ಹುಟ್ಟುಹಬ್ಬ ಎಂದೊಡನೇ ನನಗೆ ಪಿ. ಮಣಿವೆಣ್ಣನ್ ನೆನಪಾಗುವರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಮಣಿವೆಣ್ಣನ್ ಮತ್ತು
ಡಾ. ಅಜಯ ನಾಗಭೂಷಣ ಅವರು ಅನೇಕ ಜನಪರ,ಪ್ರಗತಿಪರ,ಅಭಿವೃದ್ಧಿಯ ಕೆಲಸಗಳ ಮೂಲಕ ಕರ್ನಾಟಕ ರಾಜ್ಯದಲ್ಲೇ ಹೆಸರುವಾಸಿಯಾಗಿ ಹುಬ್ಬಳ್ಳಿ-ಧಾರವಾಡದ ನಾಗರೀಕರ ಮನೆಮಾತಾಗಿದ್ದರು. ಆಡಳಿತ ವ್ಯವಸ್ಥೆ ಅಂದಿನ ದಿನಗಳಲ್ಲಿಚುರುಕಾಗಿತ್ತು . ಹಿರಿಯ ಅಧಿಕಾರಿಯಿಂದ ಹಿಡಿದು ಎಲ್ಲಾ ಸಿಬ್ಬಂದಿಗಳ ಉಡುಪಿನಲ್ಲಿಯೂ ಏಕತೆ ಇದ್ದು ಶಿಸ್ತು ಬದ್ಧ ಕಾರ್ಯ ನಿರ್ವಹಣೆಯಲ್ಲಿ ಸಿಬ್ಬಂಧಿಗಳು ತಮಗೆ ವಹಿಸಿಕೊಟ್ಟ
ಕೆಲಸವನ್ನು ಚಾಚೂ ತಪ್ಪದೇ ದೈನಂದಿನ ಪ್ರಗತಿಗೆ ತಾವೇ ಒಡ್ಡಿಕೊಳ್ಳುತಿದ್ದರು. ಸಿಬ್ಬಂದಿಯ ಕೆಲಸದಲ್ಲಿ ಪ್ರೋತ್ಸಾಹ ತರಲು ಕೆಲ ಕಾರ್ಯಕ್ರಮ ರೂಪಿಸಿದರು.
ಇವುಗಳಲ್ಲಿ “ಹುಟ್ಟು ಹಬ್ಬ” ವೂ ಅತೀ ಮುಖ್ಯವಾದದು.
ಆಯಾ ತಿಂಗಳ ಕೊನೆಯದಿನ , ಆ ತಿಂಗಳು ಹುಟ್ಟಿದ ಸಿಬ್ಬಂದಿಗಳ ಯಾದಿ ತಯಾರಿಸಿ, ಸಂಬಂಧಿಸಿದವರಿಗೆ ಪತ್ರ ಮುಖೇನ ತಿಳಿಸಿ, ಕೆಳಮಟ್ಟದ ಸಿಬ್ಬಂದಿಯಿಂದ ಪ್ರಾರಂಭ ವಾಗಿ ಮೇಲಿನ ಅಧಿಕಾರಿಗಳೂ ಅಂದು ಹುಟ್ಟುಹಬ್ಬದ ಖುಷಿ ಅನುಭವಿಸುತಿದ್ದರು. ಎಲ್ಲಕಿಂತ ಮುಖ್ಯವಾಗಿ ಆ ದಿನ ಪೌರಕಾರ್ಮಿಕರ ಮುಖ ಅರಳಿರುತಿತ್ತು.
ಇಲಾಖೆಯ ಮುಖ್ಯಸ್ಥರು, ವಲಯಾಧಿಕಾರಿ ಗಳು ಅಲ್ಲದೇ ಸ್ವತಃ ಆಯುಕ್ತರೇ ಗುಲಾಬಿ ಹೂ ನೀಡಿ ಇವರೆಲ್ಲರನ್ನೂ ಸತ್ಕರಿಸುವ ಮೂಲಕ ಆಡಳಿತದಲ್ಲಿ ಖುಷಿ ಉಲ್ಲಾಸಕ್ಕೆ ಸಾಕ್ಷಿಯಾಗುತ್ತಿದ್ದರು.ಪ್ರತಿಭಾ ಪ್ರದರ್ಶನ ಗಳೂ ನಡೆಯುವ ಈ ಕಾರ್ಯಕ್ರಮ ಸಂಜೆ ಐದೂವರೆಯ ನಂತರ ಪ್ರತೀ ತಿಂಗಳೂ ಅಚ್ಚುಕಟ್ಟಾಗಿ ನಡೆಯುವ ಮೂಲಕ ಇದು ಸಿಬ್ಬಂಧಿಗಳ ಸಮಾನತೆಗೆ ಸಾಕ್ಷಿಯಾಗಿತ್ತು. ಇಂತಹ ಸಂದರ್ಭದಲ್ಲೇ ನಾನುಮಹಾನಗರ ಪಾಲಿಕೆಯಲ್ಲಿ ಲೆಕ್ಕಾಧಿಕ್ಷಕನಾಗಿ ಕೆಲಸ ಮಾಡಿದ್ದರಿಂದ ಬದುಕಿನಲಿ ಮೊಟ್ಟ ಮಾದಲ ಸಲ ಹುಟ್ಟುಹಬ್ಬದ ಖುಷಿ ಉಂಡೆನು.
ಅಮ್ಮ ಆಗಾಗ ಹೇಳುತಿದ್ದಳು”ನೀ ಉಗಾದಿ ಅಮಾಸೆ ದಿನೇ ಹುಟ್ಟಿದ್ದಿ” ಎಂದು. ಅಂದರೆ ಮಾರ್ಚ ಇಲ್ಲವೇ ಎಪ್ರಿಲ್ ತಿಂಗಳಲ್ಲಿ . ಆಗತಾನೇ ಅಪ್ಪ ಯಲ್ಲಾಪುರಕ್ಕೆಹೊಸದಾಗಿ ದುಡಿಯಲು ಹೋಗಿದ್ದನಂತೆ. ಈಗಿನಂತೆ ಊರಿಗೆ ಹೋಗಿ ಬರಲು ಆಗ ಸೌಲಭ್ಯ ಸೌಲತ್ತುಗಳು ತೀರಾ ಕಡಿಮೆ. ರಸ್ತೆಗಳಂತೂ ತೀರಾ ಹದಗೆಟ್ಟಿ ದ್ದವು. ಅಲ್ಲದೇ ಕಟ್ಟಿಗೆ ಮಿಲ್ಲಿನಲ್ಲಿ ಹೊಸದಾಗಿ ನೌಕರಿಯ ಹುರುಪು ಬೇರೆ ಅಪ್ಪನಿಗೆ. ಆರು ತಿಂಗಳಾ ದರೂ ಅಪ್ಪ ಯಲ್ಲಾಪೂರದಿಂದ ಬರದೇ ಇದ್ದರಿಂದ ನನಗೆ ಹೆಸರೂ ಇಲ್ಲ; ತೊಟ್ಟಿಲ ಭಾಗ್ಯವಂತೂ ಇಲ್ಲವೇ ಇಲ್ಲ ! ಮೇಲಾಗಿ “ಅಮಾಸೆ” ದಿನ ಹುಟ್ಟಿದವನು ಎಂಬ ಕೊರಗು ಬೇರೆ. ಅಪ್ಪನೂ ಈ ಕುರಿತು ವಿಚಾರ ಮಾಡಿ , ಯಾರಿಂದಲೋ
ಅಮವಾಸ್ಯೆಗೆ ಪರ್ಯಾಯ ಶಬ್ಧ ಎಂಬಂತೆ ” ಪ್ರಕಾಶ” ಎಂಬ ಹೆಸರಿಟ್ಟರೆ ಮುಂದೆ ಯಾವುದೇ ತೊಂದರೆಯಿಲ್ಲ ಎಂಬ ಭರವಸೆ ಪಡೆದು ನಾನು ‘ಪ್ರಕಾಶ’ ನಾದ ಕಥೆ ಅಮ್ಮ ಮೊನ್ನೆ ಮೊನ್ನೆಯವರೆಗೂ ನೆನಪಿಸಿ ನಗುತಿದ್ದಳು.ಅದಕೇ ಕೆನಡಾದಲ್ಲಿರುವ ನನ್ನ ಅಣ್ಣನ ಮಗ ಶಿವಮೂರ್ತಿ ಯುಗಾದಿ ಅಮವಾಸ್ಯೆಯ ದಿನ ” ಅಮಾಸೆ ಪುಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು ” ಎಂದು ಶುಭಕೋರುವನು ; ವರ್ಷ ವರ್ಷವೂ !ಆದರೆ ಶಾಲೆಯ ದಾಖಲಾತಿಯ ಪ್ರಕಾರ ನಾ ಹುಟ್ಟಿದ್ದು ಜುಲೈ 21.
ಇದರಿಂದಾಗಿ ನನ್ನ ಹುಟ್ಟಿದ ದಿನದ ಕುರಿತೇ ನಾನು ಚಿಕ್ಕಂದಿನಿಂದಲೂ ಗಲಿಬಿಲಿಯಲ್ಲಿ ರುತಿದ್ದೆ. ಆದರೂ ” ಹುಟ್ಟು ಹಬ್ಬ ” ಎಂಬ ಶಬ್ಧದ ಪರಿಚಯ ಮತ್ತು ಪರಿ ಜ್ಞಾನ ನನ್ನಲಿ ಮೂಡಿದ್ದು ಮಕ್ಕಳಿಬ್ಬರೂ ದೊಡ್ಡವರಾಗಿ ಅವರು ಶಾಲೆಗೆ ಹೋದ ಬಳಿಕವೇ.ಎಲ್ಲರೂ ಒಂದೇ ದಿನ ಹುಟ್ಟಿದರೆ ನನಗೆ ಮಾತ್ರ ಎರಡೆರಡು ದಿನ ಹುಟ್ಟುಹಬ್ಬ . ಆದರೆ ಈ ವರ್ಷ ಮತ್ತೂ ವಿಶೇಷವೆಂಬಂತೆ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಹಿರಿಯಣ್ಣ ಪ್ರಕಾಶ ಉಡಕೇರಿ ಅವರು ಯಾವುದೋ ಲೆಕ್ಕಾಚಾರದಂತೆ ಮೊನ್ನೆಯ ಮಾರ್ಚ 24 ಕ್ಕೇ ಫೇಸ್ಬುಕ್ನಲಿ ನನ್ನ ಹುಟ್ಟುಹಬ್ಬಮಾಡಿ ಖುಷಿಪಟ್ಟಿರುವದು ಅವರ ಮನುಷ್ಯಪ್ರೀತಿಗೆ ಸಾಕ್ಷಿಗಾಗಿ ನನಗೂ ಈ ವರ್ಷ ಅಭಿಮಾನಿಗಳ ಒತ್ತಾಯಕೆ ಮೂರು ಮೂರು ದಿನ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಹುಸಿ – ಮುನಿಸಿನ ಖುಷಿಯಿದೆ !ಆ ದಿನ ಯುಗಾದಿ ಅಮಾವಾಸ್ಯೆ ಎಂಬ ನೆನಪೇ ನನಗಿರಲಿಲ್ಲ .ಆಫೀಸಿಗೆ ಹೋಗುವ ಗಡಬಿಡಿಯಲಿ ನಾನಿದ್ದಾಗ ಮನೆಯಲ್ಲಿದ್ದ ಈ ಮೂರೂ ನನ್ನ ಜೀವಗಳು ಮುಖಾ ಮುಖಾ ನೋಡಿ ನಗುತಿದ್ದರ ಅರ್ಥ ನನಗೆ ತಿಳಿಯಲೇ ಇಲ್ಲ. ಎಲ್ಲವೂ ಪದ್ಧತಿಯಂತೇ ನಡೆದು ಕೇಕಿನ ದರ್ಶನ ಮಾಡಿಸಿ ಕಟ್ ಮಾಡಿಸಿಯೇ ಬಿಟ್ಟರು, ನಾನೂ ಆಫೀಸಿಗೆ ಹೋಗುವ ಗಡಬಿಡಿಯ ಮರೆತು ಅವರ ಖುಷಿಯಲಿ ಒಂದಾದೆ . ನವ್ಯಾಳ ಈ ಯೋಜನೆ ವ್ಯವಸ್ಥಿತವಾಗಿಯೇ ನಡೆದು ಅಂದು ನನ್ನ ದುಡ್ಡಿನಲೇ ನನಗೊಂದು ಅಂಗಿ ಕೊಡಿಸಿ ಜಂಭ ಪಟ್ಟ ಆ ಮುಖಗಳ ಖುಷಿಗೆ ನಾ ಇಂದೂ ಬೆರಗಾಗಿರುವೆನು. ನನ್ನ ಪ್ರೀತಿಯ ಜೀವಗಳಾದ ಬೆಣಗಿ, ಚವ್ಹಾಣ, ತ್ರಿವೇಣಿ , ಜಲಜಾ, ನಿವೇದಿತಾ, ಬಸಣ್ಣಾ, ಚಿನ್ನು , ನನಗರಿವಿಲ್ಲದೇ ಆದಿನ ಕೇಕ್ ಕಟ್ ಮಾಡಿಸಿ ನನ್ನ ಬೋಳು ಬೋಳಾ ದ ಕೈಗೆ ವಾಚ್ ಕಟ್ಟಿ ಖುಷಿ ಪಟ್ಟ ಕ್ಷಣವೂ ನನ್ನ ಬದುಕಿನ ರೋಮಾಂಚನವೇ!
ಮಣಿವೆಣ್ಣನ್ ಸಾಹೇಬರಕಟ್ಟಾ ಅನುಯಾಯಿಗಳಾದ ಮುಖ್ಯ ಲೆಕ್ಕಾಧಿಕಾರಿ ರಾಮ್ ದಾಸ್ ಸಾಹೇಬರೂ ಹುಟ್ಟುಹಬ್ಬದ ಈ ಪರಂಪರೆಯನ್ನು ತಮ್ಮ ಅವಧಿಯಲ್ಲಿ
ಧಾರವಾಡದ ನೀರಾವರಿ ನಿಗಮದ ಕೇಂದ್ರ ಕಛೇರಿ ಯಲ್ಲೂ ಆಚರಣೆಗೆ ತಂದು, ಸದಾ ಫೈಲುಗಳ ನಡು-ವೆಯೇ ಹುದುಗಿದ್ದ ಮುಖಗಳಲ್ಲಿ ನಗು ತುಂಬಿ ಎಲ್ಲರ ಪ್ರೀತಿಗೆ ಪಾತ್ರರಾದರು. ಅಂದಿನ ಆ ಕ್ಷಣದಲ್ಲಿ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳೊಂದಿಗೆ ಕವಿತೆ ಓದುವ ಹೊಸ ಪರಂಪರೆ ರೂಢಿಸಿ ಕೊಂಡು ಸಿಬ್ಬಂದಿಗಳಿಗೆ ಕಾವ್ಯದ ಬೆರಗನ್ನು ಮನದೊಳಗೆ ತುಂಬಿಸಿದರು.
ಕಳೆದ ವರ್ಷದ ಮಾರ್ಚ್ ಮೂವತ್ತೊಂದಕ್ಕೆ ನಮ್ಮ ಬದುಕಿನ ” ವಿಸ್ಮಯ ” ವಾದ ವಿಸ್ಮಯನ ಮೊದಲನೇ ಹುಟ್ಟುಹಬ್ಬದ ಆಚರಣೆಗೆ ನ್ಯೂಜರ್ಸಿಗೆ ತೆರಳುವ ಎಲ್ಲಾ ಸಿದ್ಧತೆಗಳೂ ನಡೆದಾಗ ಈ ಕೆಟ್ಟಕೊರೋನಾ
ನಮ್ಮ ಎಲ್ಲಾ ಯೋಜನೆಗಳನ್ನೂ ತಲೆಕೆಳಗಾಗಿಸಿತು. ಹಿಂದಿನ ವರ್ಷ ಸುನಂದಾಳೊಂದಿಗೆ ನಾನು ವಿಸ್ಮಯನ
ಸ್ವಾಗತಕೆ ಇದೇ ಸಮಯದಲ್ಲಿ ಅಲ್ಲಿದ್ದೆ. ನಂ ಕಾವ್ಯ ಆ ಯುಗಾದಿಯ ಅಮವಾಸ್ಯೆಯ ದಿನವೇ ಮಗನ ಸ್ವಾಗತದೊಂದಿಗೆ ಅಪ್ಪನ ಹುಟ್ಟುಹಬ್ಬ ವನ್ನೂ ಸಪ್ತಸಾಗರದಾಚೆಯ ಆ ನೆಲದಲ್ಲಿ ಆಚರಿಸಿ ಖುಷಿ ಪಟ್ಟಳು.
ಇಂದಿನ ದಿನಗಳಲ್ಲಿ ಉಳ್ಳವರು ಹುಟ್ಟುಹಬ್ಬದ ಹೆಸರಿನಲಿ ಮೈ ಮರೆತು ಲಕ್ಷಾಂತರ ಹಣ ವ್ಯಯಿಸಿ ತಮ್ಮ ಪ್ರತಿಷ್ಠೆಯ ಮೆರೆಸುವರು. ಅವರು ಆ ದಿನ ತಮ್ಮ ಮಕ್ಕಳಿಗೆ ತೊಡೆಸುವ ಬಟ್ಟೆ , ಕುಡಿಯುವ ಪಾನೀಯದ ಹಣದಿಂದ ಸೂರಿಲ್ಲದ ಕುಟುಂಬಕ್ಕೆ ನೆರಳಾಗಬಹುದು. ಇಲ್ಲಿ ಮನುಷ್ಯತ್ವ ಮಾನವೀಯತೆ ಅರಳ ಬೇಕಾಗಿದೆ.
ಆಸೆಗಣ್ಣಿನ ರಸ್ತೆಯಂಚಿನ ಮಗುವೂ ತನ್ನ ಹುಟ್ಟುಹಬ್ಬ ಆಚರಿಸಿ ಕೊಂಡು ವಂಚನೆ ಇಲ್ಲದ ಈ ಜಗದಲಿ ಒಂದಾಗಿ ಎಲ್ಲರೂ ಸಮಾನತೆಯಿಂದ ಬದುಕುವಾ ಎಂದು ಇಂದಿನ ಯುಗಾದಿ ಅಮವಾಸ್ಯೆಯಂದು ಹಾರೈಸುವೆ.
.🔆🔆🔆
✍️ಪ್ರಕಾಶ ಕಡಮೆ .
ನಾಗಸುಧೆ, ಹುಬ್ಬಳ್ಳಿ .
ಬಾಲ್ಯದ ನೆನಪುಗಳ ಜೊತೆಗೆ ಜೀವಮಾನದುದ್ದಕ್ಕೂ ನಡೆದ ನೆನಪಿನಲ್ಲುಳಿದ ಹುಟ್ಟುಹಬ್ಬಗಳ ಸೊಗಸಾದ ಪರಿಚಯಾತ್ಮಕ ಲೇಖನ ನಿಮ್ಮೊಡನೆ ನಿಮ್ಮ ಜೀವನದ ಪಕ್ಷಿನೋಟ ನಾವು ಅವಲೋಕಿಸಿದ ಹಾಗಾಯಿತು .ಹೀಗೆ ನಿಮ್ಮ ಮಾರ್ಗದರ್ಶನ ನಮಗೆಲ್ಲಾ ದೊರೆಯುತ್ತಿರಲಿ . ಜನ್ಮ ದಿನದ ಶುಭ ಹಾರೈಕೆಗಳು ಸರ್
ಸುಜಾತಾ ರವೀಶ್
LikeLike
ಸುಜಾತಾ ಮೆಡಂ
ನಿಮ್ಮ ಅಕ್ಷರ ಪ್ರೀತಿಗೆ ಬೆರಗಾದೆ.
ಶುಭಕೋರುವೆ.
LikeLiked by 1 person