಳಿಗೂ ಜೀವವಿದೆಯೇ ಎಂಬ ಕುತೂಹವೇ,ಮುಂದೊಂದು ದಿನ ಆ ಮಗು ವಿಜ್ಞಾನಿಯಾಗಿ ಇಂದು ನಮಗೆಲ್ಲ ಮಾದರಿ. “ಬೆಳೆವ ಸಿರಿ ಮೊಳಕೆಯಲ್ಲಿ ಕಾಣು” ಎಂಬಂತೆ ಯಾವ ಮಗುವಿನ ಭವಿಷ್ಯ ಹೇಗಿದೆಯೋ ಯಾರು ಬಲ್ಲರು? ಪ್ರತಿ ಮಗುವು ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತದೆ. ಅದನ್ನು ಗುರುತಿಸಿ ಬೆಳೆಸುವ ಕೆಲಸ ನಮ್ಮದಾಗಬೇಕು. ಮಗುವಿನ ಬಾಲ್ಯ ಅನುಭವಿಸಲು ಬಿಡದಾ ನಾವುಗಳು ಯಂತ್ರಗಳನ್ನಾಗಿಯಾವುದಕ್ಕೂ ಆಸಕ್ತಿ ಇಲ್ಲದಂತೆ ನಿಸ್ತೇಜ ಸ್ಥಿತಿಗೆ ತಂದು ಹಿಂಸಿಸುವವರು ನಾವುಗಳು.ನೆಟ್ಟಗೆ ನಿಲ್ಲಲಾಗದ ಮಗುವಿಗೆ ಏನೆಲ್ಲ ಕಲಿಸ ಬೇಕೋ‌ ಅವನ್ನೆಲ್ಲ ಕಲಿಸಿ ಪಾಲಕರು ಸಂದರ್ಶನ ನೀಡಿದ ಮೇಲೆ ಮಗುವಿಗೆ ಸೀಟು ಹಂಚಿಕೆ ಇವತ್ತಿನ ಸ್ಥಿತಿ‌.

ಮಣ್ಣಿನ ಸೊಗಡ ಮೈಗೆ ತಾಕಿಸದವನ ಜೀವನ ಉಹಿಸಲು ಸಾಧ್ಯವಿಲ್ಲ.ಮಣ್ಣಿಂದ ಹುಟ್ಟಿದ ದೇಹ ಮಣ್ಣಾಗುವ ಮೊದಲು ಪ್ರಕೃತಿಗೆ ಕೊಡುಗೆ ನೀಡಿ ಹುಟ್ಟಿದ್ದಕ್ಕೂ ಸಾರ್ಥಕತೆಯ ಮೆರೆಯುವುದು ಬಹು ಮುಖ್ಯ.ಮಕ್ಕಳ ಬದುಕಿಗೆ ನೀತಿ ಮಾರ್ಗ ತೋರಿದಷ್ಟು ಒಳಿತು…ಹಿರಿಯರು ತಮ್ಮ ಅನುಭವದ ಗರಡಿಯಲಿ ಪಳಗಿಸುವಾಗ ಎಚ್ಚರವಹಿಸು‌ವುದು ಅನಿವಾರ್ಯ….

              🔆🔆🔆

✍️ ಶ್ರೀಮತಿ. ಶಿವಲೀಲಾ‌ ಹುಣಸಗಿ ಶಿಕ್ಷಕಿ, ಯಲ್ಲಾಪೂರ