ಕವಿಯತ್ರಿ ಸಹೋದರಿ ಶಿವಲೀಲಾ ಹುಣಸಗಿಯವರು ಒಬ್ಬ ಉತ್ತಮ ಕ್ರಿಯಾ ಶೀಲ ಶಿಕ್ಷಕಿಯಾಗಿ, ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಸೇವೆಯನ್ನು ಕಂಡು ಹಲವಾರು ಸಂಘ ಸಂಸ್ಥೆಗಳಿಂದ ಇವರಿಗೆ ಹಲವು ಪ್ರಶಸ್ತಿ- ಪುರಸ್ಕಾರಗಳು ಲಭಿಸಿವೆ. ಇವರ ಚೊಚ್ಚಲ ಅವಳಿ-ಜವಳಿ ಕೃತಿಗಳಾದ “ಬದುಕಂದ್ರೆ ಹೀಗೇನಾ”? ಮತ್ತು ” ಬಿಚ್ಚಿಟ್ಟ ಮನ” ಕೃತಿಗಳು ಏಕಕಾಲದಲ್ಲಿ ಲೋಕಾರ್ಪಣೆ ಗೊಂಡು ಕನ್ನಡದ ಮನಸುಗಳ ಮನೆ ಮನ ಸೇರಿಕೊಂಡಿವೆ.

ಇವರ ‘ಬದುಕಂದ್ರೆ ಹೀಗೇನಾ’? ಕೃತಿಯು ಆಕರ್ಷಕ ಮುಖಪುಟ ವಿನ್ಯಾಸ ದೊಂದಿಗೆ ಎಲ್ಲರನ್ನು ಆಕರ್ಷಿಸುವಂತಿದೆ. ಒಟ್ಟು ೫೮ ಕವನಗಳನ್ನೋಳಗೋಂಡಿರುವ ಈ ಕೃತಿಯು ಕುತೂಹಲ, ಸತ್ಯ, ರೋಚಕತೆ, ಹಠಮಾರಿ, ಪ್ರೀತಿ ಮಮತೆಯಿಂದ ತುಂಬಿ ರುವಂತೆ, ಮುಗ್ದಮಗುವಿನಂತೆ ಮೋಹಕ ವಾಗಿ, ಓದುಗರಿಗೆ ರಚಿಸುವಂತೆ, ಆಲೋಚಿ ಸುವಂತೆ ಮಾಡಿ ಕಂಗೋಳಿಸುತ್ತಿದೆ. ಎಲ್ಲ ಕವನಗಳು ಒಂದಕ್ಕಿಂತ ಒಂದು ಸುಂದರ ವಾಗಿ ಮೂಡಿಬಂದಿದೆ. ಇವರ ಕವಿತೆಗಳಲ್ಲಿ ಬದುಕಿನ ಅರ್ಥ, ಪ್ರೀತಿ, ಕರುಣೆ, ಸ್ತ್ರೀ ಸಮಾನತೆ, ದೇಶಾಭಿಮಾನ, ಕನ್ನಡಾಭಿ ಮಾನ, ಸಾಮಾಜಿಕ ನ್ಯಾಯ, ನೈತಿಕ ಮೌಲ್ಯಗಳು, ಹೀಗೆ ಹಲವಾರು ಸಂದೇಶ ಗಳನ್ನು ಕಾಣುತ್ತೇವೆ.

‘ಡಾ:ದತ್ತಾತ್ರೇಯ ಗಾಂವ್ಕರ’ ರವರು ಮುನ್ನುಡಿಯಲ್ಲಿ ಬರೆದಿರುವ ಒಂದು ಮಾತು -“ಸಮುದ್ರದಲ್ಲಿ ಮುಳುಗುವ ರತ್ನ ಶೋಧಕನಿಗೆ ಪ್ರತಿ ಬಾರಿಯು ಮುಳುಗು ವಿಕೆಯಲ್ಲಿ ಒಂದು ರತ್ನಸಿಗಲೇಬೇಕೆಂದೇನು ಇಲ್ಲ.ಮುಳುಗಿದಾಗ ಬರಿಗೈಯಿಂದ ಮೇಲೆಬಂದನಾದರೆ ಸಮುದ್ರದಲ್ಲಿ ಏನು ಉಳಿದಿಲ್ಲ ಅಂತ ಅರ್ಥವಲ್ಲ, ಬದಲಾಗಿ ಇಂದು ಏನೂ ಸಿಗಲಿಲ್ಲ ಅಂತ ಅರ್ಥ.” ಎನ್ನುವ ಈ ಮಾತು ಕೃತಿಗೂ ಮತ್ತು ಓದುಗನ ಬದುಕಿಗೂ ಅರ್ಥಪೂರ್ಣ ವೆನಿಸುತ್ತದೆ.ಹಾಗೆ ಬೆನ್ನುಡಿಯಲ್ಲಿ ಶ್ರೀಪ್ರಮೋದ ಹೆಗಡೆಯವರು ಕವಿಯತ್ರಿಯ ಬಗ್ಗೆ ಆಡಿರುವ ಮಾತುಗಳು, ಖ್ಯಾತ ಸಾಹಿತಿ ಗಳಾದ ಶ್ರೀವನರಾಗ ಶರ್ಮಾ ರವರು ಬರೆದಿರುವ ಮೆಚ್ಚುಗೆಯ ಮಾತು ಗಳನ್ನು ನೋಡಿದರೆ ಕವಿಯತ್ರಿ ಶಿವಲೀಲಾ ಹುಣಸಗಿಯವರ ಬಗ್ಗೆ ಹೆಮ್ಮೆ ಎನಿಸುತ್ತದೆ.

ಪ್ರೀತಿ ಕರುಣೆ ನಮ್ಮಲ್ಲಿ ಬೆಸೆದಾಗ/ ವರ್ಣ ಭೇದವ ಮೆಟ್ಟಿನಿಂತಾಗ/ ಮನ ಮನಗಳು ಕೊಂಡಿಯಾದಾಗ/ಚೈತನ್ಯದ ಚಿಲುಮೆ ಬೆಳಗಿದಾಗ/ ನಾನೆಂಬ ಮೋಹ ಕಳಚಿದಾಗ/ ಇಡೀ ಬ್ರಹ್ಮಾಂಡವೇ ನಕ್ಕುನಲಿವುದಾಗ// “ಮೋಹ ಕಳಚಿದಾಗ “ಎಂಬ ಕವಿತೆಯ ಈ ಸಾಲುಗಳು ಪ್ರತಿಯೋರ್ವ ಮನುಷ್ಯನು ನಾನು, ನನ್ನದೆಂಬ ಮೋಹದ ಮುಖವಾಡ ಧರಿಸಿರೊ ಕುದುರೆಯಬೆನ್ನೇರಿ ಹೋಗೊ ದನ್ನು ನಿಲ್ಲಿಸಿ, ಮೇಲು-ಕೀಳೆಂಬ ಭಾವವನ್ನು ತೊರೆದು, ಪರಸ್ಪರ ಪ್ರೀತಿ, ಕರುಣೆ, ಐಕ್ಯತೆಯಿಂದ ಕೂಡಿ ಬಾಳಿದರೆ ಇಡೀ ಬ್ರಹ್ಮಾಂಡವೇ ನಕ್ಕು ನಲಿಯುತ್ತದೆ ಎಂದು ವಿಶ್ವ ಮನುಕುಲಕ್ಕೆ ಸಂದೇಶ ನೀಡಿದ್ದಾರೆ.ಇನ್ನು”ಬದುಕು ಯಾರಿಗಾಗಿ?” ಕವಿತೆಯಲ್ಲಿ ಒಂಟಿತನದ ಬದುಕಿನ ಒತ್ತಡದ ಜಂಜಾಟದಲ್ಲಿ ತಮ್ಮ ಮನದ ನೋವು ನಲಿವುಗಳನ್ನು, ಭಾವನೆಗಳನ್ನು, ಕನಸುಗಳನ್ನು, ಸುಖ-ದು:ಖಗಳನ್ನು, ಯಾರ ಬಳಿಯುು ಹಂಚಿಕೊಳ್ಳಲಾಗದೆ ಹಂಚಿಕೊಂಡರು ಭರವಸೆಯ ಸ್ಪಂದನೆ ಸಿಗದೇ, ಆಸೆ ಆಕಾಂಕ್ಷೆಗಳೆಲ್ಲವು ಕಮರಿ ಬಾಡಿ ಹೋಗುವುದನ್ನು ಕಂಡು ಜಿಗುಪ್ಸೆ ಗೊಂಡು ಈ “ಬದುಕು ಯಾರಿಗಾಗಿ”? ಎಂದು ಪ್ರಶ್ನಿಸುತ್ತಾ ಚಿಂತನೆಗೊಳಪಡಿಸಿ ದ್ದಾರೆ. ಇನ್ನ“ನಾ ಹ್ಯಾಂಗ ಹೆಗಲ ಕೊಡಲಿ”? ಕವಿತೆಯಲ್ಲಿ ಬರುವ

ಒಮ್ಮೆ ಕತ್ತಲು/ಒಮ್ಮೆ ಬೆಳಕು/ ಬಡವನ ಎದಿ ಉಸಿರು ಬರಿ ನೆನಪು/ಇದರಾಗ ಉಣತಾರ ಎಷ್ಟೋ ಮಂದಿ/ಅದರಾಗ ನನ್ನ ಜೀವನ ಹರಿದು ಹಂಚೈತಿ/ ಇಂತದರಾಗ ನಾ ಹ್ಯಾಂಗ ಆಸರಾಗಲಿ?

ಈ ಸಾಲುಗಳು ನಿಜವಾದ ಪ್ರೇಮಿಗಳಿಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳುವ ರೀತಿ, ಪ್ರೀತಿ ಎಂದರೆ ಕ್ಷಣಿಕದ ಸುಖ ಸಂತೋಷ ವಲ್ಲ ಶುದ್ಧ ಮನಸ್ಸುಗಳ,ಒಳ್ಳೆ ಸಂಬಂಧಗಳ ಬೆಸುಗೆಯಾಗಿದೆ ಎಂದು ಸೂಕ್ಷ್ಮವಾಗಿ ಇಂದಿನ ಯುವ ಜನಾಂಗಕ್ಕೆ ಎಚ್ಚರಿಸಿದ್ದಾರೆ. ಹಾಗೆಯೇ “ಓ ಭಾರತೀಯರೆ”! ಕವಿತೆಯು ಪ್ರತಿಯೊಬ್ಬ ಭಾರತೀಯನಲ್ಲಿ ರಾಷ್ಟ್ರಾಭಿಮಾನ, ರಾಷ್ಟ್ರಗೌರವ ಹುಟ್ಟಿಸುತ್ತಾ ರಾಷ್ಟ್ರರಕ್ಷಣೆಗೆ ಕರೆನೀಡುವಂತ್ತಿದೆ. ಇನ್ನು “ಸಾಕಲ್ಲವೇ” ಕವನವು ಪ್ರತಿಯೊಬ್ಬ ಕನ್ನಡಿಗನು ಕನ್ನಡಾಭಿಮಾನವನ್ನು ಬೆಳೆಸಿಕೊಂಡು ಕನ್ನಡಾಂಬೆಯ ತೇರನ್ನೆಳೆಯುತ ಕನ್ನಡವನ್ನು ಉಳಿಸುತ ಬೆಳೆಸುತ ಪ್ರತಿಯೊಬ್ಬರಲ್ಲಿ ಕನ್ನಡದ ಕುರಿತು ಜಾಗೃತಿ ಮೂಡಿಸುವಂತಿದೆ.

“ಮೋಸದಾ ಸಾಮ್ರಾಜ್ಯದಲ್ಲಿ/ ಧರ್ಮ ಮಂಕಾಗಿ ಕುಳಿತಿದೆ/ ಸತ್ಯ ದಾರಿ ತಪ್ಪುತ್ತಿದೆ/ ಬೂದಿಮುಚ್ಚಿದ ಕೆಂಡದಂತೆ/ ವಿಧಿ ಬರಹ ನಗುತ ಕುಳಿತಿದೆ.”.

ಎನ್ನುವ “ವಿಧಿ ಬರೆದಾ..” ಕವನದ ಸಾಲುಗಳು ವಾಸ್ತವಿಕವಾಗಿ ಸಮಾಜದಲ್ಲಿ ನಿತ್ಯ ನಡೆಯುತ್ತಿರುವ ಬ್ರಷ್ಟಾಚಾರ, ಮೋಸ, ಸುಳ್ಳು ವಂಚನೆ, ಅನ್ಯಾಯ, ಅತ್ಯಾಚಾರ ಎನ್ನುವ ಕಪಟ ಸಾಮ್ರಾಜದ ನಡುವೆ ನಿಜವಾಗಿಯೂ “ಧರ್ಮ” ಎನ್ನುವ ಸತ್ಯ ಇವುಗಳ ಸುಳಿಯಲ್ಲಿ ಸಿಕ್ಕು ಮಂಕಾಗಿದ್ದರು ಅಂತಿಮದಲ್ಲಿ ಸತ್ಯವೇ ಸಿಡಿದೆದ್ದು ಬೆಳಕು ಚೆಲ್ಲಿ ವಿಧಿ ಬರಹದ ಮುಂದೆ ಯಾರಿಲ್ಲ ಎಂಬುದನ್ನು ಸುಂದರ ವಾಗಿ ತೋರಿಸಿಕೊಟ್ಟಿದ್ದಾರೆ.

ಇನ್ನು “ಬದುಕಂದ್ರೆ ಹೀಗೇನಾ”? ಕವಿತೆಯು ಇಡೀ ವಿಶ್ವ ಮನುಕುಲವೆ ಆಲೋಚಿಸು ವಂತಿದೆ.ಬಿಡುವಿಲ್ಲದ ಬದುಕಿನ ಜಂಜಾಟ ದಲ್ಲಿ,ವೈಯಕ್ತಿಕ ಸ್ವಾರ್ಥ ಬದುಕಿನ ನಡುವೆ ಪರಸ್ಪರರಲ್ಲಿ ನಂಬಿಕೆ, ವಿಶ್ವಾಸವೆ ಇಲ್ಲದೆ, ಪರಸ್ಪರ ಕೂಡಿ ಬಾಳ ಬೇಕೆಂಬ ಭಾವನೆ ಗಳಿಲ್ಲದೆ ಸಂಸ್ಕಾರ, ಸಂಸ್ಕೃತಿಯ ಮೌಲ್ಯ ಗಳಿಲ್ಲದೆ ಬಾಂಧವ್ಯ ಗಳಿಗೆಲ್ಲನೇಣುಬಿಗಿದು, ಸಂಬಂಧಗಳೆಲ್ಲವು ಸುಟ್ಚು ಹೋಗುತ್ತಿರುವು ದನ್ನು, ಅನ್ಯಾಯ, ಅತ್ಯಾಚರ ಮೋಸ, ವಂಚನೆಗಳೇ ಮೇರೆಯುುತ್ತಿರುವುದನ್ನು ಕಂಡ ಕವಿಯತ್ರಿ ಶಿವಲೀಲಾರವರು ತಮ್ಮ ಈ ಕವಿತೆಯಲ್ಲಿ

“ದಿನಬೆಳಗಾದರೆ ಹೊಸ ಸುದ್ದಿ/ಮೌಲ್ಯಗಳ ಕತ್ತು ಹಿಸುಕುವ/ ಸಂಸ್ಕಾರವ ಮೆಟ್ಟಿ ತುಳಿಯುವ/ಬಾಂಧವ್ಯಕ್ಕೆ ನೇಣು ಬಿಗಿಯುವ/ ಕರುಳ ಹೆಚ್ಚಿ,ಸುಟ್ಟು ಭಸ್ಮಮಾಡುವ/ಇಂಚಿಂಚು ಶವವಾಗುವ ಪರಿ ಸುಮ್ನೇನಾ//

ಎನ್ನುವ ಈ ಸಾಲೂಗಳ ಮೂಲಕ ಸಾಮಾಜಿಕ ಕ್ರೌರ್ಯ, ಶೋಷಣೆ, ಅ ನಾಗರಿಕತೆಯ ಕುರಿತು ಮಾನವಿಯ ಆಕ್ರೋಶವನ್ನು ಹೊರಹಾಕುತ್ತಾ ” ಬದುಕಂದ್ರೆ ಹೀಗೇನಾ “? ಎಂದು ಪ್ರಶ್ನಿಸುತ್ತಾ, ನಿಜವಾದ ಬದುಕು ಯಾವುದೆಂದು ಚಿಂತನೆಗೊಳಪಡಿಸಿದ್ದಾರೆ.
” ನನ್ನ ಗೋಳು”,”ಸಬಲೆ ನೀನೆ”? “ತಾಳ್ಮೆಗೂ ಮಿತಿ ಇದೆ”! ” ಸಾಧ್ಯವೇ “?ಕವನಗಳು ಒಬ್ಬ ಸ್ತ್ರೀಗೆ ಆದ ಅನ್ಯಾಯ, ಒಬ್ಬ ಸ್ತ್ರೀಗೆ ಸಿಗಬೇಕಾದ ಮನ್ನಣೆ, ಒಬ್ಬ ಸ್ತ್ರೀ ತನ್ನ ಕುಟುಂಬಕ್ಕಾಗಿ ಮಾಡುವ ತ್ಯಾಗವನ್ನೆಲ್ಲ ಸೀತೆ, ದ್ರೌಪತಿಯರ ಜೀವನದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸುತ್ತಾ, ಪುರುಷ ಪ್ರಧಾನ ಸಮಾಜವನ್ನು ಧಿಕ್ಕರಿಸುತ್ತಾ, ಪ್ರತಿಯೊಬ್ಬ ರಿಗು ತಾಳ್ಮೆಯ ಮಿತಿ ಇರುತ್ತದೆ ಆದರೆ ‘ಸೀತೆ’ ,’ದ್ರೌಪತಿ’ನೀವು ಮಿತಿಯನ್ನು ಮೀರಿ ತಾಳ್ಮೇಯಿಂದ ಸಹಿಸಿಕೊಂಡಿದ್ದಾದರು ಹಾಗೆ? ‘ಸೀತೆ’ನೀನು ‘ಶ್ರೀ ರಾಮನನ್ನು’ ‘ದ್ರೌಪತಿ’ನೀನು ‘ಪಾಂಡವರನ್ನು ‘ಪ್ರಶ್ನೀಸಲಿಲ್ಲ ಏಕೆ ?ಎಂದು ಅವರನ್ನೇ ಪ್ರಶ್ನಿಸಿಸುತಾ ಸ್ತ್ರೀಯರಲ್ಲಿ ಜಾಗೃತಿ ಮೂಡಿಸುವಂತಿದೆ. ಇನ್ನು“ಹೆಂಗಳೇ ನೀ ಅರಿ” ಕವನದಲ್ಲಿ

“ಹೆಣ್ಣಿಗೆ ಹೆಣ್ಣೇ ಶತ್ರು/ ಅರಿತವರಾರಿಲ್ಲ ಮಿತ್ರ/ ಅಮ್ಮ ನೀ,ಅತ್ತೆ ನೀ,ತಂಗಿ ನೀ,ಅಕ್ಕನೀ/ಮಡದಿ ನೀ ಎಲ್ಲ ನೀ ಆದರೂ ಒಗ್ಗಟ್ಟಿಲ್ಲದ ಬದುಕು//

ಎನ್ನುವ ಸಾಲುಗಳು ಹೆಣ್ಣು ಎಲ್ಲ ಪಾತ್ರಗಳನ್ನು ನಿಭಾಯಿಸುತ್ತಾಳೆ ಆದರೆ ಹಂತಹಂತವಾಗಿ ಖಳನಾಯಕನ ಪಾತ್ರ ಮಾಡುವುದರಿಂದ ಬದುಕಿನಲ್ಲಿ ಶಾಂತಿ ಇಲ್ಲದೆ, ಒಗ್ಗಟ್ಟಿಲ್ಲದ, ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹಾಗೆಯೇ “ಫ್ರೀಸಿಗುತ್ತಾ” ಕವಿತೆಯಲ್ಲಿರೊ

“ಒಂದ ಕೆ .ಜಿ ಮಾನ/ ಒಂದ ಕೆ.ಜಿ ಮರ್ಯಾದೆ/ ಒಂದ ಕೆ.ಜಿ ಸೌಹಾರ್ದತೆ/ ಒಂದಕ್ಕೊಂದು ಫ್ರೀ ಲೆಕ್ಕದಲ್ಲಿ ಒಗ್ಗಟ್ಟು “…?

ಎನ್ನುವ ಸಾಲುಗಳು ವ್ಯಕ್ತಿಗಳು ಅವರಲ್ಲಿರುವ ಆತ್ಮ ಸಾಕ್ಷಿಯನ್ನು, ಮಾನ ಮರ್ಯಾದೆಯನ್ನು ಪ್ರೀತಿ ಸೌಹಾರ್ದತೆ ಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಹೇಳುವ ಶೈಲಿ ಸಹೊದರಿ ಶಿವಲೀಲಾರವರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಇವರ ಎಲ್ಲ ಕವಿತೆಗಳು ಓದಲು ಕುಳಿತರೆ ಕುತೂಹಲ, ಆನಂದ, ರಸದೌತಣದ ಜೋತೆಗೆ ಆಲೋಚನೆಗೆ,ತಾರ್ಕಿಕ ಚಿಂತನೆಗೆ ಒಳಪಡುವಂತ್ತೆ ಮಾಡುತ್ತವೆ. ಇವರ ಕವಿತೆಗಳಲ್ಲಿ ಪ್ರೀತಿ, ಕರುಣೆ, ಸೌಹಾರ್ದತೆ, ಸ್ತ್ರೀ ಸಮಾನತೆ, ಅನ್ಯಾಯ, ಬ್ರಷ್ಟಾಚಾರದ ವಿರುದ್ದ ಹೋರಾಡುವ ಭಾವ, ಬದುಕಿನ ಅರ್ಥ, ಐಕ್ಯತೆ, ದೇಶಾಭಿಮಾನ, ಗೆಳೆತನದ ಅರ್ಥ, ಪ್ರಕೃತಿ ಸೌಂದರ್ಯತೆ, ಹೀಗೆ ಹಲವಾರು ಅರ್ಥಗಳನ್ನು, ಚಿಂತನೆಗಳನ್ನು ಇವರ ಕವನ ಸಂಕಲನದಲ್ಲಿ ಕಾಣುತ್ತೆವೆ. ಒಟ್ಟಾರೆಯಾಗಿ ಕವಿಯತ್ರಿ ಶಿವಲೀಲಾ ರವರು ಉತ್ತಮ ಶಿಕ್ಷಕಿಯಾಗಿ ಸಾಹಿತ್ಯಿಕ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದನ್ನು ಕಂಡರೆ ಇವರೊಬ್ಬ ಉತ್ತಮ ಬರಹಗಾರ್ತಿ ಯಾಗುವುದರಲ್ಲಿ ಸಂದೇಹವಿಲ್ಲವೆನಿಸು ತ್ತದೆ. ಇವರಿಂದ ಇನ್ನು ಹೆಚ್ಚಿನ ಕೃತಿಗಳು ಹೊರಬರಲಿ, ಕನ್ನಡದ ಮನಸ್ಸುಗಳ ಮನೆ ಸೇರಲಿ, ತಾಯಿ ಕನ್ನಡಾಂಬೆಯ ಉಡಿ ಸೇರಲಿ, ಇನ್ನು ಹೆಚ್ಚೆಚ್ಚು ಪ್ರಶಸ್ತಿ ಪುರಸ್ಕಾರ ಗಳು ಇವರಿಗೆ ಲಭಿಸಲಿ ಎಂದು ಹರಸೋಣ.

                ‌‌🔆🔆🔆

✍️ ಗಂಗಾಧರ ಎಸ್ ಎಲ್ (ಶಿಕ್ಷಕರು) ಕಿರವತ್ತಿ, ಯಲ್ಲಾಪುರ