ನೀರಿನಲಿ ನಿತ್ಯ ಮಿಂದೇಳುವವನು
ತನ್ನ ಬಟ್ಟೆಗಳನಷ್ಟೇ ಬದಲಿಸಬಲ್ಲ
ಬೆವರಿನಲ್ಲಿ ಸದಾ ಮಿಂದೇಳುವವನು
ಇಡೀ ಜಗತ್ತನ್ನೇ ಬದಲಿಸಬಲ್ಲ.!

ಪಾದರಕ್ಷೆ ತೊಟ್ಟು ನಡೆವವನು
ನೋಯದಂತೆ ಹಾದಿ ಕ್ರಮಿಸಬಲ್ಲ.!
ಬರಿಗಾಲುಗಳಲ್ಲಿ ನಡೆದವನಷ್ಟೇ
ನೋವಿಲ್ಲದ ಹಾದಿಗಳ ಸೃಷ್ಟಿಸಬಲ್ಲ.!

ಇರುಳಲಿ ಕಣ್ಮುಚ್ಚಿ ಮಲಗಿದವನು
ಕೇವಲ ಕನಸುಗಳನಷ್ಟೇ ಕಾಣಬಲ್ಲ
ಕಣ್ಮುಚ್ಚದೆ ಹಗಲಿರುಳು ದುಡಿವವನು
ಕನಸುಗಳನು ಸಾಕಾರಗೊಳಿಸಬಲ್ಲ.!

ಸ್ವಾರ್ಥಕ್ಕಾಗಿ ಹೋರಾಡುವವನು
ನಶ್ವರ ಗದ್ದುಗೆಯೇರಿ ಕೂರಬಲ್ಲ.!
ನಿಸ್ಪೃಹನಾಗಿ ಸೆಣೆಸಾಡುವವನಷ್ಟೇ
ಶಾಶ್ವತ ಜನರೆದೆಯಲಿ ನೆಲೆಸಬಲ್ಲ.!

ನೋವಿಗೆ ಕಂಬನಿ ಹರಿಸುವವನು
ಕ್ಷಣಕಾಲವಷ್ಟೇ ಜೊತೆಯಿರಬಲ್ಲ.!
ಕಣ್ಣೀರನೊರೆಸಲು ನಿಲ್ಲುವವನು
ಅನುಗಾಲ ಕೈಹಿಡಿದು ನಡೆಸಬಲ್ಲ.!

ಕಾಲೆಳೆಯಲು ಕಾದು ನಿಂತವನು
ಎಂದು ಕಾಲುಗಳ ಕೆಳಗಷ್ಟೇ ಇರಬಲ್ಲ
ಮೇಲೆತ್ತಲು ಕೈನೀಡಿ ಬರುವವನಷ್ಟೇ
ಮನದಿ ಮಾನ್ಯನಾಗಿ ರಾರಾಜಿಸಬಲ್ಲ.!

ಉಸಿರಾಡಲಷ್ಟೇ ಬದುಕ ಕಳೆದವನು
ಹೆಸರಿಲ್ಲದೆ ಕರಗಿ ಕಣ್ಮರೆಯಾಗಬಲ್ಲ
ಜಗದೊಳಿತಿಗೆ ಉಸಿರಾಗಿ ಬಾಳಿದರಷ್ಟೇ
ಚರಿತ್ರೆಯಲಿ ಹಸಿರಾಗಿ ಉಳಿಯಬಲ್ಲ.!

🔆🔆🔆

✍️ಎ.ಎನ್.ರಮೇಶ್. ಗುಬ್ಬಿ