ಉಪ್ಪು ನೀರಲ್ಲಿ ಹಾಕಿದ
ಮಾವಿನ ಮಿಡಿ
ಮಾಯದು ಗಾಯ
ಗಾಯವಾಗದು ಮಾಯ
ಎಲ್ಲಿಯೋ ಹುಟ್ಟಿ ಬೆಳೆದು
ಹಸಿರಾಗಿದ್ದೆ ಹೆಸರಾಗಿದ್ದೆ
ಕಣ್ಣು ಬಿತ್ತು ಕಿತ್ತು ತಂದು
ಸುರಿದು ಸಂಭ್ರಮಿಸಿದರು
ಮೀಯಿಸಿ ಶುಭ್ರಗೊಳಿಸಿದ
ಸಜ್ಜುಗೊಳಿಸಿದ ಪರಿಗೆ
ಒಳಗೊಳಗೇ ಪುಳಕ
ಹೇಳಲಾಗದು ಅಳುಕ
ಅರಿವಾಗುವ ಮುನ್ನವೇ
ಉಪ್ಪಿನ ಸಜ್ಜೆಯಲಿ ಪವಡಿಸಿದ್ದೆ
ಮೇಲೇರಿತು ಅಪರಿಚಿತ
ಆಕ್ರಮಣದ ಮಣಭಾರ
ಮಾತಾಡದಂತೆ ಭರಣಿಯ
ಬಾಯ ಬಂಧಿಸಿದಾಗ
ಅಂಧಕಾರದಲಿ ಕಳಕೊಂಡ
ಅಸ್ತಿತ್ವಕೆ ತಡಕಾಟ
ಕೊರೆವ ಉಪ್ಪಿಗೆ ಕರಗಿ
ನೀರಾಗದಿರಬಹುದೆ
ಕಡು ಭಾರದಿ ಬಳಲಿ
ಮುದುಡದಿರಬಹುದೆ?
ಉಪ್ಪು ನೀರಲಿ ನೆನೆದು
ಬಂದಿದ್ದ ಒಪ್ಪಿ ನಡೆದಾಗ
ಬಣ್ಣಗೆಟ್ಟು ಸುಕ್ಕುಗಟ್ಟಿದ
ಮೈಗೆ ಪಕ್ವತೆಯ ಪ್ರಶಂಸೆ
ಮುಂದಿನ ಹಾದಿ ಇನ್ನೂ ಕ್ರೂರ
ಮೈ ಸೀಳಿ ತುಂಡಾಗಿಸಿ
ಅರೆದ ಖಾರದಿ ಅದ್ದುವ ಸಡಗರದ
ಅಗ್ನಿದಿವ್ಯದಲಿ ವಿಲವಿಲ
ಯಾರ ತಟ್ಟೆಯ ತುತ್ತೋ
ಒಲ್ಲದೆ ತೊಟ್ಟಿಯ ಪಾಲೋ
ಸವೆಸಿದ ನೋವ ಹಾದಿಗೆ
ಮುಕ್ತಿಯ ಗಮ್ಯವೇ ಸದಾ ಏಕೆ
ಉಪ್ಪು ನೀರುಕ್ಕಿ ಪ್ರಳಯವಾಗಿ
ಅವರ ಮುಳುಗಿಸಿ
ಮಾಯವಾಗಿಸುವ
ಮಹಾ ಗಳಿಗೆ ಬರಬಾರದೇಕೆ
🔆🔆🔆
✍️ಕವಿತಾ ಹೆಗಡೆ ಹುಬ್ಬಳ್ಳಿ