ಋತುಗಳ ರಾಜ ತಾ ಬಂದ
ಅಂಕುರಕ್ಕೆ ಆಮಂತ್ರಣ ತಂದ

ತರು-ಲತೆಗಳು ಮೈಚಾಚುತ ಪಲ್ಲವಿಸಿ
ಹೊಸ ಸೃಷ್ಟಿ ಹೊಸ ಭಾವ ಮೇಳೈಸಿ
ಭೂರಮೆಗೆ ಚಾಮರವ ಬೀಸುತ
ಹಸಿರು ಹಾಸಿನ ಸೊಬಗು ಸೂಸುತ

ನಿಸರ್ಗ ರಮ್ಶ ಮಂದಿರ
ಭಕ್ತಿ ಭಾವ ಸುಂದರ
ಉಲ್ಲಾಸ ಉತ್ಸಾಹ ಭರದಿ
ಶರಧಿ ಮೇಲೆ ಮೌನ ಹೆಜ್ಜೆ ಇರಿಸಿ

ಯುಗ ಯುಗಗಳಾಚೆಯಿಂದ
ಕಾಲಕಾಲಕೆ ಪುನಶ್ಚೇತನಗೊಳಿಸುತ
ಜೀವ ಕಳೆಯನೇರ್ಪಡಿಸುತ
ಸಮಚಿತ್ತದ ನಾಂದಿ ಹಾಡುತ

ಗಿಳಿ-ಕೋಗಿಲೆಗಳ ಇಂಚರ
ಜೇನು ಜೀರುಂಡೆಗಳ ಝೇಂಕಾರ
ಅದುವೇ ನಿಸರ್ಗಕೆ ಓಂಕಾರ
ಹೃನ್ಮನಗಳಿಗೆ ಪಾರಿತೋಷಕದ ಸಡಗರ

ವರ್ಷಾರಂಭಕೆ ಹರ್ಷವ ಚೆಲ್ಲುತ
ಬೇವು-ಬೆಲ್ಲ ಸಮಭಾವ ಹಂಚುತ
ಹೂ ಗೊಂಚಲದ ಘಮ ಘಮ
ಸಂತಸ ಸಂಭ್ರಮದ ಸಮಾಗಮ !

  ‌‌‌‌‌‌       🔆🔆🔆

✍️ಅಮರ್ಜಾ
(ಅಮರೇಗೌಡ ಪಾಟೀಲ ಜಾಲಿಹಾಳ)
ಕುಷ್ಟಗಿ