ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ,ಅದರಲ್ಲಿನ ಸಡಗರ ವರ್ಣನಾತೀತ.ಋತುಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ.

ರಾಮಾಯಣ ಕಾಲಕ್ಕಿಂತ ಮೊದಲು ಉತ್ತರಾಯಣದಿಂದ ಹೊಸ ವರ್ಷದ ಗಣನೆ ಪ್ರಾರಂಭವಾಗುತ್ತಿತ್ತು.ಶ್ರೀರಾಮನು ಆವತರಿಸಿದ ಮಾಸ ಹಾಗೂ ಪಟ್ಟಾಭಿಷೇಕ ವಾದ ದಿನವೂ ಕೂಡ ಚೈತ್ರ ಮಾಸ.ಋತು ರಾಜ ವಸಂತನ ಆಗಮನವೂ ಚೈತ್ರಮಾಸ ದಿಂದಲೇ ಇದು ಚಿತ್ತಾ ನಕ್ಷತ್ರ ಪ್ರಧಾನವಾದ ಮಾಸ. ದಿನದಂದೇ ಪ್ರಜಾಪತೀ ಬ್ರಹ್ಮನು ಪ್ರಪಂಚದ ಸೃಷ್ಟಿಯನ್ನು ಪ್ರಾರಂಭಿಸಿದನೆಂದೂ ಪುರಾಣಗಳಿಂದ ತಿಳಿದು ಬರುತ್ತದೆ.ಕ್ರಿ.. ಆರನೆಯ ಶತಮಾನದಲ್ಲಿವರಾಹಮಿಹಿರಾಚಾರ್ಯನು ವಸಂತ ವಿಷುವತ್ ಅಶ್ವಿನಿಯಲ್ಲಿ ಸಂಭವಿಸುವುದನ್ನು ಪರಿಗಣಿಸಿ ಚೈತ್ರಮಾಸದಿಂದ ಹೊಸ ವರ್ಷದ ಗಣನೆ ಪ್ರಾರಂಭಿಸಿದನೆಂದು ಹೇಳುವರು.

ಭಾರತೀಯರಾದ ನಮೆಗೆ ಚೈತ್ರಶುದ್ದ ಪಾಡ್ಯ,ಮಿ ವರ್ಷದ ಮೊದಲ ದಿನ. ಯುಗಾದಿ ಎಂದರೆ (ಯುಗಸ್ಯ ಆದಿಃ) ಯುಗದ ಆರಂಭ..ಇದು ಕಾಲ ಸೂಚಕ ಪದ.ಯುಗಗಳು ನಾಲ್ಕು: ಕೃತಯುಗ, ತ್ರೇತಾಯುಗ,ದ್ವಾಪರ ಯುಗ, ಕಲಿಯುಗ, ವರ್ಷದಲ್ಲಿ ಹಗಲು ರಾತ್ರಿ ಎರಡೂ ಸಮವಾಗಿರುವ ದಿನ ಸೌರಮಾನದ ಲೆಕ್ಕದಂತೆ ಚೈತ್ರಮಾಸದ ವಿಷುವತ್ ಸಂಕ್ರಮಣ ದಿವಸದಲ್ಲಿ ಆಚರಿಸಲ್ಪಡುವು ದರಿಂದ ಇದನ್ನು ಹೊಸ ವರ್ಷವೆಂದು ಕರೆದರು. ದಿನ ದ್ವಾಪರ ಯುಗವು ಕಳೆದು ಕಲಿಯುಗವು ಪ್ರಾರಂಭವಾದ ದಿನ.

ಹಾಗಾದರೆ ಇದನ್ನು ಹೇಗೆ ಆಚರಿಸಬೇಕು.?

1) ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಏಳಬೇಕು.ಏಳುವಾಗ ಬಲ ಮಗ್ಗುಲಾಗಿ ಏಳುತ್ತತಮ್ಮ ಇಷ್ಟ ದೇವರನ್ನು ಕುಲದೇವರನ್ನೂ ಮನಸ್ಸಿನಲ್ಲಿ ಸ್ಮರಿಸಿ ವಂದಿಸಬೇಕು.ನಂತರ ಹಿರಿಯರಿಗೆ ತಂದೆತಾಯಿಗಳಿಗೆ ಗುರುಗಳಿಗೆ ನಮಸ್ಕರಿಸ ಬೇಕು.

2)ತೈಲದಿಂದ ಅಭ್ಯಂಜನ ಸ್ನಾನವನ್ನು ಮಾಡಬೇಕು.ನೀರಿನಲ್ಲಿ ಬೇವಿನ ಎಲೆಯ ಎಸಳುಗಳನ್ನು ಹಾಕಿ ಸ್ನಾನ ಮಾಡುವರು.

3)ಸ್ನಾನವಾದ ನಂತರ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಪೂಜೆ ಕ್ರಿಯೆಗಳನ್ನು ಪೂರೈಸಿ ಪಂಚಾಂಗ ಓದುವವರು ಅದನ್ನು ಪೂಜಿಸಬೇಕು.

4)ಇಂದು ಬೇವಿನ ಚಿಗುರೆಲೆಗಳನ್ನು ನೈವೇದ್ಯೆ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು.ಬೇವಿನ ಎಲೆ ಕಹಿ. ಪಿತ್ತಕೋಶದ ಸಂರಕ್ಷಣೆಗೆ ಬೇವಿನ ರಸ ಸಹಾಯಕಾರಿ.ಇದನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಪಿತ್ತ ಶಮನ ಮಾಡಬಹುದು.ಇನ್ನು ಯುಗಾದಿಯ ನಂತರದ ದಿನಗಳಲ್ಲಿ ಸೂರ್ಯನ ಶಾಖದಿಂದ ಭೂಮಿಯ ತಾಪವು ದಿನೇ ದಿನೇ ಹೆಚ್ಚಾಗುತ್ತ ಹೋಗುತ್ತದೆ.ಇದರಿಂದ ಮನುಷ್ಯನ ಶರೀರಕ್ಕೆ ಉಷ್ಣ ಸಂಬಂಧಿ ಉಪದ್ರವಗಳು ಉಂಟಾಗುತ್ತವೆ. ಬೇವಿನ ಎಲೆ ದಿನವೂ ಬಳಕೆ ಮಾಡುವುದರಿಂದ ಉಷ್ಣ ಸಂಬಂಧಿ ಉಪದ್ರವಗಳನ್ನು ಕಡಿಮೆ ಮಾಡಿಕೊಳ್ಳಬಹುದು.

5)ಮಧ್ಯಾಹ್ನ ಸಮಯದಲ್ಲಿ ಹೋಳಿಗೆ, ಪಾಯಸಗಳಂತಹ ಸಿಹಿ ಭಕ್ಷ್ಯಗಳನ್ನು ಮಾಡಿ ಬಂಧುಬಳಗದವರೊಂದಿಗೆ ಸೇರಿ ಸಂತೋಷದಿಂದ ಊಟ ಮಾಡಬೇಕು.

6) ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನ ವಿದೆ. ಪ್ರತಿಯೊಂದು ಮಾಸದ ಫಲ,ರಾಶಿ ಫಲ.ಮಳೆಬೆಳೆ ಮೊದಲಾದ ವಿಚಾರ ಗಳನ್ನು ಮುಂಚಿತವಾಗಿಯೇ ತಿಳಿಯಲು ಸಾಧ್ಯ.

7)ಪಾಡ್ಯಮಿಯ ಅನಂತರ ಬಿದಿಗೆಯ ದಿನವೂ ಕೂಡ ಸ್ನಾನ,ಪೂಜೆ, ನೈವೇದ್ಯಾದಿ ಗಳನ್ನು ನಡೆಸಿ ಸಂಜೆಯ ಸಮಯದಲ್ಲಿ ಚಂದ್ರ ದರ್ಶನ ಮಾಡಿ ಹಿರಿಯರಿಗೆ ನಮಸ್ಕರಿಸುವುದು. ಸ್ನೇಹಿತರಿಗೆ ಶುಭ ಹಾರೈಸುವುದೂ ರೂಢಿಯಲ್ಲಿದೆ.

ಗುಜರಾತ್,ಮಹಾರಾಷ್ಟ್ರಗಳಲ್ಲಿ ಯುಗಾದಿ ಯಂದು ಮನೆ ಮನೆಯ ಮುಂದೆ ಪಾಡ್ಯದ ಗುಡಿ(ಧ್ವಜ) ಕಟ್ಟುವ ಮೂಲಕ ಆಚರಿಸು ತ್ತಾರೆ.ತಮಿಳುನಾಡಿನಲ್ಲಿ ಇದನ್ನು ಚಿತ್ರವಿಷು ಎಂದು ಕರೆಯುತ್ತಾರೆ. ಇರಾನಿಯನ್ನರು ನೌರೋಜ್ ಎಂದೂ ಆಚರಿಸುತ್ತಾರೆ..ಮಹಾಭಾರತದಲ್ಲಿಯೂ ಕೂಡ ಇದರ ಬಗ್ಗೆ ಉಲ್ಲೇಖವಿದೆ.ಭಗವಾನ್ ಶ್ರೀ ಕೃಷ್ಣನು ತನ್ನ ಲೀಲಾ ಮಾನುಷ ದೇಹ ವನ್ನು ದ್ವಾರಕೆಯ ಸಮೀಪದ ಪುಣ್ಯಕ್ಷೇತ್ರ ವಾದಪ್ರಭಾಸದಲ್ಲಿ ತ್ಯಜಿಸಿದ ದಿನ. ಉತ್ತರ ಭಾರತದವರು ವಿಕ್ರಮದ ಶಕದ ಆರಂಭದ ಅಂದರೆ ಕಾರ್ತಿಕ ಶುದ್ದ ಪ್ರಥಮದಂದು ಯುಗಾದಿ ಆಚರಿಸಿದರೆ, ಶಾತವಾಹನ ಅರಸರ ಕಾಲದಲ್ಲಿ ತಮ್ಮ ವಿಜಯದ ಸಂಕೇತವಾಗಿ ಶಾಲಿವಾಹನ ಶಕೆ ಪ್ರಾರಂಭಿಸುವ ಮೂಲಕ ಚೈತ್ರ ಶುದ್ದ ಪ್ರಥಮೆಯನ್ನುಆಚರಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ.ದಕ್ಷಿಣ ಭಾರತದವರು ಚೈತ್ರ ಶುದ್ದ ಪ್ರಥಮೆಯೆಂದು ಯುಗಾದಿ ಯನ್ನು ಆಚರಿಸಿಕೊಂಡು ಬರುತ್ತಿರುವರು. ಸಿಂಧಿ ಜನರೂ ಕೂಡ ಚೇತ್ಚಾಂದ್ ಆಸ್ಸಾಮಿನಲ್ಲಿಬಿಹು ಶಿಖ್ಖರು ಬೈಸಾಕಿ ಮಣಿಪುರ ದಲ್ಲಿ ಚೈರೋಬಾ ಬಂಗಾಳಿಗರು ಶುಬೋ ನಬೋ ಬರ್ಶೋಎಂದು ಆಚರಿಸುವರು.

ಎರಡು ತಿಥಿಗಳು,ಎರಡು ವಾರಗಳು, ಎರಡು ನಕ್ಷತ್ರಗಳು,ಎರಡು ಪಕ್ಷಗಳು, ಎರಡು ಮಾಸಗಳು,ಎರಡು ಋತುಗಳು, ಎರಡು ಅಯನಗಳು, ಮತ್ತು ಎರಡು ಸಂವತ್ಸರಗಳು ಸೇರುವಕಾಲವೇ ಸಂಧಿಕಾಲ ವಾಗಿರುತ್ತದೆ.ಯುಗಾದಿಯಂದು ಇವೆಲ್ಲವೂ ಸೇರಿ ಎರಡು ಚಾಂದ್ರಮಾನ ಸಂವತ್ಸರಗಳು ಸಂಧಿಸುವಮಹಾಪರ್ವಕಾಲವಾಗಿದ್ದರಿಂದ ಯುಗಾದಿ ಅತ್ಯಂತ ಪ್ರಶಸ್ತವಾದಪರ್ವಕಾಲ ವಾಗಿದೆ.ವಿಶೇಷವಾಗಿ ಮಾರ್ಚ ತಿಂಗಳಿನಲ್ಲಿ ಬರುವ ಯುಗಾದಿಯು ಆಧಿಕ ಮಾಸ ಬಂದಾಗ ಒಂದು ತಿಂಗಳಿನಷ್ಟು ಮುಂದೆ ಹೋಗುತ್ತದೆ.

ಯುಗಾದಿಯಂದು ರತ್ನ ಪಕ್ಷಿಯನ್ನು ನೋಡಿದರೆ ಶುಭವಾಗುತೈತೆ ಎಂಬ ನಂಬಿಕೆ ಯಿಂದ ಅನೇಕರು ಬೆಳ್ಳಂಬೆಳಿಗ್ಗೆ ಎದ್ದು ಪಕ್ಷಿ ನೋಡಲು ಹೊರಡುವರು. ಅಷ್ಟೇ ಅಲ್ಲ ದಿನ ಚಂದ್ರನ ನೋಡಿದರೆ ಪವಿತ್ರವೆಂಬ ಭಾವನೆ.ಅಂದು ಕಾಣುವ ಚಂದ್ರನಲ್ಲಿಯ ಬಿಂಬದ ಗೆರೆಗಳ ಮೂಲಕ ವರ್ಷದ ಆಯವ್ಯಯ ಮತ್ತು ಮಳೆಬೆಳೆಗಳನ್ನು ನಿರ್ಧರಿಸುವರು. ಕೆಲವು ಹಳ್ಳಿಗಳಲ್ಲಿ ಹೊನ್ನೆತ್ತು ಹಿಡಿಯುವ ಕಾರ್ಯಕ್ರಮ ಆಯೋಜಿಸುವರು.”ಹೊನ್ನೆತ್ತುಎಂದರೆ ಚೆನ್ನಾಗಿ ಮೇಯಿಸಿದ ಒಂದು ಎತ್ತಿನ ಕೊಂಬಿಗೆಐದಣವನ್ನು ಬಟ್ಟೆಯಿಂದ ಕಟ್ಟಿ, ಎತ್ತಿನ ಹಗ್ಗ,ಮೂಗುದಾರ ಬಿಚ್ಚಿ ಎಲ್ಲರ ಸಮ್ಮುಖದಲ್ಲಿ ಬೆದರಿಸಿ ಓಡಿಸುತ್ತಾರೆ. ಯಾರು ಇಂಥ ಸಂದರ್ಭದಲ್ಲಿ ಅದನ್ನು ಹಿಡಿದು ನಿಲ್ಲಿಸುವರೋ ಅವರಿಗೆ ಅದರ ಕೋಡಿಗೆ ಕಟ್ಟಿದ್ದಐದಣನೀಡುವ ಜೊತೆಗೆ ಬಹುಮಾನ ಕೂಡ ನೀಡುವ ಪದ್ದತಿ ಇದೆ.ರೈತರು ಇಡೀ ವರ್ಷದುದ್ದಕ್ಕೂ ಯಾವ ಬೆಳೆ ಚೆನ್ನಾಗಿ ಬರುತ್ತದೆ ಎಂದು ತಿಳಿದುಕೊಳ್ಳಲು ಹಬ್ಬ ಇನ್ನೂ ಒಂದು ವಾರ ಇರುವಾಗಲೇ ಮುಂಚಿತವಾಗಿ ಬೀಜಗಳನ್ನು ಲೆಕ್ಕ ಹಾಕಿ ಅವುಗಳಿಗೆ ನೀರುಣಿಸಿ ಗಾಳಿ ಬಿಸಿಲು ಬರುವ ಸ್ಥಳದಲ್ಲಿ ಇಡುತ್ತಾರೆ ಯಾವ ಸಸಿಗಳು ಕಾಲಕ್ಕೆ ಚೆನ್ನಾಗಿ ಬೆಳೆದಿರುತ್ತವೆಯೋ ಅವುಗಳನ್ನು ತಂದು ತಮ್ಮ ಹೊಲಗದ್ದೆಗಳಲ್ಲಿ ಬಿತ್ತನೆ ಮಾಡುವ ಸಂಪ್ರದಾಯವೂ ಕೆಲವು ಕಡೆಗಳಲ್ಲಿದೆ. ಇಷ್ಟೇ ಅಲ್ಲ ಯುಗಾದಿ ದಿನದಂದು ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಿ ಗಳೆಹೂಡಿ ಐದು ಸುತ್ತು ಹರಗಿ ಬರುವ ಜೊತೆಗೆ ದಿನ ಸಂಜೆ ತಮ್ಮ ತಮ್ಮ ಗ್ರಾಮ ದೇವತೆಗಳ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವರ್ಷದುದ್ದಕ್ಕೂ ಸುಖ ಸಮೃದ್ದಿಗಾಗಿ ಪ್ರಾರ್ಥನೆ ಸಲ್ಲಿಸುವರು.

ಬಡವ ಬಲ್ಲಿದರೆಂಬ ಭೇದಭಾವವಿಲ್ಲದೇ ಹಬ್ಬಕ್ಕೆ ಮನೆಗಳಿಗೆ ಸುಣ್ಣಬಣ್ಣ ಬಳಿಸಿ.ಮನೆಯ ಹಾಸಿಗೆಗಳನ್ನೆಲ್ಲ ಸ್ವಚ್ಚಗೊಳಿಸಿ ಮಡಿ ಮಾಡಿ ಮನೆಯ ಬಾಗಿಲಿಗೆ ಮಾವಿನ ತಳಿರುತೋರಣ ಗಳನ್ನು ಕಟ್ಟಿ ಜಾನುವಾರುಗಳನ್ನು ತೊಳೆದು ಅವುಗಳ ಕೊರಳಿಗೆ ಗೆಜ್ಜೆ ಕಟ್ಟುವ ಮೂಲಕ ಯುಗಾದಿಆಚರಿಸಲು ಸಿದ್ದತೆ ಮಾಡಿಕೊಳ್ಳು ವರು. ಯುಗಾದಿಯ ಮೂರನೆಯ ದಿನ ವನ್ನು ವರ್ಷ ತೊಡಕು ಎಂದು ಆಚರಿಸುವ ಸಂಪ್ರದಾಯ ಕೆಲವೆಡೆ ಇದೆ. ದಿನ ಏನು ಮಾಡುತ್ತಾರೋ ಅದೇ ಇಡೀ ವರ್ಷ ನಡೆದು ಬರುತ್ತದೆ ಎಂಬ ನಂಬಿಕೆಯಿಂದ ದಿನ ಒಳ್ಳೆಯ ಕಾರ್ಯ ಮಾಡುವ ಮೂಲಕ ವರ್ಷವಿಡೀ ಒಳ್ಳೆಯದಾಗಲಿ ಎಂದು ಒಳ್ಳೆಯ ಕಾರ್ಯ ಮಾಡುತ್ತಾರೆ.

🔆🔆🔆

✍️ ಶ್ರೀ ವೈ.ಬಿ.ಕಡಕೋಳ. ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ ತಾ: ಸವದತ್ತಿ ಜಿ: ಬೆಳಗಾವಿ