ಶತಕೋಟಿ ಶತಕೋಟಿ
ಆಯಸ್ಸಿನ ಯುಗವು
ಹೊಸತಾದ ಹಸಿರು
ಚಿಗುರೊಡೆದು ಯುಗದ
ಆದಿ ಇಂದೆ ಎನ್ನುವಾಗ
ನಾವೇಕೆ ವರುಷಗಳು
ಉರುಳಿದಂತೆ ಚಿಂತೆಯ
ನಿರಿಗೆಗಳನ್ನ ಮುಖದ
ಮೇಲಿಟ್ಟು ಅಳುತ್ತೇವೆ..?॥೧॥

ನೆರೆ ಪ್ರವಾಹ, ಭೂಕಂಪ
ಜ್ವಾಲಾಮುಖಿ ಏನೆಲ್ಲ
ಅವಗಡಗಳನ್ನು ತಣ್ಣಗೆ
ಹೊಟ್ಟೆಯೊಳ ಹಾಕಿಕೊಂಡು
ಮತ್ತೆ ಜೀವಸಂಕುಲ
ಪೂರೆವ ಭೂತಾಯಿಯ
ಮಕ್ಕಳಾದ ನಮಗೇಕೆ
ಅವಳ ಗುಣ ಬರದೆ
ಕಷ್ಟಗಳಿಗೆ ನೇಣೇರುವ
ಹುಚ್ಚುತನ ಮಾಡುತ್ತೇವೆ..?॥೨॥

ಪ್ರಕೃತಿಯ ಅಂಶವೇ
ನಾವಾಗಿರುವುದ ಮರೆತು
ಸೃಷ್ಟಿಗೆ ಪ್ರತಿಸೃಷ್ಟಿ ಮಾಡುವ
ಹುಚ್ಚು ಶ್ರೀಮಂತಿಕೆಯ
ಮೀತಿಮೀರಿದ ನಾಗಲೋಟ
ಒಂದಿನ ನಮ್ಮ ಕಾಲ್ಮೂರಿದು
ಹುಚ್ಚಾಟಕ್ಕೆ ಕೊನೆ ಹಾಡುತನಕ
ನಮ್ಮ ಹುಚ್ಚು ಬಿಡದೇನಿಸುತ್ತೆ॥೩॥

ಹೊಸ ಅನ್ವೇಷಣೆ
ಏನೆ ಮಾಡಿದರೂ ಅದು
ಭೂತಾಯಿ ಒಡಲಿಗೆ ಹಾನಿ
ಮಾಡದೆ ಪೂರಕವಿದ್ದರೆ
ಗರ್ಭದೊಳಗಿರುವ ಈ ಕೂಸು
ಬದುಕೀತು ಇಲ್ಲ ಮಾನವ
ಪಿಂಡ ನಶಿಸಿತು, ಹೊಸತನ
ನಮ್ಮತನ ಉಳಿಸಿ ಹೊಸ
ಚೇತನ ನಮ್ಮೊಳಗೆ ಮತ್ತೆ
ಚಿಗುರುವುದೆ ಯುಗಾದಿ.॥೪॥

          🔆🔆🔆

✍🏻ಪರಸಪ್ಪ ತಳವಾರ
ಕನ್ನಡ‌ ಸ.ಪ್ರಾ. ಸಪ್ರದಕಾಲೇಜು, ಲೋಕಾಪೂರ ಜಿ: ಬಾಗಲಕೋಟೆ