ಚಿಗುರು ಯುಗಾದಿ
ಮತ್ತೆ ಬಂದಿತು ವರ್ಷಧಾರೆಯ
ಸುರಿಸಲೋಸುಗ ವಸಂತ
ಸುತ್ತ ಹಸಿರಿನ ಸಿರಿಯ ಸೊಬಗನು
ಭರಿಸೆ ಕಾಯ್ದಿದೆ ದಿಗಂತ//ಪ

ಯುಗವ ಕಳೆಯುತ ಸೊಗಸು ತುಂಬುತ
ಜಗಕೆ ಹೊಸತನು ತೋರಲು
ಚಿಗುರು ಮರದಲಿ ಖಗವು ಕೋಗಿಲೆ
ಯುಗಳ ಗೀತೆಯ ಹಾಡಲು//೧

ಚಿಗುರು ಬೇವೊಳು ಸುಗುಣ ಬೇಡುತ
ಬೆರೆಸಿ ಬೆಲ್ಲದ ಸಿಹಿಯನು/
ನಗುವ ಮಗುವಿನ ಮನದಿ ತುಂಬುತ
ಕರುಣ ಮಾನವ ಗುಣವನು//೨

ಎಳೆಯ ಮಕ್ಕಳು ಕೊಳೆಯ ತೊಳೆಯುತ
ಬಿಳಿಯ ವಸ್ತ್ರವ ಧರಿಸಿರೆ
ತಳಿರು ತೋರಣ ಸುಳಿದು ಸುಮಘಮ
ಮಳೆಯರಾಜನ ಕರೆದಿರೆ//೩

ಜೋಡಿ ವೃಷಭವ ಸಿಂಗರಿಸುತಲಿ
ಹೂಡಿ ಹೊಲದೊಳು ರೈತನು
ಮೋಡ ಮುಸುಕಿದ ಮೊದಲ ಮಳೆಯನು
ಬೇಡಿ ದೇವನ ವರವನು//೪

ಸುಳಿದು ಸೂಸುವ ಚೈತ್ರ ಮಾಸವು
ಹಳೆಯ ಫಾಲ್ಗುಣ ಮರೆಸುತ
ಪುಳಕಗೊಳಿಪುವ ಹೊಸತು ಚೇತನ
ಬೆಳೆವ ಭರವಸೆ ತುಂಬುತ//೫

        🔆🔆🔆

✍️ ಶ್ರೀಮತಿ ಬಸಮ್ಮ ಏಗನಗೌಡ್ರ ಶಿಕ್ಷಕಿ,ಸ.ಹಿ.ಪ್ರಾಥಮಿಕ ಶಾಲೆ,ಚವಢಾಳ. ತಾ:ಸವಣೂರು ಜಿಲ್ಲಾ : ಹಾವೇರಿ