ಶಿಲಪ್ಪದಿಗಾರಮ್ಮಿನ ಕರುನಾಡರ್ ಇವರು

ನೀಲಗಿರಿಯ ಬೆಟ್ಟ ವೈನಾಡಿನ ಕಾಡುಗಳಲ್ಲೇ ಕಳೆದುಹೋದರು

ಕೈಗೆ ಬಂದ ಕಾಸರಗೋಡು ಬಾಯಿಗೆ ಬರಲಿಲ್ಲ

ಆಲೂರು ಅದವಾನಿ ಹೊಸೂರು ಹೋರಾಟಗಾರರು ಹೊರಟುಹೋದರು

ಮಧ್ಯದಲ್ಲಿದ್ದೇ ಮೃಡಕಶಿರ ದೂರದೂರ

ಕೇಳಲು ಹೃದಯ ಭಾರ ಭಾರ

ಕಾವೇರಿಯಿಂದ ಗೋದಾವರಿ ಎಂದೆಲ್ಲ ಹೇಳಿದ ಮಾರ್ಗ ಅಮೋಘ

ಮಾರ್ಗ ಮಧ್ಯದ ಬೆಳಗಾವಿಯಲ್ಲಿಯೇ ಪದೇಪದೇ ಶಾಂತಿಭಂಗ

ಆ ಬದಿಯದೇ ಅಭಂಗ ‘ಕಾನಡಿ ಹೋ ವಿಠ್ಠಲು ಕರ್ನಾಟಕು’

ಸಿಧ್ದರಾಮರ ಸೊನ್ನಲಿಗೆ, ಅಕ್ಕಲಕೋಟ, ಜತ್ತ,ಶಿರೋಳ ಸಿಗಲಿಲ್ಲ

ಸುಮ್ಮನೆ ಕುಳಿತೆವು ಆವಾಗಾವಾಗ ಚೀರಾಡಿಕೊಂಡು ನಾವೆಲ್ಲ

ಮಹಾದ ಮಧ್ಯ ಎಲ್ಲೋರ ಕೈಲಾಸನಾಥ, ನಮಗದು ಎಲ್ಲೋ ದೂರ

ನಮ್ಮದೇ ಕೃಷ್ಣನ ಬೃಹತ್ ಹಳಗನ್ನಡ ಶಿಲಾಶಾಸನ

ಮಾನವ ನಿರ್ಮಿತವೇ? ವಿಶ್ವದ ನಂಬಿಕೆಗಳನು ಅಲುಗಾಡಿಸುವ ತಾಣ

ಅಲ್ಲಿ ಹಾಗೆಯೇ! ಕಲ್ಲುಕಲ್ಲಿನಲಿ ಮಾತ್ರ ಕನ್ನಡವೇ ಸತ್ಯ. ಇಲ್ಲಿ?

ಶಿಲಾಶಾಸನ, ದೇಗುಲಗಳಲಿ ಎರಡನೆಯದು ಕರ್ನಾಟಕ

‘ಗಡಿ’ ಬಿಡಿ ಯಲ್ಲೂ ಅಸ್ಸಾಂ ನಂತರದ ಎರಡನೆ ಸ್ಥಾನವಂತೆ

ಕೇಳದೇ ಕೃಷ್ಣೆಯ ಕಳುಹಿದರು ಚೆನ್ನೈಗೆ ಕುಡಿಯಲು

ಕಾವೇರಿ ಪಾಲು ಪಡೆಯಲು ಸಾಲುಸಾಲು ಹೋರಾಟ

ಮಹದಾಯಿಗಾಗಿ ಉತ್ತರದಲ್ಲೊಂದು ಮಹಾಹೋರಾಟ

ಸಾವಿರ ಮೈಲುಗಳಾಚೆಯ ಟಿಬೆಟನ್ನರಿಗೆ ನಮ್ಮಲ್ಲೇ ನೆಲೆ

ದೇಶದ ರಕ್ಷಣೆಯ ಸೀಬರ್ಡಗಾಗಿ ಅಂಕೋಲೆ ಸುತ್ತಮುತ್ತ ಸಂಕೋಲೆ

ಕಳೆದುಕೊಂಡ ಕರ್ನಾಟಕ ದೇಶದ ಕಣ್ಣಲಿ ಕಾಲು ಕೆದರುವ ಜಗಳಗಂಟ

ಬೆಂಗಳೂರು ಮಿನಿಭಾರತ… ಅಲ್ಲಲ್ಲ ಮಿನಿಜಗತ್ತು

ಹೆಮ್ಮೆಯೋ ಎಮ್ಮೆಯೋ, ರಾಜಧಾನಿ ಯಾರಿಗಾರಿಗೆ ದಾನಿಯೋ

ದಾನದೆತ್ತಿನ ಹಲ್ಲು ಎಣಿಸಿದವರೇ ಬಹಳ, ಮತ್ತಾರದ್ದೋ ಹೀಗಿಲ್ಲ

ಕನ್ನಡಕ್ಕೆ ಇಂಗ್ಲೀಷನದ್ದೇ ಕುಣಿಕೆಯಂತೆ, ಸ್ವಲ್ಪ ಸತ್ಯ

‘ಪಕ್ಕದ ದೂರದ ಮೂಲೆಯ ಜನರ ವಲಸೆ’ ಇದೇ ಕಹಿ ಸತ್ಯ

ಬೆಂಗಳೂರಿನ ಇಂದಿನ ಕ್ಷಣಗಳು ರಾಜ್ಯಕ್ಕೆಲ್ಲ ಅಂಟುವ ಲಕ್ಷಣಗಳು

ಭಾಷಾವಾರಂತ ಹೋರಾಡಿದರಲ್ಲ! ಯಾಕೋ ಏನೋ ಗೊತ್ತಿಲ್ಲ

ಕೆಲವರಿಗೆ ಈಗೀಗ ಉತ್ತರ-ದಕ್ಷಿಣ ನಾನೊಂದು ನೀನೊಂದು ತೀರ

ಬೈಗುಳಗಳು ಅಚ್ಚಕನ್ನಡದವೇ.. ಒಂದಿಷ್ಟು ನೆಮ್ಮದಿ

ಹೆಚ್ಚಿನ ಜ್ಞಾನಪೀಠ ಅವು ಇವೂ!.. ಮೌಲ್ಯ ಹೆಚ್ಚಾಯಿತು; ಭಾಷೆ ಬೆಳಗಲಿಲ್ಲ

ಬಡಮೇಷ್ಟ್ರು, ತರಕಾರಿಯವ ಗಡಿಯಲಿ ಗಡಿಬಿಡಿಯಲಿ ಕನ್ನಡ ಕಲಿಸಿದರು

ಅವರು ತೋರಿಸಿದ್ದೇ ಕನ್ನಡನಾಡಿಗೊಂದಿಷ್ಟು ಉಜ್ವಲಪೀಠ

ನಮ್ಮ ನೆಲದಲೇ ಕನ್ನಡ ಓದಲು ಶ್ಯೂನ್ಯ ಪ್ರಥಮ ದ್ವಿತೀಯ ತೃತೀಯಗಳ ಎಣಿಕೆ

ಬಡಪಾಯಿ ಕನ್ನಡಿಗ ಸಾಹಿತ್ಯಸಮ್ಮೇಳನಕೆ ಅಲ್ಲಿ ಇಲ್ಲಿ ನೀ ಹೋಗಬಾರದೆ?

ನಾಯಕರು ಸಾಹಿತಿಗಳು ಸಾಹಿತ್ಯ-ಗೋಷ್ಠಿ, ಸಿಕ್ಕಸಿಕ್ಕಲ್ಲಿ ಪಂಥ ಪಕ್ಷಗಳ ಓಲೈಕೆ

ಮಾಡಲು ಕೆಲಸಗಳು ನೂರಾರು, ನಮಗೆ-ನಿಮಗೆ-ಅವರಿಗೆ

ಶಿಲಪ್ಪದಿಗಾರಮ್ಮಿನ ಕರುನಾಡರ್ ಇವರು

ನೀಲಗಿರಿಯ ಬೆಟ್ಟ ವೈನಾಡಿನ ಕಾಡುಗಳಲ್ಲೇ ಕಳೆದುಹೋದರು

        🔆🔆🔆

✍️ ಶ್ರೀ ರಮೇಶ ಹುಲಕುಂದ ಸಹಾಯಕ ಪ್ರಾಧ್ಯಾಪಕರು ಸಪ್ರದಕಾಲೇಜು, ಇಲಕಲ್