ನಗುನಗುತ ನಿಂದಿಹನು
ಋತುರಾಜ ನವವಸಂತ.!
ಹೂವಹಾಸಿ ತೋಳಬೀಸಿ
ನಲಿನಲಿದು ಹಾಡುತಿದೆ
ನಿಸರ್ಗ ಕೋರುತ ಸ್ವಾಗತ!
ಹೊಂಗೆಯ ಹೂಗಳಲಿ
ನವಪರಿಮಳದ ಕಂಪು
ದುಂಬಿಗೂ ಹೊಸಹುರುಪು!
ತೂಗುವ ಮರಮರಗಳಲಿ
ತಳಿರೆಲೆಗಳ ತಂಪು.!
ಪಥ ಬದಲಿಸಿದ ಕಾಲ
ತುಳಿದಿಹನು ಹೊಸದಿಕ್ಕು!
ಸಿಂಗರಿಸಿಕೊಂಡ ಭುವಿ
ಸಂಭ್ರಮಿಸಿದೆ ನಸುನಕ್ಕು.!
ಬೇವಿನ ಹೂವಿಗೆ
ಬೆಲ್ಲದೊಡನೆ ಬೆರೆವ
ನಲಿವ ಸಡಗರ.!
ಮಾವಿನ ಚಿಗುರೆಲೆಗೆ
ಕೋಗಿಲೆ ಇಂಚರ.!
ಎಲ್ಲೆಲ್ಲೂ ಸುಗ್ಗಿಯಹಿಗ್ಗು
ಭೂರಮೆಗೆ ನವಸೊಬಗು!
ಎಲ್ಲೆಡೆ ಮೋಹಕ ಛಾಯೆ
ಎಲ್ಲವೂ ವಸಂತರಾಜನ
ಮಾಂತ್ರಿಕ ಮಾಯೆ!
🔆🔆🔆
✍️ ಎ.ಎನ್.ರಮೇಶ್. ಗುಬ್ಬಿ.
ಉತ್ತಮ ಸಾಲುಗಳು. ಸರ್ವರಿಗೂ ಯುಗಾದಿಯ ಶುಭಾಶಯಗಳು
LikeLike